ಬರ ಪರಿಹಾರ ಹಣ ಅರ್ಹ ರೈತರಿಗೆ ಶೀಘ್ರ ತಲುಪಿಸಿ:ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಕೆ ಫಾಹಿಂ

ವಿಜಯ ದರ್ಪಣ ನ್ಯೂಸ್ 

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ,ಡಿಸೆಂಬರ್ :- ಬರಗಾಲದಿಂದ ರೈತರು ಬೆಳೆದ ಬೆಳೆಗಳು ಇಳುವರಿ ಇಲ್ಲದೇ ಕುಂಠಿತವಾಗಿದ್ದು, ರೈತರ ಸಂಕಷ್ಟಕ್ಕೆ ಸ್ಪಂದಿಸಿ ಬರ ಪರಿಹಾರ ಹಣವನ್ನು ಅರ್ಹ ರೈತರಿಗೆ ತಡಮಾಡದೆ ತಲುಪಿಸಿ ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಕೆ ಫಾಹಿಂ ಅವರು ಅಧಿಕಾರಿಗಳಿಗೆ ಸೂಚಿಸಿದರು.

ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬರ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ಕೃಷಿಯಲ್ಲಿ ರಾಗಿ 46003.44 ಹೆಕ್ಟೇರ್, ಮೆಕ್ಕೆಜೋಳ 3477.68 ಹೆಕ್ಟೇರ್, ತೊಗರಿ 68.95 ಹೆಕ್ಟೇರ್, ನೆಲಗಡಲೆ 9.50 ಹೆಕ್ಟೇರ್ ಸೇರಿ ಒಟ್ಟು 49559.57 ಹೆಕ್ಟೇರ್ ನಷ್ಟು ಬೆಳೆ ಹಾನಿಯಾಗಿದೆ, ಬೆಳೆ ಸಮೀಕ್ಷೆಯ ವರದಿಯಂತೆ ಅರ್ಹ ರೈತರಿಗೆ ಬರ ಪರಿಹಾರ ಹಣ ತ್ವರಿತವಾಗಿ ತಲುಪಿಸಲು ಕ್ರಮ ವಹಿಸಿ ಎಂದರು.

ಜಿಲ್ಲೆಯಲ್ಲಿ ಸಣ್ಣ , ಮಧ್ಯಮ ಹಾಗೂ ದೊಡ್ಡ ರೈತರು ಸೇರಿ ಒಟ್ಟು 1.92 ಲಕ್ಷ ರೈತರಿದ್ದಾರೆ. ಒಂದು ಹೆಕ್ಟೇರ್ ಗೆ 8500 ರೂಪಾಯಿ ಬರ ಪರಿಹಾರ ಹಣ ನಿಗದಿ ಪಡಿಸಲಾಗಿದೆ. ಬರ ಪರಿಹಾರ ಹಣ ಪಡೆಯಲು ರೈತರು ಕಡ್ಡಾಯವಾಗಿ ಫ್ರೂಟ್ಸ್-ಐಡಿ ಮಾಡಿಸಿರಬೇಕು. ಹೀಗಾಗಿ ಜಿಲ್ಲೆಯ ನಾಲ್ಕು ತಾಲ್ಲೂಕಿಗೆ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯ ಜಿಲ್ಲಾ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು , ಅವರು ನೇರವಾಗಿ ರೈತರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡು ಪ್ರೂಟ್ಸ್ ಐಡಿ ಮಾಡಿಸುತ್ತಿದ್ದಾರೆ. ಬರಪರಿಹಾರ ಹಣವನ್ನು ಅರ್ಹ ರೈತರಿಗೆ ಶೀಘ್ರವೇ ತಲುಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಕುಡಿಯುವ ನೀರಿನ ಬಗ್ಗೆ ಪರಿಶೀಲಿಸಿ ಪ್ರಸ್ತುತ ತೀವ್ರ ತರನಾದ ಕುಡಿಯುವ ನೀರಿನ ಅಭಾವ ಕಂಡುಬಂದಿಲ್ಲ, ಆದರೆ ಈಗ ಚಾಲ್ತಿಯಲ್ಲಿರುವ ಕೊಳವೆಬಾವಿಗಳನ್ನು ಪರಿಶೀಲಿಸಿ ಅಗತ್ಯ ಮೋಟರ್, ಪೈಪ್ ಲೈನ್, ವಿದ್ಯುತ್ ಸೇರಿದಂತೆ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಂಡು, ಮುಂಜಾಗ್ರತಾ ಕ್ರಮವಾಗಿ ಅವಶ್ಯವಿದ್ದಲ್ಲಿ ಖಾಸಗಿಯಾಗಿ ಕುಡಿಯುವ ನೀರು ಪೂರೈಕೆ ಮಾಡಲು ಸಿದ್ಧರಾಗಿರಿ ಎಂದರಲ್ಲದೆ ಕುಡಿಯುವ ನೀರಿನ ಘಟಕಗಳ ಗುಣಮಟ್ಟ ಪರಿಶೀಲಿಸಿ ಎಂದರು.

ಜಿಲ್ಲೆಗೆ ಈ ವರ್ಷ 45,000 ಮೇವಿನ ಬೀಜದ ಮಿನಿ ಕಿಟ್ ಗಳು ಬಂದಿದ್ದು, ಪ್ರತಿಯೊಂದು ಗ್ರಾಮದಲ್ಲಿ ನೀರಿನ ಲಭ್ಯತೆ ಇರುವ ರೈತರಿಗೆ ವಿತರಿಸಲಾಗುತ್ತಿದೆ ಎಂದು ಪಶುಸಂಗೋಪನೆ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಸ್ತುವಾರಿ ಕಾರ್ಯದರ್ಶಿಯವರು ಬರ ಪರಿಸ್ಥಿತಿ ಇರುವುದರಿಂದ ಜಾನುವಾರುಗಳಿಗೆ ಮೇವು ಕೊರತೆ ಉಂಟಾಗದಂತೆ ಕ್ರಮವಹಿಸಿ, ಗೋಶಾಲೆಗಳಲ್ಲಿ ಮೇವನ್ನು ಹೆಚ್ಚಿನ ಪ್ರಮಾಣದಲ್ಲಿ ಶೇಖರಿಸಿ, ಮೇವಿನ ಬೀಜ ಪಡೆದ ರೈತರ ಜೊತೆ ಒಡಂಬಡಿಕೆ ಮಾಡಿಕೊಂಡು ಪುನಃ ಬೆಳೆದ ಮೇವು ಖರೀದಿ ಮಾಡಲು ಪ್ರಯತ್ನಿಸಿ, ಮೇವು ಬೀಜ ಪಡೆದ ರೈತರ ಕೃಷಿ ಜಮೀನುಗಳಿಗೆ ಸ್ಥಳ ಭೇಟಿ ಮಾಡಿ ಪರಿಶೀಲಿಸಿ ಎಂದು ಹೇಳಿದರು.

ಅನ್ನ ಭಾಗ್ಯ ಯೋಜನೆ ಅಡಿ 2,31,009 ಫಲಾನುಭವಿಗಳಿದ್ದು ಅದರಲ್ಲಿ 1,98,872 ಫಲಾನುಭವಿಗಳಿಗೆ ಡಿ.ಬಿ.ಟಿ ಮೂಲಕ ನೇರವಾಗಿ 11,59,87,430/- ಕೋಟಿ ರೂಗಳು ನವೆಂಬರ್ ಮಾಹೆಯವರೆಗೆ ಜಮೆಯಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ಪಡಿತರ ಚೀಟಿಯಲ್ಲಿ ನ್ಯೂನ್ಯತೆ ಇರುವಂತಹ ಕಾರ್ಡ್ ಗಳ ಫಲಾನುಭವಿಗಳಿಗೆ ಮಾಹಿತಿ ನೀಡಿ ಸರಿಪಡಿಸಲು ಕ್ರಮ ವಹಿಸಿ ಎಂದು ಹೇಳಿದರು.

ಗೃಹಲಕ್ಷ್ಮಿ ಯೋಜನೆ ಅಡಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 225981 ಫಲಾನುಭವಿಗಳ ಪೈಕಿ, 1,98,102 ಫಲಾನುಭವಿಗಳು ನೋಂದಣಿ ಆಗಿರುತ್ತಾರೆ. ಬಾಕಿ ಇರುವ ಫಲಾನುಭವಿಗಳಿಗೆ ಗ್ರಾಮಮಟ್ಟದಲ್ಲಿ ಪ್ರಚಾರ ,ಜಾಗೃತಿ ಮೂಡಿಸಿ,ಮಾಹಿತಿ ನೀಡಿ ನೋಂದಾಯಿಸಿಕೊಳ್ಳಲು ಕ್ರಮವಹಿಸಿ ಎಂದರಲ್ಲದೆ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸುವ ಕೇಂದ್ರಗಳಿಗೆ ಭೇಟಿ ನೀಡಿ ನೋಂದಾವಣೆ ಪ್ರಕ್ರಿಯೆಯನ್ನು ಪರಿಶೀಲಿಸಿ ಎಂದು ಹೇಳಿದರು.

ನರೇಗಾ ಯೋಜನೆಯಡಿ ಇಲಾಖೆಗಳಲ್ಲಿ ಬಾಕಿ ಇರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ, ನರೇಗಾ ಕಾಮಗಾರಿಗಳು ತ್ವರಿತವಾಗಿ ಮುಗಿಸಿ ವರದಿ ನೀಡಿ ಎಂದರು.

ಶಾಸಕರು ಹಾಗೂ ಸಂಸದರ ಅನುದಾನದಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿ ವರದಿ ಪರಿಶೀಲಿಸಿ, ಜನವರಿ ಅಂತ್ಯದೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ವರದಿ ನೀಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಶಿವಶಂಕರ.ಎನ್, ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ಅಪರ ಪೋಲಿಸ್ ವರಿಷ್ಠಾಧಿಕಾರಿ ಪುರುಷೋತ್ತಮ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಮೇಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಞಞಞಞಞಞಞಞಞಞಞಞಞಞಞಞಞಞಞಞಞ