ರೋಗಿಗಳಿಗೆ ಮಾವಿನಹಣ್ಣು, ಬ್ರೆಡ್ ಮತ್ತು ಹಾಲು ವಿತರಣೆ ಮಾಡಿದ ಪೂಲಕುಂಟಲಹಳ್ಳಿ ರಘುನಾಥರೆಡ್ಡಿ
ಶಿಡ್ಲಘಟ್ಟ: ತಾಲ್ಲೂಕಿನ ಪ್ರಮುಖ ಸಮಾಜ ಸೇವಕರಾದ ಪೂಲಕುಂಟಲಹಳ್ಳಿ ರಘುನಾಥ ರೆಡ್ಡಿ ಅವರು ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಉಚಿತವಾಗಿ ಮಾವಿನಹಣ್ಣು, ಬ್ರೆಡ್ ಮತ್ತು ಹಾಲು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಮ್ಮ ಸ್ವಂತ ತೋಟದಲ್ಲಿ ಬೆಳೆದ ಪ್ರಥಮ ಫಸಲನ್ನು ಸಾರ್ವಜನಿಕ ಸೇವೆಗೆ ವಿನಿಯೋಗಿಸುವ ನಿಟ್ಟಿನಲ್ಲಿ ಅವರು ಈ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ತಮ್ಮ ತೋಟದಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸದೆ, ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬೆಳೆದಿರುವ ಮಾವಿನಹಣ್ಣುಗಳ ಮೊದಲನೇ ಫಸಲು ಇದಾಗಿದೆ ಎಂದರು
ಈ ಹಣ್ಣುಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡದೆ, ತಾಲ್ಲೂಕಿನ ಜನತೆಗೆ ಒಂದು ಕೊಡುಗೆಯಾಗಿ ನೀಡಬೇಕು ಎಂಬ ಉದಾತ್ತ ಉದ್ದೇಶದಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ನಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ರಘುನಾಥ ರೆಡ್ಡಿ ಅವರು, ಯಾವುದೇ ಪಕ್ಷಭೇದವಿಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಒಳರೋಗಿಗಳಿಗೆ ಸಾವಯಯ ಮಾವಿನಹಣ್ಣುಗಳನ್ನು ವಿತರಿಸಿ,ರೋಗಿಗಳ ಆರೋಗ್ಯ ವಿಚಾರಿಸಿದರು.
ಮುಂದಿನ ದಿನಗಳಲ್ಲಿ ತಮ್ಮ ತೋಟದ ಮಾವಿನಹಣ್ಣುಗಳನ್ನು ತಾಲೂಕಿನ ಎಲ್ಲಾ ಸರ್ಕಾರಿ ಹಾಗೂ ಇತರೆ ಶಾಲಾ ಮಕ್ಕಳಿಗೂ ಉಚಿತವಾಗಿ ವಿತರಿಸಲು ಯೋಜಿಸಿರುವುದಾಗಿ ಅವರು ಈ ಸಂದರ್ಭದಲ್ಲಿ ಆಶಯ ವ್ಯಕ್ತಪಡಿಸಿದರು.
ಸಮಾಜ ಸೇವಕರ ಈ ಕಾರ್ಯಕ್ಕೆ ಆಸ್ಪತ್ರೆಯ ರೋಗಿಗಳು ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಮನೋಹರ್, ಮುಖಂಡರಾದ ನಾಗನರಸಿಂಹ, ನಾರಾಯಣಸ್ವಾಮಿ, ಮುನಿರಾಜು, ಚನ್ನಹಳ್ಳಿ ದೇವರಾಜ್, ಆಸ್ಪತ್ರೆಯ ಸಿಬ್ಬಂದಿ ವರ್ಗದವರು
ಹಾಜರಿದ್ದರು.