ಕೆಲವು ಸಮಸ್ಯೆಗಳಿಗೆ ಪರಿಹಾರ ನಮ್ಮಲ್ಲೇ ಇದೆ………
ವಿಜಯ ದರ್ಪಣ ನ್ಯೂಸ್…
ಕೆಲವು ಸಮಸ್ಯೆಗಳಿಗೆ ಪರಿಹಾರ ನಮ್ಮಲ್ಲೇ ಇದೆ………
ಟ್ರಾಫಿಕ್ ಸಮಸ್ಯೆ, ವಾಯು ಮಾಲಿನ್ಯ, ಶಬ್ಧ ಮಾಲಿನ್ಯ, ಕಸದ ಸಮಸ್ಯೆ, ನೀರಿನ ಸಮಸ್ಯೆ ಮುಂತಾದ ಮೂಲಭೂತ ಸಮಸ್ಯೆಗಳ ಬಗ್ಗೆ, ಅದಕ್ಕೆ ಇರುವ ಪರ್ಯಾಯ ವ್ಯವಸ್ಥೆಗಳ ಬಗ್ಗೆ ಎಲ್ಲರೂ ಆಗಾಗ ಮಾತನಾಡುತ್ತಲೇ ಇರುತ್ತಾರೆ.
ಟ್ರಾಫಿಕ್ ಸಮಸ್ಯೆಗೆ ಫ್ಲೈ ಓವರ್, ಅಂಡರ್ ಪಾಸ್, ಮೆಟ್ರೋ, ಮೋನೋ, ಸಾರ್ವಜನಿಕ ಸಾರಿಗೆ, ಸಬ್ ಅರ್ಬನ್ ರೈಲು, ಇದೀಗ ಸುರಂಗ ಮಾರ್ಗ ಮುಂತಾದ ಪರ್ಯಾಯ ವ್ಯವಸ್ಥೆಗಳ ಬಗ್ಗೆ ಹೇಳುತ್ತಾರೆ. ಕಸದ ಸಮಸ್ಯೆಗೆ ಬೇರೆ ಬೇರೆ ಪರ್ಯಾಯಗಳನ್ನು, ವಾಯುಮಾಲಿನ್ಯ ಶಬ್ದ ಮಾಲಿನ್ಯ ತಡೆಗೆ ಮತ್ತೇನೋ ಪರ್ಯಾಯ ವ್ಯವಸ್ಥೆಗಳನ್ನು ನಿರಂತರವಾಗಿ ಶೋಧಿಸುತ್ತಲೇ ಇದ್ದಾರೆ. ಈ ಎಲ್ಲವೂ ಸಹ ತಾಂತ್ರಿಕ ಮಾರ್ಗಗಳೇ ಆಗಿವೆ. ಅದನ್ನು ಹೊರತುಪಡಿಸಿ ಇನ್ನೊಂದು ದೃಷ್ಟಿಕೋನದಲ್ಲಿಯೂ ಇದನ್ನು ಯೋಚಿಸಬೇಕಲ್ಲವೇ…..
ಅದೇನೆಂದರೆ ಎಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕರಲ್ಲಿ ಮೂಡಬೇಕಾದ ನಾಗರಿಕ ಪ್ರಜ್ಞೆಯ ಬಗ್ಗೆ, ನಾಗರಿಕರಲ್ಲಿ ಮೂಡಬೇಕಾದ ತಾಳ್ಮೆಯ ಬಗ್ಗೆ, ಜನರಲ್ಲಿ ಮೂಡಬೇಕಾದ ಸಾಮಾನ್ಯ ಜ್ಞಾನದ ಬಗ್ಗೆ, ಮನುಷ್ಯರಲ್ಲಿ ಮೂಡಬೇಕಾದ ಪ್ರಬುದ್ಧತೆಯ ಬಗ್ಗೆ, ಪ್ರಜೆಗಳಲ್ಲಿ ಮೂಡಬೇಕಾದ ಕಾನೂನಿನ ಅರಿವಿನ ಬಗ್ಗೆ, ಜನಸಾಮಾನ್ಯರಲ್ಲಿ ಮೂಡಬೇಕಾದ ಸ್ವಚ್ಛತೆಯ ಕಾಳಜಿಯ ಬಗ್ಗೆ, ನಾಗರಿಕರಲ್ಲಿ ಮೂಡಬೇಕಾದ ಮಾನವೀಯ ಮೌಲ್ಯಗಳ ಬಗ್ಗೆ……
ಇದರ ಬಗ್ಗೆ ಗಂಭೀರವಾಗಿ ಯೋಚಿಸದೆ ಕೇವಲ ತಂತ್ರಜ್ಞಾನಗಳನ್ನೇ ಪರ್ಯಾಯವಾಗಿ ಯೋಚಿಸುತ್ತಾ ಕುಳಿತರೆ ಇದು ಎಲ್ಲಿಗೆ ಹೋಗಿ ನಿಲ್ಲಬಹುದು. ಮನುಷ್ಯನ ಸಾಮಾನ್ಯ ಪ್ರಜ್ಞೆ ಜಾಗೃತವಾಗದೆ ಆತನಿಗೆ ಒದಗಿಸಬಹುದಾದ ಎಲ್ಲ ತಾಂತ್ರಿಕ ಸೌಲಭ್ಯಗಳು ಕೇವಲ ತಾತ್ಕಾಲಿಕ ಪರಿಹಾರಗಳು ಮಾತ್ರ.
ಈಗ ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಬೆಳೆಯದೆ ನಿರಂತರ ಸ್ಥಿರತೆ ಕಾಪಾಡಿಕೊಳ್ಳುತ್ತಿರುವ ಭೂಪ್ರದೇಶ ಇವುಗಳ ಮಧ್ಯೆ ಘರ್ಷಣೆ ಊಹಿಸಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಟ್ರಾಫಿಕ್ ಹೆಚ್ಚಾದರೆ ಅದಕ್ಕಿರುವ ಬೇರೆ ಪರ್ಯಾಯ ಮಾರ್ಗಗಳ ಜೊತೆ ಒಂದಷ್ಟು ತಾಳ್ಮೆ, ಒಂದಷ್ಟು ಸಾಮಾನ್ಯ ಜ್ಞಾನ ಇದ್ದರೆ ಬಹುತೇಕ ಟ್ರಾಫಿಕ್ ಸಮಸ್ಯೆಗೆ ನಿಂತಲ್ಲೇ ಪರಿಹಾರ ಕಂಡುಕೊಳ್ಳಬಹುದು ಅಥವಾ ಅದರಿಂದಾಗುವ ಒತ್ತಡವನ್ನು ನಿವಾರಿಸಿಕೊಳ್ಳಬಹುದು. ಒಂದಷ್ಟು ಸಮಯ ಪ್ರಜ್ಞೆ ಇದ್ದರೆ ಇನ್ನೊಂದಿಷ್ಟು ಸುಲಭದ ದಾರಿ ಹುಡುಕಬಹುದು.
ಪರಿಸರ ಮಾಲಿನ್ಯವೂ ಅಷ್ಟೇ, ವಾಹನ ಚಲಾವಣೆಯಲ್ಲೂ ಅಷ್ಟೇ, ಶಬ್ದ ಮಾಲಿನ್ಯದಲ್ಲೂ ಅಷ್ಟೇ, ನನ್ನಂತೆ ಇತರರು ಎಂಬ ಭಾವನೆ ಬೆಳೆಸಿಕೊಂಡರೆ ಎಷ್ಟೋ ಸಮಸ್ಯೆಗಳು ತನ್ನಿಂದ ತಾನೇ ಪರಿಹಾರವಾಗುತ್ತದೆ.
ಹೇಗೆ ಬಿಪಿ, ಶುಗರ್, ಅಸಿಡಿಟಿ, ಹೃದಯ ಸಮಸ್ಯೆ, ಥೈರಾಯ್ಡ್ ಸಮಸ್ಯೆ, ಕ್ಯಾನ್ಸರ್ ಸಮಸ್ಯೆ ಮುಂತಾದವುಗಳು ಜೀವನ ಶೈಲಿಯ ಬದಲಾವಣೆಯಿಂದ ಪರಿಹಾರ ಸಿಗುತ್ತದೋ ಹಾಗೆಯೇ ಅನೇಕ ಟ್ರಾಫಿಕ್ ಸಮಸ್ಯೆಗಳಿಗೆ ನಮ್ಮ ಮನಸ್ಸಿನ ಯೋಚನೆಯ ಬದಲಾವಣೆಯಿಂದ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಆ ಬಗ್ಗೆ ಯೋಚಿಸುವ ಅವಶ್ಯಕತೆ ಇದೆ.
ಒಂದು ಕಡೆ ಅಭಿವೃದ್ಧಿಯ ನಾಗಾಲೋಟ ನಡೆಯುತ್ತಿರಲಿ, ಆದರೆ ಅದೇ ಸಮಯದಲ್ಲಿ ಅದಕ್ಕೆ ಇರುವ ಬಹುದೊಡ್ಡ ಪರ್ಯಾಯ ಮನುಷ್ಯನ ಮನಸ್ಸಿನ ಅಂತರ್ಯದ ಪರಿವರ್ತನೆ. ಆಂತರ್ಯದ ಗೊಂದಲಗಳಿಗೆ ಕಡಿವಾಣ, ಆಂತರ್ಯದ ಒತ್ತಡಗಳಿಗೆ ಒಳಗಾಗದ ವಿವೇಚನೆ ಇದು ಬಹಳ ಮುಖ್ಯ.
ತಾಳ್ಮೆ ಇಲ್ಲದೆ ಅಸಹನೆ , ಅಸಹಿಷ್ಣುತೆ ಅಸಮಾಧಾನ, ಗೊಣಗಾಟ, ಕೋಪ, ಆವೇಶ, ಹಿಂಸೆ ಈ ಭಾವನೆಗಳೇ ಹೆಚ್ಚಾದರೆ ಆಗ ಯಾವ ಪರ್ಯಾಯ ವ್ಯವಸ್ಥೆಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಮೊದಲು ಮನುಷ್ಯ ಬದಲಾಗಬೇಕು. ದೃಷ್ಠಿಯಂತೆ ಸೃಷ್ಠಿ ಎನ್ನುವ ಭಾವನೆ ಬೆಳೆಸಿಕೊಳ್ಳಬೇಕು. ಆಗ ಪರಿವರ್ತನೆ ಸಾಧ್ಯ.
ಭೂಮಿಯ ಮೇಲೆ
ನಾವಿರುವುದು ಸುಮಾರು 750 ಕೋಟಿ ನರಮಾನವರು,
ವಿಶಾಲವಾದ ಆಕಾಶ,
ಆದರೆ, ಅನೇಕರಿಗಿಲ್ಲ ಸೂರು.
ವಿಪುಲವಾದ ನೀರು,
ಆದರೆ, ಕುಡಿಯುವ ನೀರಿಗೆ ಹಾಹಾಕಾರ.
ಬೃಹತ್ ಭೂಮಿ, ಕಾಡು, ಕೃಷಿ,
ಆದರೆ, ಅನೇಕರ ಹೊಟ್ಟೆಗಿಲ್ಲ ಊಟ.
ಊಹೆಗೂ ನಿಲುಕದ ಸೂರ್ಯ ಶಾಖ ಆದರೆ, ವಿದ್ಯುತ್ ಅಭಾವ.
ಸರ್ವಾಂತರ್ಯಾಮಿ ಗಾಳಿ,
ಆದರೆ, ಶುದ್ಧ ಗಾಳಿಗೂ ಪರದಾಟ.
ಇದೇ ಅಭಿವೃದ್ಧಿ, ಇದೇ ನಾಗರಿಕತೆ.
ಆಕ್ಸ್‌ಫರ್ಡ್, ಕೇಂಬ್ರಿಡ್ಜ್, ಹಾರ್ವರ್ಡ್, ಐಐಟಿ, ಐಐಎಮ್, ವಿಶ್ವವಿದ್ಯಾಲಯಗಳು,
ಆದರೂ ಮತಿಗೆಟ್ಟವರಿಗಿಲ್ಲ ಕೊರತೆ.
ಕ್ಷಣಾರ್ಧದಲ್ಲಿ ಇಡೀ ಮನುಕುಲದ ನಾಶಕ್ಕಿವೆ ಬಾಂಬುಗಳು,
ಆದರೂ, ಮನುಷ್ಯನ ರಕ್ಷಣೆಗಿಲ್ಲ ದಾರಿಗಳು.
ಮಂಗಳ ಗ್ರಹ ಹತ್ತಿರವಾಗುತ್ತಿದೆ,
ಆದರೆ, ನಮ್ಮ ಬಡ ಹಳ್ಳಿಗಳು ದೂರವಾಗುತ್ತಿವೆ.
ರಸ್ತೆಗಳು ಸುಂದರವಾಗುತ್ತಿವೆ,
ಆದರೆ, ಅಪಘಾತಗಳು ನಿರಂತರವಾಗುತ್ತಿವೆ.
ಆಸ್ಪತ್ರೆಗಳು ಹೈಟೆಕ್ ಗಳು, ಮಲ್ಟಿ ಸ್ಪೆಷಾಲಿಟಿಗಳು ಆಗುತ್ತಿವೆ.
ಆದರೆ, ಆರೋಗ್ಯ ಹದಗೆಡುತ್ತಿದೆ,
ಸಾವು ಏರುತ್ತಿದೆ.
ಬೆಳೆಯುತ್ತಿವೆ ಶಿಕ್ಷಣ ಸಂಸ್ಥೆಗಳು,
ಆದರೆ, ಕೊಳೆಯುತ್ತಿವೆ ನಮ್ಮ ಮನಸ್ಸುಗಳು.
ಇದೇ ಅಭಿವೃದ್ಧಿ, ಇದೇ ನಾಗರಿಕತೆ.
ಮತ್ತೊಮ್ಮೆ ನಮ್ಮನ್ನು ನಾವು ಪುನರ್ ರೂಪಿಸಿಕೊಳ್ಳಬೇಕಿದೆ.
ಆ ನಿಟ್ಟಿನಲ್ಲಿ ನಾವೆಲ್ಲ ಯೋಚಿಸೋಣ..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451….
9844013068……
