ವಿಜಯ ದರ್ಪಣ ನ್ಯೂಸ್…
ಕುಂಭಿಗಾನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಎಂ.ಭಿಮೇಶ್, ಉಪಾಧ್ಯಕ್ಷರಾಗಿ ಸೋಮೇಶ್

ಶಿಡ್ಲಘಟ್ಟ : ತಾಲ್ಲೂಕಿನ ಕುಂಬಿಗಾನಹಳ್ಳಿ (ಎಚ್.ಕ್ರಾಸ್)ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಳನಾಯಕನಹಳ್ಳಿಯ ಕೆ.ಎಂ.ಭಿಮೇಶ್ ಹಾಗೂ ಉಪಾಧ್ಯಕ್ಷರಾಗಿ ಟಿ.ಬುಸನಹಳ್ಳಿಯ ಸೋಮೇಶ್ ಅವಿರೋಧ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಕೆ.ಎಂ.ಭಿಮೇಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೋಮೇಶ್ ಮಾತ್ರವೇ ನಾಮಪತ್ರ ಸಲ್ಲಿಸಿದ್ದು, ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಭಿಮೇಶ್ ಅಧ್ಯಕ್ಷರಾಗಿ ಮತ್ತು ಸೋಮೇಶ್ ಉಪಾಧ್ಯರಾಗಿ ಅವಿರೋಧ ಆಯ್ಕೆಯಾಗಿರುವುದಾಗಿ ಚುನಾವಣಾದಿಕಾರಿ ಮಂಜುನಾಥ್ ಘೋಷಿಸಿದರು.
ಚೀಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಬೇರ್ಪಟ್ಟು ಪ್ರತ್ಯೇಕವಾಗಿ ಅಸ್ತಿತ್ವಕ್ಕೆ ಬಂದ ಕುಂಭಿಗಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 5 ವರ್ಷದ ಅವಧಿಯ ಆಡಳಿತ ಮಂಡಳಿಗೆ ಪದಾಧಿಕಾರಿಗಳ ಸ್ಥಾನಕ್ಕೆ ಸಹಕಾರ ಸಂಘದ ಕಚೇರಿಯಲ್ಲಿ ಚುನಾವಣೆ ನಡೆಯಿತು.
ನೂತನ ಅಧ್ಯಕ್ಷ ಕೆ.ಎಂ.ಭೀಮೇಶ್ ಮಾತನಾಡಿ ಈ ಮೊದಲು ನಾವು ಚೀಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವ್ಯಾಪ್ತಿಯಲ್ಲಿದ್ದೆವು ಅನೇಕ ವರ್ಷಗಳ ಪ್ರಯತ್ನದ ಫಲವಾಗಿ ಕುಂಭಿಗಾನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘವು ಪ್ರತ್ಯೇಕವಾಗಿ ಅಸ್ತಿತ್ವಕ್ಕೆ ಬಂದಿದೆ ಎಂದು ತಿಳಿಸಿದರು.
ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸುತ್ತಾಡಿ, ಷೇರು ಸಂಗ್ರಹಿಸಿ ಸಂಘವನ್ನು ಸ್ಥಾಪಿಸಿದ್ದೇವೆ ನೂತನ ನಿರ್ದೇಶಕರ ಆಯ್ಕೆಯೂ ಅವಿರೋಧವಾಗಿ ಆಗಿದ್ದು, ಎಲ್ಲಾ ನಿರ್ದೇಶಕರು, ಹಿರಿಯ ಸಹಕಾರಿಗಳ ಸಹಕಾರದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಸಂಘಕ್ಕೆ ಸ್ವಂತ ಕಟ್ಟಡವಿಲ್ಲ, ಸ್ವಂತ ಕಟ್ಟಡ ಸೇರಿ ಎಲ್ಲವನ್ನೂ ವ್ಯವಸ್ಥೆಗೊಳಿಸಬೇಕಿದೆ ಈಗಾಗಲೆ ಈ ಬಗ್ಗೆ ಶಾಸಕರಾದ ಬಿ.ಎನ್.ರವಿಕುಮಾರ್, ಚಿಮುಲ್ ನಿರ್ದೇಶಕರಾದ ಬಂಕ್ ಮುನಿಯಪ್ಪ, ಹುಜಗೂರು ರಾಮಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಾಲ್ಫಿನ್ ನಾಗರಾಜ್ ಅವರೊಂದಿಗೆ ಚರ್ಚಿಸಿದ್ದು, ಎಲ್ಲರ ಸಹಕಾರ ಕೋರಿದ್ದೇವೆ ,ಶೀಘ್ರದಲ್ಲೆ ಸಂಘದ ಅಭಿವೃದ್ಧಿಗೆ ಬೇಕಾದ ಮೂಲಸೌಕರ್ಯಗಳು ಸೇರಿದಂತೆ ಎಲ್ಲವನ್ನೂ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ಇನ್ನೂ ಆಗಿಲ್ಲ ಯಾರು ಅಧ್ಯಕ್ಷರಾಗುತ್ತಾರೋ ಅವರ ಸಹಕಾರ ಪಡೆದು ಈ ಸಂಘವನ್ನು ರೈತರ ಪರವಾದ ಮಾದರಿ ಸಂಘವನ್ನು ಕಟ್ಟುವುದಾಗಿ ವಿವರಿಸಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸಂಘದ ನಿರ್ದೇಶಕರು, ಅವರ ಬೆಂಬಲಿಗರು ಬೃಹತ್ ಹೂವಿನ ಹಾರ ಹಾಕಿ ಸಿಹಿ ಹಂಚಿ ಅಭಿನಂದಿಸಿದರು,
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸೋಮೇಶ್ , ನಿರ್ದೇಶಕರುಗಳು, ಚುನಾವಣಾಧಿಕಾರಿ ಹಾಜರಿದ್ದರು.









