ತಂಬಾಕು ಮುಕ್ತ ಜಿಲ್ಲೆಯನ್ನಾಗಿ ಮಾಡಲು ಕ್ರಮ: ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ್

ವಿಜಯ ದರ್ಪಣ ನ್ಯೂಸ್…

ತಂಬಾಕು ನಿಯಂತ್ರಣಕ್ಕೆ ಹಲವು ಕ್ರಮ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ 30  : ಜಿಲ್ಲೆಯಾದ್ಯಂತ ತಂಬಾಕು ಬಳಕೆ ನಿಯಂತ್ರಿಸಲು ಹಲವು ಕ್ರಮಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಜಿಲ್ಲೆಯನ್ನು ತಂಬಾಕು ಮುಕ್ತ ಜಿಲ್ಲೆಯನ್ನಾಗಿ ಮಾಡಲು ಕ್ರಮವಹಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ್ ಅವರು ತಿಳಿಸಿದರು.

ಪ್ರತಿ ವರ್ಷ ಮೇ 31ರಂದು “ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. “ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು” ಈ ವರ್ಷದ ವಿಶ್ವ ತಂಬಾಕು ರಹಿತ ದಿನಾಚರಣೆಯ ಧೈಯ ವಾಕ್ಯ.

ಈ ಹಿನ್ನೆಲೆಯಲ್ಲಿ ಮೇ 31 ರಿಂದ ಜೂನ್ 30ರವರೆಗೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಹಾಗೂ ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮದ ಜಂಟಿ ಸಹಭಾಗಿತ್ವದೊಂದಿಗೆ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು.

ಈ ಕಾರ್ಯಕ್ರಮದ ಸದುದ್ದೇಶ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಜಾಗೃತಿ ಮೂಡಿಸುವುದು ಹಾಗೂ ಮಕ್ಕಳ ಆರೋಗ್ಯ ಮತ್ತು ಉಜ್ವಲ ಭವಿಷ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಮಕ್ಕಳು ತಂಬಾಕು ವ್ಯಸನಿಗಳಾಗದಂತೆ ತಡೆಯುವುದು ಅತೀ ಮುಖ್ಯವಾಗಿರುತ್ತದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಎಲ್ಲಾ ಶಾಲಾ/ ಕಾಲೇಜು/ ವಿಶ್ವವಿದ್ಯಾಲಯಗಳನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳೆಂದು ಘೋಷಿಸಲು ಹಾಗೂ COTPA Sec 6bಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಎಲ್ಲಾ ಶೈಕ್ಷಣಿಕ ಸಂಸ್ಥೆಗಳ ಸುತ್ತ 100 ಗಜ ಅಂತರದಲ್ಲಿ ತಂಬಾಕು ವ್ಯಾಪಾರ ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ “ತಂಬಾಕು ವ್ಯಸನಮುಕ್ತ ಕೇಂದ್ರ”ವು ಸ್ಥಾಪಿತವಾಗಿದ್ದು ಈ ಕೇಂದ್ರದಲ್ಲಿ ತಂಬಾಕು ವ್ಯಸನಿಗಳಿಗೆ ಈ ದುಶ್ಚಟದಿಂದ ಮುಕ್ತಿ ಹೊಂದಲು ಆಪ್ತ ಸಮಾಲೋಚನೆ ಹಾಗೂ ಉಚಿತ ಚಿಕಿತ್ಸೆಯ ಸೌಲಭ್ಯವಿದ್ದು ಇದರ ಉಪಯೋಗವನ್ನು ಸಾರ್ವಜನಿಕರು ಪಡೆಯಬಹುದಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮತ್ತು COTPA ಕಾಯ್ದೆಯ ಉಲ್ಲಂಘನೆ ಮಾಡುವವರ ವಿರುದ್ಧ ದೂರು ದಾಖಲಿಸಲು Stop Tobacco Mobile App ಅನ್ನು ಸಾರ್ವಜನಿಕರು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ COTPA ಕಾಯ್ದೆ 2003 ರ ಉಲ್ಲಂಘಿತ ಪ್ರಕರಣಗಳ ಬಗ್ಗೆ ದೂರುಗಳನ್ನು ದಾಖಲಿಸಬಹುದಾಗಿದೆ.

“ವಿಶ್ವ ತಂಬಾಕು ರಹಿತ ದಿನ”ವನ್ನು ಆಚರಿಸುವ ಅಂಗವಾಗಿ ಮುಂಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ ಕಛೇರಿಗಳನ್ನು “ತಂಬಾಕು ಮುಕ್ತ ಕಛೇರಿ ಎಂದು ಘೋಷಿಸಲು ಕ್ರಮ ವಹಿಸುವಂತೆ ಎಲ್ಲಾ ಇಲಾಖೆಯ ಮುಖ್ಯಸ್ಥರಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಮುಂದಿನ ದಿನಗಳಲ್ಲಿ ಎಲ್ಲಾ ಮಹಾನಗರ ಪಾಲಿಕೆಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿ ಅಂಗಡಿ ಮಾಲೀಕರುಗಳು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರತ್ಯೇಕವಾದ ಪರವಾನಗಿಯನ್ನು ಪಡೆಯುವಂತೆ ಮತ್ತು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳಲ್ಲಿ ಈ ಆದೇಶವನ್ನು ಅನುಷ್ಠಾನಗೊಳಿಸುವಂತೆ ಪುರಸಭೆ ಮತ್ತು ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಈಗಾಗಲೇ ಆದೇಶಿಸಲಾಗಿದೆ.

ತಂಬಾಕಿನಿಂದ ಆಗುವ ದುಷ್ಪರಿಣಾಮಗಳು, COTPA ಕಾಯ್ದೆ – 2003 ಮತ್ತು Stop Tobacco Mobile App (ಸ್ಟಾಪ್ ಟ್ಯೊಬ್ಯಾಕೊ ಮೊಬೈಲ್ ಆಪ್) ಈ ಬಗ್ಗೆ ಸಮೂಹ ಮಾಧ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲಾಗಿದೆ ಮತ್ತು ತಂಬಾಕು ವ್ಯಸನ ಮುಕ್ತ ಕೇಂದ್ರದ ಬಗ್ಗೆ ಸಾರ್ವಜನಿಕರಿಗೆ ಕಾಲ ಕಾಲಕ್ಕೆ ಮಾಹಿತಿ ನೀಡಲಾಗುತ್ತಿದೆ.

ಈ ಎಲ್ಲಾ ಚಟುವಟಿಕೆಗಳನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ತರುವ ಉದ್ದೇಶ ನಮ್ಮದಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ತಂಬಾಕು ತನಿಖಾದಳ ಅಧ್ಯಕ್ಷ ಡಾ.ಎನ್ ಶಿವಶಂಕರ ಅವರು ತಿಳಿಸಿದ್ದಾರೆ.

&&&&&&&&&&&&&&&&&&&&&&&&&&

ಸಾಗರೋತ್ತರ ವಿದ್ಯಾರ್ಥಿ ವೇತನ ಯೋಜನೆಗೆ ಅರ್ಜಿ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ. 30 : 2024-25 ನೇ ಸಾಲಿನ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಂದ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿ ವೇತನ ಯೋಜನೆಗೆ (NOS) ಆನೆಲೈನ್ನಲ್ಲಿ https://overseas.tribal.gov.in ವೆಬ್ಸೈಟ್ ಮೂಲಕ ಅರ್ಜಿಸಲ್ಲಿಸಬಹುದಾಗಿದ್ದು, ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನ ಮೇ 31 ಆಗಿರುತ್ತದೆ. ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿ ಸಲ್ಲಿಸಲು 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ನಿರ್ದೇಶಕರವರ ಕಛೇರಿ, ನಂ.34ಲೋಟಸ್ ಟವರ್ಸ ಮೊದಲನೇ ಮಹಡಿ. ರೇಸ್ ಕೋರ್ಸ್ ರಸ್ತೆ, ಬೆಂಗಳೂರು ದೂರವಾಣಿ 080-22261789/080-22261787 ಈ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.