ರೈತ ಈ ದೇಶದ ಬೆನ್ನಲುಬು ಎನ್ನುವುದು ಕೇವಲ ಮಾತಿಗೆ ಸೀಮಿತವಾಗಿದೆ: ನ್ಯಾ. ಗೋಪಾಲಗೌಡ

ವಿಜಯ ದರ್ಪಣ ನ್ಯೂಸ್…

ರೈತ ಈ ದೇಶದ ಬೆನ್ನಲುಬು ಎನ್ನುವುದು ಕೇವಲ ಮಾತಿಗೆ ಸೀಮಿತವಾಗಿದೆ: ನ್ಯಾ. ಗೋಪಾಲಗೌಡ

ಶಿಡ್ಲಘಟ್ಟ : ರೈತ ಈ ದೇಶದ ಬೆನ್ನಲುಬು ಎನ್ನುವುದು ಕೇವಲ ಮಾತಿಗೆ ಸೀಮಿತವಾಗಿದೆ ಶೇ 60ರಷ್ಟು ಮಂದಿ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಕೃಷಿ ಪ್ರಧಾನ ದೇಶ ನಮ್ಮದು ಆದರೆ ಸರ್ಕಾರಗಳು ರೈತರಿಗೆ ಕೊಡಬೇಕಾದ ಮಾನ್ಯತೆಯನ್ನು, ಆಧ್ಯತೆಯನ್ನು ನೀಡುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ನ ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡ ಅವರು ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಹಂಡಿಗನಾಳದ ಶ್ರೀವೀರಣ್ಣಸ್ವಾಮಿ,
ಶ್ರೀಕೆಂಪಣ್ಣಸ್ವಾಮಿ ದೇವಾಲಯ ಟ್ರಸ್ಟ್ (ಕೆವಿ ಟ್ರಸ್ಟ್)ನಿಂದ ದೇವಾಲಯದಲ್ಲಿ ಹಮ್ಮಿಕೊಂಡಿದ ಅಮಾವಾಸ್ಯೆ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹೆತ್ತವರು ತಮ್ಮ ಮಕ್ಕಳಿಗೆ ಎಲ್ಲಾ ಕಷ್ಟ ಕಾರ್ಪಣ್ಯಗಳನ್ನು ತಿಳಿಸಿಕೊಡಬೇಕು ಸಮಸ್ಯೆ, ಕಷ್ಟವೇ ಗೊತ್ತಿಲ್ಲದಂತೆ ಬೆಳೆಸಬಾರದು, ಕೃಷಿಗೆ ಮತ್ತು ಕೃಷಿಕರಿಗೆ ಆಧ್ಯತೆ ಮಾನ್ಯತೆ ಸಿಗಬೇಕು ಇದಕ್ಕೆ ಯುವಜನರು ಆಡಳಿತ ವರ್ಗದವರನ್ನು, ಅನ್ಯಾಯವನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು
ಎಂದು ಹೇಳಿದರು.

ನಮ್ಮ ರಾಜ್ಯದ ಗಡಿ ಭಾಗ ಆಂಧ್ರದಿಂದ ಕಷ್ಣಾ ನದಿ ನೀರನ್ನು ನಮ್ಮ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೃಷಿಗೂ ಹಾಗೂ ಕುಡಿಯಲು ಹರಿಸುವ ನಮ್ಮ ಒತ್ತಾಯದ ಮನವಿಗೆ ಆಂಧ್ರ ಸರ್ಕಾರವು ತಾತ್ವಿಕವಾಗಿ ಒಪ್ಪಿದೆ ,ಈ ಬಗ್ಗೆ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಹಾಗೂ ಕೇಂದ್ರ ಸಚಿವ ಸೋಮಣ್ಣ ಅವರ ಮೂಲಕ ಮನವಿ ಮಾಡಿದ್ದೆವು ,ಅದಕ್ಕೆ ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ತಾತ್ವಿಕವಾಗಿ ಒಪ್ಪಿರುವುದಾಗಿ ಆಂಧ್ರದ ರಾಜ್ಯಪಾಲರು ನನಗೆ ಕರೆ ಮಾಡಿ ತಿಳಿಸಿದರು ಎಂದರು.

ಪ್ರತಿನಿಧಿಯಾಗಲಿ, ಅಧಿಕಾರಿಯಾಗಲಿ ಕಷ್ಟ ಅನುಭವಿಸಿದ್ದರಷ್ಟೆ ಇನ್ನೊಬ್ಬರ ಕಷ್ಟ ಅರ್ಥ ಆಗಲು ಸಾಧ್ಯ, ಈ ಸಮಾಜದಲ್ಲಿ ರೈತನ ಹಾಗೂ ಮಹಿಳೆಯರ ಉದ್ದಾರ ಕೇವಲ ಬಾಯಿ ಮಾತಿಗೆ ಸೀಮಿತವಾಗಿದೆ ಹಾಗಾಗಬಾರದು ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಅವಕಾಶಗಳನ್ನು ನೀಡಿ ಪ್ರೋತ್ಸಾಹಿಸಬೇಕು ಎಂದರು.

ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಇನ್ನು ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ದೇಶದ ನಾಗರೀಕರಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರನ್ನು ನೀಡಿಲ್ಲ ಎಂದ ಮೇಲೆ ನಾವು ಇನ್ನೂ ಎಲ್ಲಿದ್ದೇವೆ ? ಯಾವ ಸ್ಥಿತಿಯಲ್ಲಿದ್ದೇವೆ ಎಂಬುದರ ಬಗ್ಗೆ ಚಿಂತನೆ ನಡೆಸಬೇಕೆಂದರು.

ನಮ್ಮ ಮಕ್ಕಳಿಗೆ ಉತ್ತಮ ಉನ್ನತ ಶಿಕ್ಷಣ ಕೊಡಿಸುವ ಜತೆಗೆ ,ಉತ್ತಮ ಸಂಸ್ಕಾರವನ್ನು ಕಲಿಸಬೇಕು, ನಾನು ನನ್ನದು ಎನ್ನದೆ ನಾವು ನಮ್ಮದು ನಮ್ಮ ದೇಶ ಎನ್ನುವ ಮನೋಭಾವ ಬೆಳೆಸಬೇಕು ಎಂದು ಅವರು ಮನವಿ ಮಾಡಿದರು.

ಆದಿಚುಂಚನಗಿರಿ ಮಹಾ ಸಂಸ್ಥಾನ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀಮಂಗಳನಂದನಾಥಸ್ವಾಮಿ ಆಶೀರ್ವಚನ ನೀಡಿ,
ಗೋಪಾಲಗೌಡರು ಹಳ್ಳಿಯ ರೈತ ಕುಟುಂಬದಲ್ಲಿ ಹುಟ್ಟಿದವರು
ಅವರ ನ್ಯಾಯದಾನ ಕಾರ್ಯ ಸಮಾಜದಲ್ಲಿ ಶಾಶ್ವತವಾಗಿ ಎಲ್ಲರ ಮನಸಿನಲ್ಲಿ ಉಳಿಯುವಂತದ್ದು,ನಮ್ಮ ಸಮಾಜ ಮತ್ತು ಸಮುದಾಯವು ಅಂತಹ ಹೆಮ್ಮೆಯ ಪುತ್ರ ನಮ್ಮವರೆಂಬ ಹೆಮ್ಮೆ ಪಡೆಬೇಕಾಗಿದೆ,ರೈತರು, ಕಾರ್ಮಿಕರು, ಮಹಿಳೆಯರ ಕಷ್ಟ ಕಾರ್ಪಣ್ಯಗಳನ್ನು ಹತ್ತಿರದಿಂದ ನೋಡಿದ ಮತ್ತು ಅನುಭವಿಸಿದ ಕಾರಣ ಅವರು ನ್ಯಾಯ ದಾನ ಸಮಯದಲ್ಲೂ ಅವರಿಗೆ ಆಧ್ಯತೆ ನೀಡಿದ್ದಾರೆ ಎಂದು ಹೇಳಿದರು.

ಅಮಾವಾಸ್ಯೆ ಪ್ರಯುಕ್ತ ಶ್ರೀವೀರಣ್ಣಸ್ವಾಮಿ ಕೆಂಪಣ್ಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೀಪದಾರತಿ ಬೆಳಗಲಾಯಿತು,ಕಳ್ಳೆಕಾಯಿ ವ್ಯಾಪಾರವೂ ನಡೆಯಿತು.
ಶ್ರೀವೀರಣ್ಣಸ್ವಾಮಿ ಶ್ರೀಕೆಂಪಣ್ಣಸ್ವಾಮಿ ದೇವಾಲಯ ಟ್ರಸ್ಟ್ ನಿಂದ ಸುಪ್ರೀಂ ಕೋರ್ಟ್ ನ ವಿಶ್ರಾಂತ ನ್ಯಾ.ಗೋಪಾಲಗೌಡ ಹಾಗೂ ಉನ್ನತ ವಿದ್ಯಾಭ್ಯಾಸ ಮಾಡಿದ್ದರೂ ಕೃಷಿಯಲ್ಲಿ ತೊಡಗಿಸಿಕೊಂಡು ಮಾದರಿ ಕೃಷಿ ನಡೆಸುತ್ತಿರುವ ಹಾರೋಹಳ್ಳಿಯ ಸುಷ್ಮಾ ಮತ್ತು ಚನ್ನಕೇಶವ ದಂಪತಿಗಳನ್ನು ಸನ್ಮಾನಿಸಲಾಯಿತು.

ಕೆ.ವಿ.ಟ್ರಸ್ಟ್‌ನ ಅಧ್ಯಕ್ಷ ನಿವೃತ್ತ ಎಸ್ಪಿ.ಎನ್.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ರಾಜಣ್ಣ, ನೀರಾವರಿ ಹೋರಾಟಗಾರ ಆರ್.ಆಂಜನೇಯರೆಡ್ಡಿ, ಸುಷ್ಮಾ ಆಂಜನೇಯರೆಡ್ಡಿ , ಹಿರಿಯ ವಕೀಲ ಎಂ.ಪಾಪಿರೆಡ್ಡಿ, ವಕ್ಕಲಿಗರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಟ್ರಸ್ಟನ ಉಪಾಧ್ಯಕ್ಷ ಬಿಳಿಶಿವಾಲೆ ರವಿ, ಕಾರ್ಯದರ್ಶಿ ಅಶ್ವತ್ಥಯ್ಯ, ಖಜಾಂಚಿ ಮುನಿಸ್ವಾಮಿಗೌಡ, ನಿರ್ದೇಶಕರಾದ ಚಿಕ್ಕದಾಸರಹಳ್ಳಿ ಸ್ಕೂಲ್ ದೇವರಾಜ್,ಆನೂರು ವಿಜಯೇಂದ್ರ, ಗೊರಮಡಗು ರಾಜಣ್ಣ, ಎಂ.ಕೆಂಪಣ್ಣ, ಎಲ್‍ಐಸಿ ನಾಗರಾಜ್ ಮತ್ತಿತರರು ಹಾಜರಿದ್ದರು.