ಪ್ರೀತಿ ಎಂಬ ಮಾಯಾ ಜಿಂಕೆಯ ಹಿಂದೆ…….

ವಿಜಯ ದರ್ಪಣ ನ್ಯೂಸ್

ಪ್ರೀತಿ………..

ಪ್ರೀತಿ ಎಂಬ ಮಾಯಾ ಜಿಂಕೆಯ ಹಿಂದೆ……..

ಪ್ರೀತಿ ಎಂಬ ಭಾವನೆಗಳ ಆಳಕ್ಕೆ ಅರಿವಿಲ್ಲದೇ ಪ್ರವೇಶಿಸುವ ಯುವಕ ಯುವತಿಯರು ಮತ್ತು ಅದರ ಒಳ ಸುಳಿಗಳ ಹಿಡಿತದಲ್ಲಿ ಅನುಭವಿಸುವ ಯಾತನೆಗಳು……………

ಯಾವುದೋ ಸಂದರ್ಭ, ಸನ್ನಿವೇಶ, ಆಕಸ್ಮಿಕ ಅಥವಾ ಇನ್ನೇನೋ ಕಾರಣದಿಂದ ಪ್ರೇಮಿಗಳು ಪ್ರೀತಿಯ ಆಳಕ್ಕೆ ಇಳಿದು ಬಿಡುತ್ತಾರೆ. ಅದು ಎಷ್ಟು ಆಳವಾಗಿ ಇರುತ್ತದೆಯೆಂದರೆ ಎಷ್ಟೋ ಮುಗ್ಧ ಮನಸ್ಸುಗಳು ಅಲ್ಲಿಂದ ಹೊರ ಬರುವ ದಾರಿಯನ್ನೇ ಗುರುತಿಸಲು ವಿಫಲರಾಗುತ್ತಾರೆ.

ಒಂದು ವೇಳೆ ಪ್ರೀತಿಯ ಆಳದಲ್ಲಿ ಅವರಿಗೆ ಒಂದಷ್ಟು ಕಷ್ಟ ಬೇಸರ ಜಗಳ ಅಸಮಾಧಾನ ನಿರಾಸೆಯ ಅನುಭವವಾದರು ಪ್ರೀತಿ ಎಂಬ ಭಾವ ತೀವ್ರತೆ ಅದನ್ನೆಲ್ಲಾ ಹೇಗೋ ಸಹಿಸಿಕೊಳ್ಳುತ್ತದೆ. ಕೊನೆಗೆ ತೀರಾ ಹೊಂದಾಣಿಕೆ ಸಾಧ್ಯವಾಗದಿದ್ದರೆ ಮುಂದೆ ಬಿಡುಗಡೆ ಹೊಂದಬಹುದು ಅಥವಾ ಅದು ಕೋಪವಾಗಿ ಪರಿವರ್ತನೆ ಹೊಂದಿ ಬೇರೆ ಬೇರೆಯಾಗಬಹುದು. ಇದೊಂದು ಸಹಜ ಪ್ರಕ್ರಿಯೆ.

ಆದರೆ ಪ್ರೀತಿಯಲ್ಲಿ ಇದನ್ನು ಮೀರಿದ ಈ ಎರಡು ಘಟನೆಗಳು ಪ್ರೀತಿಸುವ ಜೀವಗಳನ್ನು ವಯಸ್ಸು ಲಿಂಗದ ಭೇದವಿಲ್ಲದೆ ತುಂಬಾ ನೋವು ಸಂಕಟ ಜಿಗುಪ್ಸೆ ಯಾತನೆ ಕೊನೆಗೆ ಪದಗಳಲ್ಲಿ – ಮಾತುಗಳಲ್ಲಿ ವಿವರಿಸಲಾಗದ ಮನಸ್ಥಿತಿಗೆ ತಲುಪಿಸಿಬಿಡುತ್ತದೆ. ನಮ್ಮ ಸುತ್ತಮುತ್ತಲಿನ ಯಾವ‌ ಸಂಬಂಧವೂ ಇದನ್ನು ‌ಗುರುತಿಸುವ ಅಥವಾ ಅರ್ಥಮಾಡಿಕೊಳ್ಳುವ ಹಂತವನ್ನು ‌ದಾಟಿ ಬಿಡುತ್ತದೆ. ಅಂತಹ ಸಮಯದಲ್ಲಿ ನಿಜವಾದ ನರಕ ಎಂಬುದು ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ.

ಒಂದು,
ಪರಿಸ್ಥಿತಿಯ ಒತ್ತಡದ ಕಾರಣದಿಂದಾಗಿ ಪ್ರೀತಿಸುವ ಎರಡು ಜೀವಗಳು ಅನಿವಾರ್ಯವಾಗಿ ಬೇರ್ಪಡಲೇ ಬೇಕಾದಾಗ…..

ಇನ್ನು ಈ ಜನ್ಮದಲ್ಲಿ ನಾವು ಪ್ರೇಮಿಗಳಾಗಿ ಇರುವುದು ಸಾಧ್ಯವೇ ಇಲ್ಲ ಮತ್ತು ಆ ಜಾಗದಲ್ಲಿ ನಮ್ಮ ಜೊತೆ ಇನ್ನೊಬ್ಬರು ಬರುತ್ತಾರೆ ಎಂಬುದೇ ಆ ಕ್ಷಣದಲ್ಲಿ ಮನಸ್ಸು ವಿಲವಿಲ ಒದ್ದಾಡುವಂತೆ ಮಾಡಿ ಬಿಡುತ್ತದೆ. ಅಬ್ಬಾ ಆ ಯಾತನೆ ಯಾವ ಶತ್ರುವಿಗೂ ಬೇಡ. ಒಳಗೊಳಗೆ ಒಳಗೊಳಗೆ ಮನಸ್ಸು ದಹಿಸಿ ಬಿಡುತ್ತದೆ.

ಇನ್ನೊಂದು,
ಗಾಢ ಪ್ರೀತಿಯಲ್ಲಿ ಇರುವಾಗ ಗಂಡು ಅಥವಾ ಹೆಣ್ಣು ವೈಯಕ್ತಿಕವಾಗಿ ಮೋಸ ಮಾಡಿ ಇನ್ನೊಬ್ಬರ ಜೊತೆ ಸ್ವತಃ ಸೇರುವುದು. ಇಲ್ಲಿ ಅಗಲಿಕೆಯ ವಿರಹ ಮಾತ್ರವಿರುವುದಿಲ್ಲ. ಮೋಸ ಮಾಡಿದ, ಮೋಸ ಹೋದ, ನಮ್ಮ ನಂಬಿಕೆಗೆ ದ್ರೋಹ ಬಗೆದ, ನಮ್ಮ ಸರ್ವಸ್ವವೂ ಆಗಿದ್ದ ಒಂದು ಜೀವ ಇನ್ನೊಬ್ಬರ ಜೊತೆಗೆ ಸೇರುವುದು ಮುಂತಾದ ಭಾವಗಳು ಒಟ್ಟಿಗೆ ಸೇರಿ ಮನಸ್ಸು – ದೇಹವನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ.

ಪ್ರತಿ ಕ್ಷಣವೂ ಅದೇ ನೆನಪಾಗಿ ದುಃಖ ಉಕ್ಕಿ ಉಕ್ಕಿ ಬರುತ್ತದೆ. ಸಾವಿನ ಭಯಕ್ಕಿಂತ ತೀವ್ರ ನೋವನ್ನು ಇದು ಕೊಡುತ್ತದೆ. ಎಷ್ಟೇ ವಿದ್ಯೆ ಬುದ್ದಿ ಶ್ರೀಮಂತಿಕೆ ಗೆಳೆತನ ಮಾರ್ಗದರ್ಶನ ಇದ್ದರು ಈ ವೈಯಕ್ತಿಕ ಹಿಂಸೆಯನ್ನು ಸಹಿಸುವುದು ಅಸಾಧ್ಯ.

ಹೌದು, ಕಾಲ ಎಲ್ಲವನ್ನೂ ಗುಣಪಡಿಸುತ್ತದೆ ಎಂಬುದೇನೋ ನಿಜ. ಆದರೆ ಆ ಕಾಲವನ್ನು ಸವೆಸುವುದು ಹೇಗೆ ?

ಹೊರಗಿನ ಜನ ಸಾಕಷ್ಟು ತಿಳಿವಳಿಕೆ ಸಮಾಧಾನ ಧೈರ್ಯ ಉತ್ಸಾಹದ ಮಾತುಗಳನ್ನು ಆಡಬಹುದು. ಆದರೆ ಅದು ಕೇವಲ ಸಮಯ ಕೊಲ್ಲುವ ಕ್ರಿಯೆ ಮಾತ್ರವಾಗಿರುತ್ತದೆ.

ತಾಯಿಯ ಕರುಳ ಬಳ್ಳಿಯ ಸಂಬಂಧ, ತಂದೆ ತಾಯಿ ಅಣ್ಣ ತಂಗಿ ಅಕ್ಕ ತಮ್ಮ ಅಜ್ಜ ಅಜ್ಜಿ ಮುಂತಾದ ದೀರ್ಘಕಾಲದ ರಕ್ತ ಸಂಬಂಧಗಳನ್ನು ಮೀರಿ ಕೇವಲ ಒಂದೋ ಎರಡೋ ವರ್ಷದ ಪ್ರೀತಿಗಾಗಿ, ರೈಲಿಗೆ ತಲೆ ಕೊಡಲು, ಕುತ್ತಿಗೆಗೆ ನೇಣು ಬಿಗಿದುಕೊಳ್ಳಲು, ವಿಷ ಕುಡಿಯಲು, ಬೆಂಕಿ ಹಚ್ಚಿಕೊಳ್ಳಲು, ಎತ್ತರದಿಂದ ಜಿಗಿಯಲು, ನೀರಿಗೆ ಹಾರಲು ಮನಸ್ಸನ್ನು ಪ್ರೀತಿ ಪ್ರೇರೇಪಿಸುತ್ತದೆ ಎಂದರೆ ಅದರ ತೀವ್ರತೆ ಎಷ್ಟಿರಬಹುದು.

ಈ ಪ್ರೀತಿ ಕಾಲದ ಪರಿವೆಯೇ ಇಲ್ಲದೆ ಅನಾದಿ ಕಾಲದಿಂದ ಈ ಕ್ಷಣದವರೆಗೂ ಅದೇ ಉತ್ಕಟತೆಯನ್ನು ಉಳಿಸಿಕೊಂಡಿದೆ.

ಪ್ರೀತಿಗಾಗಿ ಎಷ್ಟೋ ರಾಜ್ಯಗಳೂ ಉರುಳಿವೆ, ಹಾಗೆ ಪ್ರೀತಿಗಾಗಿ ಎಷ್ಟೋ ಅಧಿಕಾರ ತ್ಯಾಗಗಳೂ ಆಗಿವೆ.

ಒಮ್ಮೆ ಪ್ರೇಮಿಗಳಲ್ಲಿ ಪ್ರೀತಿಯ ಭಾವ ಮೊಳಕೆ ಒಡೆದು ಹೆಮ್ಮರವಾದರೆ ಮುಗಿಯುತು. ಯಾವ ಅಡ್ಡಿ ಆತಂಕಗಳೂ ಅವರನ್ನು ಬೇರ್ಪಡಿಸುವುದು ಸಾಧ್ಯವಿಲ್ಲ. ಅದಕ್ಕೆ ಅಡ್ಡಿಯಾದವರನ್ನು ಕೊಲ್ಲುತ್ತಾರೆ ಅಥವಾ ಸ್ವತಃ ತಾವೇ ಸಾವಿಗೆ ಶರಣಾಗುತ್ತಾರೆ.

ಪ್ರೀತಿಗೆ ಜಾತಿ ವಯಸ್ಸು ಲಿಂಗ ಭಾಷೆ ಪ್ರದೇಶಗಳ ಹಂಗು ಇರುವುದಿಲ್ಲ. ಅಷ್ಟೇ ಏಕೆ ನೈತಿಕತೆಯ ಮೂಗುದಾರವೂ ಇರುವುದಿಲ್ಲ.
( ಕಾಮ ಪ್ರೀತಿಯ ಒಂದು ಭಾಗವೇ ಹೊರತು ಕಾಮವೇ ಪ್ರಧಾನವಾದಾಗ ಅದನ್ನು ಪ್ರೀತಿ ಎಂದು ಪರಿಗಣಿಸಲು ಸಾಧ್ಯವಿಲ್ಲ. )
ನಾನು ಹೇಳುತ್ತಿರುವುದು ನಿಜ ಪ್ರೀತಿಯ ಬಗ್ಗೆ ಮಾತ್ರ.

ಪ್ರೀತಿಯ ಇನ್ನೊಂದು ಅತಿರೇಕವೆಂದರೆ, ಪ್ರೀತಿಗೆ ಯಾವುದೇ ಕಾರಣದಿಂದ ಧಕ್ಕೆಯಾದರೆ ಅದರ ರೂಪ ವೈರಾಗ್ಯ ಅಥವಾ ದ್ವೇಷದ ರೂಪ ತಾಳುತ್ತದೆ. ಅದರಲ್ಲೂ ಹದಿಹರೆಯದಲ್ಲಿ ಅದು ತೀವ್ರ ದ್ವೇಷಕ್ಕೆ ತಿರುಗುತ್ತದೆ. ನನಗೆ ಸಿಕ್ಕದ ಆ ಪ್ರೇಮಿ ಯಾರಿಗೂ ಸಿಗಬಾರದು ಎಂಬ ಭಾವನೆ ಬಲವಾಗಿ ಅದು ಬರ್ಬರ ಕೊಲೆ ಮಾಡಿಸುತ್ತದೆ. ಹೆಣ್ಣು ಗಂಡು ಇಬ್ಬರಲ್ಲೂ ಈ ದ್ವೇಷ ಸಮ ಪ್ರಮಾಣದಲ್ಲಿ ಇದ್ದರೂ ನಮ್ಮ ಸಾಮಾಜಿಕ ವ್ಯವಸ್ಥೆಯ ಕಾರಣಕ್ಕಾಗಿ ಯುವಕರೇ ಅತಿಹೆಚ್ಚು ನೇರ ಕೊಲೆಯಂತ ಕ್ರಮಕ್ಕೆ ಮುಂದಾಗುತ್ತಾರೆ.

ಪ್ರೀತಿ ಬದುಕಿಗೆ ಅಮೃತದಷ್ಟೇ ಮಹತ್ವ ಹೊಂದಿದೆ. ಹಾಗೆಯೇ ಅದು ಬಹಳಷ್ಟು ಸಲ ಅಫೀಮಿನ ಅಮಲಿನಂತೆ ನಮ್ಮಿಂದ ತಪ್ಪು ಮಾಡಿಸುತ್ತದೆ.

ಪ್ರೀತಿಯ ಮಡಿಲಿನಲ್ಲಿ ಭೂಮಿಯೇ ಸ್ವರ್ಗ, ವಿರಹದ ತಾಪದಲ್ಲಿ ಈ ನಿಂತ ನೆಲವೇ ನರಕ.

ಯಾವ ತತ್ವಜ್ಞಾನವೂ, ಯಾವ ವೇದಾಂತವೂ, ಯಾವ ಹಿತನುಡಿಗಳೂ ಪ್ರೀತಿಗೆ ಸರಿಸಾಟಿಯಲ್ಲ.

ನಮ್ಮ ದೇಹಕ್ಕಿಂತ ಪ್ರೀತಿಸಿದವರ ದೇಹ ಮನಸ್ಸುಗಳು ಮೇಲೆಯೇ ಹೆಚ್ಚಿನ ಅಭಿಮಾನ, ಮೋಹ, ನನ್ನದೆಂಬ ಸ್ವಾರ್ಥ ಮತ್ತು ನಿಯಂತ್ರಣ ಹೊಂದಲು ಪ್ರೀತಿ ತಹತಹಿಸುತ್ತದೆ. ಅದರ ಪರಿಣಾಮವೇ ಹಿಂಸೆ.

ಪ್ರೀತಿಯ ಆಳಕ್ಕೆ ಇಳಿದವರಿಗೆ ಮಾತ್ರ ಇದು ಅನ್ವಯಿಸುತ್ತದೆ. ಪ್ರೀತಿಯ ದಾರಿಯಲ್ಲಿ ಸ್ವಲ್ಪ ದೂರ ಸಾಗಿ ಅದರಿಂದ ವಿಮುಖರಾದವರಿಗೆ ಇದು ಅಷ್ಟಾಗಿ ಅರ್ಥವಾಗುವುದಿಲ್ಲ. ತಾಯಿ – ಮಗುವಿನ, ಅಣ್ಣ – ತಂಗಿಯ, ಅಕ್ಕ – ತಮ್ಮನ, ಗಂಡ – ಹೆಂಡತಿಯ ಪ್ರೀತಿಯನ್ನು ಇದಕ್ಕೆ ಹೋಲಿಸಲಾಗುವುದಿಲ್ಲ. ಏಕೆಂದರೆ ಇಲ್ಲಿ ಸ್ವಾರ್ಥ, ಅವಲಂಬನೆ, ಅವಕಾಶ, ಜವಾಬ್ದಾರಿ, ಸಾಮಾಜಿಕ ಕಟ್ಟಳೆ ಇರುತ್ತದೆ.

ಆದರೆ,
ಪ್ರೇಮದ ಪ್ರೀತಿಯ ಉತ್ಕಟತೆ..

ಪ್ರೀತಿ ನಿರಂತರತೆಯನ್ನು ಬೇಡುತ್ತದೆ.
ಪ್ರೀತಿ ಏರಿಕೆಯ ರೂಪದ ಸ್ಪಂದನೆಯನ್ನು ಬಯಸುತ್ತದೆ.
ಪ್ರೀತಿ ಮುಖವಾಡವನ್ನು ಬಯಲು ಮಾಡಿ ಸಹಜತೆಯನ್ನು ತೋರಿಸುತ್ತದೆ.

ಸಿಕ್ಕರೆ ಅಮೃತ,
ಸಿಗದಿದ್ದರೆ ವಿಷ,
ಯಶಸ್ವಿಯಾದರೆ ಸ್ವರ್ಗ,
ವಿಫಲವಾದರೆ ನರಕ….

ಹೇಳಿದಷ್ಟೂ ಇನ್ನೂ ಉದ್ದವಾಗುವ ಮುಗಿಯದ ಅಕ್ಷಯ ಪಾತ್ರೆ ಈ ಪ್ರೀತಿ‌……
***********************
ಅಂತಹ ನೋವಿನ ಪ್ರೇಮಿಯೊಬ್ಬರ ಹೃದಯದಲ್ಲಿ ಜ್ವಾಲಾಮುಖಿಯಂತೆ ಸಿಡಿಯುತ್ತಿದ್ದ ಭಾವನೆಗಳಿಗೆ ಅಕ್ಷರ ರೂಪ ನೀಡಿದಾಗ ಮೂಡಿದ……

ಹೃದಯದೊಳಗಿನ ಕಿಚ್ಚು
ಇನ್ನೂ ಉರಿಯುತ್ತಲೇ ಇದೆ.
ನೋವು ಪಶ್ಚಾತ್ತಾಪ ಅಸಹಾಯಕತೆ ಬೆರೆತ ಕಿಚ್ಚಿನ ಜ್ವಾಲೆ ದಿನಕಳೆದಂತೆ ಹೆಚ್ಚಾಗುತ್ತಲೇ ಇದೆ.

ಜ್ವಾಲಾಮುಖಿಯಂತೆ ಸಿಡಿದು ಅಗ್ನಿಪರ್ವತವೂ ಆಗುತ್ತಿಲ್ಲ.

ಹಿಮಪಾತಕ್ಕೆ ಸಿಲುಕಿ ತಣ್ಣಗಾಗುತ್ತಲೂ ಇಲ್ಲ.

ಕೆಲವೊಮ್ಮೆ ತನ್ನಷ್ಟಕ್ಕೆ ತಾನೇ ತನ್ನಿಷ್ಟದಂತೆ ಉರಿಯುತ್ತದೆ.

ಆಗಾಗ ಬಿರುಗಾಳಿ ಅಬ್ಬರಕ್ಕೆ ಧಗಧಗನೆ ಧಹಿಸಿ ಸುತ್ತಲೂ ಹರಡುತ್ತದೆ ಕಿಚ್ಚು.

ಆರಿಸುವವರೂ ಯಾರಿಲ್ಲ,
ಆಲಿಸುವವರೂ ಯಾರಿಲ್ಲ.
ಹಾರಿಸುವವರೇ ಎಲ್ಲರೂ.

ಆ, ಆಗೊಮ್ಮೆ ಆ ದಿನಗಳೂ ಇದ್ದವು.

ಶೀತಗಾಳಿಯ ನಡುವೆ
ಮಳೆಯ ತುಂತುರು ಹನಿಗಳ ಮಧ್ಯೆ
ಕಿಚ್ಚಿಗೆ ಜಾಗವೂ ಇಲ್ಲದ,
ಅವಕಾಶವೂ ಇಲ್ಲದ ಕಾಲದಲ್ಲಿ ಪ್ರಶಾಂತತೆ ಮನೆ ಮಾಡಿತ್ತು.
ಸುತ್ತಲೂ ಸಂಭ್ರಮವೋ ಸಂಭ್ರಮ.

ಸ್ವರ್ಗಕ್ಕೇ ಕಿಚ್ಚು ಹಚ್ಚಿದ ದಿನಗಳವು.

ಎಲ್ಲಿಂದಲೋ ತೂರಿ ಬಂದವು,
ಅಜ್ಞಾನ ಅಹಂಕಾರ ದುರಾಸೆ ಅಹಂಗಳೆಂಬ ಕಿಡಿಗಳು,

ಹತ್ತಿಸಿಯೇ ಬಿಟ್ಟವು ಕಿಚ್ಚು.
ಕೆಲ ಸಮಯದಲ್ಲೇ ಎಲ್ಲವೂ ಚೆಲ್ಲಾಪಿಲ್ಲಿ.

ಅಂದು ಉರಿ ಹತ್ತಿದ ಕಿಚ್ಚು ಇನ್ನೂ ಉರಿಯುತ್ತಲೇ ಇದೆ.

ಇನ್ನೆಷ್ಟು ದಿನವೋ,

ಉರಿದುರಿದು ಸ್ಪೋಟಿಸುತ್ತದೋ
ಅಥವಾ
ಉರುದುರಿದು ತಾನೇ ನಿರ್ನಾಮವಾಗುತ್ತದೋ
ಅಥವಾ
ಉರಿದುರಿದು ಆರಿ ಮತ್ತೆ ತಣ್ಣನೆಯ ಹಿಮಪಾತದಲ್ಲಿ ಲೀನವಾಗುತ್ತದೋ ಬಲ್ಲವರಾರು.

ಕಾಯುತ್ತಲೇ ಇದ್ದೇನೆ ಕಿಚ್ಚು ಆರುವುದನ್ನು.
ಇನ್ನೂ ಕಾಯುತ್ತಲೇ ಇರುತ್ತೇನೆ.
ಸೃಷ್ಟಿ ನನಗಾಗಿ ಕಾಲ ಮೀಸಲಿಡುವ ತನಕ……

ಕಾಲದ ನಿರ್ಣಯಕ್ಕೆ ಕಾಯುವುದು ಮತ್ತು ಪ್ರಕೃತಿಗೆ ನಿಷ್ಠೆ ತೋರುವುದು ಮಾತ್ರ ಸದ್ಯ ನನಗೆ ಉಳಿದಿರುವ ಆಯ್ಕೆಗಳು……..

ಅದರೊಂದಿಗೆ ನನ್ನ ಬದುಕಿನ ತಿರುವುಗಳ ಜೊತೆಯಾಗಿ ಜೀವಿಸುತ್ತಿದ್ದೇನೆ ಮತ್ತು ಜೀವಿಸುತ್ತಲೇ ಇರುತ್ತೇನೆ…….
*************************
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.


ವಿವೇಕಾನಂದ. ಎಚ್.ಕೆ.
9844013068…………