ಬೆಂಗಳೂರು ಮಲ್ಲೇಶ್ವರದಲ್ಲಿ ಕರವೇ ಕಾರ್ಯಕರ್ತರಿಂದ ಕನ್ನಡದ ಕಹಳೆ

ವಿಜಯ ದರ್ಪಣ ನ್ಯೂಸ್   

ಬೆಂಗಳೂರು ಮಲ್ಲೇಶ್ವರಂ ನ ಸಂಪಿಗೆ ರಸ್ತೆಯಲ್ಲಿ ನಾರಾಯಣಗೌಡ ಬಳಗದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮೆರವಣಿಗೆಯ ಮೂಲಕ ಸಾಗುತ್ತ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಕೋರಿದರು.

ಕೆಲ ಕಾರ್ಯಕರ್ತರು ಅಂಗಡಿಗಳ ಮುಂಭಾಗದಲ್ಲಿ ಅಳವಡಿಸಿದ್ದ ಎಲ್‌ಇಡಿ ಆಂಗ್ಲ ಫಲಕಗಳನ್ನು ಹೊಡೆದು ಹಾಕುತ್ತಿದ್ದರು. ರಸ್ತೆಬದಿಯಲ್ಲಿದ್ದ ಬೃಹತ್ ಆಂಗ್ಲ ಜಾಹಿರಾತು ಫಲಕಗಳನ್ನು ಸಹ ಹರಿದು ಹಾಕುತ್ತಿದ್ದರು.

ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸೂಕ್ಷ್ಮ ಬಿಗಿ ಬಂದೋಬಸ್ತನ್ನು ಸಹ ಪೊಲೀಸರು ಮಾಡಿದ್ದರು. ಕೆಲಕಡೆ ಟ್ರಾಫಿಕ್ ಜಾಮ್ ಆಗಿ ಸಂಚಾರ ವಿಭಾಗದ ಪೊಲೀಸರು ಸಲೀಸಾಗಿ ವಾಹನ ಚಲಿಸಲು ಅನುವು ಮಾಡುತ್ತಿದ್ದರು.

ಕೆರಳಿದ ನಾರಾಯಣಗೌಡರು ನಾನು ಬಂಧನಕ್ಕೆ ಒಳಗಾದರೂ ಕಾರ್ಯಕರ್ತರು ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಪೊಲೀಸ್ ಇಲಾಖೆ ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಜನರ ಜಾಗೃತಿ ರ‍್ಯಾಲಿ ಮಾಡಲು ಅವಕಾಶ ಕೊಟ್ಟರೆ ಸಾಕು.

ಬೆಂಗಳೂರು ಸುರಕ್ಷಿತವಾಗಿರುತ್ತದೆ. ನಮ್ಮನ್ನು ಕೆಣಕುವುದು, ಕೆರಳಿಸುವುದು ಬೇಡ. ಅದು ಹೋರಾಟದ ರೂಪ ಬದಲಾಗುತ್ತದೆ. ಕನ್ನಡಿಗರಿಗೆ ಉದ್ಯೋಗ ಸಿಗಬೇಕು, ಬಂಡವಾಳಶಾಹಿಗಳು, ಅನ್ಯಧರ್ಮದವರು ದೊಡ್ಡ ದೊಡ್ಡ ಕೆಲಸಗಳನ್ನು ತಮ್ಮವರಿಗೆ ಕೊಟ್ಟು, ಕನ್ನಡಿಗರಿಗೆ ಕಾಫಿ, ಟೀ ಕೊಡುವ, ಸರಂಜಾಮುಗಳನ್ನು ಬಟವಾಡೆ ಮಾಡುವ ಕೆಳಮಟ್ಟದ ಕೆಲಸಗಳಿಗೆ ಮಾತ್ರ ಉಪಯೋಗಿಸುತ್ತಿದ್ದಾರೆ. ಇದು ನಿಲ್ಲಬೇಕು. ಕನ್ನಡಿಗರು ದೊಡ್ಡಮಟ್ಟದ ಎಕ್ಸಿಕ್ಯೂಟಿವ್ ಕೆಲಸಗಳಿಗೆ ಹೇಗೆ ಅನರ್ಹರಾಗುತ್ತಾರೆ. ಅವರಿಗೂ ಕೆಲಸ ಕೊಡಿ, ನಿಮ್ಮವರಿಗೂ ಕೊಡಿ. ಯೋಗ್ಯತೆಯಿದ್ದವರನ್ನು ತುಚ್ಛೀಕರಿಸುವ ಕೆಲಸ ಮಾಡಬೇಡಿ ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರವಾಗಲೀ, ನ್ಯಾಯಾಲಯಗಳಾಗಲೀ ಕನ್ನಡ ವಿರೋಧಿಗಳಲ್ಲ. ಆದರೆ ಕನ್ನಡಪರ ಸಂಘಟನೆಗಳು ಕಾರ್ಯಕರ್ತರು ನಾಮಫಲಕ ಬದಲಾಯಿಸಲು ಹೇಳಬೇಕೇ ವಿನಃ, ನಾಮಫಲಕವನ್ನು ಕಿತ್ತುಹಾಕುವುದು, ಹರಿದು ಹಾಕುವುದು, ಕಾನೂನನ್ನು ಕೈಗೆತ್ತಿಕೊಂಡು ಪುಂಡಾಟಿಕೆ ನಡೆಸುವಂತಿಲ್ಲವೆಂದು ಸರಕಾರದ ಮುಖ್ಯ ಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಸಚಿವರುಗಳು ಹೇಳುತ್ತಾರಾದರೂ ಕೆಲವು ಅಂಗಡಿ ಮಳಿಗೆಗಳ ಮಾಲ್‌ಗಳ ಮಾಲೀಕರು ಕಾನೂನನ್ನು ಪಾಲಿಸುತ್ತಿಲ್ಲ.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಸೆಕ್ಷನ್ 17(6)ರಲ್ಲಿ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿದೆ. ಇದರ ಪ್ರಕಾರ ರಾಜ್ಯದಲ್ಲಿ ವ್ಯಾಪಾರ, ವ್ಯವಹಾರ ನಡೆಸುವ ಪ್ರತಿಯೊಂದು ಸಂಸ್ಥೆಯೂ ಕನ್ನಡ ಭಾಷೆಯಲ್ಲಿ ನಾಮಫಲಕ ಹಾಕುವುದು ಕಡ್ಡಾಯ. ಕೈಗಾರಿಕೆ, ಆಸ್ಪತ್ರೆ, ಶಿಕ್ಷಣ ಸಂಸ್ಥೆ, ಪ್ರಯೋಗಾಲಯ, ಸಮಾಲೋಚನಾ ಕೇಂದ್ರ, ಹೋಟೆಲ್, ವ್ಯಾಪಾರಿ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಲೇಬೇಕು. ನಾಮಫಲಕದ ಮೇಲ್ಭಾಗ ಕನ್ನಡ ಭಾಷೆಯಲ್ಲಿರಬೇಕು. ಈಗಾಗಲೇ ಅಸ್ತಿತ್ವದಲ್ಲಿರುವ ನಾಮಫಲಕಗಳನ್ನು ಮಾರ್ಪಾಡು ಮಾಡಿಕೊಳ್ಳಲು ಫೆಬ್ರವರಿ 28, 2024 ರವರೆಗೆ ಸಮಯಾವಕಾಶವಿದೆ. ಉಲ್ಲಂಘಿಸಿದರೆ ಸಂಸ್ಥೆಗಳಿಗೆ ಬೀಗ ಜಡಿಯಬಹುದು.

ಶೇಕಡ 60%ರಷ್ಟು ಕನ್ನಡದ ನಾಮಫಲಕವಿದ್ದು ಶೇಕಡ ನಲವತ್ತರಷ್ಟು ಅವರವರ ಭಾಷೆ, ಆಂಗ್ಲಭಾಷೆಗೆ ಅವಕಾಶವಿದೆಯೆಂದು ಕಾನೂನು ಇದೆ. ಅದನ್ನು ಕೆಲವರು ಪಾಲಿಸುತ್ತಿಲ್ಲ. ಅವರಿಗೆ ನಾಮಫಲಕ ಹಾಕುವಾಗಲೇ ಬಿಬಿಎಂಪಿ ಅಧಿಕಾರಿಗಳಾಗಲಿ, ಪೊಲೀಸ್ ಇಲಾಖೆಯಾಗಲಿ ವಿವರಿಸಿ ಮನನ ಮಾಡಬೇಕು. ಇಡೀ ವರ್ಷ ಸುಮ್ಮನಿದ್ದು ನವೆಂಬರ್ ಡಿಸೆಂಬರ್ ತಿಂಗಳಿನಲ್ಲಷ್ಟೇ ಕನ್ನಡದ ಕಿಚ್ಚು ಹಚ್ಚುವುದು ಸರಿಯಲ್ಲ.

ಬಿ.ಆರ್. ನರಸಿಂಹಮೂರ್ತಿ, 9448174932