ಕನ್ನಡ ರಾಜ್ಯೋತ್ಸವದ ಆಚರಣೆ ಅರ್ಥಪೂರ್ಣವಾಗಿರಲಿ. ಇದು ಕೇವಲ ಮನರಂಜನಾ ಹಬ್ಬವಲ್ಲ…….
ವಿಜಯ ದರ್ಪಣ ನ್ಯೂಸ್…
ಕನ್ನಡ ರಾಜ್ಯೋತ್ಸವದ ಆಚರಣೆ ಅರ್ಥಪೂರ್ಣವಾಗಿರಲಿ. ಇದು ಕೇವಲ ಮನರಂಜನಾ ಹಬ್ಬವಲ್ಲ…….

ನವೆಂಬರ್ ತಿಂಗಳೆಂದರೆ ಬಹುತೇಕ ಇಡೀ ತಿಂಗಳು ಕರ್ನಾಟಕದಾದ್ಯಂತ ರಾಜ್ಯೋತ್ಸವ ಸಂಭ್ರಮ. ಎಲ್ಲೆಲ್ಲೂ ಕನ್ನಡದ ಹಬ್ಬವನ್ನು ಆಚರಿಸಲಾಗುತ್ತದೆ. ಬಹುತೇಕ ಮಧ್ಯಮ, ಕೆಳ ಮಧ್ಯಮ, ಬಡವರು ಕಾರ್ಖಾನೆಗಳ ಕಾರ್ಮಿಕ ವರ್ಗದ ಕನ್ನಡ ಸಂಘ ಸಂಸ್ಥೆಗಳು, ವಾಹನ ಚಾಲಕರು, ಕನ್ನಡ ಹೋರಾಟಗಾರರು, ವಿವಿಧ ಸಾಂಸ್ಕೃತಿಕ ಸಂಘಟನೆಗಳು ಮುಂತಾದ ಎಲ್ಲರೂ ಅನೇಕ ವರ್ಷಗಳಿಂದ ಕನ್ನಡ ರಾಜ್ಯೋತ್ಸವವನ್ನು ಕೆಲವು ಕಡೆ ಸರಳವಾಗಿ, ಮತ್ತೆ ಕೆಲವು ಕಡೆ ವಿಜೃಂಭಣೆಯಿಂದ ಆಚರಿಸುತ್ತಾರೆ.
ಹಾಗಾದರೆ ಎಲ್ಲಾ ಕಡೆ ಬಹುತೇಕ ರಾಜ್ಯೋತ್ಸವ ಆಚರಣೆಯನ್ನು
ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆಯೇ ಎಂದರೆ ಖಂಡಿತ ಇಲ್ಲ ಎನ್ನುವ ಉತ್ತರ ನೀಡಬೇಕಾಗುತ್ತದೆ. ಎಲ್ಲೋ ಕೆಲವು ಅಪರೂಪದ, ವಿವೇಚನಾಯುಕ್ತ, ಸೂಕ್ಷ್ಮ ಮನಸ್ಸಿನ ಸಂಘಟನೆಗಳು ಮಾತ್ರ ನಿಜಕ್ಕೂ ಕನ್ನಡ ರಾಜ್ಯೋತ್ಸವವನ್ನು ಹೆಚ್ಚು ಗಂಭೀರವಾಗಿ, ಉಪಯುಕ್ತವಾಗಿ ಆಚರಿಸುತ್ತವೆ.
ಉಳಿದಂತೆ ಬಹಳಷ್ಟು ಸಂಘಟನೆಗಳು ರಾಜ್ಯೋತ್ಸವವೆಂದರೆ ಕೇವಲ ಆರ್ಕೆಸ್ಟ್ರಾ, ಸಿನಿಮಾ ಸಂಗೀತ, ಸಿನಿಮಾ ನಟ ನಟಿಯರು, ಧಾರವಾಹಿ ನಟ ನಟಿಯರ ಅತಿಥಿ ಸನ್ಮಾನ, ನೃತ್ಯ, ಮನರಂಜನೆ ಮತ್ತು ಹಾಸ್ಯ ಕಾರ್ಯಕ್ರಮಗಳು ಸೇರಿ ಗಣೇಶೋತ್ಸವದಂತೆ ಕೆಲವು ಡಿಜೆ ಕಾರ್ಯಕ್ರಮಗಳು, ಬೀದಿ ಕುಣಿತ, ಮೆರವಣಿಗೆ ಇತ್ಯಾದಿಗಳಿಗೆ ಮಾತ್ರ ಸೀಮಿತವಾಗಿದೆ.
ಇದನ್ನು ಒಂದಷ್ಟು ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇದೆ. ಏಕೆಂದರೆ ರಾಜ್ಯೋತ್ಸವ ಎಂಬುದು ಕೇವಲ ಮನರಂಜನಾ ಹಬ್ಬವಲ್ಲ. ಸಾಂಸ್ಕೃತಿಕ ಹಬ್ಬವೂ ಅಲ್ಲ. ಅದೊಂದು ಇಡೀ ವ್ಯವಸ್ಥೆಯ ಅಭಿವೃದ್ಧಿ, ಬೆಳವಣಿಗೆ ಮತ್ತು ಮೌಲ್ಯಯುತ ಜೀವನ ಕ್ರಮ ರೂಪಿಸಿಕೊಳ್ಳುವ ವಿಧಾನ. ಇಲ್ಲಿನ ನೆಲ, ಜಲ, ಭಾಷೆಯ ರಕ್ಷಣೆ, ಸಂಸ್ಕೃತಿಯ ಪ್ರಗತಿಪರ ಮುಂದುವರಿಕೆ. ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಕನ್ನಡ ಎಂದರೆ ಭಾಷೆಯ ಜೊತೆಗೆ ಇಲ್ಲಿನ ಕಲೆ, ಸಾಹಿತ್ಯ, ಕ್ರೀಡೆ, ವಿಜ್ಞಾನ, ರಾಜಕೀಯ, ಸಮಾನತೆ, ಸ್ವಾತಂತ್ರ್ಯ, ಜೀವನ ಶೈಲಿ, ಮಾನವೀಯ ಮೌಲ್ಯಗಳು, ಪ್ರಜಾಪ್ರಭುತ್ವದ ರಕ್ಷಣೆ ಎಲ್ಲವನ್ನು ಒಳಗೊಂಡಿರುತ್ತದೆ. ಇದರ ಒಳಗೊಳ್ಳುವಿಕೆ ಕನ್ನಡ ರಾಜ್ಯೋತ್ಸವಕ್ಕೊಂದು ಅರ್ಥವನ್ನು ನೀಡುತ್ತದೆ. ಕನ್ನಡದ ಅಸ್ಮಿತೆಗೆ ಒಂದು ಭದ್ರ ಬುನಾದಿಯನ್ನು ಹಾಕಿದಂತಾಗುತ್ತದೆ.
ಎಲ್ಲಾ ಕಡೆ ಕನ್ನಡ ಭಾಷೆಯ ಪ್ರಾಯೋಗಿಕತೆ, ಕನ್ನಡ ಭಾಷೆಯ ವಿಸ್ತರಣೆ, ಕನ್ನಡ ಇತಿಹಾಸದ ಪರಿಚಯ, ವರ್ತಮಾನದ ಸ್ಥಿತಿಗತಿ, ಭವಿಷ್ಯದ ಸವಾಲುಗಳು, ಸಾಹಿತ್ಯದ ಹೊಸ ಪ್ರಯೋಗಗಳು, ರಾಜಕೀಯದ ದಕ್ಷತೆ ಮತ್ತು ಪ್ರಾಮಾಣಿಕತೆ, ಜಾತಿ ಮುಕ್ತ ಸಮಾಜದ ನಿರ್ಮಾಣ ಈ ಎಲ್ಲವೂ ರಾಜ್ಯೋತ್ಸವದ ಚರ್ಚೆಯ, ಆಚರಣೆಯ, ವಿಚಾರ ಸಂಕಿರಣದ, ಉಪನ್ಯಾಸದ ಭಾಗವಾಗಬೇಕು. ಆಗ ಮಾತ್ರ ಕನ್ನಡ ರಾಜ್ಯೋತ್ಸವಕ್ಕೆ ಒಂದು ಅರ್ಥವಿರುತ್ತದೆ.
ಕೇವಲ ಹಾಡುಗಳು, ಡಿಜೆ ಶಬ್ದಕ್ಕೆ ಕುಣಿಯುವುದು ಅಂತಹ ಒಳ್ಳೆಯ ಬೆಳವಣಿಗೆಯಲ್ಲ. ಹೇಗೆ ಕೆಲವು ಕಡೆಗಳಲ್ಲಿ ಗಣೇಶೋತ್ಸವಗಳು ಸಾಮಾನ್ಯ ಜನರಿಗೆ ಕಿರಿಕಿರಿ ಉಂಟುಮಾಡುತ್ತದೆಯೋ ಹಾಗೆ ಕನ್ನಡ ರಾಜ್ಯೋತ್ಸವವೂ ಕಿರಿಕಿರಿಯಾಗದಂತೆ, ಜನರ ವ್ಯಕ್ತಿತ್ವ ಬೆಳವಣಿಗೆ ಕಾಣುವಂತೆ ಆಗಬೇಕು. ಕೇವಲ ಮನರಂಜನೆಯೇ ಮುಖ್ಯ ಉದ್ದೇಶವಾದರೆ ರಾಜ್ಯೋತ್ಸವಕ್ಕೆ ಯಾವುದಾದರೂ ಸಿನಿಮಾಗಳನ್ನು ನೋಡಬಹುದು.
ಆದರೆ ರಾಜ್ಯೋತ್ಸವ ಎಂದರೆ ನಮ್ಮ ಇಡೀ ರಾಜ್ಯದ ಜನರ ಜೀವನ ಮಟ್ಟ ಸಮಗ್ರ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕು ಮತ್ತು ರಕ್ಷಣೆ ದೊರೆಯಬೇಕು. ಸ್ಥಳೀಯರಿಗೆ ಉದ್ಯೋಗ ದೊರೆಯಬೇಕು. ಭಾಷೆ ಬೆಳೆಯಬೇಕು. ಇಲ್ಲದಿದ್ದರೆ ರಾಜ್ಯೋತ್ಸವಗಳಿಗೆ ಅರ್ಥ ಇರುವುದಿಲ್ಲ. ಯಾರೋ ಕೆಲವು ಜನಪ್ರಿಯವಾಗಿರುವವರನ್ನು, ಅಧಿಕಾರದಲ್ಲಿರುವವರನ್ನು, ದುಡ್ಡು ಕೊಡುವವರನ್ನು ಕರೆದು ರಾಜ್ಯೋತ್ಸವ ಮಾಡಿ, ಕುಣಿದು ಕುಪ್ಪಳಿಸಿ, ಸಿಹಿ ಹಂಚಿದರೆ ಕನ್ನಡ ರಾಜ್ಯೋತ್ಸವ ನಿಜವಾಗಲೂ ಆಚರಣೆಯಾಗುವಂತಾಗುವುದಿಲ್ಲ. ಅತಿಥಿ ಗಣ್ಯರನ್ನು ಆಯ್ಕೆ ಮಾಡುವಾಗ, ಕಾರ್ಯಕ್ರಮದ ಪಟ್ಟಿ ತಯಾರು ಮಾಡುವಾಗ, ವಿವಿಧ ವಿಷಯಗಳನ್ನು ಸೇರಿಸುವಾಗ ದಯವಿಟ್ಟು ಹೆಚ್ಚು ಕ್ರಿಯಾತ್ಮಕವಾಗಿ ಯೋಚಿಸಿ ನಿರ್ಧರಿಸಿದರೆ ಉತ್ತಮ.
ಇನ್ನು ಮುಂದಾದರು ಈ ಬಗ್ಗೆ ಗಂಭೀರವಾಗಿ ಯೋಚಿಸಿ ನೋಡಿ. ಇದು ಕನ್ನಡ ರಾಜ್ಯೋತ್ಸವದಲ್ಲಿ ಎಲ್ಲರೂ ಒಳಗೊಳ್ಳುವ ಪ್ರಕ್ರಿಯೆಗೆ ಸಹಾಯವಾಗುತ್ತದೆ.
ಧನ್ಯವಾದಗಳು……….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451….
9844013068……
