ಅಭಿವೃದ್ದಿಯ ಹರಿಕಾರ ಡಿ.ದೇವರಾಜ ಅರಸು: ಜಿಲ್ಲಾಧಿಕಾರಿ ಎ ಬಿ ಬಸವರಾಜು 

ವಿಜಯ ದರ್ಪಣ ನ್ಯೂಸ್….

 ಅಭಿವೃದ್ದಿಯ ಹರಿಕಾರ ಡಿ.ದೇವರಾಜ ಅರಸು: ಜಿಲ್ಲಾಧಿಕಾರಿ ಎ ಬಿ ಬಸವರಾಜು

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾಂ.ಜಿಲ್ಲೆ. ಆಗಸ್ಟ್,20 : ಬಡವರ, ಹಿಂದುಳಿದವರ, ದೀನ ದಲಿತರ ಅಭಿವೃದ್ಧಿಗೆ ಶ್ರಮಿಸಿದ ಕರ್ನಾಟಕ ಕಂಡ ಧೀಮಂತ ನಾಯಕ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ರಾಜ್ಯಕ್ಕೆ ಅವರ ಕೊಡುಗೆ ಅಪಾರ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದು ಡಿ.ದೇವರಾಜ ಅರಸು ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿ ಮಾತನಾಡಿದರು.

ಡಿ.ದೇವರಾಜು ಅರಸು ಅವರು 1915 ರಲ್ಲಿ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಜನಿಸಿದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಅಧ್ಯಯನ ಮಾಡಿ ಬಿಎಸ್ಸಿ ಪದವಿಯನ್ನು ಪೂರ್ಣಗೊಳಿಸಿದ ನಂತರ, ಕಲ್ಲಹಳ್ಳಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಳ್ಳುವರು, ಅವರು 1952 ರಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆ. ವಿಧಾನಸಭೆಯಲ್ಲಿ 10 ವರ್ಷಗಳ ಕಾಲ ಶಾಸಕರಾಗಿದ್ದರು.

ಇವರು ಎರಡು ಅವಧಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು, ಅಧಿಕಾರಾವಧಿಯ ವಿಷಯದಲ್ಲಿ ಅವರು ಕರ್ನಾಟಕದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ವ್ಯಕ್ತಿ ಎಂಬ ಹೆಗ್ಗಳಿಕೆ ಇವರದ್ದು. ಅವರು ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿರುತ್ತಿರುವ ಸಮಯದಲ್ಲಿ ಮೈಸೂರು ಎಂಬುದು ಒಂದು ಪ್ರಾಂತ್ಯಕ್ಕೆ ಸೀಮಿತವಾಗಬಾರದು ಎಂದು 1973 ನವೆಂಬರ್ 01 ರಂದು ಕರ್ನಾಟಕ ರಾಜ್ಯ ಎಂದು ಮರುನಾಮಕರಣ ಮಾಡಿದ ಏಕೈಕ ವ್ಯಕ್ತಿ. ಇವರು ಮೃದು ಮತ್ತು ಮೌನ ಸ್ವಭಾವದ ವ್ಯಕ್ತಿತ್ವದವರು.

ಡಿ.ದೇವರಾಜು ಅರಸು ಅವರ ಕೊಡುಗೆ, ಆದರ್ಶಗಳನ್ನು ನಾವೆಲ್ಲರೂ ಪಾಲಿಸುವುದರ ಜೊತೆಗೆ ರಾಜ್ಯದ ಅಭಿವೃದ್ಧಿಗೆ ನಾವೆಲ್ಲರೂ ಜೊತೆಯಾಗಿ ಸಾಗೋಣ ಎಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಬಿ.ಕೆ.ನಾರಾಯಣಸ್ವಾಮಿ ಅವರು ಡಿ.ದೇವರಾಜು ಅರಸು ಅವರ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡುವ ಮೂಲಕ ಮಾತನಾಡಿದರು, ತಮ್ಮ ನಾಲ್ಕು ದಶಕಗಳ ಸಾರ್ವಜನಿಕ ಜೀವನದಲ್ಲಿ ಎಂಟು ವರ್ಷಗಳ ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ. ನವ ಸಮಾಜದ ನಿರ್ಮಾಣಕ್ಕಾಗಿ ಭದ್ರ ಬುನಾದಿಯನ್ನು ಹಾಕಿದರು, ಇವರು ಶಿಕ್ಷಣವನ್ನು ಮುಗಿಸಿ ಕೃಷಿಯಲ್ಲಿ ಪಾಲ್ಗೊಂಡಿದ್ದರು, ಬಳಿಕ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಗೆ 1941ರಲ್ಲಿ ಚುನಾಯಿತರಾದರು, ಸ್ವಾತಂತ್ರ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಚಲೇ ಜಾವ್ ಚಳುವಳಿಯಲ್ಲಿ ಭಾಗವಹಿಸಿದರು.

ಇವರು ಮಾನವತಾವಾದಿ, ವಿಚಾರವಾದಿ ಸಮಾಜದಲ್ಲಿ ಸಂಕಷ್ಟದಲ್ಲಿರುವ ಸಮುದಾಯಗಳಿಗೆ ಉತ್ತಮ ಜೀವನ ನಡೆಸಲು ವೃದ್ದಾಪ್ಯ ವೇತನ ಮತ್ತು ಮಾಸಾಶನ ಜಾರಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಗ್ರಾಮಾಂತರ ಮಕ್ಕಳು ಆರೋಗ್ಯ ಮತ್ತು ಶಿಕ್ಷಣದಲ್ಲಿ ಯಾವುದೇ ಕಾರಣಕ್ಕೂ ವಂಚಿತರಾಗಬಾರದು ಎನ್ನುವುದು ಅವರ ಆಶಯ. ಹಿಂದುಳಿದ ವರ್ಗದವರಿಗೆ ಉಚಿತ ನಿವೇಶನ, ಮತ್ತು ಮನೆ ಕಟ್ಟಿಸಿ ಕೊಡುವುದು, ಇವರು ಬಡವರ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್ ನಾಯಕ. ಕನ್ನಡ ನಾಡಿನ ಮೇಲಿನ ಪ್ರೀತಿಯಿಂದ ಆರ್ಥಿಕ,ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಕೊಡುಗೆಯನ್ನು ನೀಡಿದ್ದಾರೆ. ದುರ್ಬಲ ವರ್ಗಗಳ ಸಮುದಾಯದವರಿಗೆ ಆತ್ಮಾಭಿಮಾನ ಮೂಡಿಸಿದವರು ಡಿ ದೇವರಾಜು ಅರಸು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ.ಎನ್ ಅನುರಾಧ , ದೇವನಹಳ್ಳಿ ಟೌನ್ ಪುರಸಭೆ ಅಧ್ಯಕ್ಷ ಮುನಿಕೃಷ್ಣ ಹಾಗೂ ಉಪಾಧ್ಯಕ್ಷ ರವೀಂದ್ರ, ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ವಿನೋದಾ ಬಿ.ಮುಗಳಿ, ತಹಶೀಲ್ದಾರ್ ಅನಿಲ್, ಇಒ ಶ್ರೀನಾಥ್ ಗೌಡ, ನಗರಸಭೆ ಮತ್ತು ಪುರಸಭೆಯ ಎಲ್ಲಾ ಸದಸ್ಯರು, ಸಾಮಾಜದ ಮುಖಂಡರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಗರ್ಭಿಣಿ, ಮಕ್ಕಳ ಆರೋಗ್ಯಕ್ಕೆ ಕಾಲಕಾಲಕ್ಕೆ ಲಸಿಕೆ ಪಡೆಯುವುದು ಅವಶ್ಯಕ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ.ಆಗಸ್ಟ್ 20 : ಗರ್ಭಿಣಿ ಹಾಗೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕಾಲಕಾಲಕ್ಕೆ ಲಸಿಕೆ ಪಡೆಯುವುದು ಅವಶ್ಯಕವಾಗಿದ್ದು ಗರ್ಭಿಣಿ, ಮಕ್ಕಳಿಗೆ ಲಸಿಕೆ ಹಾಕಿಸಲು ಪೋಷಕರಿಗೆ ಅರಿವು ಮೂಡಿಸಿ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಅಯಿಷಾ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಭೆ ಹಾಗೂ ಜಿಲ್ಲಾ ಮಟ್ಟದ ತಾಯಿ ಹಾಗೂ ಶಿಶು ಮರಣ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಕ್ಕಳ ಹಾಗೂ ಗರ್ಭಿಣಿ ಬಾಣಂತಿಯರ ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಿ ಶಿಶು ಮತ್ತು ತಾಯಿ ಮರಣ ಆಗದಂತೆ ಜಾಗೃತಿ ವಹಿಸಬೇಕು. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಗರ್ಭಿಣಿ, ಬಾಣಂತಿಯರ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಬಗ್ಗೆ ಅರಿವು ಮೂಡಿಸಿ ಶಿಶು ಹಾರೈಕೆ ಮತ್ತು ಗರ್ಭಿಣಿ, ಬಾಣಂತಿಯರ ಹಾರೈಕೆಯಲ್ಲಿ ನಿರತರಾಗಿ ಎಂದರು.

ವಾತಾವರಣ ಬದಲಾವಣೆ ಸಂಧರ್ಭದಲ್ಲಿ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯ ಪ್ರಕರಣಗಳು ಉಲ್ಬಣಗೊಳ್ಳುವ ಸಂಭವ ಇರುತ್ತದೆ. ಹಾಗಾಗಿ ಆರೋಗ್ಯಾಧಿಕಾರಿಗಳು ಜಾಗೃತರಾಗಿ ಸ್ಥಳೀಯ ಮಟ್ಟದಲ್ಲಿ ಜನ ನಿಬಿಡ ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಅರಿವು ಮೂಡಿಸಿ. ತೊಟ್ಟಿ, ಚರಂಡಿ ಹಾಗೂ ಇನ್ನಿತರ ಘನ ತ್ಯಾಜ್ಯಗಳಲ್ಲಿ ನೀರು ಶೇಖರಣೆ ಯಾಗಿ ಸೊಳ್ಳೆಗಳು ಉತ್ಪತ್ತಿಗೊಂಡು ರೋಗಗಳು ಕಂಡು ಬರುತ್ತಿವೆ ಅದಕ್ಕಾಗಿ ರೋಗಗಳ ಬಗ್ಗೆ ಅರಿವು ಮೂಡಿಸಿ ಎಂದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಲಕ್ಕ ಕೃಷ್ಣ ರೆಡ್ಡಿ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಸೀಮಾ ರುದ್ರಪ್ಪ ಮಹಾಬಳೆ, ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ನಾಗೇಶ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಆಗಸ್ಟ್  .21,22 ರಂದು ಉತ್ತರಾಖಂಡ್ 6ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ನಿಯೋಗ ಜಿಲ್ಲೆಗೆ ಭೇಟಿ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ. ಆಗಸ್ಟ್ 20 : ಉತ್ತರಾಖಂಡ್ ರಾಜ್ಯದ 6ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾದ ರವಿಶಂಕರ್, ಸದಸ್ಯರಾದ ಜಂಗ್‌ಪಂಗಿ, ಎಂ.ಸಿ ಜೋಷಿ ಅವರು ಆಗಸ್ಟ್ 22 ಹಾಗೂ 23 ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

ಆಗಸ್ಟ್ 21 ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ಮಧ್ಯಾಹ್ನ 3 ಗಂಟೆಗೆ ದೊಡ್ಡಬಳ್ಳಾಪುರ ನಗರಸಭೆಗೆ ಭೇಟಿ ನೀಡಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ.

ಆಗಸ್ಟ್ 22 ರಂದು ಬೆಳಗ್ಗೆ 11 ಗಂಟೆಗೆ ದೇವನಹಳ್ಳಿ ತಾಲ್ಲೂಕು ಪಂಚಾಯಿತಿಗೆ ಭೇಟಿ ನೀಡಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಿದ್ದಾರೆ. ನಂತರ ಮಧ್ಯಾಹ್ನ 3 ಗಂಟೆಗೆ ದೇವನಹಳ್ಳಿ ತಾಲ್ಲೂಕು ಜಾಲಿಗೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ.