ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ವಿವಿಧ ರಾಜಕೀಯ ಚಟುವಟಿಕೆಗಳಿಗೆ ಅನುಮತಿ ಕಡ್ಡಾಯ: ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ

ವಿಜಯ ದರ್ಪಣ ನ್ಯೂಸ್

ಲೋಕಸಭಾ ಸಾರ್ವತ್ರಿಕ ಚುನಾವಣೆ-2024

27-ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ

ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ವಿವಿಧ ರಾಜಕೀಯ ಚಟುವಟಿಕೆಗಳಿಗೆ ಅನುಮತಿ ಕಡ್ಡಾಯ: ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ

 

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾರ್ಚ್ 25 :- ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಲುವಾಗಿ ಏಪ್ರಿಲ್ 26 ರಂದು ನಡೆಯಲಿರುವ ಮತದಾನದ ಅಂಗವಾಗಿ ಭಾರತ ಚುನಾವಣಾ ಆಯೋಗವು ಪಾರದರ್ಶಕವಾಗಿ ಚುನಾವಣೆ ನಡೆಸಲು ಈ ಕೆಳಕಂಡ ಅಂತರ್ಜಾಲ ತಾಣ(Website)ನ್ನು ಅಳವಡಿಸಿದ್ದು, ಎಲ್ಲಾ ರಾಜಕೀಯ ಪಕ್ಷದವರು ಹಾಗೂ ಅಭ್ಯರ್ಥಿಗಳು ಮತ್ತು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ.

ಸುವಿಧ

ಈ ಅಂತರ್ಜಾಲ ತಾಣ(Website)ನಲ್ಲಿ ರಾಜಕೀಯ ಪಕ್ಷದವರು ಚುನಾವಣೆಯಲ್ಲಿ ತಮ್ಮ ಪಕ್ಷದ ವತಿಯಿಂದ ಚುನಾವಣಾ ಪ್ರಚಾರಕ್ಕಾಗಿ ಹಾಗೂ ವಾಹನಗಳಿಗೆ ವಿವಿಧ ರೀತಿಯ ಅನುಮತಿಗಳನ್ನು ಸುಲಭವಾಗಿ ಹಾಗೂ ಪ್ರಯಾಸವಿಲ್ಲದೇ ಪಡೆಯಲು ನಿರ್ಮಿಸಲಾಗಿರುತ್ತದೆ. ಈ ಅಂತರ್ಜಾಲ ತಾಣ(Website)ವನ್ನು www.ceokarnataka.kar.nic.in ಹಾಗೂ http//164.100.128.75/suvidha_kt ಭೇಟಿ ನೀಡಿ ಅನುಮತಿಗಾಗಿ ಅರ್ಜಿ ಸಲ್ಲಿಸಬಹುದು.

ಪಾಂಪ್ಲೇಟ್ ಪ್ರತಿ ನೀಡುವುದು ಕಡ್ಡಾಯ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುದ್ರಣಾಲಯಗಳ ಮಾಲೀಕರಿಗೆ ಈ ಮೂಲಕ ತಿಳಿಯಪಡಿಸುವುದೆನೆಂದರೆ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧಿಸಿದಂತೆ ಯಾವುದೇ ರಾಜಕೀಯ ಪಕ್ಷಗಳು ಜಾಹಿರಾತಿಗಾಗಿ ಮುದ್ರಿಸುವ ಹ್ಯಾಂಡ್ ಬಿಲ್ಸ್ ಮತ್ತು ಪಾಂಪ್ಲೆಟ್ಸ್ ಮುದ್ರಿಸುವಾಗ ಕಡ್ಡಾಯವಾಗಿ ಪ್ರಿಂಟಿಂಗ್ ಪ್ರೆಸ್‌ ಹೆಸರು ಮತ್ತು ಪ್ರತಿಗಳ ಸಂಖ್ಯೆಯನ್ನು ನಮೂದಿಸುವುದು ಹಾಗೂ ಕಡ್ಡಾಯವಾಗಿ ಮುದ್ರಿಸಲಾದ ಚುನಾವಣಾ ಸಾಮಾಗ್ರಿಯ ಒಂದು ಪ್ರತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಂದ ನೇಮಕ ಮಾಡಲಾಗಿರುವ (MCMC) ಎಂ.ಸಿ.ಎಂ.ಸಿ ಅಧಿಕಾರಿಗಳ ತಂಡಕ್ಕೆ ಆಯಾ ದಿನದಂದೇ ನೀಡಬೇಕು.

ಚುನಾವಣಾ ಪ್ರಚಾರಕ್ಕಾಗಿ ಎಸ್.ಎಂ.ಎಸ್ ಕಳುಹಿಸಲು ಪೂರ್ವಾನುಮತಿ ಕಡ್ಡಾಯ

ಯಾವುದೇ ರಾಜಕೀಯ ಪಕ್ಷದಿಂದ ಚುನಾವಣಾ ಪ್ರಚಾರಕ್ಕಾಗಿ ಮೊಬೈಲ್ ಸರ್ವಿಸ್ ಮೂಲಕ ಕಳುಹಿಸುವ ಎಲ್ಲಾ ತರಹದ ಬಲ್ಕ್ ಎಸ್‌ಎಂಎಸ್ ಗಳ ವಿಷಯವನ್ನು ಸಂಬಂಧಿಸಿದ ಜಿಲ್ಲಾ ಮಟ್ಟದ ಎಂ.ಸಿ.ಎಂ.ಸಿ ತಂಡದಿಂದ ಪರಿಶೀಲನೆಯಾಗಿ ಜಿಲ್ಲಾ ಚುನಾವಣಾಧಿಕಾರಿಗಳ ಪೂರ್ವಾನುಮೋದನೆ ಪಡೆದು, ನಂತರದಲ್ಲಿ ಮೊಬೈಲ್ ಸರ್ವಿಸ್ ಮೂಲಕ ಉದ್ದೇಶಿತ/ನಿಗದಿತ ಚುನಾವಣಾ ಪ್ರಚಾರ ಕೈಗೊಳ್ಳಬೇಕು. ತಪ್ಪಿದಲ್ಲಿ ಚುನಾವಣಾ ನಿಯಮಗಳಡಿ ನಿಯಮಾನುಸಾರ ಕ್ರಮ ವಹಿಸಲಾಗುವುದು.

ಕಂಟ್ರೋಲ್ ರೂಂ ಸ್ಥಾಪನೆ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧಿಸಿದಂತೆ ಜಿಲ್ಲಾ ಕಂಟ್ರೋಲ್ ರೂಮ್ ವ್ಯವಸ್ಥೆಯನ್ನು ಪ್ರಾರಂಭಿಸಿದ್ದು, ಜಿಲ್ಲೆಯಲ್ಲಿನ ಯಾವುದೇ ರೀತಿಯ ನಗದು ಹಣ ಹಂಚಿಕೆ, ಬೆದರಿಕೆ ಮತ್ತು ಇತ್ಯಾದಿ ನೀತಿ ಸಂಹಿತೆ ವಿಚಾರದಲ್ಲಿ ಉಲ್ಲಂಘನೆಯನ್ನು ಕಂಡುಬಂದಲ್ಲಿ ತಕ್ಷಣವೇ ಟೋಲ್ ಫ್ರೀ ನಂಬರ್ 080-29902025, ಗೆ ದೂರುಗಳನ್ನು ನೀಡಬಹುದಾಗಿರುತ್ತದೆ.

ಸಿ-ವಿಜಿಲ್ ಸಿಟಿಜನ್ ಆ್ಯಪ್ ನಲ್ಲಿ ದೂರು ಸಲ್ಲಿಸಿ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಸಂಬಂಧ ಮಾದರಿ ನೀತಿ ಸಂಹಿತೆಯು ಮಾರ್ಚ್ 16 ರಿಂದ ಜಾರಿಯಲ್ಲಿದ್ದು, ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರುಗಳನ್ನು ದಾಖಲಿಸಲು ಭಾರತ ಚುನಾವಣಾ ಆಯೋಗದ “ಸಿ-ವಿಜಿಲ್ ಸಿಟಿಜನ್ ಆ್ಯಪ್ (cVIGIL Citizen Application)” ಅನ್ನು ಬಳಕೆ ಮಾಡಬಹುದಾಗಿದೆ.
ಮೊಬೈಲ್‌ ನ ಪ್ಲೇ-ಸ್ಟೋರ್‌ನಲ್ಲಿ ಲಭ್ಯವಿರುವ ಸಿ-ವಿಜಿಲ್ ಸಿಟಿಜನ್ ಆ್ಯಪ್ (CVIGIL Citizen Application)ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮ‌ೂಲಕ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಂಡು ದೂರುಗಳನ್ನು ದಾಖಲು ಮಾಡಲು ಚುನಾವಣಾ ಆಯೋಗವು ಮತದಾರರಿಗೆ/ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದೆ.
ಫೋನ್‌ ನಲ್ಲಿ ಸೆರೆಹಿಡಿಯಲಾದ ವಿಡಿಯೋ ಅಥವಾ ಫೋಟೋ ರೂಪದ ದಾಖಲೆಗಳ ಮೂಲಕ ಸುಲಭವಾಗಿ ದೂರು ಸಲ್ಲಿಸಬಹುದು. ಈ ಆಪ್‌ ಜಿಪಿಎಸ್ ಆಧಾರಿತವಾಗಿ ಕೆಲಸ ಮಾಡಲಿದ್ದು, ದೂರು ಸಲ್ಲಿಸುವ ವಿಳಾಸ ಚುನಾವಣಾ ಆಯೋಗಕ್ಕೆ ಹಾಗೂ ಸಂಬಂಧಿಸಿದ ಪೊಲೀಸರಿಗೆ ತಿಳಿಯುತ್ತದೆ. ಇದರಿಂದ ಆರೋಪಿತರನ್ನು ಸುಲಭವಾಗಿ ಪತ್ತೆಮಾಡಲು ಸಹಕಾರಿಯಾಗಲಿದೆ.
ಯಾವ ಸಮಯದಲ್ಲಿ ದೂರನ್ನು ಸಲ್ಲಿಸಬಹುದು.
ಹಣ ಹಂಚುವುದು, ಉಡುಗೊರೆಗಳು/ಕೂಪನ್‌ಗಳ ವಿತರಣೆ, ಮದ್ಯ ವಿತರಣೆ, ಅನುಮತಿಯಿಲ್ಲದೆ ಪೋಸ್ಟರ್‌ಗಳು/ಬ್ಯಾನರ್‌ಗಳನ್ನು ಹಂಚುವುದು, ಬಂದೂಕುಗಳ ಪ್ರದರ್ಶನ, ಬೆದರಿಕೆ, ಅನುಮತಿಯಿಲ್ಲದೆ ವಾಹನಗಳು ಅಥವಾ ಬೆಂಗಾವಲುಗಳನ್ನು ಬಳಕೆ ಮಾಡುವುದು, ಪಾವತಿಸಿದ ಸುದ್ದಿ, ಆಸ್ತಿ ವಿರೂಪಗೊಳಿಸುವಿಕೆ, ಮತದಾನದ ದಿನದಂದು ಮತದಾರರ ಸಾಗಣೆ, ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ಪ್ರಚಾರ, ನಿಷೇಧದ ಅವಧಿಯಲ್ಲಿ ಪ್ರಚಾರ, ಧಾರ್ಮಿಕ ಅಥವಾ ಕೋಮು ಭಾಷಣಗಳು/ಸಂದೇಶಗಳು, ಅನುಮತಿಸಲಾದ ಸಮಯವನ್ನು ಮೀರಿ ಸ್ಪೀಕರ್‌ಗಳ ಬಳಕೆ, ರ್ಯಾಲಿಗಳಿಗೆ ಸಾರ್ವಜನಿಕರ ಸಾರಿಗೆ ಬಳಕೆ ಸೇರಿದಂತೆ ಇನ್ನಿತರೆ ದೂರುಗಳನ್ನು ಸಲ್ಲಿಸಬಹುದು. ದೂರು ಸಲ್ಲಿಸಿದ ನಂತರ ರಶೀದಿ ದೊರೆಯಲಿದ್ದು, ಅದು ಯಾವ ಹಂತದ ವಿಚಾರಣೆಯಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಈ ಮೂಲಕ ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೈಜೋಡಿಸಬಹುದು.

ಸಿ-ವಿಜಿಲ್ ಸಿಟಿಜನ್ ಆಪ್ (cVIGIL Citizen Application)ನಲ್ಲಿ ದಾಖಲಾಗುವ ದೂರುದಾರರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.
ಸಾರ್ವಜನಿಕರು ಚುನಾವಣಾ ದೂರುಗಳ ಹೆಚ್ಚಿನ ಮಾಹಿತಿಯನ್ನು https://cvigil.eci.gov.in/ ನ ವೆಬ್‌ಸೈಟ್‌ನಲ್ಲಿ ಪಡೆದು ಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್ ಶಿವಶಂಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.