ಕಾಯಕ ಮತ್ತು ದಾಸೋಹದ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸಿದವರು ನುಲಿಯ ಚಂದಯ್ಯರು
ವಿಜಯ ದರ್ಪಣ ನ್ಯೂಸ್….
ನುಲಿಯ ಚಂದಯ್ಯನವರ ಜಯಂತಿ ಆಚರಣೆ
ಕಾಯಕ ಮತ್ತು ದಾಸೋಹದ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸಿದವರು ನುಲಿಯ ಚಂದಯ್ಯರು
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ. ಗ್ರಾ.ಜಿಲ್ಲೆ ಆ. 11 : ಕಾಯಕ ನಿಷ್ಠೆ ಹಾಗೂ ದಾಸೋಹದ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸಿದವರು ಕಾಯಕಯೋಗಿ, ವಚನಕಾರ ನುಲಿಯ ಚಂದಯ್ಯರು ಅವರ ಕಾಯಕ ನಿಷ್ಠೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಅಯಿಷಾ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದೇವನಹಳ್ಳಿ ಟೌನ್ ನ ಕೊರಮರ ಭಜನೆ ಮಂದಿರದಲ್ಲಿ ಆಯೋಜಿಸಿದ್ದ ವಚನಕಾರ ‘ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನುಲಿಯ ಚಂದಯ್ಯನವರು ಬಸವಣ್ಣನವರ ಸಮಕಾಲೀನರು ಪ್ರಮುಖ ಶರಣರಲ್ಲಿ ಒಬ್ಬರಾಗಿದ್ದರು. ಬಸವಣ್ಣನವರ ಕಾಲದಲ್ಲಿ ಮಂತ್ರಿ ಸೇವೆ ಸಲ್ಲಿಸಿದ್ದರು. ನುಲಿಯ ಚಂದಯ್ಯನವರ ಇಡೀ ವಚನಗಳನ್ನು ಓದಿದಾಗ ತಾನು ಕಾಯಕ ನಿರತನಾಗಿ ಪ್ರತಿನಿತ್ಯದ ಆಹಾರವನ್ನು ತಾನೇ ದುಡಿದು ತಿನ್ನಬೇಕು ಎನ್ನುವ ಕಾಯಕ ಸಿದ್ದಾಂತ ಅವರದಾಗಿತ್ತು. ಕಾಯಕ ದಾಸೋಹಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಇಷ್ಟಲಿಂಗದಲ್ಲಿ ಅತ್ಮೋನ್ನತಿ ಕಂಡುಕೊಂಡರು. ನುಲಿಯ(ಹಗ್ಗ) ನ್ನು ಹೊಸೆಯುವ ಕಾಯಕ ಮಾಡಿ ಅದನ್ನ ಮಾರಿ ಬಂದ ಆದಾಯದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ನುಲಿಯ ಚಂದಯ್ಯನವರ ಜೀವನ, ಸಮಾಜಸೇವೆ, ಕಾಯಕ ನಿಷ್ಠೆ ನಮಗೆ ಮಾದರಿ. ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜಿ.ಚಂದ್ರಣ್ಣ ಅವರು ಮಾತನಾಡಿ ಶರಣ ನುಲಿಯ ಚಂದಯ್ಯನವರು ಬಸವಣ್ಣನವರ ಸಮಕಾಲೀನರು ಅವರ ಜೀವನ ಚರಿತ್ರೆ, ವಚನಗಳು ತಿಳಿದುಕೊಂಡು ಬದುಕಿನಲ್ಲಿ ರೂಡಿಸಿಕೊಳ್ಳಬೇಕಿದೆ. ನಮ್ಮ ಸಮಾಜದ ವಿದ್ಯಾರ್ಥಿಗಳ ಅಭಿವೃದ್ಧಿಗೆ ಶಾಲೆ ನಿರ್ಮಿಸಲು ತಿರ್ಮಾನಿಸಲಾಗಿದ್ದು ದೇವನಹಳ್ಳಿಯಲ್ಲಿ ಜಾಗ ಮಂಜೂರು ಮಾಡಿಕೊಡಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ದೇವನಹಳ್ಳಿ ತಹಶೀಲ್ದಾರ್ ಅನಿಲ್, ಜಿ.ಪಂ ಯೋಜನಾ ನಿರ್ದೇಶಕ ವಿಠ್ಠಲ ಕಾವ್ಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಪುರಸಭೆ ಸದಸ್ಯ ಲೀಲಾವತಿ, ಮುಖಂಡರಾದ ನಾಗೇಶ್ ಸೇರಿದಂತೆ ಸಮಾಜದ ಇತರೆ ಮುಖಂಡರು, ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.