ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕ ಬಿ ಎನ್ ರವಿಕುಮಾರ್

ವಿಜಯ ದರ್ಪಣ ನ್ಯೂಸ್…..

ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕ ಬಿ ಎನ್ ರವಿಕುಮಾರ್

ಶಿಡ್ಲಘಟ್ಟ : ಶಿಡ್ಲಘಟ್ಟ-ಚೀಮಂಗಲ ಮುಖ್ಯ ರಸ್ತೆಯಿಂದ ನಾರಾಯಣ ದಾಸರಹಳ್ಳಿವರೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಬಹು ದಿನಗಳ ಹಿಂದೆ ಡಾಂಬರು ಹಾಕಿದ್ದು, ರಸ್ತೆ ಹಾಳಾಗಿ ಸಂಚಾರಕ್ಕೆ ತೊಡಕಾಗಿತ್ತು ಹಾಗಾಗಿ ಗ್ರಾಮಸ್ಥರು ರಸ್ತೆ ಅಭಿವೃದ್ಧಿಪಡಿಸಿ ಡಾಂಬರೀಕರಣಕ್ಕೆ ಮನವಿ ಮಾಡಿದ್ದರು
ಎಂದು ಶಾಸಕ ಬಿ.ಎನ್. ರವಿಕುಮಾ‌ರ್ ತಿಳಿಸಿದರು.

ತಾಲ್ಲೂಕಿನ ಶಿಡ್ಲಘಟ್ಟ-ಚೀಮಂಗಲ ಮುಖ್ಯ ರಸ್ತೆಯಿಂದ ನಾರಾಯಣದಾಸರ ಹಳ್ಳಿಗೆ 70 ಲಕ್ಷ ರೂ.ಗಳ ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ವಿಸ್ತರಣೆ, ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿ ವೀಕ್ಷಿಸಿದ ನಂತರ ಗ್ರಾಮಸ್ಥರೊಂದಿಗೆ ಅವರು ಮಾತನಾಡಿದರು.

ಗ್ರಾಮಸ್ಥರ ಬಹಳ ವರ್ಷಗಳ ಬೇಡಿಕೆಯಾಗಿದ್ದ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು, ಶೀಘ್ರವೇ ಡಾಂಬರು ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಹೇಳಿದರು.

ಇದು ನಿಮ್ಮೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಕಾಮಗಾರಿಯನ್ನು ನಿಮ್ಮ, ನಮ್ಮ ತೆರಿಗೆ ಹಣದಿಂದ ಮಾಡಲಾಗುತ್ತಿದೆ ಕಾಮಗಾರಿಯ ಗುಣಮಟ್ಟ ಗಮನಿಸಬೇಕು, ಗುಣಮಟ್ಟದಲ್ಲಿ ರಾಜಿಯಾಗಬೇಡಿ ಗುಣಮಟ್ಟದಲ್ಲಿ ವ್ಯತ್ಯಾಸವಿದ್ದರೆ ನನಗೆ ಅಥವಾ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದರು.

ರಸ್ತೆ ಅಭಿವೃದ್ಧಿ ವಿಸ್ತರಣೆ ಮತ್ತು ಡಾಂಬರೀಕರಣಕ್ಕಾಗಿ 70 ಲಕ್ಷ ರೂ.ಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿದ್ದು, ಕಾಮಗಾರಿ ನಡೆಯುತ್ತಿದೆ, ಕಾಮಗಾರಿಯ ಗುಣಮಟ್ಟ ಕಾಪಾಡಿ ಕೊಂಡು ನಿಗದಿತ ಸಮಯದೊಳಗೆ ಮುಗಿಸುವಂತೆ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಇದೇ ವೇಳೆ ಗ್ರಾಮಸ್ಥರೊಂದಿಗೆ ಗ್ರಾಮದ ಅಭಿವೃದ್ಧಿ, ಕೈಗೊಳ್ಳಬೇಕಾದ ಮೂಲಸೌಕರ್ಯಗಳು ಮತ್ತು ಕೈಗೊಂಡ ಕಾಮಗಾರಿಗಳ ಬಗ್ಗೆ ಚರ್ಚಿಸಿದರು ,ಮುಖಂಡ ತಾದೂರು ರಘು, ಗ್ರಾಮಸ್ಥರು ಹಾಜರಿದ್ದರು.

&&&&&&&&&&&&&&&&&&&&&&&&&&&&

ಶ್ರಮದಾನದ ಮೂಲಕ ಕಲ್ಯಾಣಿಯಿಂದ ತೆಗೆದ ಕಸವನ್ನು ಸಾಗಿಸೋ ತಾಳ್ಮೆ ನಗರ ಸಭೆಗಿಲ್ಲ

ಶಿಡ್ಲಘಟ್ಟ : ಸುಮಾರು 350 ವರ್ಷಗಳ ಇತಿಹಾಸವಿರುವ, ನಗರದ ಸಾಂಸ್ಕೃತಿಕ ಪರಂಪರೆಯ ಕನ್ನಡಿಯಂತಿರುವ ಶಾಮಣ್ಣಬಾವಿಯನ್ನು ಕಳೆದ ಅಕ್ಟೋಬ‌ರ್ ತಿಂಗಳಿನಲ್ಲಿ ಸ್ಥಳೀಯ ಯುವಕರು ಮತ್ತು ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಸಮಿತಿಯವರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ್ದರು.

ಆದರೆ, ಅಂದು ಮೆಟ್ಟಿಲುಗಳ ಬಾವಿಯಿಂದ ತೆಗೆದು ರಸ್ತೆಯ ಪಕ್ಕದಲ್ಲಿ ಸುರಿದಿದ್ದ ತ್ಯಾದ್ಯದ ರಾಶಿ ಹಾಗು ಗಿಡಗಂಟೆಗಳು ಮೂರು ತಿಂಗಳು ಕಳೆದರೂ ಹಾಗೆಯೇ ಬಿದ್ದಿದೆ.
ಯುವಕರೆಲ್ಲರು ಸೇರಿ ಕಲ್ಯಾಣಿ ಕಾಯೋ ಕೆಲಸ
ಮಾಡಿದ್ದೇವೆ, ಆದರೆ ತೆಗೆದ ಕಸ ಸಾಗಿಸೋ ತಾಳ್ಮೆ ನಗರಸಭೆಗಿಲ್ಲ ನಗರದ ಅಗ್ರಹಾರ ಬೀದಿಯ ನಿವಾಸಿಗಳ ಆಗ್ರಹವಾಗಿದೆ.

ತ್ಯಾಜ್ಯವನ್ನು ತೆರವುಗೊಳಿಸದ ಕಾರಣ, ರಸ್ತೆಯಲ್ಲೇ ಬಿದ್ದಿರುವ ಆ ಮಣ್ಣು ಮತ್ತು ಕಸದ ರಾಶಿಯ ಮೇಲೆ ಈಗ ಮತ್ತೆ ಹೊಸ ಗಿಡಗಳು ಬೆಳೆಯತೊಡಗಿವೆ. ಇದು ರಸ್ತೆ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದೆ. “ನಾವು ನಮ್ಮ ಕೈಲಾದ ಕೆಲಸ ಮಾಡಿದ್ದೇವೆ. ನಗರಸಭೆಯವರು ಕನಿಷ್ಠ ಆ ಕಸವನ್ನು ದೂರ ಸಾಗಿಸಬೇಕಿತ್ತು” ಎಂದು ಶ್ರಮದಾನದಲ್ಲಿ ಪಾಲ್ಗೊಂಡಿದ್ದ ಯುವಕರು ಅಳಲು ತೋಡಿಕೊಂಡಿದ್ದಾರೆ.

ಈ ಶಾಮಣ್ಣಬಾವಿ ಕೇವಲ ಬಾವಿಯಲ್ಲ, ಇದು ಆಧ್ಯಾತ್ಮಿಕ ಕೇಂದ್ರವೂ ಹೌದು. ಇಲ್ಲಿ ಒಂದೆಡೆ ಶ್ರೀಕಂಠೇಶ್ವರ (ಶಿವ) ಮತ್ತೊಂದೆಡೆ ಶ್ರೀಲಕ್ಷ್ಮೀನರಸಿಂಹಸ್ವಾಮಿ(ವಿಷ್ಣು) ನೆಲೆಸಿದ್ದಾರೆ, ಹರಿ-ಹರ ದೇವರುಗಳು ಒಂದೇ ಕಡೆ ದರ್ಶನಭಾಗ್ಯ ಕಲ್ಪಿಸುವ ಅಪರೂಪದ ತಾಣವಿದು ಸುತ್ತಲೂ ತೆಂಗಿನಮರ ಅಶ್ವತ್ ಕಟ್ಟೆಯ ಮರಗಳು ಹಾಗು ಹುಣಸೆ ಮರಗಳಿದ್ದು, ಹಿಂದೆ ಇದು ನಗರದ ಯುವಕರಿಗೆ ಈಜು ಕಲಿಯುವ ಪ್ರಮುಖ ತಾಣವಾಗಿತ್ತು.

ಶಾಮಣ್ಣಬಾವಿಯಲ್ಲಿ ನೀರು ನಿಂತರೆ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಅಂತರ್ಜಲ ವೃದ್ಧಿಯಾಗಿ ಕೊಳವೆಬಾವಿಗಳಲ್ಲಿ ನೀರು ಸಿಗುತ್ತದೆ ಇಂತಹ ಅಮೂಲ್ಯ ಆಸ್ತಿಯನ್ನು ಉಳಿಸಿಕೊಳ್ಳಲು ಯುವಕರು ಮುಂದಾಗಿದ್ದರೂ, ಸ್ಥಳೀಯ ಆಡಳಿತದ ಅಸಹಕಾರ ಭಕ್ತರಲ್ಲಿ ಬೇಸರ ತಂದಿದೆ ಆದರೆ ಕನಿಷ್ಠ ಆ ತ್ಯಾಜ್ಯವನ್ನು ನಗರಸಭೆಯವರು ದೂರ ಸಾಗಿಸದಿದ್ದರೆ ಹೇಗೆ ಎಂದು ಶ್ರಮದಾನದಲ್ಲಿ ಪಾಲ್ಗೊಂಡ ಯುವಕರಾದ ಸುಧಾಕರ್, ಸೂರಿ,ಮುರಳಿ ವೆಂಕಟೇಶ್‌, ಮಂಜುಗೌಡ,ಶ್ರೀಧರ್, ಸೀನಪ್ಪ,ಬಾಬು ಇನ್ನೂ ಹಲವು ಯುವಕರು ಆಗ್ರಹಿಸಿದ್ದಾರೆ.

ನಗರಸಭೆ ಪೌರಾಯುಕ್ತೆ ಜಿ ಅಮೃತ ಅವರು ಶಾಮಣ್ಣ ಬಾವಿಯ ಪಕ್ಕದ ರಸ್ತೆಯಲ್ಲಿನ ತ್ಯಾಜ್ಯದ ಬಗ್ಗೆ ತಿಳಿದಿರಲಿಲ್ಲ ಒಂದು ವಾರದೊಳಗೆ ಈ ತ್ಯಾಜ್ಯವನ್ನು ಹೊರಸಾಗಿಸಲು ಸಂಬಂಧಪಟ್ಟವರಿಗೆ ಸೂಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

₹₹₹₹₹₹₹₹₹₹#######₹₹₹₹₹₹&&&&&₹₹₹₹₹

ಗಣತಿಯನ್ನು ಮಾಡುವುದರಿಂದ ಜಲಮೂಲಗಳ ಸಂರಕ್ಷಣೆ ಮತ್ತು ಭವಿಷ್ಯದ ನೀರಾವರಿ ಯೋಜನೆಗಳ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ

ಶಿಡ್ಲಘಟ್ಟ : ಗಣತಿಯನ್ನು ಮಾಡುವುದರಿಂದ ಜಲಮೂಲಗಳ ಸಂರಕ್ಷಣೆ ಮತ್ತು ಭವಿಷ್ಯದ ನೀರಾವರಿ ಯೋಜನೆಗಳ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ತಹಶೀಲ್ದಾ‌ರ್ ಎನ್‌.ಗಗನಸಿಂಧು ತಿಳಿಸಿದರು.

ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಕುಂಟೆಯ ಬಳಿ ಏಳನೇ ಸಣ್ಣ ನೀರಾವರಿ ಗಣತಿ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ನಿರ್ದೇಶನದಂತೆ ಏಳನೇ ಸಣ್ಣ ನೀರಾವರಿ ಗಣತಿಯನ್ನು ತಾಲ್ಲೂಕಿನಲ್ಲಿ ಮೊಬೈಲ್‌ ಆಪ್‌ ಮೂಲಕ ಹಮ್ಮಿಕೊಳ್ಳಲಾಗಿದ್ದು, ಅಧಿಕಾರಿಗಳು ನಿಖರವಾದ ಅಂಕಿ-ಅಂಶಗಳನ್ನು ಸಂಗ್ರಹಿಸಬೇಕು ಎಂದರು.

ನೀರಿನ ಆಸರೆಗಳ ಸಮಗ್ರ ಅಂಕಿ-ಅಂಶ ಸಂಗ್ರಹಣೆಯಿಂದ ನೀರಿನ ಸದ್ಬಳಕೆ, ಅಂತರ್ಜಲ ಪ್ರಮಾಣದ ಅಂದಾಜು ಮತ್ತು ಹೊಸ ನೀತಿ ನಿರೂಪಣೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮುಖ್ಯವಾಗಿ ಒತ್ತುವರಿಯಾಗಿರುವ ಕೆರೆ-ಕುಂಟೆಗಳನ್ನು ಗುರುತಿಸಿ, ಅವುಗಳನ್ನು ತೆರವುಗೊಳಿಸಲು ಈ ಗಣತಿ ಸಹಕಾರಿಯಾಗಲಿದೆ, ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.

ಈಗ ಮಾಡುತ್ತಿರುವ ಗಣತಿ ಕಾರ್ಯವು ಸಂಪೂರ್ಣ ಡಿಜಿಟಲ್ ಆಗಿದ್ದು, ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ಸ್ಥಳದಲ್ಲೇ ಮೊಬೈಲ್ ಆಪ್ ಮೂಲಕ ಮಾಹಿತಿ ಅಪ್‌ಲೋಡ್ ಮಾಡಲಿದ್ದಾರೆ ಇದಕ್ಕಾಗಿ ಸಿಬ್ಬಂದಿಗೆ ಈಗಾಗಲೇ ಸೂಕ್ತ ತರಬೇತಿ ನೀಡಲಾಗಿದೆ ನುಡಿದರು.

ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕ ಶಶಿಕುಮಾ‌ರ್, ವೇಣುಗೋಪಾಲ್‌, ಗ್ರಾಮ ಲೆಕ್ಕಿಗರಾದ ನಗದಾರ್ ರೇವಣ್ಣಸಿದ್ದಪ್ಪ, ದೇವರಾಜ್, ತ್ರಿಮೂರ್ತಿ ಹಾಗು ಕಂದಾಯ ಅಧಿಕಾರಿಗಳು ಪಾಲ್ಗೊಂಡಿದ್ದರು.