ಅಬ್ ಕಿ ಬಾರ್ ಟ್ರಂಪ್ ಕಿ ಸರ್ಕಾರ್ “
ವಿಜಯ ದರ್ಪಣ ನ್ಯೂಸ್
” ಅಬ್ ಕಿ ಬಾರ್
ಟ್ರಂಪ್ ಕಿ ಸರ್ಕಾರ್ “
ಹೀಗೆ 2020 ರ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಆಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರವಾಗಿ ಅಮೆರಿಕದಲ್ಲಿಯೇ ಒಂದು ಚುನಾವಣಾ ಭಾಷಣ ಮಾಡಿದರು. ಮೂಲಭೂತವಾಗಿ ಈ ಭಾಷಣ ಭಾರತದ ಅಲಿಪ್ತ ನೀತಿಗೆ ವಿರುದ್ಧವಾಗಿತ್ತು. ಹಾಗೆಯೇ ಭಾರತದಂತ ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿ ಇನ್ನೊಂದು ರಾಷ್ಟ್ರದ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುವುದು ಉತ್ತಮ ನಡೆಯಾಗಿರಲಿಲ್ಲ. ಜೊತೆಗೆ ಇದು ಮೋದಿಯವರ ವಿದೇಶಾಂಗ ನೀತಿಯ ದೂರದೃಷ್ಟಿತ್ವ ಮತ್ತು ಗ್ರಹಿಕೆಯ ಕೊರತೆಯಲ್ಲಿನ ತಪ್ಪು ತೀರ್ಮಾನವಾಗಿತ್ತು. ಈಗ ಅದು ನಿಜವಾಗಿದೆ.
ಕೊನೆಗೂ ಆ ಚುನಾವಣೆಯಲ್ಲಿ ಟ್ರಂಪ್ ಸೋತು ಜೋ ಬೈಡನ್ ಅಧ್ಯಕ್ಷರಾಗುತ್ತಾರೆ. ಅಲ್ಲಿಂದಲೇ ಭಾರತ ಅಮೆರಿಕಾದ ನಡುವಿನ ಸಂಬಂಧ ಸ್ವಲ್ಪ ಮಟ್ಟಿಗೆ ಕುಸಿಯತೊಡಗಿತು.
ವಾಸ್ತವವಾಗಿ ಅಮೆರಿಕಾದ ಅಧ್ಯಕ್ಷರಲ್ಲಿಯೇ ಅತ್ಯಂತ ಕೆಳಮಟ್ಟದ ನೈತಿಕತೆಯನ್ನು ಹೊಂದಿರುವವರು ಡೊನಾಲ್ಡ್ ಟ್ರಂಪ್. ಅಮೆರಿಕಾದ ಘನತೆಯನ್ನು ಮಣ್ಣು ಪಾಲು ಮಾಡುತ್ತಿರುವವರು. ಅಮೆರಿಕಾದ ಶ್ರೇಷ್ಠತೆಯನ್ನು ಪ್ರಶ್ನಿಸುವಂತೆ ಮಾಡುತ್ತಿರುವವರು. ಅಮೆರಿಕಾದ ನಾಯಕತ್ವವನ್ನು, ವಿಶ್ವದ ದೊಡ್ಡಣ್ಣ ಎಂಬ ಬಿರುದನ್ನು ಕಳೆದುಕೊಳ್ಳುವಂತೆ ಮಾಡುತ್ತಿರುವವರು. ಅಂತಹ ವ್ಯಕ್ತಿಯನ್ನು ನರೇಂದ್ರ ಮೋದಿಯವರು ಬೆಂಬಲಿಸಿದ್ದು ಸರಿ ಅನಿಸಲಿಲ್ಲ.
ಇದೀಗ ಎರಡನೇ ಬಾರಿ ಅಮೆರಿಕಾದ ಅಧ್ಯಕ್ಷರಾದ ನಂತರ ಡೊನಾಲ್ಡ್ ಟ್ರಂಪ್ ಅವರ ಅನೇಕ ಕಾರ್ಯ ವಿಧಾನ, ಅದರಲ್ಲೂ ಮುಖ್ಯವಾಗಿ ಭಾರತದೊಂದಿಗೆ ಅವರ ವ್ಯವಹಾರ ಮತ್ತು ಸಂವಹನ ತುಂಬಾ ಕೆಟ್ಟದಾಗಿದೆ. ವಿಶ್ವದ ಬಲಿಷ್ಠ ದೇಶದ ಅಧ್ಯಕ್ಷರು ಮಾತನಾಡಬಾರದ ರೀತಿಯಲ್ಲಿ, ಆಡಬಾರದ ಮಾತುಗಳನ್ನು, ಹೇಳಬಾರದ ಶೈಲಿಯಲ್ಲಿ ಹೇಳುತ್ತಿದ್ದಾರೆ. ಹೌದು, ಭಾರತದಂತ ದೇಶದೊಂದಿಗೆ ವ್ಯವಹರಿಸುವಾಗ ಅಮೆರಿಕಾದ ಅಧ್ಯಕ್ಷರು ಒಂದಷ್ಟು ಸಂಯಮವನ್ನು, ಪ್ರಬುದ್ಧತೆಯನ್ನು ಪ್ರದರ್ಶಿಸಬೇಕು. ಭಾರತ ವಿಶ್ವದ ಇತರ ದೇಶಗಳಂತಲ್ಲ. ಭಾರತವು ತನ್ನದೇ ಆದ ಘನತೆಯನ್ನು ಹೊಂದಿದೆ, ವೈವಿಧ್ಯತೆಯನ್ನು ಹೊಂದಿದೆ, ಮೌಲ್ಯಗಳನ್ನು ಹೊಂದಿದೆ. ಅದನ್ನು ಗೌರವಿಸಬೇಕಾಗಿರುತ್ತದೆ.
ಆರ್ಥಿಕವಾಗಿ, ಸೈನಿಕವಾಗಿ ಅಮೆರಿಕ ಎಷ್ಟೇ ಬಲಿಷ್ಠವಾಗಿರಬಹುದು. ಆದರೆ ಭಾರತದ ಅಲಿಪ್ತ ವಿದೇಶಾಂಗ ನೀತಿ ವಿಶ್ವದ ಶಾಂತಿ ಸೌಹಾರ್ದತೆಗೆ ಬಲವಾದ ಅಡಿಪಾಯವನ್ನು ಹಾಕಿದೆ. ಜಾಗತಿಕವಾಗಿ ಭಾರತ ಹಿಂದಿನಿಂದಲೂ ಯಾವುದೇ ಆಕ್ರಮಣಕಾರಿ ಮನೋಭಾವ ತೋರದೇ ಸದಾ ಹಿಂಸೆಯ ವಿರುದ್ಧವಾಗಿ ಹೋರಾಡುತ್ತಲೇ ಇದೆ. ಅದನ್ನು ಟ್ರಂಪ್ ಗಮನಿಸಿದಂತೆ ಕಾಣುತ್ತಿಲ್ಲ. ಭಯೋತ್ಪಾದನಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಪಾಕಿಸ್ತಾನಕ್ಕೆ ನೀಡುತ್ತಿರುವ ಬೆಂಬಲ ಅಮೇರಿಕಾದ ವಿದೇಶಾಂಗ ನೀತಿಯ ಸೂಕ್ತವಲ್ಲ.
” ಭಾರತ ಸತ್ತ ಆರ್ಥಿಕತೆಯನ್ನು ಹೊಂದಿದೆ ” ಎಂಬರ್ಥದ ಮಾತನ್ನು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಬಹುದು ಭಾರತದ ಆರ್ಥಿಕತೆ ಅಮೆರಿಕಾದ ಆರ್ಥಿಕತೆಗೆ ಹೋಲಿಕೆ ಮಾಡಿದಾಗ ತೀರ ಚಿಕ್ಕದಿರಬಹುದು. ಭಾರತ ಮತ್ತು ಅಮೆರಿಕಾದೊಂದಿಗಿನ ವಾಣಿಜ್ಯ ವ್ಯವಹಾರಗಳು ತುಂಬಾ ದೊಡ್ಡದಲ್ಲದೇ ಇರಬಹುದು. ಆದರೆ ಭಾರತ ಮತ್ತು ಅಮೆರಿಕಾದ ನಡುವಿನ ಪ್ರಜಾಪ್ರಭುತ್ವದ ಮೌಲ್ಯಗಳು, ಸ್ವಾತಂತ್ರ್ಯ, ಸಮಾನತೆಯ, ದೃಷ್ಟಿಕೋನಗಳು ಮತ್ತು ಇಲ್ಲಿನ, ಅಲ್ಲಿನ ಜನರ ನಡುವಿನ ಸಾಂಸ್ಕೃತಿಕ, ಶೈಕ್ಷಣಿಕ ಒಡನಾಟಗಳು, ವಿಶ್ವದ ಇತರ ಯಾವುದೇ ದೇಶಗಳಿಗಿಂತ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದೆ. ಅದನ್ನು ಡೊನಾಲ್ಡ್ ಟ್ರಂಪ್ ಅರ್ಥ ಮಾಡಿಕೊಳ್ಳಬೇಕಿದೆ. ತಮ್ಮ ಮಾತಿನ ಮೇಲೆ ನಿಯಂತ್ರಣ ಹೇರಿಕೊಳ್ಳಬೇಕಿದೆ.
ಹಾಗೆಯೇ ಮೋದಿಯವರು ಸಹ ಭಾರತದ ವಿದೇಶಾಂಗ ನೀತಿಯನ್ನು ಇನ್ನಷ್ಟು ಆಳವಾಗಿ, ವಿಶಾಲವಾಗಿ, ತೂಕವಾಗಿ ರೂಪಿಸಬೇಕಿದೆ. ತಮಗೆ ಅನುಕೂಲಕರವಾದ, ತಮ್ಮೊಂದಿಗೆ ಆತ್ಮೀಯವಾಗಿರುವ ವ್ಯಕ್ತಿಯೊಂದಿಗೆ, ವೈಯಕ್ತಿಕವಾಗಿ ವ್ಯವಹರಿಸಬೇಕೆ ಹೊರತು ದೇಶದ ನೀತಿಯೊಂದಿಗೆ ಅದರ ಹಿತಾಸಕ್ತಿಯನ್ನು ಬಲಿ ಕೊಡಬಾರದು. ವೈಯಕ್ತಿಕ ಸ್ನೇಹವೇ ಬೇರೆ, ದೇಶದ ಮೂಲ ನೀತಿ ನಿಯಮಗಳೆ ಬೇರೆ. ಅದನ್ನು ಸದಾ ಗಮನದಲ್ಲಿಟ್ಟುಕೊಂಡಿರಬೇಕು.
ಡೊನಾಲ್ಡ್ ಟ್ರಂಪ್ ಒಂದು ರೀತಿ ಜೂಜಾಟದ ಜೋಕರ್ ನಂತೆ. ತನಗೆ ಈ ಕ್ಷಣದ ಲಾಭಗಳೇನಿದೆಯೋ ಆ ರೀತಿ ತಮ್ಮ ವಿದೇಶಾಂಗ ನೀತಿಯನ್ನು ರೂಪಿಸಿಕೊಳ್ಳುತ್ತಿದ್ದಾರೆ. ಅವರು ಖಂಡಿತ ವಿಶ್ವಾಸಾರ್ಹವಲ್ಲ. ಜೊತೆಗೆ ಅಮೆರಿಕಾಗೂ ಕೂಡ ಈ ವ್ಯಕ್ತಿ ಅಪಾಯಕಾರಿಯಾಗಬಹುದು.
ಅವರ ಅಂತಾರಾಷ್ಟ್ರೀಯ ತೆರಿಗೆ ನೀತಿ, ವೀಸಾ ನೀತಿ, ವಲಸಿಗರ ವಿರುದ್ದದ ಕಾರ್ಯಾಚರಣೆ, ವಿದೇಶಾಂಗ ವ್ಯವಹಾರಗಳು ಎಲ್ಲವೂ ಭವಿಷ್ಯದ ದೃಷ್ಟಿಯಿಂದ ಗುಣಮಟ್ಟವಿಲ್ಲದ ಕಳಪೆ ನಿರ್ಧಾರಗಳು. ದೊಡ್ಡಣ್ಣ ತಾನೇ ರೂಪಿಸಿದ ಬಲೆಯೊಳಗೆ ಸಿಲುಕಿ ಬಿಲದೊಳಗೆ ಅಡಗುವ ಪರಿಸ್ಥಿತಿಯನ್ನು ತಾವೇ ನಿರ್ಮಿಸಿಕೊಳ್ಳತ್ತಿದ್ದಾರೆ. ಮುಂದಿನ ಜಾಗತಿಕ ಬೆಳವಣಿಗೆ ಕೂತೂಹಲಕಾರಿಯಾಗಿದೆ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451..Watsapp)
9844013068……