ಜೈನ ಧರ್ಮದ ಮೂಲ ತಿಳಿವಳಿಕೆ ಮತ್ತು ನಡವಳಿಕೆಗಳು……

ವಿಜಯ ದರ್ಪಣ ನ್ಯೂಸ್….

ಜೈನ ಧರ್ಮದ ಮೂಲ ತಿಳಿವಳಿಕೆ ಮತ್ತು ನಡವಳಿಕೆಗಳು……

” ಜಾತಿ ಧರ್ಮದ ಭೇದವಿಲ್ಲದೆ ಸೇವೆ ಮಾಡುತ್ತಿರುವ ವೀರೇಂದ್ರ ಹೆಗ್ಗಡೆಯವರ ಮನಸ್ಸು ನೋಯಿಸಿದರೆ ಸಮಾಜವೇ ನಾಶವಾಗಲಿದೆ ”
ದವಳ ಕೀರ್ತಿ ಭಟ್ಟಾರಕ ಸ್ವಾಮೀಜಿ ಅರಿಹಂತಗಿರಿ
ಜೈನ ಮಠ ಚೆನ್ನೈ.

” ದುಃಖ ದುಮ್ಮಾನ ಮರೆಯಲು ಬರುವ ಪವಿತ್ರವಾದ ಜಾಗ ಧರ್ಮಸ್ಥಳವನ್ನು ಅಗೆದಾಗಲೇ ಕುತಂತ್ರಿಗಳಿಗೆ ಕೇಡುಗಾಲ ಶುರುವಾಗಿದೆ ”
ಭುವನ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಕನಕಗಿರಿ.

” ಹೆಗ್ಗಡೆಯವರು ದೊಡ್ಡ ಪರೀಕ್ಷೆ ಎದುರಿಸಿ ಅದರಲ್ಲಿ ರ್ಯಾಂಕ್ ನೊಂದಿಗೆ ತೇರ್ಗಡೆ ಹೊಂದಿದ್ದಾರೆ. ಇನ್ನು ಆತಂಕ ಪಡುವಂತಹುದು ಏನು ಇಲ್ಲ ”
ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಶ್ರವಣಬೆಳಗೊಳ ಜೈನ ಮಠ.

ಭಾರತದ ನೆಲದಲ್ಲಿ ಸೃಷ್ಟಿಯಾದ ಪುರಾತನ ಧರ್ಮಗಳಲ್ಲಿ ಜೈನ ಧರ್ಮವೂ ಒಂದು. ಸತ್ಯ, ಅಹಿಂಸೆ, ತ್ಯಾಗ, ಮೋಕ್ಷ, ಸಹಿಷ್ಣುತೆ ಈ ಧರ್ಮದ ಮೂಲ ಮತ್ತು ಮುಖ್ಯ ಆಶಯಗಳು. ಅದರಲ್ಲೂ ಪ್ರಾಣಿ ಹಿಂಸೆಯನ್ನು ಅತ್ಯುಘ್ರವಾಗಿ ಖಂಡಿಸುವ, ಸಂಪೂರ್ಣ ಸಸ್ಯಾಹಾರವನ್ನೇ ಸೇವಿಸುವ, ತ್ಯಾಗದ ಉತ್ತುಂಗಕ್ಕೇರುವ, ಎಲ್ಲಾ ರೀತಿಯ ಮೋಹಗಳನ್ನು ತೊರೆಯುವ, ಕೊನೆಗೆ ಜೀವನವನ್ನು ಸಹ ಸ್ವಯಂ ನಿರ್ಗಮಿಸಲು ಆಹಾರವನ್ನು ತ್ಯಜಿಸಿ ಸಲ್ಲೇಖನ ವ್ರತ ಕೈಗೊಂಡು ಇಚ್ಚಾಮರಣಿಯಾಗುವ ಮಹೋನ್ನತ ಧ್ಯೇಯಗಳನ್ನು ಹೊಂದಿದೆ.

ಇಂತಹ ಧರ್ಮದ ಕೆಲವು ಪೀಠಾಧಿಪತಿಗಳು, ಧರ್ಮಾಧಿಕಾರಿಗಳು, ಭಟ್ಟಾರಕರು, ಆಚಾರ್ಯರು ಧರ್ಮಸ್ಥಳದ ಅಸಹಜ ಸಾವುಗಳ ಪ್ರಕರಣದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಒಂದು ಹೋರಾಟವನ್ನು, ಧರ್ಮ ರಕ್ಷಣಾ ಚಳುವಳಿಯನ್ನು ಮಾಡುವ ಸಂದರ್ಭದಲ್ಲಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದಾಗ ಮೇಲಿನ ಮಾತುಗಳನ್ನು ಸಾರ್ವಜನಿಕವಾಗಿ ಹೇಳಿದ್ದಾರೆ. ಈ ಮಾತುಗಳು ಬಹುತೇಕ ವಿರೋಧಿಗಳಿಗೆ ಅಥವಾ ಶತ್ರುಗಳಿಗೆ ಅಥವಾ ಆರೋಪ ಮಾಡುತ್ತಿರುವವರಿಗೆ ಶಾಪದ ರೀತಿಯಲ್ಲಿಯೇ ಇದೆ.

ಈಗ ನಿಜವಾದ ಜೈನ ಅನುಯಾಯಿಗಳು, ಧರ್ಮೀಯರು ಎಚ್ಚೆತ್ತುಕೊಳ್ಳಬೇಕಾದ ಸಮಯ ಬಂದಿದೆ. ಏಕೆಂದರೆ ಈ ರೀತಿಯ ಮಾತುಗಳು ಆ ಧರ್ಮದ ಮೂಲ ಆಶಯಗಳಿಗೆ ವ್ಯತಿರಿಕ್ತವಾಗಿವೆ. ಇವು ಒಂದು ರೀತಿಯಲ್ಲಿ ಕ್ರೌರ್ಯವನ್ನು ಬಿಂಬಿಸುವ ಮಾತುಗಳಂತಿವೆ. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ರಾಜಕಾರಣಿಗಳು ಏನೇ ಹೇಳಿಕೊಳ್ಳಲಿ ಕನಿಷ್ಠ ಜೈನ ಸನ್ಯಾಸಿಗಳು, ಮುನಿಗಳು ಕನಿಷ್ಠ ತನಿಖೆ ಮುಗಿಯುವವರೆಗಾದರೂ ಕಾಯಬಹುದಿತ್ತು ಅಥವಾ ಸಹಿಷ್ಣುತೆಗೆ ಹೆಸರಾದ ಅವರು ಎಷ್ಟೇ ಆರೋಪಗಳು ಬಂದರೂ ವಿಚಲಿತರಾಗದೆ ತಮ್ಮ ಪಾಡಿಗೆ ತಾವು ಇರಬಹುದಿತ್ತು. ಯಾವಾಗಲೂ ಕೆಲಸಗಳು ಉಳಿಯುತ್ತವೆ, ಟೀಕೆಗಳು ಅಳಿಯುತ್ತವೆ. ಆದರೆ ಮುನಿಗಳು ಅದನ್ನು ಮೀರಿ ಎಲ್ಲಾ ಸಾಮಾನ್ಯರಂತೆ ಅವಶ್ಯವಾದರೆ ವಿಧಾನಸೌಧ ಚಲೋಗೆ ಜೈನ ಸಮುದಾಯಕ್ಕೆ ಕರೆ ನೀಡಿದ್ದಾರೆ.

24 ತೀರ್ಥಂಕರರ ತ್ಯಾಗ, ಬಲಿದಾನದ, ವಸ್ತು ಸಂಸ್ಕೃತಿಯ ಮೋಹ ತಿರಸ್ಕರಿಸುವ, ಜೈನ ಮುನಿಗಳು ಈ ರೀತಿ ಸೇಡಿನ, ಆಕ್ರೋಶ ಭರಿತ ಮಾತುಗಳನ್ನಾಡುವ ಮೂಲಕ ಜೈನ ಧರ್ಮದ ಮೂಲ ಆಶಯಕ್ಕೆ ಅಪಚಾರವೆಸಗಿದ್ದಾರೆ. ಕೆಲವು ಅಸಹಜ ಸಾವುಗಳ ಪ್ರಕರಣದ ಆರೋಪ ಎದುರಿಸುತ್ತಿರುವಾಗ, ಅದರ ತನಿಖೆ ಇನ್ನೂ ನಡೆಯುತ್ತಿರುವಾಗ, ಯಾರೋ ಕೆಲವರು ಷಡ್ಯಂತ್ರ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿರುವಾಗ ಈ ರೀತಿಯ ದ್ವೇಷದ ಮಾತುಗಳನ್ನಾಡುವುದು ಉಚಿತವಲ್ಲ.

ಜೈನ ಸಮುದಾಯದ ಅಹಿಂಸೆಯ ತತ್ವದ ಬಗ್ಗೆ ಸಾಕಷ್ಟು ಜನರಿಗೆ ಒಳ್ಳೆಯ ಅಭಿಪ್ರಾಯವಿದೆ. ಆದರೆ ದೇಶದ ಗೋಮಾಂಸ ರಫ್ತಿನ ಉದ್ಯಮದಲ್ಲಿ ಅತಿ ಹೆಚ್ಚು ರಫ್ತು ಮಾಡುವವರ ಪಟ್ಟಿಯಲ್ಲಿ ಜೈನ ಸಮುದಾಯದ ಹೆಸರು ಮುಖ್ಯವಾಗಿ ಕೇಳಿ ಬರುತ್ತಿದೆ. ಹಾಗೆಯೇ ಕೆಲವು ಆನ್ಲೈನ್ ಗೇಮ್ ಅಥವಾ ಆನ್ಲೈನ್ ಜೂಜಾಟದ ಸಂಸ್ಥಾಪಕರಲ್ಲಿ ಜೈನ ಧರ್ಮೀಯರು ಇರುವುದಾಗಿ ಒಂದಷ್ಟು ಮಾಹಿತಿ ಇದೆ. ಡ್ರೀಮ್ ಇಲೆವೆನ್ ಸಂಸ್ಥಾಪಕರಲ್ಲಿ ಹರ್ಷ ಜೈನ್ ಎಂಬುವವರು ಜೈನರೆ. ಅಂದರೆ ಸೇವೆ ಮತ್ತು ಅಹಿಂಸೆಯ ಪ್ರತಿಪಾದಕರು ಹಣಕ್ಕಾಗಿ ಸಾಮಾಜಿಕ ಮೌಲ್ಯಗಳ ವಿರುದ್ಧವಾದ ವ್ಯವಹಾರ ಮಾಡುವುದು ಎಷ್ಟು ಸರಿ. ಹಾಗೆ ಭಗವಾನ್ ಮಹಾವೀರರು ಹೇಳಿದ ತತ್ವಗಳು ಸಮಾಜದ ಕಟ್ಟ ಕಡೆಯ ಶೋಷಿತ, ದೌರ್ಜನ್ಯಕ್ಕೊಳಗಾದ ವ್ಯಕ್ತಿಗಳ ಪರವಾಗಿರಬೇಕೇ ಹೊರತು ಬಲಿಷ್ಠ ವರ್ಗದ ಪರವಲ್ಲ.

ಹೌದು, ಹಾಗೆಂದು ಇತರ ಎಲ್ಲಾ ಧರ್ಮಗಳವರು ಅವರವರ ಧರ್ಮದ ಮೂಲ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದಾರೆಯೇ ಎಂದರೆ ಖಂಡಿತ ಇಲ್ಲ. ಆ ಇತರೆ ಧರ್ಮಗಳ ಬಗ್ಗೆ ಸಹ ಸದಾ ಟೀಕೆ, ವಿಮರ್ಶೆಗಳು ನಡೆಯುತ್ತಲೇ ಇರುತ್ತದೆ. ಆಯಾ ಧರ್ಮದ ಒಳಗಿನ ಸುಧಾರಣಾವಾದಿಗಳು, ಪ್ರಗತಿಪರರು ಮತ್ತು ಹೊರಗಿನ ಕೆಲವು ವಿಮರ್ಶಕರು ಧರ್ಮಗಳನ್ನು ಹೀಗೆ ಚರ್ಚೆಗೆ ಒಳಪಡಿಸುತ್ತಿರುತ್ತಾರೆ.

ಹಾಗೆಯೇ ಜೈನ ಧರ್ಮದ ಕೆಲವು ನ್ಯೂನ್ಯತೆಗಳನ್ನು ಈ ಸಂದರ್ಭದಲ್ಲಿ ಚರ್ಚಿಸುವುದು ಒಳಿತು. ಏಕೆಂದರೆ ಧರ್ಮಸ್ಥಳದ ವಿಷಯದಲ್ಲಿ ನಡೆಯುತ್ತಿರುವ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಜೈನ ಧರ್ಮದ ಮೂಲ ಆಶಯಗಳ ಬಗ್ಗೆ ಮತ್ತು ಅದನ್ನು ಅನುಸರಿಸುತ್ತಿರುವವರ ಬಗ್ಗೆ ಚರ್ಚೆಗಳು ನಡೆದರೆ ಉತ್ತಮವಲ್ಲವೇ.
ಏಕೆಂದರೆ ಧರ್ಮಗಳು ಪುಸ್ತಕಗಳ ಬದನೆಕಾಯಿಯಲ್ಲ. ಅವು ಮಸ್ತಕದ ತಿಳಿವಳಿಕೆಗಳು. ಆ ತಿಳಿವಳಿಕೆಗಳು ನಡವಳಿಕೆಗಳಾಗಲಿ ಎಂದು ಆಶಿಸುತ್ತಾ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451……
9844013068……