ಬುದ್ದ ಹುಣ್ಣಿಮೆಯಲ್ಲಿ ಜ್ಞಾನವನ್ನು ಹುಡುಕುತ್ತಾ……

ವಿಜಯ ದರ್ಪಣ ನ್ಯೂಸ್…

ಬುದ್ದ ಹುಣ್ಣಿಮೆಯಲ್ಲಿ ಜ್ಞಾನವನ್ನು ಹುಡುಕುತ್ತಾ……

ಸಿಗ್ಮಂಡ್ ಫ್ರಾಯ್ಡ್ ಎಂಬುವವನನ್ನು ಪ್ರಖ್ಯಾತ ಮನಶಾಸ್ತ್ರಜ್ಞ ಎಂದು ಕರೆಯಲಾಗುತ್ತದೆ. ಪಾಶ್ಚಾತ್ಯ ಸಂಸ್ಕೃತಿಯ ಹಿನ್ನಲೆಯ ಆತನ ವಿಚಾರಗಳು ವಿಶ್ವವ್ಯಾಪಿ ಮನ್ನಣೆ ಪಡೆದಿವೆ…..

ಆದರೆ,
ಭಾರತದ ಸಂಸ್ಕೃತಿಯ ಹಿನ್ನೆಲೆಯಲ್ಲಿ
ಖ್ಯಾತ ಮನಃಶಾಸ್ತ್ರಜ್ಞ ಯಾರಿರಬಹುದು ?

ನನ್ನ ದೃಷ್ಟಿಯಲ್ಲಿ ಅದು ಸಿದ್ದಾರ್ಥನೆಂಬ ಗೌತಮ ಬುದ್ಧ……………

ಜನಸಂಖ್ಯೆಯೇ ಅತಿ ವಿರಳವಾಗಿದ್ದ, ಸಂಪರ್ಕ ಸಂವಹನಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದ, ಆಧುನಿಕ ತಂತ್ರಜ್ಞಾನದ ಯಾವ ಲಕ್ಷಣಗಳೂ ಗೋಚರಿಸದ, ಬದುಕಿನ ಸಂಕೀರ್ಣತೆಯಿಂದ ದೂರವಿದ್ದ, ಆ ಕಾಲದಲ್ಲಿಯೇ ಮನುಷ್ಯನ ಮನಸ್ಸುಗಳ ಜಾಡು ಹಿಡಿದು ಅಲ್ಲಿನ ತವಕ ತಲ್ಲಣಗಳಿಗೆ ಉತ್ತರ ಹುಡುಕಲು ಪ್ರಯತ್ನಿಸಿದ ಗೌತಮ ಅಸಾಮಾನ್ಯನೇ ಹೌದು……

ನಿಜಕ್ಕೂ ಈಗ ನಾವೆಲ್ಲರೂ ಚಿತ್ರಪಟ, ಶಿಲ್ಪ ಕಲೆಗಳಲ್ಲಿ ನೋಡುತ್ತಿರುವ ಆ ಸೌಮ್ಯ ಮೂರ್ತಿ ಬುದ್ಧ ಅಷ್ಟೊಂದು ಸೌಮ್ಯನೇ ? ಅಷ್ಟೊಂದು ಶಾಂತ ಸ್ವಭಾವದವನೆ ?
ಅಥವಾ ಎಲ್ಲರೂ ಭಾವಿಸಿರುವಂತೆ ಆತನ ಜ್ಞಾನೋದಯದ ನಂತರ ಮೂಡಿದ ಭಾವ ಈ ಪ್ರಶಾಂತತೆಯೇ ? ಅಥವಾ ಯಾರೋ ಕಲಾವಿದರ ಕಲ್ಪನೆಯಲ್ಲಿ ಮೂಡಿದ ಚಿತ್ರವೇ ?….

ಏಕೆಂದರೆ,
ಬದುಕಿನ ಅನುಭವದಲ್ಲಿ ಬುದ್ದನೆಂಬ ವ್ಯಕ್ತಿ ಹೇಳಿರುವ ಸಂದೇಶಗಳು ನಿಜಕ್ಕೂ ಅತ್ಯಂತ ಪರಿಣಾಮಕಾರಿ ಅದ್ಭುತ, ಆಶ್ಚರ್ಯ ಮತ್ತು ವಾಸ್ತವಕ್ಕೆ ತೀರಾ ಹತ್ತಿರವಿದೆ…..

ಒಬ್ಬ ವ್ಯಕ್ತಿಯ ಜೀವನದಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡುವ , ತೀಕ್ಷ್ಣ ಏರಿಳಿತಗಳಿಗೆ ಕಾರಣವಾಗುವ, ಸುಲಭವಾಗಿ ಪರಿಹಾರ ಕಾಣದೆ ಕಾಡುವ ದ್ವಂಧ್ವಗಳು, ಅಸಹಾಯಕ ಮನಸ್ಥಿತಿಯ, ಒಳ್ಳೆಯ, ಕೆಟ್ಟ, ವಿಕೃತ ಭಾವನೆಗಳನ್ನು ಅನುಭವಿಸಿದರೆ ಮಾತ್ರ ಸಿಗಬಹುದಾದ ಜ್ಞಾನ ಪಡೆದಿದ್ದವನು ಗೌತಮ…..

ಆತನ ಚಿಂತನೆಗಳು ಮನುಷ್ಯನ ಮೆದುಳು ಮನಸ್ಸುಗಳನ್ನು ಅತ್ಯಂತ ಹತ್ತಿರದಿಂದ ಗ್ರಹಿಸಿರುವಂತೆ ಭಾಸವಾಗುತ್ತದೆ.
ಆ ಕಾರಣದಿಂದಾಗಿಯೇ ಬುದ್ಧ ಭಾರತೀಯ ಮನಸ್ಸುಗಳ ಅತ್ಯಂತ ಮಹತ್ವದ ಮನಶಾಸ್ತ್ರಜ್ಞ ಎಂದು ಹೇಳಿರುವುದು…..

ಬುದ್ದನ ಜ್ಞಾನ,
ಕೇವಲ ಓದು, ಅಧ್ಯಯನ, ಚಿಂತನೆಗಳಿಂದ ಮಾತ್ರ ರೂಪಗೊಳ್ಳದೆ ಅನುಭವಗಳ ಕುಲುಮೆಯಲ್ಲಿ ಮೂಡಿದ ಅರಿವು. ಅದೇ ಕಾರಣಕ್ಕಾಗಿ ಹಲವಾರು ಶತಮಾನಗಳ ನಂತರವೂ ಬುದ್ಧ ಮುಖ್ಯವಾಗುತ್ತಿರುವುದು….

ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ,
ಬುದ್ದನ ಧ್ಯಾನದಲ್ಲಿ,
ಬುದ್ಧನ ಸಂದೇಶಗಳನ್ನು ಮನಃಶಾಸ್ತ್ರೀಯ ದೃಷ್ಟಿಕೋನದಿಂದ ನೋಡಿದರೆ ನಮಗೆ ನಾವು ಹೆಚ್ಚು ಸ್ಪಷ್ಟವಾಗಬಹುದು………
ಅದಕ್ಕಿಂತ ಮುಖ್ಯವಾಗಿ ನಮ್ಮ ಮಾನಸಿಕ ನೋವುಗಳನ್ನು ಕಡಿಮೆ ಮಾಡಿಕೊಂಡು ಸಂತೋಷ ನೆಮ್ಮದಿಯ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಬಹುದು ಎಂಬ ಆಶಯದಿಂದ…………

ಬುದ್ದತ್ವದೆಡೆಗೆ ಹೆಜ್ಜೆ ಹಾಕುತ್ತಾ…..

ಬುದ್ದ ಪೂರ್ಣಿಮೆಯ ಬೆಳದಿಂಗಳಲ್ಲಿ ಬುದ್ದನನ್ನೇ ಹುಡುಕುತ್ತಾ…..

ಈ ನೆಲದ ನಿಜವಾದ ಮಣ್ಣಿನ ಮಗ ಬುದ್ದ,
ಈ ಮಣ್ಣಿನ ವಾಸ್ತವದ ಸಾಂಸ್ಕೃತಿಕ ವಕ್ತಾರ ಬುದ್ಧ….

ಬುದ್ದನಂತ ಕೆಲವು ಚಿಂತಕರು ಈ ಜಗತ್ತಿನಲ್ಲಿ ಆಗಿಹೋಗಿದ್ದಾರೆ. ಆದರೆ ಬುದ್ದನ ಹೆಚ್ಚುಗಾರಿಗೆ ಆತನ ಪ್ರಜ್ಞೆ ಟಿಸಿಲೊಡೆಯುವುದು ಸ್ವತಃ ತನ್ನ ದೇಹ ಮತ್ತು ಮನಸ್ಸುಗಳ ದಂಡನೆಯಿಂದ.

ಅಂದರೆ ಅದು ಎರವಲು ಜ್ಞಾನವಲ್ಲ ಆಂತರ್ಯದ ಸೃಷ್ಟಿ. ಬಹುಶಃ ಆ ಕಾರಣದಿಂದಲೇ ಬುದ್ದ ಈಗಲೂ ಸಾಕಷ್ಟು ಜನರ ಬೆಳಗಿನ ಶುಭೋದಯದ ಮೊದಲ ಬೆಳಕು…..

ಬುದ್ದ ಬದುಕನ್ನು ಹುಡುಕಿದರೆ ನಾವು ಬುದ್ದನನ್ನು ಹುಡುಕುತ್ತಿದ್ದೇವೆ. ಬುದ್ದನಿಗೆ ಬದುಕಿನ ಜ್ಞಾನೋದಯವಾದರೆ ನಮಗೆ ಬುದ್ಧ ಸಿಗುತ್ತಲೇ ಇಲ್ಲ. ಕಾರಣ ಬುದ್ದ ನಮ್ಮೊಳಗೆ ಇಳಿಯಲು ಸ್ಥಳಾವಕಾಶವೇ ಇಲ್ಲದಂತಾಗಿದೆ…..

ಕ್ರಿಸ್ತ ಪೂರ್ವದ ಬುದ್ದ – 21 ನೆಯ ಶತಮಾನದ ನಾವು ಈ ಬೆಳದಿಂಗಳಲ್ಲಿ ಮುಖಾಮುಖಿಯಾದಾಗ….

ಧ್ಯಾನಸ್ಥ ಬುದ್ದ ಟ್ರಾಫಿಕ್ ನಲ್ಲಿ ಕಳೆದುಹೋದ…..
ನಿಸ್ವಾರ್ಥ ಬುದ್ದ ಭ್ರಷ್ಟಾಚಾರದಲ್ಲಿ ಮುಳುಗಿಹೋದ….
ಅಹಿಂಸೆಯ ಬುದ್ದ ಪರಮಾಣು ಬಾಂಬುಗಳಲ್ಲಿ ಅಡಗಿಹೋದ…
ಜ್ಞಾನದ ಬದ್ದ ಅಂಕಗಳಲ್ಲಿ ಮರೆಯಾಗಿ ಹೋದ….
ನಿರ್ಲಿಪ್ತ ಬುದ್ದ ಹಣ ಆಸ್ತಿ ಜಮೀನುಗಳಲ್ಲಿ ಹುದುಗಿ ಹೋದ…..

ಎಲ್ಲಿಯಾದರೂ ಸಿಕ್ಕಾನೆಯೇ ಬುದ್ದ……

ಸುಖ ಭೋಗಗಳನ್ನು ತ್ಯಜಿಸಿ ಇನ್ನೇನೋ ಹುಡುಕುತ್ತಾ ಸಿದ್ದಾರ್ಥ ಎಂಬ ಮನುಷ್ಯ ಬುದ್ಧನಾದ…….

ಬುದ್ದನನ್ನು ಹುಡುಕುತ್ತಾ ಮತ್ತೊಬ್ಬ ಸುಖ ಭೋಗಗಳ ದಾಸನಾದ…

ಸಿದ್ದಾರ್ಥನನ್ನು ಹುಡುಕಬಹುದು, ಆತ ಸಿಗುತ್ತಾನೆ.
ಆದರೆ ಬುದ್ದನನ್ನು ಹುಡುಕುವುದೆಲ್ಲಿ,
ಒಳಗೋ ಹೊರಗೋ…….

ಕ್ರಿಸ್ತ ಪೂರ್ವದ ಬುದ್ಧನೆಲ್ಲಿ,
2024 ರ ಬುದ್ದು ( ದಡ್ಡ ) ಎಲ್ಲಿ,

ಸ್ವಂತ ಮನೆಯಲ್ಲಿ ಕುಳಿತು ಆಹಾರ ಸೇವಿಸುತ್ತಾ ಟಿವಿ ನೋಡುತ್ತಾ ಬುದ್ದನನ್ನು ಹುಡುಕಿದನೊಬ್ಬ….

ಲೈಬ್ರರಿಯಲ್ಲಿ ಕುಳಿತು ಪುಸ್ತಕ ಓದುತ್ತಾ, ಬರೆಯುತ್ತಾ ಹುಡುಕಿದ ಬುದ್ದನನ್ನು ಇನ್ನೊಬ್ಬ…..

ಅಧ್ಯಯನ ಮಾಡುತ್ತಾ, ಚಿಂತಿಸುತ್ತಾ ಉಪನ್ಯಾಸ ನೀಡುತ್ತಾ ಬುದ್ದನನ್ನು ಹುಡುಕಿದ ಮಗದೊಬ್ಬ….

ಪ್ರಶಸ್ತಿಗಾಗಿ, ಪ್ರಚಾರಕ್ಕಾಗಿ, ಪ್ರಖ್ಯಾತಿಗಾಗಿ, ಬುದ್ದಿಯ ಪ್ರದರ್ಶನಕ್ಕಾಗಿ ಹುಡುಕುತ್ತಲೇ ಇದ್ದಾರೆ ಅನೇಕ ಸಿದ್ದಾರ್ಥರು ಬುದ್ದನನ್ನು…….

ಸಿಕ್ಕಾನೆಯೇ ಬುದ್ದ……

ಕಾಡು ಮೇಡುಗಳಲ್ಲಿ ಅಲೆದು, ದೇಹ ಮನಸ್ಸುಗಳನ್ನು ದಂಡಿಸಿ, ಚರ್ಚೆ ಸಂವಾದ ಮಂಥನಗಳನ್ನು ಮಾಡಿ, ಧ್ಯಾನದ ಉತ್ತುಂಗ ತಲುಪಿ ಬುದ್ದನಾದವನನ್ನು ಹುಡುಕುವುದು ಸುಲಭವೇ……

ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ಸಂಜೆಯ ಉಪಹಾರ, ರಾತ್ರಿಯ ಭೋಜನ ಮಾಡಿ, ಬೆಚ್ಚಗಿನ ಮನೆಯಲ್ಲಿ, ಕುಟುಂಬದೊಂದಿಗೆ, ನಾಳಿನ ಯೋಚನೆಗಳೊಂದಿಗೆ, ಸ್ನಾನ ಶೌಚಗಳ ಅನುಕೂಲದೊಂದಿಗೆ, ಮೈಥುನದ ಸುಖದೊಳಗೆ, ಮೊಬೈಲ್ ಮಾಯೆಯೊಳಗೆ ಸಿಕ್ಕಾನೆಯೇ ಬುದ್ದ…..

ದೇಹದಲ್ಲಿ ಅಡಗಿದ್ದಾನೆಯೇ ಬುದ್ದ,
ಮನಸ್ಸಿನಲ್ಲಿ ಅಡಗಿದ್ದಾನೆಯೇ ಬುದ್ದ,
ಹೃದಯದಲ್ಲಿ ಅಡಗಿದ್ದಾನೆಯೇ ಬುದ್ದ,…

ಜ್ಞಾನದಿಂದ ಸಿಗುವನೇ ಬುದ್ದ,
ಭಕ್ತಿಯಿಂದ ಸಿಗುವನೇ ಬುದ್ದ,
ಕರ್ಮದಿಂದ ಸಿಗುವನೇ ಬುದ್ದ,
ಯೋಗ ಧ್ಯಾನಗಳಿಂದ ಸಿಗುವನೇ ಬುದ್ದ……

ಇವುಗಳಿಂದ ದೇವರನ್ನು ಹುಡುಕಬಹುದು,
ಆದರೆ ಬುದ್ದನನ್ನು ಹುಡುಕಬಹುದೇ….

ಹೌದು, ಬುದ್ದನನ್ನು ಹುಡುಕಬಹುದು, ಎಲ್ಲಿ ? ಹೇಗೆ ?….

ಮಾನವೀಯ ಮೌಲ್ಯಗಳಲ್ಲಿ ಬುದ್ದನನ್ನು ಹುಡುಕಬಹುದು…..

ಪ್ರೀತಿಯಲ್ಲಿ,
ತ್ಯಾಗದಲ್ಲಿ,
ಕರುಣೆಯಲ್ಲಿ,
ವಿನಯದಲ್ಲಿ,
ಸಭ್ಯತೆಯಲ್ಲಿ,
ಕ್ಷಮಾಗುಣದಲ್ಲಿ,
ಸ್ನೇಹದಲ್ಲಿ,
ಸಂಬಂಧಗಳಲ್ಲಿ,
ತಾಳ್ಮೆಯಲ್ಲಿ,
ಸಂಯಮದಲ್ಲಿ,
ಧೈರ್ಯದಲ್ಲಿ,
ನಿರಂತರ ಪ್ರಯತ್ನದಲ್ಲಿ,……

ಬುದ್ದ ಸಿಕ್ಕರೂ ಸಿಗಬಹುದು…

ವೈರಸ್ಸಿನ ಭಯದಲ್ಲಿ,
ಸಾವಿನ ಆತಂಕದಲ್ಲಿ,
ಸೋಲುವ ಭೀತಿಯಲ್ಲಿ,
ಕುಟುಂಬದ ಮೋಹದಲ್ಲಿ,
ಹಣದ ದಾಹದಲ್ಲಿ,
ಅಧಿಕಾರದ ಗುಂಗಿನಲ್ಲಿ,
ಪ್ರಚಾರದ ಅಮಲಿನಲ್ಲಿ,
ಸಾಧನೆಯ ಅಹಂಕಾರದಲ್ಲಿ….

ಬುದ್ದನನ್ನು ಹುಡುಕುವ ನಾಟಕವೇಕೆ……

ನಾನು ಸಹ ಹುಡುಕುತ್ತಲೇ ಇದ್ದೇನೆ ಬುದ್ದನನ್ನು,
ನನ್ನೊಳಗಿನ ಬೆಳಕನ್ನು ಬೆಳಗಿಸುವಾ ಬುದ್ದನನ್ನು….

ಸಿಕಿಲ್ಲ ಆತ ಇನ್ನೂ……
*******************************
ಯಾರೋ ನೀನು ಸಿದ್ಧಾರ್ಥ,

ಒಂದು ರಾಜ್ಯದ ರಾಜಕುಮಾರನಂತೆ,
ಕಷ್ಟ, ನೋವು, ಬೇಸರ ಏನೂ ಗೊತ್ತಿಲ್ಲದೆ ಬೆಳೆದ ಯುವರಾಜನಂತೆ,

ಹೆಂಡತಿ – ಮಕ್ಕಳೊಂದಿಗೆ ಹಾಯಾಗಿದ್ದ ಸುಖಪುರುಷನಂತೆ,

ಆದರೆ ಅದೇನಾಯಿತೋ ಸಿದ್ಧಾರ್ಥ ನಿನಗೆ,

ಒಮ್ಮೆ ರಾಜ್ಯವನ್ನೆಲ್ಲಾ ಸುತ್ತಾಡುವಾಗ ಜನರ ಬದುಕು ನೋಡಿ ಗಾಬರಿಯಾದೆಯಂತೆ,

ಕಷ್ಟ, ನೋವು, ರೋಗ, ಸಾವುಗಳು ನಿನ್ನನ್ನು ಕಾಡಲಾರಂಬಿಸಿದವಂತೆ,

ಅದಕ್ಕೆ ಕಾರಣಗಳೇನು, ಪರಿಹಾರಗಳೇನು ಎಂದು ಮನಸ್ಸು ನಿನ್ನನ್ನು ಗಲಿಬಿಲಿಗೊಳಿಸಿತಂತೆ,

ಆಗ ಒಂದು ದಿನ ಇದ್ದಕ್ಕಿದ್ದಂತೆ ರಾಜ್ಯ, ಸಂಸಾರ, ಸುಖ ಭೋಗ ಎಲ್ಲಾ ತೊರೆದು ರಾತ್ರೋರಾತ್ರಿ ಹೊರಟೆಯಂತೆ,

ಬೀದಿಬೀದಿಗಳನ್ನ, ರಾಜ್ಯ ಪ್ರದೇಶಗಳನ್ನ, ಅಲೆಮಾರಿಯಂತೆ ಸುತ್ತಾಡಿದೆಯಂತೆ,

ಮಹಾನ್ ಪಂಡಿತ, ಪಾಮರ, ಜ್ಞಾನಿಗಳನ್ನು ಭೇಟಿ ಮಾಡಿ ಚರ್ಚಿಸಿದೆಯಂತೆ,

ಭಿಕ್ಷುಕನಂತೆ ಭಿಕ್ಷೆ ಬೇಡಿ ತಿಂದು ಬದುಕಿದೆಯಂತೆ,

ಉಪವಾಸವಿದ್ದು ತಿಂಗಳುಗಟ್ಟಲೆ ದೇಹ ದಂಡಿಸಿದೆಯಂತೆ,

ವರ್ಷಾನುಗಟ್ಟಲೆ ಕಾಡು ಮೇಡುಗಳಲ್ಲಿ ಅಲೆದು ಧ್ಯಾನ, ತಪಸ್ಸು ಮಾಡಿದೆಯಂತೆ,

ಒಂದು ದಿನ ನಿನಗೆ ಭೋದಿವೃಕ್ಷದ ಕೆಳಗೆ ಜ್ಞಾನೋದಯವಾಯಿತಂತೆ…….

ಅಬ್ಬಾ,….

ಅದೇನು ಜ್ಞಾನೋದಯವಾಯಿತೋ ಅಥವಾ ನೀನೇ ಜ್ಞಾನವಾದೆಯೋ,
ಅಲ್ಲಿಂದ ಆದೆ ನೋಡು ನೀನು ಗೌತಮ ಬುದ್ದ,

ಯಪ್ಪಾ,
ಅದೇನು ಚಿಂತನೆ, ಅದೇನು ಜ್ಞಾನ, ಅದೇನು ಅರಿವು,

ಯಾವ ಡಾಕ್ಟರುಗಳು, ಯಾವ ಮನಶಾಸ್ತ್ರಜ್ಞರು, ಯಾವ ಜೀವ ವಿಜ್ಞಾನಿಗಳಿಗೂ,
ಸಾಧ್ಯವಾಗದ ಮನುಷ್ಯನ ಆತ್ಮ, ಮೆದುಳು, ಮನಸ್ಸು, ಭಾವನೆ, ಜೀವನಕ್ರಮವನ್ನು
ಅರೆದು ಕುಡಿದು ಅದರ ಎಲ್ಲವನ್ನೂ ತೆರೆದಿಟ್ಟ ಮಹಾನ್ ವ್ಯಕ್ತಿಯಾದೆ,

ಜನರ ಬದುಕು ಇಷ್ಟೊಂದು ಸಂಕೀರ್ಣವಾಗಿರದ, ನಾಗರಿಕತೆಯ ಮೊದಲ ಮೆಟ್ಟಿಲು ಏರುತ್ತಿದ್ದ,
ಆ ದಿನಗಳಲ್ಲೇ ಮನುಷ್ಯ ಜನಾಂಗದ ಇಡೀ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ ಅದ್ಭುತ ವ್ಯಕ್ತಿಯಾದೆ,

ನಿನ್ನ ಒಂದೊಂದು ಮಾತುಗಳು ಅರಗಿಸಿಕೊಳ್ಳುವುದೇ ಕಷ್ಟ,

ಕಲ್ಲಿನ ಕೆತ್ತನೆಯಿಂದ ಹಿಡಿದು ಫೇಸ್ ಬುಕ್ – ವಾಟ್ಸ್ ಆ್ಯಪ್ – ಎಕ್ಸ್ ತನಕ ಎಲ್ಲಾ ಸ್ಥಳಗಳಲ್ಲಿ ನಿನ್ನ ಮಾತುಗಳಿಗೇ ಪ್ರಥಮ ಸ್ಥಾನ.

ಅಷ್ಟೇ ಏಕೆ, ಪಾಶ್ಚಾತ್ಯ, ಪೌರಾತ್ಯ ಸಂಸ್ಕೃತಿಗಳನ್ನ,
ವಿಶ್ವದ ಬಹುತೇಕ ಧರ್ಮಗಳನ್ನು, ಅಸಾಮಾನ್ಯ ಗ್ರಂಥಗಳನ್ನು, ಅನೇಕ ದೇಶಗಳ ಸಂವಿಧಾನಗಳನ್ನ,
ಓದಿ ಅರ್ಥ್ಯೆಸಿಕೊಂಡಿದ್ದ ಬಾಬಾ ಅಂಬೇಡ್ಕರ್ ಅವರೇ ನಿನಗೆ ಶರಣಾದರೆಂದರೆ ನೀನೇನು ಮನುಷ್ಯನೇ,

ಪ್ರಕೃತಿಯ ಅದ್ಭುತ, ಆಶ್ಚರ್ಯಕರ, ಸೃಷ್ಟಿಯಾದ ಗೌತಮ ಬುದ್ದನೇ,
ನಿನ್ನನ್ನು ಒಂದೇ ಒಂದು ಬಾರಿ ನೋಡಬೇಕೆನಿಸಿದೆ, ಮಾತನಾಡಬೇಕಿನಿಸಿದೆ,

ಈ ಹುಚ್ಚರ ಸಂತೆಯಲ್ಲಿ ನಿನ್ನನ್ನು ನಿಲ್ಲಿಸಿ ಎಲ್ಲರಿಗೂ ಹೇಳಬೇಕಿದೆ,

ಮನುಷ್ಯರೆಂದರೆ ಏನೆಂದು ಈ ಅನಾಗರಿಕರಿಗೆ,

ಬಾರೋ ಗೌತಮ ಬುದ್ದನಾದ ಸಿದ್ಧಾರ್ಥನೇ, ಮತ್ತೊಮ್ಮೆ ಹುಟ್ಟಿ ಬಾ,

ನನಗೆ ಯೋಗ್ಯತೆ ಇಲ್ಲದಿದ್ದರೂ ಹೇಳುತ್ತಿದ್ದೇನೆ,
ಎಲ್ಲರಿಗೂ ಬುದ್ದ ಪೂರ್ಣಿಮೆಯ ಶುಭಾಶಯಗಳು…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ. ಎಚ್.ಕೆ.
9844013068……