ಸಾರ್ವಜನಿಕ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಲು ಜನತಾ ದರ್ಶನ ಸಹಕಾರಿ: ಸಚಿವ ಕೆ.ಹೆಚ್ ಮುನಿಯಪ್ಪ

 ವಿಜಯ ದರ್ಪಣ ನ್ಯೂಸ್ , ಹೊಸಕೋಟೆ 

ಬೆಂಗಳೂರು ಗ್ರಾಮಾಂತರ ಜಿಲ್ಲೆ :ಸೆಪ್ಟೆಂಬರ್ 25 
ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವುದರಿಂದ ನಿಗದಿತ ಕಾಲಮಿತಿಯೊಳಗೆ ಸಾರ್ವಜನಿಕ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಬಹುದು ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರು ಹೇಳಿದರು.


ಅವರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಹೊಸಕೋಟೆ ತಾಲ್ಲೂಕಿನ “ಸೈಯದ್ ಪ್ಯಾಲೆಸ್” (ರಾಷ್ಟ್ರೀಯ ಹೆದ್ದಾರಿ 75 ಎಂ.ವಿ.ಜೆ ಮಡಿಕಲ್ ಕಾಲೇಜು ಪಕ್ಕ, ಹೊಸಕೋಟೆ (ಟೌನ್) ಏರ್ಪಡಿಸಲಾಗಿದ್ದ “ಜನತಾ ದರ್ಶನ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕೈಗಾರಿಕಾ ಪ್ರದೇಶ ಬೆಳೆಯುತ್ತಿರುವುದರಿಂದ ಭೂಮಿಗೆ ಹೆಚ್ಚು ಬೆಲೆ ಇದೆ. ಜಮೀನು ವಿಷಯಕ್ಕೆ ಸಂಬಂಧಿಸಿದ ತಕರಾರು ಅರ್ಜಿಗಳು ಹೆಚ್ಚಾಗಿ ಬರುತ್ತವೆ. ನ್ಯಾಯಾಲಯ ಪ್ರಕರಣಗಳನ್ನು

ಹೊರತುಪಡಿಸಿ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ಅರ್ಜಿಗಳನ್ನು 30 ದಿನಗಳ ಒಳಗಾಗಿ ಪರಿಷ್ಕರಿಸಬೇಕು ಎಂದರು. ಹೊಸಕೋಟೆಯಲ್ಲಿ 120 ಎಕರೆ ಜಾಗ ಗುರ್ತಿಸಲಾಗಿದ್ದು, ನಿವೇಶನಗಳನ್ನು ಮಾಡಿ, ಬಡವರಿಗೆ, ನಿವೇಶನರಹಿತರಿಗೆ ಹಂಚಲಾಗುವುದು. ಪ್ರಣಾಳಿಕೆಯಲ್ಲಿರುವಂತೆ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತೇವೆ ಎಂದು ಹೇಳಿದರು.

ಹೊಸಕೋಟೆ ವಿಧಾನಸಭಾ ಕ್ಷೇತ್ರ ಶಾಸಕ ಶರತ್ ಕುಮಾರ್ ಬಚ್ಚೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜನಸಾಮಾನ್ಯರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಜನತಾದರ್ಶನ ಕಾರ್ಯಕ್ರಮಗಳು ಸಹಕಾರಿ. ಸರ್ಕಾರವು ಈಗಾಗಲೇ ಪ್ರಣಾಳಿಕೆಯಲ್ಲಿ ತಿಳಿಸಿರುವ ಪ್ರಮುಖ ಐದು ಯೋಜನೆಗಳಲ್ಲಿ ನಾಲ್ಕು ಜಾರಿಗೆ ತಂದಿದ್ದು,

ಯುವ ನಿಧಿ ಯೋಜನೆಯನ್ನು ಮುಂದಿನ ದಿನಗಳಲ್ಲಿ ಜಾರಿಗೆ ತಂದು ಜನರ ವಿಶ್ವಾಸಕ್ಕೆ ಬದ್ಧರಾಗಿರುತ್ತೇವೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರದ ಆದೇಶ ಬರುವ ಮುಂಚಿತವಾಗಿಯೇ ಜನಸ್ಪಂದನ ಕಾರ್ಯಕ್ರಮವನ್ನು ಸೆಪ್ಟೆಂಬರ್ 20ರಂದು ದೇವನಹಳ್ಳಿಯಲ್ಲಿ ಹಮ್ಮಿಕೊಂಡಿದ್ದರು. ಇದು ಸಾರ್ವಜನಿಕರ ಮೇಲೆ ಅವರಿಗಿರುವ ಕಾಳಜಿಯನ್ನು ತೋರಿಸುತ್ತದೆ ಎಂದರು. ಹೊಸಕೋಟೆ ತಾಲೂಕಿನ ದೇವನಗುಂದಿ ಕೈಗಾರಿಕಾ ಪ್ರದೇಶದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.

ಸಾರ್ವಜನಿಕರ ಸಮಸ್ಯೆಗಳನ್ನು ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಲಾಗುವುದು. ಇಂದು ಸಲ್ಲಿಸಿರುವ ಅರ್ಜಿಗಳನ್ನು IPGRS ಪೋರ್ಟಲ್ ನಲ್ಲಿ ನೊಂದಣಿಯಾಗಿ ಸರ್ಕಾರದ ಹಂತಕ್ಕೆ ತಲುಪುತ್ತದೆ. ನ್ಯಾಯಾಲಯ ಪ್ರಕರಣಗಳನ್ನು ಹೊರತುಪಡಿಸಿ ಇತರೆ ಅರ್ಜಿಗಳನ್ನು 30 ದಿನದ ಒಳಗಾಗಿ ಪರಿಷ್ಕರಿಸಲು ಕ್ರಮ ವಹಿಸಲಾಗುವುದು, ಪ್ರತಿ 15 ದಿನಕ್ಕೊಮ್ಮೆ ಜಿಲ್ಲೆಯ ಒಂದು ತಾಲೂಕಿನಲ್ಲಿ ಜನತಾದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಶಿವಶಂಕರ. ಎನ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

276 ಅರ್ಜಿ ಸ್ವೀಕಾರ

ಪೋಡಿ ಪ್ರಕರಣ, ಜಮೀನು ತಕರಾರು, ಗ್ರಾಮಗಳಿಗೆ ವಿದ್ಯುತ್ ಸಂಪರ್ಕ, ಜಮೀನು ಸರ್ವೆ, ಸ್ಮಶಾನ ಜಾಗ ಹಾಗೂ ರಸ್ತೆ ಅವ್ಯವಸ್ಥೆ, ರೈಲ್ವೇ ಕಾಮಗಾರಿಗಳ ವಿಳಂಬ, ಗೋಮಾಳ ಒತ್ತುವರಿ, ಹಕ್ಕು ಪತ್ರ ಹಂಚಿಕೆ, ಕೆರೆ ಕಟ್ಟೆ ಸಂರಕ್ಷಣೆ, ಪಡಿತರ ಚೀಟಿ ಹಂಚಿಕೆ, ಶಾಲಾ ಕಟ್ಟಡ ದುರಸ್ತಿ, ನಿವೇಶನ ಹಂಚಿಕೆ, ಚರಂಡಿ ನಿರ್ಮಾಣ,

ಪೊಲೀಸ್ ಇಲಾಖೆ ಪ್ರಕರಣಗಳ ಮರು ಪರಿಶೀಲನೆ, ಕುಡಿಯುವ ನೀರು ಶೌಚಾಲಯ ಸೇರಿದಂತೆ ಮೂಲಭೂತ ಸಮಸ್ಯೆಗಳು, ಕೃಷಿ‌(ಸಬ್ಸಿಡಿ)ಯಂತ್ರೋಪಕರಣಗಳ ವಿತರಣೆ ಸೇರಿದಂತೆ ಒಟ್ಟು 276 ಅಹವಾಲುಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಯಿತು.

ಕಾರ್ಯಕ್ರಮದಲ್ಲಿ ಪಶುಸಂಗೋಪನೆ, ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿಯ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ.ಕೆ.ಫಾಹಿಂ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ‌.ಕೆ.ಎನ್.ಅನುರಾಧ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ಜಿಲ್ಲಾಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಹೊಸಕೋಟೆ ತಹಶೀಲ್ದಾರ್ ವಿಜಯ್ ಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಸೇರಿದಂತೆ, ಜಿಲ್ಲಾಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

 

&&&&&&&&&&&&&&&&&&&&&&&&&&

ಬೆಂಗಳೂರು  ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ದೇವನಗುಂದಿಯಲ್ಲಿ ಜಿಲ್ಲಾಡಳಿತ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ “ಟ್ಯಾಂಕ್ ಲಾರಿ ಕ್ಯಾಲಿಬ್ರೇಷನ್ ಟವರ್ , ವರ್ಕಿಂಗ್ ಸ್ಟಾಂಡರ್ಡ್ ಪ್ರಯೋಗಾಲಯದ ಕಚೇರಿ,

ಕಟ್ಟಡವನ್ನುಆಹಾರ, ನಾಗರಿಕ ಸರಬರಾಜು ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರ ಕೆ.ಹೆಚ್ ಮುನಿಯಪ್ಪ ಅವರು ಉದ್ಘಾಟಿಸಿದರು.

ಹೊಸಕೋಟೆ ವಿಧಾನಸಭಾ ಕ್ಷೇತ್ರ ಶಾಸಕರಾದ ಶರತ್ ಕುಮಾರ್ ಬಚ್ಚೇಗೌಡ, ಜಿಲ್ಲಾಧಿಕಾರಿ ಡಾ.ಶಿವಶಂಕರ್ ಎನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.