ರಾಜ್ಯದ ಅಭಿವೃದ್ಧಿಯಲ್ಲಿ ದೇವರಾಜು ಅರಸು ಅವರ ಕೊಡುಗೆ ಅಪಾರ: ಸಚಿವ ಕೆ.ಹೆಚ್ ಮುನಿಯಪ್ಪ

ವಿಜಯ ದರ್ಪಣ ನ್ಯೂಸ್

ಬಿಜಿಎಸ್ ನಗರ, ದೇವನಹಳ್ಳಿ ತಾಲ್ಲೂಕು ,ಬೆಂಗಳೂರು ಗ್ರಾಮಾಂತರ ಜಿಲ್ಲೆ .ಆಗಸ್ಟ್ 20

 ದೇವರಾಜ ಅರಸು ಅವರು ಶೋಷಿತ ವರ್ಗದ ಎಲ್ಲಾ ಬಡವರ ಜೀವನ ಸುಧಾರಣೆಗಾಗಿ ಶ್ರಮಿಸಿದವರು, ರಾಜ್ಯದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಪಾರವಾದದ್ದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ದೇವನಹಳ್ಳಿ ಟೌನ್ ನಲ್ಲಿ ಇರುವ ಡಿ‌.ದೇವರಾಜು ಅರಸು ಭವನದಲ್ಲಿ ಹಮ್ಮಿಕೊಂಡಿದ್ದ ಡಿ.ದೇವರಾಜು ಅರಸು ರವರ 108ನೇ ಜನ್ಮದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇವರಾಜ ಅರಸು ಅವರು ಬಡವರ ಧ್ವನಿಯಾಗಿದ್ದರು ಮತ್ತು ಸಮಾಜದಲ್ಲಿ ತುಳಿತಕ್ಕೊಳಗಾದವರ ಪರವಾಗಿ ನಿಂತವರು. ಹಿಂದುಳಿದ ವರ್ಗಗಳಿಗೆ ಸೇರಿದ ಜನರ ಶಿಕ್ಷಣ ಮತ್ತು ಸಮಾಜದ ಶೋಷಿತ ವರ್ಗಗಳಿಂದ ಬಂದ ವಿದ್ಯಾರ್ಥಿಗಳಿಗೆ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಹಾಸ್ಟೆಲ್‌ಗಳ ಸ್ಥಾಪನೆಗೆ ಒತ್ತು ನೀಡಿದರು. ಭೂಮಿಯನ್ನು ಉಳುವವನೇ ಮಾಲೀಕ ಎಂಬ ಕಾನೂನು ಜಾರಿಗೆ ತಂದು ಶ್ರೀಮಂತ ಮತ್ತು ಬಡವರ ನಡುವಿನ ಅಂತರವನ್ನು ಕಡಿಮೆ ಮಾಡಿದರು. ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಿದರು.ಕರ್ನಾಟಕದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಮುಖ್ಯಮಂತ್ರಿಗಳಲ್ಲಿ ದೇವರಾಜ ಅರಸು ಕೂಡ ಒಬ್ಬರಾಗಿದ್ದರು ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ ಎನ್ ಅವರು ಮಾತನಾಡಿ ದೇವರಾಜ ಅರಸು ಅವರು ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಆಗಿದ್ದರು, ಸಾಮಾಜಿಕ ಅಸಮತೋಲನೆಯನ್ನು ತೊಡೆದು ಹಾಕಲು ಶ್ರಮಿಸಿದವರು, ಜೀತ ಪದ್ಧತಿ, ಜಮೀನ್ದಾರಿ ಪದ್ಧತಿಯನ್ನು ಹೋಗಲಾಡಿಸಲು ಒತ್ತು ನೀಡಿದರು. ವಿಶೇಷ ಮೀಸಲಾತಿ, ವಿಶ್ವವಿದ್ಯಾನಿಲಯಗಳ ನಿರ್ಮಾಣ ಸೇರಿದಂತೆ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ, ಹಲವು ಯೋಜನೆಗಳನ್ನು ಜಾರಿಗೆ ತಂದರು ಹೀಗಾಗಿ ಇವರನ್ನು ಸಾಮಾಜಿಕ ಕ್ರಾಂತಿಯ ಹರಿಕಾರ ಎಂದು ಕರೆಯುತ್ತಾರೆ ಎಂದು ಹೇಳಿದರು.

ಇಂದು ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಜನ್ಮದಿನವನ್ನು ಕೂಡ ಆಚರಿಸಲಾಗುತ್ತಿದೆ. ಸದ್ಭಾವನಾ ದಿನ ಎಂದು ಈ ದಿನವನ್ನು ಕರೆಯುತ್ತಾರೆ. ರಾಜೀವ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ಪ್ರತಿಜ್ಞಾವಿಧಿಯನ್ನು ಜಿಲ್ಲಾಧಿಕಾರಿಗಳು ಬೋಧಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡಿ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನುರಾಧ ಕೆ.ಎನ್, ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಮೇಶ್, ದೇವನಹಳ್ಳಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ ಸೇರಿದಂತೆ ಜಿಲ್ಲಾಮಟ್ಟದ,ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಮುದಾಯ ಮುಖಂಡರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.