ಶಿಡ್ಲಘಟ್ಟ ಸರ್ಕಲ್ ನಲ್ಲಿ ಕಲ್ಟ್ ಸಿನಿಮಾ ಫ್ಲೆಕ್ಸ್ ತೆರವು : ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವಾಚ್ಯ ಶಬ್ದ ಬಳಸಿ ಧಮಕಿ
ವಿಜಯ ದರ್ಪಣ ನ್ಯೂಸ್….
ಶಿಡ್ಲಘಟ್ಟ ಸರ್ಕಲ್ ನಲ್ಲಿ ಕಲ್ಟ್ ಸಿನಿಮಾ ಫ್ಲೆಕ್ಸ್ ತೆರವು : ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವಾಚ್ಯ ಶಬ್ದ ಬಳಸಿ ಧಮಕಿ

ಶಿಡ್ಲಘಟ್ಟ : ನಗರದ ಸರ್ಕಲೊಂದರಲ್ಲಿ “ಕಲ್ಟ್” ಸಿನಿಮಾದ ಫ್ಲೆಕ್ಸ್ ಗಳನ್ನು ತೆರವುಗೊಳಿಸಿದ ವಿಚಾರವಾಗಿ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ, ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಅವಾಚ್ಯ ಶಬ್ದ ಬಳಸಿ ಧಮ್ಕಿ ಹಾಕಿದ್ದಾರೆ.
ಈ ಆಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ ರಾಜೀವ್ ಗೌಡ ವರ್ತನೆಯ ಬಗ್ಗೆ ಅಧಿಕಾರಿಗಳ ವಲಯದಲ್ಲಿ ಸಹ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮಂಗಳವಾರ ಸಂಜೆ ಶಿಡ್ಲಘಟ್ಟದ ನೆಹರೂ ಮೈದಾನದಲ್ಲಿ
ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ನಟನೆಯ “ಕಲ್ಟ್” ಸಿನಿಮಾದ ಪ್ರಚಾರ ಸಭೆ ನಡೆದಿತ್ತು ಕೋಟೆ ವೃತ್ತದಲ್ಲಿ ರಸ್ತೆಗೆ ಅಡ್ಡವಾಗಿ ಸಿನಿಮಾ ಪ್ರಚಾರ ಫ್ಲೆಕ್ಸ್ ಗಳನ್ನು ಅಳವಡಿಸಲಾಗಿತ್ತು,ಈ ರಸ್ತೆಯಲ್ಲಿ ಸಾಗುವಾಗ ವಾಹನಕ್ಕೆ ಈ ಫ್ಲೆಕ್ಸ್ ಅಡ್ಡಿಯಾಗಿದೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಫ್ಲೆಕ್ಸ್ ಅನ್ನು ನಗರಸಭೆ ಸಿಬ್ಬಂದಿ ಕಚೇರಿಗೆ ತಂದಿಟ್ಟಿದ್ದರು.
ಈ ಬಗ್ಗೆ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ರಾಜೀವ್ ಗೌಡ ಬೆಂಬಲಿಗ ಅಫ್ಸರ್ ಪಾಷಾಗೆ ಪೌರಾಯುಕ್ತರು ಮಾಹಿತಿ ನೀಡಿದ್ದರು.

ಫ್ಲೆಕ್ಸ್ ಬಿಚ್ಚಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರಾಜೀವ್ ಗೌಡ, ಪೌರಾಯುಕ್ತೆಗೆ ಕರೆ ಮಾಡಿ ಜಟಾಪಟಿ ನಡೆಸಿದ್ದಾರೆ.
“ನಮ್ಮ ಬ್ಯಾನರ್ ಬಿಚ್ಚಿಸಿದರೆ ಬೆಂಕಿ ಹಚ್ಚಿಸುವೆ ನನ್ನ ಒಳ್ಳೆಯತನ ನೋಡಿದ್ದೀರಿ, ಕೆಟ್ಟತನ ನೋಡಿಲ್ಲ” ಎಂದು ಪೌರಾಯುಕ್ತೆಯ ವಿರುದ್ಧ ಹರಿಹಾಯ್ದಿದ್ದಾರೆ.
ಆಗ ಪೌರಾಯುಕ್ತೆ ಅಮೃತಗೌಡ ಅವರು, “ರಸ್ತೆಯಲ್ಲಿ ಕಟ್ಟಿದ್ದಾರೆ ,ಸಾರ್ವಜನಿಕರಿಂದ ದೂರು ಬಂದಿದೆ ಅನುಮತಿ ಪಡೆಯದೆ ಬ್ಯಾನರ್ ಕಟ್ಟಿದ್ದಾರೆ ,ಅಪಘಾತ ಆದರೆ ನಾವು ಹೊಣೆ..” ಎಂದು ಹೇಳಿದ್ದಾರೆ.
ಆಗ ಮತ್ತಷ್ಟು ಕುಪಿತರಾದ ರಾಜೀವ್ ಗೌಡ, ಬೆಂಕಿ ಹಚ್ಚಿಸುವೆ, ಚಪ್ಪಲಿಯಲ್ಲಿ ಹೊಡೆಸುವೆ, ….ಮಗ… ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ.
ಶಿಡ್ಲಘಟ್ಟ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್ ಅವರನ್ನೂ ಅವಾಚ್ಯವಾಗಿ ನಿಂದಿಸಿದ್ದಾರೆ,ಈ ಆಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಹರಿದಾಡುತ್ತಿವೆ.
ರಾಜೀವ್ ಗೌಡ 2023ರ ವಿಧಾನಸಭೆ ಚುನಾವಣೆಯಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು ,ಅವರ ಪತ್ನಿ ಶಿಡ್ಲಘಟ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದಾರೆ.
ಪ್ರತಿಭಟನೆ : ನಗರಸಭೆ ಮುಂದೆ ಪೌರಕಾರ್ಮಿಕರು ಮತ್ತು ನಗರಸಭೆ ಸಿಬ್ಬಂದಿ ಪ್ರತಿಭಟನೆ ನಡೆಸಿ, “ರಾಜೀವ್ ಗೌಡಾಕೋ ಹಠಾವೋ, ಶಿಡ್ಲಘಟ್ಟಕೋ ಬಚಾವೋ” ಎಂಬ ಫಲಕವನ್ನು ಹಿಡಿದುಕೊಂಡು ರಾಜೀವ್ ಗೌಡ ಅವರ ವಿರುದ್ಧ ಧಿಕ್ಕಾರ ಕೂಗಿದರು.

ಸ್ಥಳಕ್ಕೆ ರಾಜೀವ್ ಗೌಡ ಬಂದು ಸರ್ಕಾರಿ ನೌಕರರಾದ ಪೌರಕಾರ್ಮಿಕರನ್ನು ಏಕೆ ನಿಂದಿಸಿರುವರೆಂದು ಕಾರಣ ಕೊಟ್ಟು ಕ್ಷಮೆ ಕೇಳಬೇಕು. ಅದುವರೆಗೂ ನಾವು ನಮ್ಮೆಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಅವರು ಹೇಳಿದರು.
ಪೊಲೀಸರಲ್ಲಿ ದೂರು ದಾಖಲು :
ಅವಾಚ್ಯವಾಗಿ ನಿಂದಿಸಿರುವ ರಾಜೀವ್ ಗೌಡ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪೌರಾಯುಕ್ತೆ ಜಿ.ಅಮೃತಾ, ಜೆಡಿಎಸ್ ಉಪಾಧ್ಯಕ್ಷ ಶ್ರೀನಿವಾಸಗೌಡ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮೂವರಿಂದಲೂ ದೂರು ದಾಖಲಿಸಲಾಗಿದೆ.

ಶಿಡ್ಲಘಟ್ಟ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಾಜೀವ್ ಗೌಡ ಅವರು ಒಬ್ಬ ಮಹಿಳಾ ಅಧಿಕಾರಿಯನ್ನು ಕೆಟ್ಟದಾಗಿ ದೂರವಾಣಿಯಲ್ಲಿ ಮಾತನಾಡಿರುವುದನ್ನು ನಾನು ಖಂಡಿಸುತ್ತೇನೆ.
ಒಬ್ಬ ಜನಪ್ರತಿನಿಧಿಯಾಗಲು ಬಂದಂತಹ ರಾಜಕಾರಣಿ ಮಹಿಳೆಯ ಬಗ್ಗೆ ಗೌರವದಿಂದ ನಡೆದುಕೊಳ್ಳದೆ ಗೂಂಡ ರೀತಿ ನಡೆದುಕೊಂಡಿರುವುದು ಇಡೀ ಕಾಂಗ್ರೆಸ್ ಪಕ್ಷವೇ ತಲೆ ತಗ್ಗಿಸುವಂತೆ ಆಗಿದೆ. ಪೌರಾಯುಕ್ತೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಲ್ಲದೆ, ಶಾಸಕನಾಗಿರುವ ನನ್ನನ್ನೂ ಅವಾಚ್ಯವಾಗಿ ನಿಂದಿಸಿದ್ದಾರೆ.
ನಮ್ಮ ಜೆಡಿಎಸ್ ಮುಖಂಡರಿಂದ ದೂರು ದಾಖಲು, ಶಾಸಕ ರವಿಕುಮಾರ್ :
ಈ ಬಗ್ಗೆ ನಮ್ಮ ಜೆಡಿಎಸ್ ಮುಖಂಡರು ಪ್ರಕರಣವನ್ನು ದಾಖಲಿಸಿ, ಅವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ ,ನಮ್ಮ ಕ್ಷೇತ್ರದಲ್ಲಿ ಯಾವುದೇ ಅಧಿಕಾರಿಗೂ ಇನ್ನುಮುಂದೆ ಈ ರೀತಿಯ ತೊಂದರೆಗಳಾಗದ ಹಾಗೆ ಪ್ರಾಮಾಣಿಕವಾಗಿ ಕ್ರಮ ಕೈಗೊಳ್ಳಲಾಗುವುದು.

ಈ ಘಟನೆಯ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರದ ಸಚಿವ ಕುಮಾರಸ್ವಾಮಿ ಅವರು ಮುಖ್ಯ ಕಾರ್ಯದರ್ಶಿಯವರೊಂದಿಗೆ ಮಾತನಾಡಿ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ” ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ರಾಜೀವ್ ಗೌಡ ಕ್ಷಮೆಯಾಚನೆ : ಖಾಸಗಿ ಛಾನೆಲ್ ನಲ್ಲಿ ಈ ಆಡಿಯೋ ಪ್ರಸರಣಾ ವಿಚಾರವಾಗಿ ಸಂದರ್ಶನದಲ್ಲಿ ಛಾನೆಲ್ ಗೆ ಆಯುಕ್ತರಾದ ಅಮೃತ ಜಿ. ಅವರು ಹಾಗು ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಈ ಬಗ್ಗೆ ಮಾತಾನಾಡುವಾಗ
ನನಗೆ ತಪ್ಪಿನ ಅರಿವಾಗಿದೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.
ಬಿಜೆಪಿ ಮುಖಂಡರಿಂದ ಖಂಡನೆ : ಮಾಜಿ ಸಂಸದ ಮನಿಸ್ವಾಮಿ ಹಾಗು ಬಿಜೆಪಿ ಜಿಲ್ಲಾದ್ಯಕ್ಷ ಸೀಕಲ್ ರಾಮಚಂದ್ರಗೌಡ ಅವರು ಈ ಆಡಿಯೋ ವೈರಲ್ ಬಗ್ಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಸಂಸ್ಕೃತಿಯೆ ಹಾಗೆ ಅವರ ಪಕ್ಷದ ಕೆಲ ಮುಖಂಡರು ಹಾಗೆಯೇ ಆಡ್ತಾರೆ ಎಂದ ಅವರು ನಗರಸಭೆ ಆಯುಕ್ತೆ ಅಮೃತ ಜಿ. ಆ ಹಣ್ಣು ಮಗಳ ಪರವಾಗಿ ನಾವಿದ್ದೇವೆ ಅವರು ದೃತಿಗೆಡವಬೇಕಾಗಿಲ್ಲ ಎಂದರು.
ಶಾಸಕ ಬಿ.ಎನ್.ರವಿಕುಮಾರ್ ಹಾಗು ಅಮೃತ ಜಿ.ಅವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ರಾಜೀವ್ ಗೌಡ ಅವರನ್ನು ಈ ಕೂಡಲೇ ದೂರು ದಾಖಲಿಸಿಕೊಂಡು ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದರು.
