ಶಿವರಾತ್ರಿ ಸಂದರ್ಭದ ಶ್ರೀಶೈಲ ಪಾದಯಾತ್ರೆ ಮತ್ತು ಜಗ್ಗಿ ವಾಸುದೇವ್ ಅವರ ಶಿವೋತ್ಸವ ಹಾಗು ನೈಜ ಭಕ್ತಿಯ ಮೂಲ ಉದ್ದೇಶ ಹಾಗೂ ನಮ್ಮ ಕರ್ತವ್ಯ ಹೇಗಿದ್ದರೆ ಚೆಂದ…….
ವಿಜಯ ದರ್ಪಣ ನ್ಯೂಸ್
ಶಿವರಾತ್ರಿ ಸಂದರ್ಭದ ಶ್ರೀಶೈಲ ಪಾದಯಾತ್ರೆ ಮತ್ತು ಜಗ್ಗಿ ವಾಸುದೇವ್ ಅವರ ಶಿವೋತ್ಸವ ಹಾಗು ನೈಜ ಭಕ್ತಿಯ ಮೂಲ ಉದ್ದೇಶ ಹಾಗೂ ನಮ್ಮ ಕರ್ತವ್ಯ ಹೇಗಿದ್ದರೆ ಚೆಂದ…….
ನಮ್ಮ ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆಯ ಗೆಳೆಯರ ಪ್ರೀತಿಯ ಒತ್ತಾಯಪೂರ್ವಕ ಆಹ್ವಾನದ ಮೇರೆಗೆ ಶ್ರೀಶೈಲದ ಸುಮಾರು 60 ಕಿಲೋಮೀಟರ್ ದೂರದ ಶಿವರಾತ್ರಿ ಹಬ್ಬದ ನಲ್ಲಮಲ್ಲ ಕಾಡಿನ ಪಾದಯಾತ್ರೆ ಒಪ್ಪಿಕೊಂಡು ಹೋಗಿದ್ದೆನು.
ಈ ದಟ್ಟ ಕಾಡಿನ ಪ್ರಯಾಣದಲ್ಲಿ ನನ್ನ ಮೊಬೈಲ್ ನೆಟ್ವರ್ಕ್ ಸಿಗುತ್ತಿರಲಿಲ್ಲ. ಜೊತೆಗೆ ನಿರಂತರ ಏರಿಳಿತದ ಪ್ರಯಾಣ ನನ್ನ ಬೆಳಗಿನ ಸಮಯದ ಬರವಣಿಗೆ ಮಾಡಲು ಎರಡು ದಿನದಿಂದ ಸಾಧ್ಯವಾಗಲಿಲ್ಲ. ಅದಕ್ಕಾಗಿ ಕ್ಷಮೆ ಇರಲಿ……
ಬೆಂಗಳೂರಿನಿಂದ ಬೆಳಗ್ಗೆ ವಾಹನದಲ್ಲಿ ಹೊರಟು ಸಂಜೆ 7 ಗಂಟೆಗೆ ಆಂಧ್ರಪ್ರದೇಶದ ನಲ್ಲ ಮಲ್ಲ ಅರಣ್ಯದ ಹೆಬ್ಬಾಗಿಲು ಆತ್ಮಕೂರು ತಲುಪಿದೆವು. ಅಲ್ಲಿಂದ ಪ್ರಾರಂಭವಾದ ಪಾದಯಾತ್ರೆ ಕೊನೆಯ ಹಂತ ತಲುಪಿ ಮುಖ್ಯ ದೇವಸ್ಥಾನ ತಲುಪುವವರಿಗೆ ಸುಮಾರು ಬೆಳಗ್ಗೆ 11 ಗಂಟೆ ಆಗಿತ್ತು. ದಟ್ಟ ಕಾಡಿನ ನಡುವೆ ಸಾಕಷ್ಟು ಬೆಟ್ಟಗುಡ್ಡಗಳ ಏರಿಳಿತಗಳ ನಡುವೆ ಮತ್ತೆ ಈ ಬೇಸಿಗೆಯಲ್ಲಿ ಮತ್ತು ಆ ರಾತ್ರಿಯ ಕಾಡಿನ ಸ್ವಲ್ಪ ತಂಪು ಹವೆಯ ವಾತಾವರಣದಲ್ಲಿ ಜೊತೆಗೆ ಬೆಳಗಿನ 40 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ನಿರಂತರ 16 ಗಂಟೆಗಳ ಈ ಯಾತ್ರೆ ಒಂದು ದೊಡ್ಡ ಸವಾಲಿನಿಂದ ಕೂಡಿರುತ್ತದೆ. ಅದು ದೇಹ ಮತ್ತು ಮನಸ್ಸಿನ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಸ್ವಲ್ಪ ಪೂರ್ವ ತಯಾರಿಯು ಬೇಕಾಗುತ್ತದೆ……
ಇಲ್ಲಿ ಮುಖ್ಯವಾಗಿ ಗಮನಿಸಿದ್ದು ಜನಸಂಖ್ಯೆ ಮತ್ತು ಆ ಜನರ ಭಕ್ತಿಯ ಪರಾಕಾಷ್ಠೆ. ಸುಮಾರು ಒಂದು ತಿಂಗಳಿನಿಂದ ಸತತವಾಗಿ ಮತ್ತು ನಿರಂತರವಾಗಿ ನೀರಿನಂತೆ ಹರಿಯುವ ಜನಸ್ತೋಮ. ಹರಹರ ಮಹದೇವ್, ಓಂ ನಮಃ ಶಿವಾಯ ಎಂಬ ಘೋಷಣೆಗಳೊಂದಿಗೆ ಚಿಕ್ಕ ಮಕ್ಕಳಿಂದ ಹಿರಿಯರವರೆಗೆ ಗಂಡು ಹೆಣ್ಣು ಎಲ್ಲರೂ ಬಹುತೇಕ ಬರಿಗಾಲಿನಲ್ಲಿ ರಾತ್ರಿ ಪ್ರಯಾಣ ಆಶ್ಚರ್ಯವನ್ನುಂಟು ಮಾಡುತ್ತದೆ…..…
ರಾತ್ರಿ ಪ್ರಯಾಣ ಪ್ರಾರಂಭಿಸಿದಾಗ ಆ ಕತ್ತಲಿನ ಲೈಟ್ ಟಾರ್ಚ್ ನಲ್ಲಿ ಜನಪ್ರವಾಹವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಬಹುತೇಕರು ಮಧ್ಯಮ, ಕೆಳಮಧ್ಯಮ ಮತ್ತು ಬಡವರೇ ಹೆಚ್ಚಾಗಿದ್ದರು. ದಷ್ಟಪುಷ್ಟ ದೇಹದ ದಪ್ಪಗಿನ ಶ್ರೀಮಂತ ಮುಖ ಚಹರೆಯ ಜನರು ಕಾಣಲೇ ಇಲ್ಲ. ಗ್ರಾಮೀಣ ಭಾಗದ ಜನರೇ ತುಂಬಿತುಳುಕುತ್ತಿದ್ದರು. ಅಲ್ಲಿನ ಒಂದು ಸ್ಥಳದಲ್ಲಿ ಮಧ್ಯರಾತ್ರಿಯ ಸಮಯದಲ್ಲಿ ಹತ್ತಿರ ಹತ್ತಿರ ಲಕ್ಷ ಸಂಖ್ಯೆಯ ಜನ ಪ್ಲಾಸ್ಟಿಕ್ ಚೀಲಗಳನ್ನು ಹೊದ್ದು ಮಲಗಿದ್ದರು. ಆ ದೃಶ್ಯವಂತೂ ಮರೆಯಲು ಸಾಧ್ಯವಿಲ್ಲ. ಮಹಾಭಾರತ ಯುದ್ಧದ ಕೊನೆಯ ದಿನಗಳಲ್ಲಿ ಎಷ್ಟೋ ಅಕ್ಷೋಹಿಣಿ ಸೈನಿಕರು ಹತರಾಗಿ ಮಲಗಿರುವ ದೃಶ್ಯದಂತೆ ಲಕ್ಷಾಂತರ ಜನ ಪ್ಲಾಸ್ಟಿಕ್ ಚೀಲಗಳನ್ನು ಹೊತ್ತು ಮಲಗಿದ್ದರು. ಅದಂತೂ ನಾನು ನೋಡಿದ ಅತ್ಯುತ್ತಮ ದೃಶ್ಯಗಳಲ್ಲಿ ಒಂದು. ಹಾಗೆಯೇ ಆ ಜನರ ಪ್ರವಾಹ ಎಷ್ಟೋ ಅಕ್ಷೋಹಿಣಿ ಸೈನ್ಯದಂತೆ ಕಾಣುತ್ತಿತ್ತು. ನಿಜಕ್ಕೂ ಸಮಾಜ ಶಾಸ್ತ್ರೀಯ ದೃಷ್ಟಿಯಿಂದ ಮತ್ತು ಧಾರ್ಮಿಕ ನಂಬಿಕೆಯ ಹಿನ್ನೆಲೆಯಲ್ಲಿ ಈ ಪ್ರಯಾಣ ತುಂಬಾ ಅರ್ಥಪೂರ್ಣವಾಗಿತ್ತು. ಉತ್ತರ ಭಾರತದ ಕುಂಭಮೇಳದ ನಂತರ ಬಹುಶಃ ಇದೇ ಅತಿ ಹೆಚ್ಚು ಜನ ಪಾಲ್ಗೊಳ್ಳುವ ಉತ್ಸವ ಇರಬೇಕು…….
ಈಗಾಗಲೇ ರಾಜ್ಯಾದ್ಯಂತ 385 ದಿನ 11500ಕ್ಕೂ ಹೆಚ್ಚು ಕಿಲೋ ಮೀಟರ್ ಪಾದಯಾತ್ರೆಯಲ್ಲಿ ಕ್ರಮಿಸಿರುವ ನನಗೆ ವೈಯಕ್ತಿಕವಾಗಿ ಈ ಯಾತ್ರೆ ಅಂತಹ ದೊಡ್ಡ ಸವಾಲು ಆಗಿರಲಿಲ್ಲ. ಆದರೆ ಆ ನಲ್ಲಮಲ್ಲ ಅರಣ್ಯದ ಒಳಗಿನ ಜನಸ್ತೋಮದ ಭವ್ಯತೆ ಕಂಡು ಮೂಕ ವಿಸ್ಮಿತನಾದೆನು. ಅದಕ್ಕಿಂತ ಹೆಚ್ಚಾಗಿ ಮನಸ್ಸಿನ ಆಳದಲ್ಲಿ ಜನರ ಮುಗ್ಧ ಭಕ್ತಿಯ ಬಗ್ಗೆ ಮರುಕ ಉಂಟಾಯಿತು. ಈ ಎಲ್ಲರೂ ಅಲ್ಲಿನ ಮಲ್ಲಿಕಾರ್ಜುನ ಸ್ವಾಮಿಯನ್ನು ನಂಬಿ ತಮ್ಮ ಕಷ್ಟಕಾರ್ಪಣ್ಯಗಳು, ಇಷ್ಟಾರ್ಥ ಸಿದ್ಧಿಗಳಿಗಾಗಿ ಬಹುತೇಕರು ಈ ಯಾತ್ರೆಯನ್ನು ಕೈಗೊಂಡಿದ್ದರು. ಶಿವ ಸ್ವರೂಪಿ ಈ ಜನರ ಕಷ್ಟಗಳನ್ನು ಕೇಳಿಸಿಕೊಂಡು, ಗಮನಿಸಿ, ಪರಿಶೀಲಿಸಿ ಒಂದಷ್ಟು ಅವರವರ ಯೋಗ್ಯತೆಗೆ ತಕ್ಕಂತೆ ಪರಿಹಾರ ಒದಗಿಸಲು ಸಾಧ್ಯವಾದರೆ ಎಷ್ಟು ಚೆನ್ನಾಗಿರುತ್ತೆ ಎಂದು ಮನಸ್ಸಿಗೆ ಆ ಕ್ಷಣದಲ್ಲಿ ಅನಿಸಿತು. ಹಾಗೆಯೇ ಅದೇ ಸಮಯದಲ್ಲಿ ಈ ಜನರ ಭಕ್ತಿ, ದೇವರ ಮೇಲಿನ ನಂಬಿಕೆ, ಧಾರ್ಮಿಕ ಆಚರಣೆ ಅವರನ್ನು ಉತ್ತಮ ನಾಗರಿಕ ಮನುಷ್ಯರನ್ನಾಗಿ ಪರಿವರ್ತಿಸಿ ಒಂದಷ್ಟು ತಮ್ಮ ನಡವಳಿಕೆಗಳಲ್ಲಿ, ತಮ್ಮ ಕರ್ತವ್ಯಗಳಲ್ಲಿ, ತಾವು ನಿರ್ವಹಿಸುವ ಹುದ್ದೆಗಳಲ್ಲಿ, ಸಂಬಂಧಗಳಲ್ಲಿ ಸ್ವಲ್ಪವಾದರೂ ಉತ್ತಮ ನಡವಳಿಕೆ ತೋರಿಸಲು ಸಾಧ್ಯವಾಗಿದ್ದರೆ ಈ ದೇಶ ಅದೆಷ್ಟು ಉತ್ತಮ ಜೀವನ ಮಟ್ಟವನ್ನು, ನೆಮ್ಮದಿಯ ಬದುಕನ್ನು ಕಾಣುತ್ತಿತ್ತು ಎನಿಸಿತು. ಆದರೆ ವಾಸ್ತವದಲ್ಲಿ ಭಕ್ತಿ ಒಂದು ಸ್ವಾರ್ಥದ ಅಥವಾ ಲಾಭದ ಅಥವಾ ಪ್ರದರ್ಶನದ ಅಥವಾ ನಂಬಿಕೆಯ ಅಥವಾ ಮೂಢ ಕರ್ತವ್ಯ ಪ್ರಜ್ಞೆಯ ಅಥವಾ ವಸ್ತುರೂಪದ ಒಂದು ಭಾವ ಮಾತ್ರವಾಗಿ ಉಳಿದಿದೆ. ಅದನ್ನು ಮೀರಿ ಅದು ನಮ್ಮ ಆಂತರ್ಯದ ಒಳ್ಳೆಯತನವಾಗಿ ಅಥವಾ ಭಾವವಾಗಿ ಸ್ಥಿರವಾದರೆ ನಮ್ಮ ವೈಯಕ್ತಿಕ ಮತ್ತು ಸಮಾಜದ ಸ್ವಾಸ್ಥ್ಯ ಎಷ್ಟೊಂದು ಆರೋಗ್ಯವಾಗಿರುತ್ತದೆ ಅಲ್ಲವೇ……
ದೇವರು ನನಗೇನು ಕೊಡುತ್ತಾನೆ, ಕೊಡುವುದಾದರೆ ಕೊಡಲಿ, ಆ ಎಲ್ಲವನ್ನು ಆತನೇ ನಿರ್ಧರಿಸುವುದಾದರೆ ಎಷ್ಟು ಚೆನ್ನ. ಆದರೆ ನಾನು ಆ ದೇವರಿಗೆ ಏನನ್ನು ಕೊಡಬೇಕು, ದೇವರನ್ನು ಹೇಗೆ ತೃಪ್ತಿಪಡಿಸಬೇಕು ಎಂದು ಆ ನಂಬಿಕೆಯ ಆಧಾರದ ಮೇಲೆಯೇ ಯೋಚಿಸಿ ನಾನು ದೇವರನ್ನು ಹೇಗೆ ಮರುಳು ಮಾಡಲಿ ಎಂದು ಮುಖವಾಡ ಹಾಕಬೇಕಿಲ್ಲ. ನನ್ನ ಅರಿವಿನ ಅನುಭವದ, ಸಂಪ್ರದಾಯದ, ಆಧಾರದ ಮೇಲೆ ಇನ್ನೊಬ್ಬರಿಗೆ ಮೋಸ ಮಾಡದೆ, ವಂಚಿಸದೆ, ದುರಾಸೆ ಪಡದೆ ಒಳ್ಳೆಯವನಾಗಿ ಸಮಾಜ ಜೀವಿಯಾಗಿ ಬದುಕುವುದೇ ಆ ದೇವರಿಗೆ ನಾನು ಕೊಡಬಹುದಾದ ಬಹುದೊಡ್ಡ ಕಾಣಿಕೆ, ಅದನ್ನು ಪಾಲಿಸುತ್ತೇನೆ ಹೊರತು ಈ ಡಂಬಾಚಾರದ ಆಚರಣೆಗಳಲ್ಲ, ಆ ದೇವರು ನಿಜಕ್ಕೂ ಸರ್ವಾಂತರ್ಯಾಮಿ, ಸರ್ವಶಕ್ತನೆ ಆಗಿದ್ದರೆ ಹೇಗಿದ್ದರೂ ನನ್ನನ್ನು ವೈಯಕ್ತಿಕವಾಗಿ ಗಮನಿಸಿರುತ್ತಾನೆ. ಆದ್ದರಿಂದ ನಾನು ವಿಶೇಷವಾಗಿ ದೇವರಿಗೆ ಯಾವುದೇ ವೈಯಕ್ತಿಕ ಕೋರಿಕೆಯನ್ನು ಸಲ್ಲಿಸಬೇಕಾಗಿಲ್ಲ ಎಂಬ ಪ್ರಜ್ಞೆ ಜಾಗೃತವಾದರೆ ಎಷ್ಟೊಂದು ಉತ್ತಮ ನಡುವಳಿಕೆ ಅಲ್ಲವೇ……
ಹಾಗೆಯೇ ಇದೇ ಶಿವರಾತ್ರಿಯ ದಿನದಂದು ಆ ರಾತ್ರಿಯ ಜಾಗರಣೆಯ ಸಮಯದಲ್ಲಿ ರಾಜ್ಯದಲ್ಲಿ ಮತ್ತು ದೇಶದಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿರುವ ಕಾರ್ಪೊರೇಷನ್ ಶೈಲಿಯ ಶ್ರೀಮಂತ ಆಧ್ಯಾತ್ಮಿಕ ಚಿಂತಕ ಸದ್ಗುರು ಜಗ್ಗಿ ವಾಸುದೇವ್ ಲಕ್ಷಾಂತರ ಜನರ ನಡುವೆ ಶಿವೋತ್ಸವ ಮತ್ತು ಶಿವನೃತ್ಯ ಪ್ರದರ್ಶನವನ್ನು ನೀಡುತ್ತಾರೆ. ಅದಕ್ಕಾಗಿ ಅವರು ಬೇರೆ ಬೇರೆ ದರ್ಜೆಯ ಹಣಕಾಸಿನ ಟಿಕೆಟ್ ಅನ್ನು ಸಹ ಇಟ್ಟಿದ್ದಾರೆ. ಆಧ್ಯಾತ್ಮಿಕ ವ್ಯಾಪಾರವಲ್ಲ. ಅದನ್ನೆಲ್ಲ ಹೊರತುಪಡಿಸಿ ಯೋಚಿಸಿದರೆ ಅಷ್ಟೊಂದು ಲಕ್ಷ ಲಕ್ಷ ಜನ ಆ ಕಾರ್ಯಕ್ರಮವನ್ನು ವೀಕ್ಷಿಸಿ ಭಕ್ತಿಯ ಭಾವಪರವಶದಲ್ಲಿ ಮುಳುಗುತ್ತಾರೆ. ಅದು ಅವರ ಮನಸ್ಸಿಗೆ ಸ್ವಲ್ಪ ಶಾಂತಿಯನ್ನು ನೀಡಬಹುದು. ಆದರೆ ಅಲ್ಲಿ ಭಾಗವಹಿಸಿದ ಆ ಜನರಲ್ಲಿ ನಿಜಕ್ಕೂ ಒಂದಷ್ಟು ಜನರು ಒಳ್ಳೆಯ ಸುಧಾರಣೆಯಾಗಿ, ಅದು ಸಾಮಾಜಿಕ ನಡವಳಿಕೆಯಲ್ಲಿ ಆಚರಣೆಗೆ ಬಂದು ಸಮಾಜ ಇನ್ನೊಂದಿಷ್ಟು ನಾಗರಿಕ ಮತ್ತು ಸಹನೀಯ ಆಗುವುದಾದರೆ ಎಷ್ಟು ಚೆನ್ನ ಅಲ್ಲವೇ……
ಭಕ್ತಿ ಎಂಬುದು ತಿಳುವಳಿಕೆಯಲ್ಲ ಅದು ನಮ್ಮ ನಡವಳಿಕೆ, ಅದನ್ನು ಉತ್ತಮಪಡಿಸಿಕೊಳ್ಳಬೇಕು ಎಂಬ ಅರಿವು ಈ ಶಿವರಾತ್ರಿಯ ಕಾರ್ಯಕ್ರಮಗಳು ನೀಡಲು ಸಾಧ್ಯವಾದರೆ ಎಷ್ಟೊಂದು ಸರಳ, ಆಶ್ಚರ್ಯ ಹಾಗೂ ಅದ್ಭುತ ಬದಲಾವಣೆ ಸಾಧ್ಯವಾಗುತ್ತದೆ. ಶ್ರೀಶೈಲ ಪಾದಯಾತ್ರೆ ಅಥವಾ ಸದ್ಗುರುವಿನ ಶಿವೋತ್ಸವ ಕಾರ್ಯಕ್ರಮಗಳಲ್ಲಿ ಸೇರುವ ಜನಸಂಖ್ಯೆಯನ್ನು ನೋಡಿ ಆ ಜನಸಂಖ್ಯೆ ಪರಿವರ್ತನಾ ಹಾದಿ ತುಳಿಯುವುದಾದರೆ ಶಿವರಾತ್ರಿಯ ಶಿವಭಕ್ತಿ, ಶಿವಜಾಗರಣೆಗೆ ಒಂದು ಅರ್ಥವಿರುತ್ತದೆ. ಅದನ್ನು ಮಾಡದೆ ಕೇವಲ ಆತ್ಮ ವಂಚನೆ, ಆತ್ಮ ದ್ರೋಹ, ಸ್ವಾರ್ಥ ಇವುಗಳೇ ಮುಖವಾಡಗಳಾದರೆ ಶಿವರಾತ್ರಿ ಅಷ್ಟೇ ಅಲ್ಲ ಯಾವ ಹಬ್ಬಗಳಿಗೂ ಅರ್ಥವೇ ಇರುವುದಿಲ್ಲ. ಈ ಸಮಾಜ ಜಾತಿ ಮುಕ್ತವಾಗಿ, ಭ್ರಷ್ಟಾಚಾರ ರಹಿತವಾಗಿ, ಹಿಂಸಾಮುಕ್ತವಾಗಿ ಒಂದಷ್ಟು ಸುಧಾರಣೆ ಆಗುವುದು ಸಾಧ್ಯವಾದರೆ ಮಾತ್ರ ಈ ಭಕ್ತಿ ಈ ದೇವರು ಈ ಧರ್ಮಗಳಿಗೆ ಒಂದು ಅರ್ಥ. ಇಲ್ಲದಿದ್ದರೆ ಎಲ್ಲವೂ ವ್ಯರ್ಥ……
ಧನ್ಯವಾದಗಳು….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068……..