ಜಿಲ್ಲಾಡಳಿತ ಭವನದ ಆವರಣದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣಕ್ಕೆ ಕ್ರಮ: ಸಚಿವ ಕೆ.ಹೆಚ್ ಮುನಿಯಪ್ಪ
ವಿಜಯ ದರ್ಪಣ ನ್ಯೂಸ್….
ದಾಸಶ್ರೇಷ್ಠ ಕನಕದಾಸರ 538ನೇ ಜಯಂತ್ಯೋತ್ಸವ
ಜಿಲ್ಲಾಡಳಿತ ಭವನದ ಆವರಣದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣಕ್ಕೆ ಕ್ರಮ: ಸಚಿವ ಕೆ.ಹೆಚ್ ಮುನಿಯಪ್ಪ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ನವೆಂಬರ್.: ಜಿಲ್ಲಾಡಳಿತ ಭವನದ ಆವರಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದೇವನಹಳ್ಳಿ ಟೌನ್ ನ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ‘ದಾಸಶ್ರೇಷ್ಠ ಕನಕದಾಸರ 538ನೇ ಜಯಂತ್ಯುತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೊಳ್ಳಿ ರಾಯಣ್ಣ ಪ್ರತಿಮೆ ಜೊತೆಗೆ ತಾಲ್ಲೂಕಿನಲ್ಲಿ ಕನಕ ಭವನ ನಿರ್ಮಾಣ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಸ್ಟೆಲ್ ನಿರ್ಮಾಣಕ್ಕೂ ಬೇಗ ಕ್ರಮ ವಹಿಸಲಾಗುವುದು ಎಂದರು.
12ನೇ ಶತಮಾನದಲ್ಲಿ ಸಮಾಜ ಸುಧಾರಣೆಗೆ ಶ್ರಮಿಸಿದ ಬಸವಣ್ಣನವರಂತೆ, 15ನೇ ಶತಮಾನದಲ್ಲಿ ಸಮಾಜ ಪರಿವರ್ತನೆಗೆ ಶ್ರಮಿಸಿದವರಲ್ಲಿ ಮಹಾನ್ ಸಂತರಾದ ಕನಕದಾಸರು ಪ್ರಮುಖರು. ಸಮಾಜದ ಪರಿವರ್ತನೆ ಹಾಗೂ ಮೇಲು ಕೀಳು ಎಂಬ ಮನೋಭಾವನೆ ಹೋಗಲಾಡಿಸಲು ದಾಸಶ್ರೇಷ್ಠ ಕನಕದಾಸ ಕೀರ್ತನೆಗಳು ಸಾರ್ವಕಾಲಿಕ ಪ್ರಸ್ತುತ ಎಂದರು.
ಪ್ರತಿಯೊಂದು ಸಮುದಾಯದವರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಿ, ಉನ್ನತ ಹುದ್ದೆಗಳನ್ನು ಪಡೆದುಕೊಂಡು ಸಮುದಾಯದ ಸರ್ವೋತೋಮುಖ ಏಳ್ಗೆ ಹೊಂದಬೇಕು ಎಂದು ಸಚಿವರು ಹೇಳಿದರು.
ಜಾನಪದ ಲೋಕದ ಸಂಶೋದಕರಾದ ಡಾ. ರವಿ ಯು.ಎಂ. ಅವರು ಉಪನ್ಯಾಸ ನೀಡಿ, 15ನೇ ಶತಮಾನದಲ್ಲಿ ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಸಾಮರಸ್ಯದ ಸಂದೇಶ ಬಿತ್ತಿ, ಸಮಾಜ ಪರಿವರ್ತನೆಗೆ ಶ್ರಮಿಸಿದ ದಾಸಶ್ರೇಷ್ಠ ಕನಕದಾಸರು. ಅವರ ಕೀರ್ತನೆಗಳು ಎಂದೆಂದಿಗೂ ಸಾರ್ವಕಾಲಿಕ ಪ್ರಸ್ತುತವಾಗಿವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ದೇವನಹಳ್ಳಿ ಟೌನ್ ನ ಬೈಪಾಸ್ ನಲ್ಲಿರುವ ಕನಕದಾಸರ ವೃತ್ತದಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನದವರೆಗೆ ವಿವಿಧ ಕಲಾತಂಡಗಳೊಂದಿಗೆ ಕನಕದಾಸರ ಉತ್ಸವ ಪಲ್ಲಕ್ಕಿಗಳ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಜಿಲ್ಲಾ ಪಂಚಾಯತ್ ಸಿಇಒ ಡಾ. ಕೆ.ಎನ್ ಅನುರಾಧ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ. ರಾಜಣ್ಣ,ಬಯಪ್ಪ ಅಧ್ಯಕ್ಷ ವಿ. ಶಾಂತಕುಮಾರ, ಕನ್ನಡ ಚಲನಚಿತ್ರ ನಟ ಧ್ರುವ ಸರ್ಜಾ, ದೇವನಹಳ್ಳಿ ಪುರಸಭೆ ಅಧ್ಯಕ್ಷ ಡಿ.ಎಂ ಮುನಿಕೃಷ್ಣಪ್ಪ, ಉಪಾಧ್ಯಕ್ಷ ಜಿ.ಎ. ರವೀಂದ್ರ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ದೇವನಹಳ್ಳಿ ತಹಶೀಲ್ದಾರ್ ಅನಿಲ್, ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷರು, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷರು, ಕುರುಬರ ಸಂಘದ ಯುವ ಘಟಕ ಅಧ್ಯಕ್ಷರು ಸೇರಿದಂತೆ ಜಿಲ್ಲಾಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಮುದಾಯದ ಮುಖಂಡರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಸರಳ ವಿವಾಹ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
ಬೆಂಗಳೂರು ಗ್ರಾಮಾಂತರ ಜಿಲ್ಲೆ. ನವೆಂಬರ್ .11:
ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಪ್ರೋತ್ಸಾಹ ಧನ ನೀಡಲು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಮೂಹ ವಿವಾಹಗಳ ವೆಚ್ಚಗಳಿಗಾಗಿ ಪ್ರತಿ ಜೋಡಿಗೆ ರೂ.50 ಸಾವಿರ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಪ್ರೋತ್ಸಾಹಧನ ಪಡೆಯಲು ಮದುವೆ ದಿನಾಂಕದ 03 ತಿಂಗಳ ಒಳಗಾಗಿ ಜಿಲ್ಲೆಯ ಜಿಲ್ಲಾ ಅಧಿಕಾರಿಗಳು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ,ನಂ 216, 2ನೇ ಮಹಡಿ ಜಿಲ್ಲಾಡಳಿತ ಭವನ ಬೀರಸಂದ್ರ ಗ್ರಾಮ ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಕಛೇರಿಗೆ ನಿಗಧಿತ ನಮೂನೆಯಲ್ಲಿ ಮದುವೆ ಪ್ರಮಾಣ ಪತ್ರ ಮತ್ತು ಇತರೆ ಅಗತ್ಯ ದಾಖಲಾತಿಗಳನ್ನು ಸಲ್ಲಿಸತಕ್ಕದ್ದು.
ಸೌಲಭ್ಯ ಪಡೆಯುವ ವಧುವಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 42 ವರ್ಷಗಳು, ವರನಿಗೆ ಕನಿಷ್ಠ 21 ವರ್ಷದಿಂದ ಗರಿಷ್ಠ 45 ವರ್ಷ ವಯಸ್ಸು ಆಗಿರತಕ್ಕದ್ದು.
ಈ ಯೋಜನೆಯಡಿ ಸಹಾಯಧನ ಪಡೆಯಲು ವಧು-ವರರ ವಾರ್ಷಿಕ ಆದಾಯವು ರೂ.2.50 ಲಕ್ಷಗಳು ಮತ್ತು ಒಟ್ಟಾರೆಯಾಗಿ ರೂ.5.00 ಲಕ್ಷಗಳನ್ನು ಮೀರತಕ್ಕದ್ದಲ್ಲ.
ವರನಿಗೆ ಈಗಾಗಲೇ ಜೀವಂತ ಪತ್ನಿಯಿದ್ದಲ್ಲಿ ಅಥವಾ ವಧುವಿಗೆ ಜೀವಂತ ಪತಿ ಇದ್ದಲ್ಲಿ ಈ ಯೋಜನೆಯು ಅನ್ವಯಿಸುವುದಿಲ್ಲ.
ಜಿಲ್ಲಾ ನೋಂದಣಿ/ವಕ್ಸ್ ಬೋರ್ಡ್ ಕಛೇರಿಗಳಲ್ಲಿ ಸಾಮೂಹಿಕ ವಿವಾಹಗಳ ಆಯೋಜಕರೆಂದು ನೋಂದಣಿಯಾಗಿರುವ ಖಾಸಗಿ ಟ್ರಸ್ಟ್ಗಳು, ದೇವಸ್ಥಾನದ ಟ್ರಸ್ಟ್ಗಳು, ಸಂಘಗಳು, ಸೊಸೈಟಿಗಳು, ವಕ್ಸ್ ಸಂಸ್ಥೆಗಳು ಮತ್ತು ಖಾಸಗಿ ವ್ಯಕ್ತಿಗಳು ನಡೆಸುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ವಿವಾಹವಾದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
ವಧು-ವರರು ಕನಿಷ್ಠ ಏಳು ದಿನ ಮುಂಚಿತವಾಗಿ ವಾಸ್ತವ್ಯವಿರುವ ಜಿಲ್ಲೆಯಲ್ಲಿಯೇ ಅರ್ಜಿ ಸಲ್ಲಿಸತಕ್ಕದ್ದು.
ಸಾಮೂಹಿಕ ವಿವಾಹ ಕಾರ್ಯಕ್ರಮದ ಫೋಟೋ ಹಾಗೂ ವಧು-ವರನ ಜಂಟಿ ಭಾವಚಿತ್ರಗಳನ್ನು (GPS)(ಸ್ಥಿರ ಚಿತ್ರಗಳನ್ನು) ಸಲ್ಲಿಸುವುದು
ವಿಧವೆ ತಾಯಿಯ ಕುಟುಂಬ/ವಿಕಲಚೇತನ ಕುಟುಂಬದವರಿಗೆ ಮೊದಲ ಆದ್ಯತೆ ಮೇರೆಗೆ ಸಹಾಯಧನ ಮಂಜೂರಾತಿಗೆ ಪರಿಗಣಿಸತಕ್ಕದ್ದು.
ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಆಯೋಜಕರುಗಳು ಪ್ರೋತ್ಸಾಹ ಹಾಗೂ ವಿವಾಹದ ಖರ್ಚು ವೆಚ್ಚಗಳಿಗಾಗಿ ಪ್ರತಿ ಜೋಡಿಗೆ ರೂ.5000/-ಗಳನ್ನು ನೀಡುವುದು.
ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಆಯೋಜಕರುಗಳು ಕಾರ್ಯಕ್ರಮದ ಏಳು ದಿನ ಮುಂಚಿತವಾಗಿ ಕಾರ್ಯಕ್ರಮ ಆಯೋಜನೆಯ ಬಗ್ಗೆ ಅರ್ಜಿ ಸಲ್ಲಿಸುವುದು ಮತ್ತು ವಿವಾಹ ನಡೆದ ದಿನಾಂಕದಿಂದ 3 ದಿನಗಳೊಳಗಾಗಿ ಅಗತ್ಯ ದಾಖಲಾತಿಗಳನ್ನು ಸಂಬಂಧಪಟ್ಟ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಛೇರಿಗೆ ಸಲ್ಲಿಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
