ಜಲ್ಲಿ ಕಟ್ಟು…….

ವಿಜಯ ದರ್ಪಣ ನ್ಯೂಸ್

ಜಲ್ಲಿ ಕಟ್ಟು…….

ಜನವರಿ 2024 :ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಜಲ್ಲಿ ಕಟ್ಟು ಆಚರಣೆಯಲ್ಲಿ 42 ಜನರಿಗೆ ಗಾಯ, ಕೆಲವರ ಪರಿಸ್ಥಿತಿ ಗಂಭೀರ….
ಹೋದ ವರ್ಷ 60 ಜನರಿಗೆ ಗಾಯ…..

ಕಳೆದ ವರ್ಷ ಶಿವಮೊಗ್ಗದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ
” ಹೋರಿ ಬೆದರಿಸುವ ಆಟದಲ್ಲಿ ” ಇಬ್ಬರ ಸಾವು…..

ಬಡವರ ಮಕ್ಕಳ ಪರೋಕ್ಷ ಮಾರಣಹೋಮ…..

ಬಹುಮಾನದ ಹಣಕ್ಕಾಗಿ ಅಜ್ಞಾನಿಗಳ ಪ್ರಾಣ ಒತ್ತೆ……

ಸ್ವಲ್ಪ ಯೋಚಿಸಿ…..

ಹೋರಿ ಬೆದರಿಸುವ ಸ್ಪರ್ಧೆ – ಜಲ್ಲಿಕಟ್ಟು – ಮಡೆಸ್ನಾನ – ಎಡೆಸ್ನಾನ – ಬೆತ್ತಲೆ ಸೇವೆ – ಎದೆ ಬಡಿದುಕೊಳ್ಳುವುದು, ಕೆಂಡದ ಮೇಲೆ ನಡೆಯುವುದು, ಬಾಯಿಗೆ ಕಂಬಿ ಚುಚ್ಚಿಕೊಳ್ಳುವುದು ಮುಂತಾದ ಎಲ್ಲಾ ಸಂಪ್ರದಾಯಗಳನ್ನು ಬೆಂಬಲಿಸೋಣ……

ಯಾವ ಸಂದರ್ಭದಲ್ಲಿ ಎಂದರೆ ಈ ಸಂಪ್ರದಾಯಗಳ ಪರವಾಗಿ ಮಾತನಾಡುವ………

ಎಲ್ಲಾ ಶಾಸಕರು, ಜನ ಪ್ರತಿನಿಧಿಗಳು, ಮಂತ್ರಿಗಳು, ಎಲ್ಲಾ IAS IPS IFS KAS ಅಧಿಕಾರಿಗಳು, ಸಿನಿಮಾ ಧಾರವಾಹಿಗಳ ನಟನಟಿಯರು, ನಿರ್ದೇಶಕರು, ಮಠಾಧೀಶರು, ಮೌಲ್ವಿಗಳು, ಫಾದರ್, ಸಿಸ್ಟರ್ ಗಳು, ಬುದ್ದಿಜೀವಿಗಳು, ಧರ್ಮಾಧಿಕಾರಿಗಳು, ಎಲ್ಲಾ ಹೋರಾಟಗಾರರು, ಇಂಜಿನಿಯರ್, ಡಾಕ್ಟರ್, ಲಾಯರ್, ಟೀಚರ್, ಪ್ರೊಫೆಸರ್, ವಿಜ್ಞಾನಿಗಳು , ಕೋಟ್ಯಾಧಿಪತಿ ಉದ್ಯಮಿಗಳು, ಸಾಹಿತಿ ಬರಹಗಾರರು, ಜ್ಯೋತಿಷಿಗಳು , ಮುಖ್ಯವಾಗಿ ಎಲ್ಲಾ ಮಾಧ್ಯಮಗಳ ಪ್ರಖಾಂಡ ಪಂಡಿತರು ತಮ್ಮ ಕುಟುಂಬ ಸಮೇತ ಈ ಚಟುವಟಿಕೆಗಳಲ್ಲಿ ಪಾತ್ರಧಾರಿಗಳಾಗಿ ಭಾಗವಹಿಸಿದಾಗ ನಾವು ಸಹ ಈ ಆಚರಣೆಗಳು ನಮ್ಮ ಹೆಮ್ಮೆ ಎಂದು ಭಾಗವಹಿಸೋಣ. ಇದರ ನಿಷೇಧದ ವಿರುದ್ಧ ಹೋರಾಡೋಣ…..

ಇಲ್ಲ, ಇದು ಸಾಧ್ಯವೇ ಇಲ್ಲ ಕಣ್ರೀ. ಅವರುಗಳು ಯಾವತ್ತಾದರೂ ಮನಃ ಪೂರ್ವಕವಾಗಿ ಈ ಆಚರಣೆಗಳಲ್ಲಿ ಸ್ವತಃ ಭಾಗಿಯಾಗಿರುವುದನ್ನು ನೋಡಿದ್ದೀರಾ, ( ಅಪರೂಪ ಪ್ರಕರಣಗಳನ್ನು ಹೊರತುಪಡಿಸಿ ) ಯಾರಾದರೂ ಹಳೆಯ ಹರಿದ ಮಾಸಲು ಬಟ್ಟೆ ಹಾಕಿಕೊಂಡಿರುವುದನ್ನು ನೋಡಿದ್ದೀರಾ, ಯಾವನಾದರೂ ಕೈ ಕಾಲು ಮಣ್ಣು ಮಾಡಿಕೊಂಡಿರುವುದನ್ನು ಕಂಡಿರುವಿರಾ. ಕೆಸರಲ್ಲಿ ಹೊರಳಾಡುವುದನ್ನು ಗಮನಿಸಿದ್ದೀರಾ,…….

ಅವರು ನಮ್ಮಷ್ಟು ಮೂರ್ಖರಲ್ಲಾ ಕಣ್ರೀ. ಕೊಬ್ಬಿದ ಕೊಂಬಿನ ಹೋರಿಯನ್ನು ಹಿಡಿಯಲು ಹೋಗಿ ಅವರು ಅಥವಾ ಅವರ ಮಕ್ಕಳು ಗಾಯ ಮಾಡಿಕೊಳ್ಳುವುದೋ, ಸಾಯವುದನ್ನೋ ಅನುಭವಿಸಲು ಅವರಿಗೇನು ಹುಚ್ಚೇ. ಬೆತ್ತಲೆ ಸೇವೆ ಮಹಾನ್ ಸಂಪ್ರದಾಯ. ಇದು ನಡೆಯದಿದ್ದರೆ ನಮ್ಮ ಬದುಕು ನಮ್ಮ ಸಂಸ್ಕೃತಿ ನಾಶವಾಗಿ ನಾವು ನರಕಕ್ಕೆ ಹೋಗುತ್ತೇವೆ ಎಂದು ಭಾವಿಸಲು ಅವರಿಗೇನು ಹುಚ್ಚುನಾಯಿ ಕಚ್ಚಿದೆಯೇ…..

ಇದೇ ನೋಡಿ ಮುಖವಾಡಗಳು ಎಂದರೆ………

ಬೇಡ ಕಣ್ರೀ, ಇದು ಮೂರ್ಖರು, ಮುಗ್ಧರು, ಮೂಢರು, ಸ್ವತಂತ್ರ ಚಿಂತನೆ ಇಲ್ಲದ ಗುಲಾಮ ಮನಸ್ಥಿತಿಯವರು , ಬಡವರು, ಶೋಷಿತರು ಆಚರಿಸುವ ಸಂಪ್ರದಾಯಗಳು ಕಣ್ರೀ…..

ಬೇಕಂತಲೇ ಧರ್ಮ, ಶಾಸ್ತ್ರ, ಸಂಪ್ರದಾಯಗಳ ಹೆಸರಿನಲ್ಲಿ ಬಡವರನ್ನು ಶೋಷಿಸಲು‌ ಅನಾದಿ ಕಾಲದಿಂದಲೂ ‌ಆಚರಿಸಿಕೊಂಡು ಬರುತ್ತಿರುವ ಗೊಡ್ಡು ಸಂಪ್ರದಾಯಗಳಿವು……

ಗ್ರಾಮಗಳಲ್ಲಿ ಎಂತೆಂತಹ ಅದ್ಭುತವಾದ ಆಟಗಳಿವೆ. ಒಬ್ಬರು, ಇಬ್ಬರು ಆಡುವ – ಗುಂಪಾಗಿ ಆಡುವ ದೈಹಿಕ ಮಾನಸಿಕ ಸಾಮರ್ಥ್ಯಕ್ಕೆ ಸವಾಲಾಗುವ ವೈವಿಧ್ಯಮಯವಾದ ಕ್ರೀಡೆಗಳಿವೆ. ಯಾವುದೇ ಅಪಾಯವಿಲ್ಲದ ಯಾರಿಗೂ ತೊಂದರೆ ಕೊಡದ ಯಾರ ಅನುಮತಿಯೂ ಬೇಕಿಲ್ಲದ ಸಂಭ್ರಮದ ಆಟಗಳಿಗೆ ಭಾರತದಂತ ಅತ್ಯುತ್ತಮ ಸಾಂಸ್ಕೃತಿಕ ಇತಿಹಾಸ ಹೊಂದಿರುವ ದೇಶದಲ್ಲಿ ಬರವೇ……….

ಈ ಸಿದ್ದರಾಮಯ್ಯ, ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ, ಸ್ಟಾಲಿನ್, ನರೇಂದ್ರ ಮೋದಿ, ರಾಹುಲ್ ಗಾಂಧಿ, ಟಿವಿಗಳ ಬಾಯಿ ಬುಡುಕ ಪತ್ರಕರ್ತರು ಯಾರೂ ಇದರಲ್ಲಿ ಭಾಗವಹಿಸುವುದಿಲ್ಲ. ಚಪ್ಪಾಳೆ ತಟ್ಟಲು ಬರುವುದೂ ಅನುಮಾನ. ಏನಾದರೂ ಅನಾಹುತ ನಡೆದರೆ ಟಿವಿಗಳಲ್ಲಿ ನೋಡಿ ಪರಿಹಾರ ಘೋಷಿಸಿ ಹೊಟ್ಟೆತುಂಬ ಮೃಷ್ಟಾನ್ನ ಭೋಜನ ಮಾಡಿ ಆಕ್ಸಿಜನ್ ಬೆಡ್ ನಲ್ಲಿ ಮಲಗಿಕೊಂಡು ಬಿಡ್ತಾರೆ ಕಣ್ರೀ……

ರಾತ್ರೋ ರಾತ್ರಿ ಒಂದು ಸಣ್ಣ ಮುಷ್ಕರಕ್ಕೆ ಹೆದರಿ ಸುಪ್ರೀ೦ಕೋರ್ಟ್ ನ ಆದೇಶಕ್ಕೆ ವಿರುಧ್ಧವಾಗಿ ಸುಗ್ರೀವಾಜ್ಞೆ ಹೊರಡಿಸಿದವರು ಆರಾಮವಾಗಿ ರಾಜಕೀಯ ಮಾಡಿಕೊಂಡು ಅಧಿಕಾರ ಹಿಡಿದು ಸುಖವಾಗಿರುತ್ತಾರೆ. ಆದರೆ ಪಾಪ ಶಾಸ್ತ್ರ ಸಂಪ್ರದಾಯ ಅಂತ ಹೇಳಿ ಈ ಹುಚ್ಚಾಟಕ್ಕೆ ಸತ್ತವನ ಹೆಂಡತಿ ಮಕ್ಕಳು ಬೀದಿಪಾಲಾಗ್ತಾರೆ ಕಣ್ರೀ……

ಇನ್ನೊಂದು ವಿಪರ್ಯಾಸ ಗೊತ್ತೆ,… ಯಾರು ಈ Digital India, online trading, cashless economy, smart city, smart village, advanced technology global leader, ಅಂತೆಲ್ಲಾ ಮಾತನಾಡುತ್ತಾರೋ, ಯಾರು ಧರ್ಮ ದೇವರು ಎನ್ನುತ್ತಾರೋ ಅವರೇ ಹೆಚ್ಚಾಗಿ ಇದನ್ನು ಬೆಂಬಲಿಸುವುದು ಕಾಣುತ್ತಿದೆ. ಇದು ನನಗೆ ಗೊಂದಲ ಮೂಡಿಸಿದೆ. ಇವರು ಭಾವನಾತ್ಮಕವಾಗಿ ಮಾತ್ರ ಯೋಚಿಸುತ್ತಿದ್ದಾರೆಯೇ ಎಂದು……….

ಬೇಡ ಕಣ್ರೀ … ನಿಮ್ಮ ದಮ್ಮಯ್ಯ …… ಧರ್ಮ ಜಾತಿ, ಎಡ ಬಲ ಪಂಥ, ಆ ಪಕ್ಷ ಈ ಪಕ್ಷ ಎಲ್ಲಾ ಸ್ವಲ್ಪ ಪಕ್ಕಕ್ಕಿಟ್ಟು ಭಾರತೀಯತೆಯನ್ನು ಮೈಗೂಡಿಸಿಕೊಂಡು ನಾಗರೀಕ ಸಮಾಜ ಕಟ್ಟೋಣ. ಮಾಡಲು ಇದಕ್ಕಿಂತ ಬಹುಮುಖ್ಯ ಕೆಲಸಗಳಿವೆ. ದಯವಿಟ್ಟು ಈ ಓಟಿನ ರಾಜಕೀಯಕ್ಕೆ ಬಲಿಯಾಗಬೇಡಿ. ವಿಶ್ವ ಬದಲಾಗುತ್ತಿರುವಾಗ ನಾವು ಹಿಮ್ಮುಖವಾಗಿ ಚಲಿಸುವುದು ಬೇಡ. ನಾವೆಲ್ಲಾ ಒಂದೇ ದೋಣಿಯ ಪಯಣಿಗರು. ಇನ್ನಷ್ಟು ವಿಶಾಲ ಮನಸ್ಸಿನಿಂದ ಮತ್ತೊಮ್ಮೆ ಯೋಚಿಸಿ.‌ ನಿಮ್ಮ ಸ್ವಾತಂತ್ರ್ಯ ನಿಮಗಿದ್ದೇ ಇದೆ……….

ಎಷ್ಟೆಷ್ಟೋ ಶಾಸ್ತ್ರ ಸಂಪ್ರದಾಯ ಆಚರಣೆಗಳನ್ನು ಮುರಿದು ಹಾಕಿದ್ದೇವೆ,
ಮಾನವೀಯ ಮೌಲ್ಯಗಳನ್ನೇ ನಾಶ ಮಾಡಿದ್ದೇವೆ. ತೀರಾ ಅತ್ಯಗತ್ಯ ರಕ್ತ ಸಂಬಂಧಗಳನ್ನೇ ವ್ಯಾಪಾರಿಕರಣಗೊಳಿಸಿದ್ದೇವೆ. ನಮಗೆ ಜೀವ ಕೊಟ್ಟ ತಂದೆ ತಾಯಿಗಳನ್ನೇ ವೃದ್ದಾಶ್ರಮದಲ್ಲಿ ಬಿಟ್ಟಿದ್ದೇವೆ. ನಮ್ಮನ್ನೇ ನಂಬಿ ಬಂದ ಸೊಸೆಯೆಂಬ ಹೆಣ್ಣನ್ನು ವರದಕ್ಷಿಣೆಗಾಗಿ ಕೊಂದಿದ್ದೇವೆ. ತಂದೆ ತಾಯಿಯಂತೆ ಸಾಕಿ ಸಲುಹಬೇಕಾದ ಸೊಸೆಯೆಂಬ ಹೆಣ್ಣು ಕೊನೆಗಾಲದಲ್ಲಿ ತನ್ನ ಅತ್ತೆ ಮಾವನನ್ನು ಬೀದಿಪಾಲು ಮಾಡಿದ ಅನೇಕ ಘಟನೆಗಳಿವೆ….

ಸರ್ಕಾರದ ಎಲ್ಲಾ ಸವಲತ್ತುಗಳನ್ನು ಪಡೆದೂ ಲಂಚವೆಂಬ ಎಂಜಲು ಕಾಸಿಗೆ ನಾಲಗೆ ಚಾಚುವ ನಿಕೃಷ್ಟ ಸಂಪ್ರದಾಯ ಬೆಳೆಸಿಕೊಂಡಿದ್ದೇವೆ. ಕೆಲವರಂತೂ ದುಡ್ಡಿಗಾಗಿ ಸುಫಾರಿ ಪಡೆದು ನಮಗೆ ಸಂಬಂಧವೇ ಇಲ್ಲದ ವ್ಯಕ್ತಿಯನ್ನು ಕೊಲ್ಲಲೂ ಹೇಸುವುದಿಲ್ಲ. ಕೀಳು ಜಾತಿಯವನು ಎಂಬ ಕಾರಣಕ್ಕೇ ಒಂದು ಸಮುದಾಯವನ್ನೇ ಊರ ಹೊರಗಿಡಲಾಗಿದೆ….

ಹೀಗೆ ಅನೇಕ ಪಾಲಿಸಬೇಕಾದ ಒಳ್ಳೆಯ ಸಂಪ್ರದಾಯಗಳನ್ನು ಪುನರ್ ರೂಪಿಸಿಕೊಳ್ಳುವುದನ್ನು ಮರೆತು ಕೀಳು ಅಭಿರುಚಿಯ ಅಮಾನವೀಯ ಆಚರಣೆಗಳಿಗಾಗಿ ಜನ ಸಮೂಹ ಹೋರಾಡುತ್ತಿರುವುದನ್ನು ನೋಡಿದರೆ ಇವರ ಮಾನಸಿಕ ಸ್ಥಿತಿಯ ಬಗ್ಗೆಯೇ ಅನುಮಾನ ಮೂಡುತ್ತದೆ…..

ಪಟಾಕಿ ಹೊಡೆದು ಪರಿಸರ ನಾಶಮಾಡಿ ಅನಾರೋಗ್ಯ ಪೀಡಿತರಾಗುವ ಆಚರಣೆ, ಪ್ರಾಣಿಗಳಿಗೆ ಹಿಂಸೆ ಕೊಟ್ಡು ತಾವು ಗಾಯ ಮಾಡಿಕೊಳ್ಳುವ ಜಲ್ಲಿಕಟ್ಟು , ಯಾರೋ ತಿಂದ ಎಂಜಲೆಲೆಯ ಮೇಲೆ ಹೊರಳಾಡುವ ಮಡೆಸ್ನಾನ, ಇತ್ಯಾದಿಗಳಿಗಾಗಿ ಹೋರಾಡುವುದು ಅತ್ಯಂತ ಹೇಯವಲ್ಲವೆ…….

ಕಾಲದೊಂದಿಗೆ ಅನುಭವದೊಂದಿಗೆ ಆಧುನಿಕತೆಯೊಂದಿಗೆ ನಾವು ಉತ್ತಮ ಜೀವನಶೈಲಿ ರೂಪಿಸಿಕೊಳ್ಳಲು ಬದಲಾಗಬೇಕಲ್ಲವೇ. ಈಗಲೂ ಬಾಲ್ಯ ವಿವಾಹ, ಸತಿಸಹಗಮನದಂತ ಸಂಪ್ರದಾಯಗಳನ್ನು ಆಚರಿಸಲು ಸಾಧ್ಯವೇ……

ನಿಜ , ವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಇನ್ನೊಬ್ಬರಿಗೆ ತೊಂದರೆಯಾಗದಂತೆ ನಮ್ಮ ನಂಬಿಕೆಗಳನ್ನು ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇದೆ. ಇದು ಏಕಕಾಲಕ್ಕೆ ಸಂಪ್ರದಾಯವಾದಿಗಳಿಗೂ, ವಿಚಾರವಾದಿಗಳಿಗೂ ಸಮನಾಗಿಯೇ ಅನ್ವಯವಾಗುತ್ತದೆ.
ಆದರೆ ಹಿಂದಿನಿಂದ ಬಂದದ್ದು ಎಂಬ ಒಂದೇ ಕಾರಣಕ್ಕೆ ಇಲ್ಲದ ಅರ್ಥ ಹುಡುಕಿ ಆ ಮೌಢ್ಯವನ್ನು ಮುಂದುವರಿಸಿಕೊಂಡು ಹೋಗುವುದು ಎಷ್ಟು ಸರಿ…..

ಕೆಂಡದ ಮೇಲೆ ನಡೆಯುವುದು, ಕೆಲ ಮುಸ್ಲೀಮರು ಎದೆ ಬಡಿದುಕೊಂಡು ರಕ್ತ ಸುರಿಸಿಕೊಳ್ಳುವುದು ಇದೆಲ್ಲಾ ಇನ್ನೂ ಮುಂದುವರಿಯಬೇಕೆ…..

ಜೀವನಮಟ್ಟ ಸುಧಾರಣೆಯ ಎಲ್ಲಾ ಸಂಪ್ರದಾಯಗಳನ್ನು ಅನುಸರಿಸೋಣ. ಮಾನವೀಯ ಮೌಲ್ಯ ಪ್ರತಿಪಾದಿಸುವ ಸಂಸ್ಕೃತಿ ಉಳಿಸಿಕೊಳ್ಳೋಣ. ಆದರೆ ಯಾವುದೋ ಕಂದಾಚಾರಕ್ಕೆ ಶರಣಾಗಿ ನಾವು ತೊಂದರೆ ಅನುಭವಿಸಿ ಇತರ ಜೀವರಾಶಿಗಳಿಗೂ ನೋವು ಕೊಡುವ ಆಚರಣೆಗಳನ್ನು ನಮ್ಮ ಅರಿವಿನ ಬೆಳಕಲ್ಲೇ ಬಿಟ್ಟುಬಿಡೋಣ. ಹಿರಿಯರು ಮಾಡಿದ್ದು ಎಂಬ ಕೆಟ್ಟ ಹಠ ಬೇಡ. ಅವರು ಮಾಡಿದ ಈಗಲೂ ಪ್ರಸ್ತುತವಾಗಿರುವ ಒಳ್ಳೆಯ ಆಚರಣೆಗಳನ್ನು ಸಂಭ್ರಮದಿಂದ ಮುಂದುವರಿಸೋಣ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ ಎಚ್. ಕೆ.
9844013068……