ಮೂಕ ಹಕ್ಕಿಯ ರೋಧನೆ…
ವಿಜಯ ದರ್ಪಣ ನ್ಯೂಸ್….
ಮೂಕ ಹಕ್ಕಿಯ ರೋಧನೆ…
ಮೂಕ ಹಕ್ಕಿಯು ಹಾಡುತಿದೆ…..
ಹಾಡುತಿದೆ……. ಹಾಡುತಿದೆ…….
ಭಾಷೆಗೂ ನಿಲುಕದ
ಭಾವ ಗೀತೆಯ
ಹಾರಿ ಹಾರಿ
ಹಾಡುತಿದೆ….
ಹಾಡುತಿದೆ…….
ಹಾಡುತಿದೇ……..
ಹಕ್ಕಿಯ ರೆಕ್ಕೆ ಮುರಿದು ಬೀಳುವವರೆಗೂ…..
ಒಂದು ಸಣ್ಣ ಕೆಮ್ಮಿಗೆ, ನೆಗಡಿಗೆ, ಗಂಟಲು ನೋವಿಗೆ, ಹೊಟ್ಟೆ ನೋವಿಗೆ, ಜ್ವರಕ್ಕೆ ಮನುಷ್ಯ ಭಯಪಡುತ್ತಾನೆ,
ಬಿಪಿ, ಶುಗರ್, ಕ್ಯಾನ್ಸರ್, ಅಲ್ಸರ್, ಹಾರ್ಟ್ ಅಟ್ಯಾಕ್ ಗೆ
ಪತರಗುಟ್ಟಿ ಹೋಗುತ್ತಾನೆ,
ಎಷ್ಟೋ ಜನರು ಸಣ್ಣ ಸೂಜಿಯ ಇಂಜೆಕ್ಷನ್ ತೆಗೆದುಕೊಳ್ಳಲೂ ಹೆದರುತ್ತಾರೆ,
ಬಹಳಷ್ಟು ಹೆಣ್ಣು ಮಕ್ಕಳು ಜಿರಳೆ ಕಂಡರೆ ಕಿರುಚಿಕೊಳ್ಳುತ್ತಾರೆ,
ಎಷ್ಟೋ ಯುವಕರು ಹಾವಿಗೆ ಅಂಜುತ್ತಾರೆ,
ಇನ್ನು ಹುಲಿ, ಚಿರತೆ, ಸಿಂಹಗಳನ್ನು ನೋಡಿದರೆ ಓಡಿ ಹೋಗುತ್ತಾರೆ,
ಎಲ್ಲಾದರೂ ಅನಿರೀಕ್ಷಿತವಾಗಿ ಡಂ ಎನ್ನುವ ದೊಡ್ಡ ಶಬ್ದ ಉಂಟಾದರೆ ಎದೆ ನಡುಗುತ್ತದೆ,
ಇನ್ನೆಲ್ಲೋ ಭೀಕರ ಅಪಘಾತ, ಕೊಲೆ, ಅತ್ಯಾಚಾರಗಳನ್ನು ಕೇಳಿದರೆ ಮನಸ್ಸು ದಿಗಿಲು ಹುಟ್ಟಿಸುತ್ತದೆ,
ಇಷ್ಟೊಂದು ಸೂಕ್ಷ್ಮ ಮನಸ್ಸಿನ ಮನುಷ್ಯರು ಕೊಲ್ಲುವ, ಸಾಯುವ ಆಟ ಯುದ್ಧಕ್ಕೆ
ಹಾತೊರೆಯುತ್ತಾರೆ,
ಎಷ್ಟೊಂದು ವಿಚಿತ್ರವಲ್ಲವೇ……
ಭಯೋತ್ಪಾದಕರು ಮನುಷ್ಯರಲ್ಲವೇ ಅಲ್ಲ, ಅವರು ರಾಕ್ಷಸರು. ತಮ್ಮ ವಿಚಾರಧಾರೆಗೆ, ತಮ್ಮ ಪ್ರದೇಶಕ್ಕೆ, ತಮ್ಮ ಹಿತಾಸಕ್ತಿಗೆ ಯಾವುದೇ ರೀತಿಯಲ್ಲಿ ಅಡ್ಡಿ ಮಾಡದ, ತೊಂದರೆ ಮಾಡದ, ಸಂಬಂಧವೇ ಇಲ್ಲದ, ಅಧಿಕಾರವೂ ಇಲ್ಲದ, ಅಮಾಯಕ, ಅಸಹಾಯಕ ಜನರನ್ನು ಗುಂಡಿಟ್ಟು ಕೊಲ್ಲುತ್ತಾರೆಂದರೆ ಅವರು ಮನುಷ್ಯರೇ ಅಲ್ಲ.
ಆದ್ದರಿಂದ ಆ ನರ ರಾಕ್ಷಸರ ಬಗ್ಗೆ ಹೆಚ್ಚಿಗೆ ಮಾತನಾಡುವ ಅವಶ್ಯಕತೆ ಇಲ್ಲ. ಅವರ ವಿನಾಶವನ್ನು ಸದಾ ಬಯಸಬೇಕು.
ಹಾಗೆಯೇ ಅವರನ್ನು ನಿಯಂತ್ರಿಸಲು ಪೊಲೀಸ್, ಸೈನಿಕರು ಮತ್ತು ಆಡಳಿತ ವ್ಯವಸ್ಥೆ ಇದೆ. ಅವರು ಎಷ್ಟು ಸಾಧ್ಯವೋ ಅಷ್ಟು ತಮ್ಮ ಮಿತಿಯಲ್ಲಿ ಆ ಕೆಲಸವನ್ನು ಮಾಡುತ್ತಿದ್ದಾರೆ ಅವರಿಗೂ ಅಭಿನಂದನೆಗಳು.
ಯುದ್ಧ ಕೊಲ್ಲುವ ಕಾಯುವ ಆಟ. ಇದರ ಮಧ್ಯೆ ಒಂದಷ್ಟು ಧರ್ಮ, ರಾಜಕೀಯ ಸೇರಿಕೊಂಡಿರುತ್ತದೆ. ಅವರು ಅದಕ್ಕೆ ತಕ್ಕಂತೆ ಒಂದಷ್ಟು ತಂತ್ರ, ಪ್ರತಿ ತಂತ್ರ, ಕುತಂತ್ರ ಮಾಡಿಕೊಂಡು ಅಧಿಕಾರ ಅನುಭವಿಸುತ್ತಾರೆ.
ಅಲ್ಲಿಯವರೆಗೂ ಒಂದು ಹಂತಕ್ಕೆ ಎಲ್ಲವೂ ಓಕೆ. ಆದರೆ ಮಾಧ್ಯಮಗಳು ಮತ್ತು ಸಾರ್ವಜನಿಕರಿಗೆ ಏನಾಗಿದೆ, ಇಷ್ಟೊಂದು ಯುದ್ಧೋತ್ಸಾಹ, ಯುದ್ಧೋನ್ಮಾದದ ಅವಶ್ಯಕತೆ ಇದೆಯೇ, ಇದು ಅತಿರೇಕವಲ್ಲವೇ….
ಯುದ್ದ ಎಂಬುದು ಗೆದ್ದವರಿಗೂ, ಸೋತವರಿಗೂ ಅಪಾರ ನಷ್ಟ ಮತ್ತು ಪ್ರಾಣಹಾನಿ ಉಂಟುಮಾಡುವುದಲ್ಲವೇ,
ಅದರಲ್ಲಿ ಸಂಭ್ರಮವೇಕೆ….
ಭಾರತದಲ್ಲಿ ಮತ್ತು ಪಾಕಿಸ್ತಾನದಲ್ಲಿ ಎಷ್ಟು ಜನರಿಗೆ ಪ್ರತಿನಿತ್ಯದ ಡಯಾಲಿಸಿಸ್ ಚಿಕಿತ್ಸೆ ಅವಶ್ಯಕತೆ ಇದೆ ಗೊತ್ತೇ, ಎಷ್ಟು ಹೆಣ್ಣು ಮಕ್ಕಳು ತುಂಬು ಗರ್ಭಿಣಿಯರಾಗಿದ್ದಾರೆ ಗೊತ್ತೇ,
ಎಷ್ಟು ತಾಯಂದಿರು ಬಾಣಂತಿ ಅವಧಿಯಲ್ಲಿದ್ದಾರೆ ಗೊತ್ತೇ,
ಎಷ್ಟು ಜನ ವೃದ್ಧರು ಇನ್ನೊಬ್ಬರ ಮೇಲೆ ಅವಲಂಬಿತರಾಗಿದ್ದಾರೆ ಗೊತ್ತೇ,
ಎಷ್ಟು ಜನ ಗಾಯಾಳುಗಳು ಇತರರ ನೆರವನ್ನು ಯಾಚಿಸುತ್ತಿದ್ದಾರೆ ಗೊತ್ತೇ,
ಅವರ ಮೇಲೆ ಯುದ್ದದ ಪರಿಣಾಮ ಹೇಗೆ ಬೀರುತ್ತದೆ ಒಮ್ಮೆ ಯೋಚಿಸಿ……
ಯಾರೋ ಕೆಲವು ಮತಾಂಧ, ಉನ್ಮಾದಿತ, ದುಷ್ಟರು ಮಾಡುವ ಅತ್ಯಂತ ದುಷ್ಟತನಕ್ಕೆ ಇಡೀ ಸಮೂಹವನ್ನು ಹೊಣೆ ಮಾಡುವುದು, ಕಷ್ಟಕ್ಕೆ ಸಿಲುಕಿಸುವುದು ಎಷ್ಟು ಸರಿ. ಅದರಲ್ಲೂ ಮೂಲ ಸಮಸ್ಯೆಯನ್ನು ಬಗೆಹರಿಸಿಕೊಳ್ಳದೆ ಆಗಾಗ ಈ ರೀತಿಯ ಸಾಯುವ ಕೊಲ್ಲುವ ಆಟದಲ್ಲಿ ಇನ್ನೆಷ್ಟು ವರ್ಷ ನಿರಂತರವಾಗಿ ತೊಡಗಿಸಿಕೊಳ್ಳುತ್ತೀರಿ, ಯುದ್ಧವಲ್ಲದೆ ಪರ್ಯಾಯಮಾರ್ಗ ಇಲ್ಲವೇ,
ಇತ್ತೀಚಿನ ದಿನಗಳ ಉದಾಹರಣೆ ತೆಗೆದುಕೊಳ್ಳುವುದಾದರೆ, ರಷ್ಯಾ ಉಕ್ರೇನ್ ಯುದ್ದದಲ್ಲಿ ಅಲ್ಲಿನ ಶಾಂತಿ ಪ್ರಿಯರು ದೊಡ್ಡ ಮಟ್ಟದ ಪ್ರತಿಭಟನೆ ಮಾಡಿದ್ದರೆ, ಆ ಯುದ್ಧದಿಂದ ಆಗಿರುವ ಸುಮಾರು ಎರಡು ಲಕ್ಷ ಜನರ ಪ್ರಾಣ ಹಾನಿ ನಿಲ್ಲಿಸಬಹುದಿತ್ತೇನೋ, ಇಸ್ರೇಲ್ ಪ್ಯಾಲಿಸ್ಟೇನ್ ಜನರು ಶಾಂತಿಯ ಪರವಾಗಿಯೇ ಚಳವಳಿ ಮಾಡಿದ್ದರೆ ಸುಮಾರು 60 ಸಾವಿರ ಜನರ ಜೀವ ಉಳಿಯಬಹುದಿತ್ತೇನೋ,
ಈಗ ಭಾರತ ಪಾಕಿಸ್ತಾನದ ಸಾಮಾನ್ಯ ಜನ ಶಾಂತಿಯ ಪರವಾಗಿ ಧ್ವನಿ ಎತ್ತಿದರೆ ಮುಂದೆ ಆಗಬಹುದಾದ ದೊಡ್ಡ ಸಾವು ನೋವು ತಪ್ಪಬಹುದೇನೋ ಎಂಬ ದೂರದ ಆಸೆ. ಕನಿಷ್ಠ ಶಾಂತಿಯ ಪರವಾಗಿ ಒಂದಷ್ಟು ಧ್ವನಿಗಳಾದರು ಮೊಳಗಲು ಎರಡು ದೇಶದ ಜನರು ಅವಕಾಶ ನೀಡಿ. ಯುದ್ಧದ ನಡುವೆಯೂ ಶಾಂತಿಯ ಧ್ವನಿ ಸದಾ ನಿರಂತರವಾಗಿ ಕೇಳುತ್ತಿರಲಿ. ಅದು ಮೂಕ ಹಕ್ಕಿಯ ರೋಧನೆಯಾದರು ಚಿಂತೆ ಇಲ್ಲ. ಆ ಧ್ವನಿ ಮಾತ್ರ ಮೊಳಗುತ್ತಲೇ ಇರಲಿ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068…….