ರೋಬಸ್ಟಾ ಕಾಫಿ ಬೆಲೆ ಏರಿದೆ ಗರಿಗೆದರಿ ಕಾಫಿಪುಡಿ ದರವೂ ಆಗಿದೆ ದುಬಾರಿ
ವಿಜಯ ದರ್ಪಣ ನ್ಯೂಸ್….
ರೋಬಸ್ಟಾ ಕಾಫಿ ಬೆಲೆ ಏರಿದೆ ಗರಿಗೆದರಿ ಕಾಫಿಪುಡಿ ದರವೂ ಆಗಿದೆ ದುಬಾರಿ
ಮಡಿಕೇರಿ: ಭಾರತದ ಕಾಫಿಗೆ ಐತಿಹಾಸಿಕ ಧಾರಣೆ ಸಿಗುವ ಮೂಲಕ ದಾಖಲೆ ನಿರ್ಮಿಸಿದೆ. ಅರೆಬಿಕಾ ಕಾಫಿಗಿಂತ ಕಡಿಮೆ ಧಾರಣೆ ಹೊಂದಿರುತ್ತಿದ್ದ ರೊಬಸ್ಟಾ ಪಾರ್ಚ್ಮೆಂಟ್ ಈ ವರ್ಷ 20,000 ರೂ.ಗಳಿಗೆ ತಲುಪುವ ಮೂಲಕ ಭಾರತದ ಕಾಫಿ ಉದ್ಯಮದಲ್ಲಿ ಸಂಚಲನ ಸೃಷ್ಟಿಸಿದೆ.
ಆದರೆ, ಇದರ ಲಾಭ ಕಾಫಿ ದಾಸ್ತಾನು ಇರಿಸಿಕೊಂಡಿದ್ದ ಕೆಲವೇ ಕೆಲವು ಬೆಳೆಗಾರರು ಮತ್ತು ವರ್ತಕರಿಗೆ ಮಾತ್ರ ಲಭ್ಯವಾಗಿದೆ. ಕಾಫಿ ಧಾರಣೆ ಹೆಚ್ಚಾಗುತ್ತಿದ್ದಂತೆ ಇತ್ತ ಕಾಫಿಪುಡಿ ಬೆಲೆಯೂ ಗಗನಕ್ಕೇರಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಕಾಫಿ ಉತ್ಪಾದಿಸುವ ಬ್ರೆಜಿಲ್, ವಿಯೆಟ್ನಾಂನಲ್ಲಿ ಹವಾಮಾನ ವೈಪರೀತ್ಯದಿಂದ ಇಳುವರಿ ಸಂಪೂರ್ಣ ಕುಂಠಿತವಾಗಿದೆ. ಭಾರತದಲ್ಲೂ ವಾರ್ಷಿಕ ಉತ್ಪಾದನೆಯ ಗುರಿ ತಲುಪಿಲ್ಲ. ಇದರಿಂದ ಲಂಡನ್ ಮಾರುಕಟ್ಟೆಯಲ್ಲಿ ಕಾಫಿಗೆ ಬೇಡಿಕೆ ಹೆಚ್ಚಾಗಿದ್ದು, ಧಾರಣೆ ಏರಿಕೆಗೆ ಕಾರಣವಾಗಿದೆ.
ಗುರುವಾರ ಅರೆಬಿಕಾ ಪಾರ್ಚ್ಮೆಂಟ್ ಧಾರಣೆ 18,000 (50ಕೆಜಿ ಬ್ಯಾಗ್) ಇದ್ದರೆ, ರೊಬಸ್ಟಾ ಪಾರ್ಚ್ಮೆಂಟ್ ಧಾರಣೆ 20,000 ರೂ. ಗಡಿ ತಲುಪಿದೆ. ಆದರೆ, ಬಹುತೇಕ ಕಾಫಿ ಬೆಳೆಗಾರರ ಬಳಿ ಹಳೆ ದಾಸ್ತಾನಿಲ್ಲ. ಹೊಸ ಕಾಫಿ ಕೊಯ್ಲು ಇನ್ನೂ ಆರಂಭವಾಗಿಲ್ಲ. ಡಿಸೆಂಬರ್ ಹೊತ್ತಿಗೆ ಕಾಫಿ ಕೊಯ್ಲು ಆರಂಭವಾಗಲಿದ್ದು, ಏಪ್ರಿಲ್, ಮೇ ತಿಂಗಳಲ್ಲಿ ಹೊಸ ಕಾಫಿ ಮಾರುಕಟ್ಟೆಗೆ ಬರುತ್ತದೆ.
ಶೇ. 95 ರಷ್ಟು ಬೆಳೆಗಾರರ ಬಳಿ ಕಾಫಿ ದಾಸ್ತಾನು ಇಲ್ಲವಾಗಿದ್ದು, ಹೊಸ ಕಾಫಿ ಬರುವವರೆಗೂ ಇದೇ ಧಾರಣೆ ಇರುವ ಖಾತ್ರಿ ಇಲ್ಲ. ಹೀಗಾಗಿ ದರ ಏರಿಕೆಯ ಲಾಭ ಬೆಳೆಗಾರರಿಗೆ ಲಭ್ಯವಾಗುತ್ತಿಲ್ಲ.
ಕಾಫಿ ಬೆಳೆಗಾರರ ಬದುಕಿನಲ್ಲಿ ಚೆಲ್ಲಾಟ
ಕಾಫಿ ಬೆಳೆಗಾರರ ಬದುಕಲ್ಲಿ ಹವಾಮಾನ ಮತ್ತು ಧಾರಣೆ ಸದಾ ಚೆಲ್ಲಾಟವಾಡುತ್ತಿರುತ್ತದೆ. ಬ್ರೆಜಿಲ್ ಮತ್ತು ವಿಯೆಟ್ನಾಂನಲ್ಲಿ ಇಳುವರಿ ಚೆನ್ನಾಗಿದ್ದರೆ ಭಾರತದ ಕಾಫಿಗೆ ಸಹಜವಾಗಿಯೇ ಬೇಡಿಕೆ ಕಡಿಮೆಯಾಗಿ ಧಾರಣೆಯೂ ಕುಸಿಯುತ್ತದೆ. ಯಾವಾಗ ಬ್ರೆಜಿಲ್, ವಿಯೆಟ್ನಾಂನಲ್ಲಿ ಹವಾಮಾನ ವೈಪರೀತ್ಯದಿಂದ ಕಾಫಿ ಇಳುವರಿ ನೆಲ ಕಚ್ಚುತ್ತದೋ ಆಗ ಭಾರತದ ಕಾಫಿಗೆ ಭಾರೀ ಡಿಮ್ಯಾಂಡ್ ಸೃಷ್ಟಿಯಾಗುತ್ತದೆ.
ಆದರೆ, ಹೀಗೆ ಧಾರಣೆ ಹೆಚ್ಚಾದ ಹೊತ್ತಿನಲ್ಲಿ ಕಾಫಿ ಬೆಳೆಗಾರರ ಬಳಿ ಮಾರಾಟ ಮಾಡಲು ಕಾಫಿ ದಾಸ್ತಾನು ಇರುವುದೇ ಇಲ್ಲ. ಕೆಲವೇ ಕೆಲವು ದೊಡ್ಡ ಬೆಳೆಗಾರರು, ವರ್ತಕರ ಬಳಿ ದಾಸ್ತಾನು ಇರುವ ಕಾಫಿಗೆ ಈ ಧಾರಣೆ ಲಭ್ಯವಾಗುತ್ತದೆ.
ಕಾಫಿಪುಡಿ ದುಬಾರಿ
ಕಾಫಿ ಪುಡಿ ತಯಾರಿಕಾ ಘಟಕಗಳಲ್ಲಿ ಕೆಲವರು ಮಾತ್ರ ಸ್ವಂತ ತೋಟದ ಕಾಫಿ ಬೀಜಗಳನ್ನು ದಾಸ್ತಾನಿರಿಸಿಕೊಂಡು ತಯಾರಿಸುತ್ತಾರೆ. ಆದರೆ, ಬಹುತೇಕ ಕಾಫಿಪುಡಿ ಉತ್ಪಾದನಾ ಘಟಕಗಳು ಕಾಫಿಬೀಜಗಳನ್ನು ಖರೀದಿಸಿಯೇ ತಯಾರಿಸಬೇಕು. ಕಾಫಿಧಾರಣೆ 20,000ಕ್ಕೆ ತಲುಪಿರುವ ಜತೆಗೆ ಕೊರತೆಯೂ ಉಂಟಾಗಿದೆ.
ಇದರಿಂದ ಬೆಂಗಳೂರಿನಲ್ಲಿ ಕಾಫಿಪುಡಿ ದರ ಒಂದು ಕೆ.ಜಿ.ಗೆ 100 ರೂ. ಹೆಚ್ಚಾಗಿದೆ. ಚಿಕ್ಕಮಗಳೂರಿನಲ್ಲಿ ಉತ್ತಮ ಗುಣಮಟ್ಟದ ಕಾಫಿಪುಡಿಯನ್ನು ಕೆ.ಜಿ.ಗೆ 480 ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇನ್ನೆರಡು ದಿನದಲ್ಲಿ ಕಾಫಿಪುಡಿ ದರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಕಾಫಿಧಾರಣೆಯ ನಿಯಂತ್ರಣ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿರುವುದರಿಂದ ಇದರ ಮೇಲೆ ಸರಕಾರಗಳು ಕೂಡ ಹಿಡಿತ ಸಾಧಿಸಲು ಸಾಧ್ಯವಿಲ್ಲ. ಹೀಗಾಗಿ ಬೆಲೆ ಏರಿಕೆಯ ಬಿಸಿಯನ್ನು ಗ್ರಾಹಕರು ಅನುಭವಿಸುವುದು ಅನಿವಾರ‍್ಯವಾಗಲಿದೆ.
ಬೆಳೆಗಾರರ ಬಳಿ ಕಾಫಿ ಇಲ್ಲ, ಮಾರುಕಟ್ಟೆಯಲ್ಲಿಯೂ ಕಾಫಿ ಸಿಗುತ್ತಿಲ್ಲ. ಕಾಫಿ ಕ್ಯೂರರ್ಸ್ ಬಳಿ ಒಂದಷ್ಟು ದಾಸ್ತಾನಿದೆ. ಅದು ಶೀಘ್ರದಲ್ಲೇ ಖಾಲಿಯಾಗುವ ಸಾಧ್ಯತೆ ಇದೆ. ರೊಬಸ್ಟಾ ಕಾಫಿ ಎಲ್ಲಿಯೂ ಸಿಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಕಾಫಿ ಪುಡಿ ಉತ್ಪಾದನೆಯನ್ನು ಸಹ ನಿಲ್ಲಿಸುವ ಸಾಧ್ಯತೆ ಇದೆ. ಇನ್ನು ಆರು ತಿಂಗಳು ಕಾಫಿ ದರದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.