ಕೆರೆಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ.

ವಿಜಯ ದರ್ಣಣ ನ್ಯೂಸ್ 
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜೂನ್ 02

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಯಾವುದೇ ನದಿ ಮೂಲಗಳು ಇಲ್ಲವಾದ್ದರಿಂದ ಅಂತರ್ಜಲ ಮಟ್ಟ ಹೆಚ್ಚಿಸಲು ಜಿಲ್ಲೆಯಲ್ಲಿರುವ ಕೆರೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ಅವರು ಸೂಚಿಸಿದರು.


ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ನಡೆದ ನಾಗರಕೆರೆ ನಿರ್ವಹಣೆ ಯೋಜನೆ ಮತ್ತು ಅರ್ಕಾವತಿ ಜಲಾನಯನದ ಸಂರಕ್ಷಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಕೆರೆಗಳ ಸಂರಕ್ಷಣೆಗೆ ಜಿಲ್ಲಾಡಳಿತವು ಸದಾ ಕಾರ್ಯಪ್ರವೃತ್ತಿ ಆಗಿರುತ್ತದೆ. ಈ ನಿಟ್ಟಿನಲ್ಲಿ ದೊಡ್ಡಬಳ್ಳಾಪುರ ನಾಗರಕೆರೆ ನಿರ್ವಹಣಾ ಯೋಜನೆ ಅಡಿ ನಾಗರಕೆರೆಯನ್ನು ಸಂರಕ್ಷಿಸಲು ಜಿಲ್ಲಾಡಳಿತ ವತಿಯಿಂದ ಎಲ್ಲಾ ಕ್ರಮ ಕೈಗೊಳ್ಳಲಾಗುತ್ತಿದೆ. ನಾಗರಕೆರೆಯು 20 ಹೆಕ್ಟೇರ್ನಷ್ಟು ವಿಸ್ತೀರ್ಣ ಹೊಂದಿದ್ದು ಕೆರೆಯ ಸುತ್ತಲೂ ಸಸಿಗಳನ್ನು ನೆಡಲಾಗಿದೆ. ಇನ್ನುಳಿದ ಭಾಗದಲ್ಲಿ ಮುಂದಿನ ದಿನಗಳಲ್ಲಿ ಸಸಿಗಳನ್ನು ನೆಡಸಲು ಕ್ರಮ ವಹಿಸಲಾಗುವುದು. ಕೆರೆಯ ನೀರು ಕಲುಷಿತವಾಗದಂತೆ ತಡೆಯಲು ಹಾಗೂ ಕೆರೆಗೆ ಕೊಳಚೆ ನೀರನ್ನು ತಲುಪದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೆರೆಯಲ್ಲಿ ಬೆಳೆದು ನಿಂತಿರುವ ಕಳೆಯನ್ನು ತೆಗೆಯಲು ಅಗತ್ಯ ಕ್ರಮ ವಹಿಸಿ ಕೆರೆ ಸುತ್ತಲೂ ಬೇಲಿ ನಿರ್ಮಿಸಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
WWF(WORLD WDE FUND FOR NATURE) ಸಂಸ್ಥೆಯು Building community resilience through nature based solutions ಎಂಬ ಸಂಶೋಧನೆ ಅಡಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗರಕೆರೆಯನ್ನು ಸಂರಕ್ಷಿಸಲು ಯೋಜನೆ ರೂಪಿಸಿದೆ. ಕೆರೆಯ ನೀರಿನ ಗುಣಮಟ್ಟ ಹಾಗೂ ಕೆರೆಯ ನೀರು ಕಲುಷಿತ ಗೊಳ್ಳುವುದನ್ನು ತಪ್ಪಿಸಲು ಕೆಲವು ಅಂಶಗಳನ್ನು ಪ್ರಸ್ತಾಪಿಸಿದೆ. ತ್ಯಾಜ್ಯ ನಿರ್ವಹಣೆ, ನೀರಿನ ಹರಿವು ತಿಳಿಯುವ ಬಗೆ, ನೀರಿನ ಗುಣಮಟ್ಟ ಕಾಪಾಡುವಿಕೆಗೆ ಫ್ಲೋಟಿಂಗ್ ಫೌಂಟೇನ್ ಅಳವಡಿಕೆ, ಸ್ಥಳಿಯ ಮರಗಳ ಬೆಳವಣಿಗೆಗೆ ಉತ್ತೇಜನ, ಕೆರೆಯಲ್ಲಿನ ಕಳೆ ನಾಶಪಡಿಸಲು ಕ್ರಮ ಕೈಗೊಳ್ಳುವುದು, ಕೆರೆಗೆ ಬರುವ ನೀರಿನ ಪ್ರಮಾಣ ಹೆಚ್ಚಿಸಲು ರಾಜಕಾಲುವೆಗಳನ್ನು ಸ್ವಚ್ಛಗೊಳಿಸುವುದು ಸೇರಿದಂತೆ ಕೆರೆ ಸಂರಕ್ಷಣೆ ಮತ್ತು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ವಿವಿಧ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಸ್ಥೆಯವರು ತಿಳಿಸಿ ಜಿಲ್ಲಾಡಳಿದ ಸಹಕಾರ ಕೋರಿದರು.
ಇದಕ್ಕೆ ಜಿಲ್ಲಾಧಿಕಾರಿಗಳು ಸಹಮತ ಸೂಚಿಸಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದರಲ್ಲದೆ ಸಂಸ್ಥೆಗೆ ಧನ್ಯವಾದ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶಾಲಿನಿ, ಹಿರಿಯ ಭೂ ವಿಜ್ಞಾನಿ ಪಲ್ಲವಿ, ಡಬ್ಲ್ಯೂ.ಡಬ್ಲ್ಯೂ.ಎಫ್ ನ ಕೆರೆ ಸಂರಕ್ಷಣಾ ಸಹಾಯಕ ನಿರ್ದೇಶಕ ಡಾ. ಅಮಿತ್ ದುಬೆ, ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.