ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸುವುದು ನನ್ನ ಕರ್ತವ್ಯ: ಸಚಿವ ಮಧು ಬಂಗಾರಪ್ಪ.

ವಿಜಯ ದರ್ಪಣ ನ್ಯೂಸ್.
ಬೆಂಗಳೂರು ಗ್ರಾಮಾಂತರ ಜಿಲ್ಲೆ  ಮೇ 31 .

ಮಕ್ಕಳ ಭವಿಷ್ಯ ರೂಪಿಸಲು ಗುಣಮಟ್ಟದ ಶಿಕ್ಷಣ ಅಗತ್ಯ. ಉತ್ತಮ ಶಿಕ್ಷಣ ವ್ಯವಸ್ಥೆ ಕಲ್ಪಿಸಲು ಎಲ್ಲಾ ರೀತಿಯ ಸಹಕಾರ ನೀಡಿ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ನನ್ನ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ  ಹೇಳಿದರು.

ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಅರದೇಶನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ 2023-2024 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಗಳ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿ ಅವರು ಮಾತನಾಡಿದರು.
ಶಾಲೆಯ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಿಸಿ ಮಾತನಾಡಿದ ಅವರು 2023-24 ನೇ ಸಾಲಿನ ಶಾಲಾ ಆರಂಭದ ದಿನ ಮಕ್ಕಳನ್ನು ಸ್ವಾಗತಿಸಿ, ಎಲ್ಲಾ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ಸಾಧನೆ ಮಾಡಬೇಕು. ಶಿಕ್ಷಣದಿಂದ ಯಾವುದೇ ಮಕ್ಕಳು ವಂಚಿತರಾಗಬಾರದು. ನೆರೆಹೊರೆಯಲ್ಲಿ ಯಾರಾದರೂ ಶಿಕ್ಷಣ ವಂಚಿತ ಮಕ್ಕಳು ಕಂಡುಬಂದಲ್ಲಿ ನಿಮ್ಮ ಸ್ನೇಹಿತರೆಂದು ತಿಳಿದು ಅವರನ್ನು ಶಾಲೆಗೆ ಕರೆದುಕೊಂಡು ಬನ್ನಿ ಎಂದು ಮಕ್ಕಳನ್ನು ಪ್ರೇರೇಪಿಸಿದರು ಹಾಗೂ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಶಿಕ್ಷಕರ, ಪೋಷಕರ ಸಹಕಾರ ಅಗತ್ಯ ಎಂದರು.

ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಹೆಚ್ಚಿನ ಒತ್ತು ನೀಡಲಾಗುವುದು, ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳನ್ನು ಮರು ನಿರ್ಮಾಣ ಮಾಡಲು ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಯಾವುದೇ ಸಮಸ್ಯೆ, ಗೊಂದಲ ಆಗದಂತೆ ಶಾಲಾ ಮಕ್ಕಳಿಗೆ ಆರಂಭದಲ್ಲಿ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆ ಮಾಡಲು ಶೀಘ್ರ ಕ್ರಮ ವಹಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

ನಂತರ ಸಚಿವರು ಬಸವನಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಜಾಲಿಗೆ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಉಚಿತ ಶಾಲಾ ಸಮವಸ್ತ್ರ ಹಾಗೂ ಪಠ್ಯಪುಸ್ತಕವನ್ನು ವಿತರಿಸಿ ಮಕ್ಕಳಿಗೆ ಹೂ ನೀಡಿ ಶಾಲೆಗೆ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ, ಪ್ರಾಥಮಿಕ ಶಿಕ್ಷಣ ನಿರ್ದೇಶಕ ಪ್ರಸನ್ನ ಕುಮಾರ್, ಜಿಲ್ಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ  ಶ್ರೀಕಂಠ.ಎನ್, ದೇವನಹಳ್ಳಿ ತಹಶೀಲ್ದಾರ್ ಶಿವರಾಜ್, ಬಿ.ಇ.ಒ ಸುಮಾ ಹಾಗೂ  ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.