ನಿಜವಾದ ಕಾರ್ಮಿಕರು ಯಾರು?

ವಿಜಯ ದರ್ಪಣ ನ್ಯೂಸ್

ನಿಜವಾದ ಕಾರ್ಮಿಕರು ಯಾರು?

ಮಡಿಕೇರಿ: ಮೇ 1ನೇ ತಾರೀಕನ್ನು ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಸರ್ಕಾರವು ರಜೆ ಘೋಷಿಸುವ ಮೂಲಕ ಶ್ರಮಿಕ ವರ್ಗದ ಜನರಿಗೆ ಕೆಲಸದ ಒತ್ತಡದಿಂದ ಹೊರಬರಲು ಒಂದು ದಿನದ ವಿಶ್ರಾಂತಿಯನ್ನು ನೀಡಿದೆ.
ಆದರೆ ಚಿಂತಿಸಬೇಕಾದ ವಿಷಯವೆಂದರೆ ಈ ದಿನದ ರಜೆಯನ್ನು ಅನುಭವಿಸುತ್ತಿರುವ ವರು ಶ್ರಮಿಕರೇ? ಅಥವ ಇನ್ನಿತರ ಉದ್ಯೋಗಕ್ಕೆ ಒಳಪಡುವ ಉದ್ಯೋಗಸ್ಥರೇ?
ಕಚೇರಿಗಳಲ್ಲಿ ಕೆಲಸ ಮಾಡುವ ಜನರು, ಶಿಕ್ಷಣ ಸಂಸ್ಥೆಯ ಉದ್ಯೋಗಿಗಳು, ವಿದ್ಯಾರ್ಥಿಗಳು, ಬ್ಯಾಂಕಿನ ಸಿಬ್ಬಂದಿಯವರು, ಹಲವಾರು ಸಂಸ್ಥೆಗಳಲ್ಲಿ ದುಡಿಯುತ್ತಿರುವ ಜನರು ಶ್ರಮಿಕ ವರ್ಗಕ್ಕೆ ಸೇರಿದವರೇ?

ಎಲ್ಲ ಸರ್ಕಾರಿ ರಜೆಯನ್ನು ಪಡೆದುಕೊಳ್ಳುವ ಮೇಲ್ಕಂಡ ವರ್ಗದ ಜನರು ಕಾರ್ಮಿಕರ ದಿನದ ರಜೆಯನ್ನು ಪಡೆದುಕೊಳ್ಳುವುದು ಹಾಸ್ಯಸ್ಪದ.ಮೇ 1 ಕಾರ್ಮಿಕರ ದಿನ ಎಂದು ಸೂಚಿಸುವ ಭಿತ್ತಿಪತ್ರಗಳಲ್ಲಿ ಕಾರ್ಮಿಕರ ಕೆಲಸದ ಸಾಧನಗಳನ್ನು ಬಳಸಿ ಶುಭಾಶಯವನ್ನು ಕೋರುವ ನಾವು ಅಂತಹ ಸಾಧನಗಳಾದ ಸುತ್ತಿಗೆ, ಸ್ಪ್ಯಾನರ್, ಉಪಕರಣಗಳನ್ನು ಉಪಯೋಗಿಸಿ ಕೆಲಸ ಮಾಡುವ ಶ್ರಮಿಕ ವರ್ಗದ ಜನರು , ವಾಹನ ಚಾಲಕರು, ಕಟ್ಟಡ ಕಾರ್ಮಿಕರು ಇಂದಿನ ದಿನ ರಜೆ ಪಡೆದು ಕಾರ್ಮಿಕರ ದಿನವನ್ನು ಆಚರಿಸುತ್ತಿಲ್ಲ ಬದಲಿಗೆ ಕಾಯಕವೇ ಕೈಲಾಸ ಎಂಬಂತ್ತೆ ಇಂದು ಕೂಡ ಸುಡು ಬಿಸಿಲಿಗೆ ದಣಿವಿರದೆ ದುಡಿಯುತ್ತಿರುವುದನ್ನು ಕಾಣಬಹುದು.

ಹಾಗಾದರೆ ಕಾರ್ಮಿಕರ ದಿನದ ರಜೆ ಯಾರಿಗಾಗಿ ?

ಚುನಾವಣೆ ಸಮಯದಲ್ಲಿ ವೇತನ ಕಡಿತಗೊಳಿಸದೆ ಕಾರ್ಮಿಕರಿಗೆ ರಜೆ ನೀಡುವಂತೆ ಕಾರ್ಮಿಕರ ದಿನದಂದು ಕೂಡ ವೇತನ ನೀಡಿ ಒಂದು ದಿನದ ರಜೆ ಘೋಷಣೆ ಮಾಡಿದರೆ ಕಾರ್ಮಿಕರ ದಿನಾಚರಣೆಯು ಅರ್ಥಪೂರ್ಣವಾಗುವುದು.

ಜಯಂತಿ ರೈ
ಮಡಿಕೇರಿ