ಬದುಕು ಬೊಗಸೆಯಲಿ ಹಿಡಿದಿಟ್ಟ ನೀರಿನಂತೆ

ವಿಜಯ ದರ್ಪಣ ನ್ಯೂಸ್….

ಬದುಕು ಬೊಗಸೆಯಲಿ ಹಿಡಿದಿಟ್ಟ ನೀರಿನಂತೆ

• ಜಯಶ್ರೀ. ಜೆ. ಅಬ್ಬಿಗೇರಿ, ಬೆಳಗಾವಿ

ವಿಲಿಯಂ ಜೇಮ್ಸ್ ಪ್ರಕಾರ ಬಹುತೇಕ ಮಂದಿ ತಮ್ಮ ದೈಹಿಕ ಬೌದ್ಧಿಕ ಅಥವಾ ನೈತಿಕ ಅಸ್ತಿತ್ವದ ತೀರ ಸೀಮಿತ ವಲಯದೊಳಗೆ ಬದುಕುತ್ತಿರುತ್ತಾರೆ. ಆದರೆ ನಮ್ಮಲ್ಲಿ ಅಪಾರ ಶಕ್ತಿ ಅಡಗಿದೆ. ಅದೆಷ್ಟೆಂಬುದನ್ನು ನಾವು ಕನಸು ಕಾಣಲೂ ಸಾಧ್ಯವಿಲ್ಲ, ಜೀವನ ತುಂಬಾ ಸರಳ ಇದೆ ಅದನ್ನು ನಾವೇ ಸಂಕೀರ್ಣವಾಗಿಸಿದ್ದೇವೆ ಎಂಬುದು ಬಲ್ಲವರ ನುಡಿ. ಬದುಕು ಸಂಬಂಧಗಳ ಸುತ್ತ ಹೆಣೆದಿರುವ ಕಥೆ. ದರಲ್ಲಿ ಸೋತು ಗೆಲ್ಲಬೇಕು, ಸೋಲುವುದರಲ್ಲೂ ಒಂದು ಸಂಭ್ರಮವಿದೆ ಎನ್ನುವುದು ಬುದ್ದಿಜೀವಿಗಳ ಅಭಿಪ್ರಾಯ.

ಜತೆಗಿರುವ ಜೀವಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ, ಸ್ಪರ್ಧೆಯ ದಾವಂತದ ಓಟದಲ್ಲಿ ನಿರತರಾಗಿರುವ ನಮಗೆ ದಿನಗಳು ಉರುಳಿದ್ದೇ ತಿಳಿಯುತ್ತಿಲ್ಲ. ಇಳಿ ಸಂಜೆ ಪಯಣದಲ್ಲಿ ಒಳಗಣ್ಣು ತೆರೆದು ನೋಡಿದರೆ ಬದುಕಿನ ಪುಸ್ತಕದಲ್ಲಿ ಒಂದೆರಡು ಪುಟಗಳು ಮಾತ್ರ ಮಿಕ್ಕಿರುತ್ತವೆ. ಜೀವನದ ಹೊತ್ತಿಗೆಯಲ್ಲಿ ಕೇವಲ ಒಂದೆರಡು ಪುಟ ಮಿಕ್ಕುವ ಹೊತ್ತಿಗೆ ಕಣ್ಣೆರೆಯದೇ, ಮೊದಲೇ ಅರ್ಥ ಮಾಡಿಕೊಳ್ಳಲು ಸೋಲುವುದೇಕೆ? ಎಂದು ಯೋಚಿಸಿದರೆ ಅನೇಕ ಸುಳಿಹುಗಳು ಸಿಗುತ್ತವೆ.

ಬಂಧಗಳ ಬಂಧ ಗಟ್ಟಿಗೊಳ್ಳಲಿ

ಮನಸು ಮುಸಿಸಿಕೊಂಡರೆ ಜನ ಗಿಜಿ ಗಿಜಿ ತುಂಬಿರುವ ಜಾಗದಲ್ಲೂ ಏಕಾಂಗಿ ಬಾವ. ಈ ಜಗದ ಗೋಜಲುಗಳೇ ಬೇಡ. ಸಂತೆ ಜಾತ್ರೆಯಲ್ಲೂ ಜನರೊಂದಿಗೆ ಬೆರೆಯ ಲಾರೆ ಎನ್ನುವ ಹಟ. ಭಾವದೊರತೆಯ ಸೆಲೆ ಜಿನುಗುತ್ತಿದ್ದಾಗಲೂ ಅಂತರಂಗದ ನುಡಿ ಮುತ್ತುಗಳನು ಉದುರಿಸಲು ತುಟಿ ಬಿಗಿ ಹಿಡಿಯುವುದು. ಹೂವಿನಂತೆ ಅರಳಿದ ಮನದ ಶ್ರೀಗಂಧವ ಸೂಸಲು ಬಿಡದೇ ಅಹಮಿಕೆಯ ದಿಬ್ಬವನೇರಿ ಕುಳಿತುಕೊಂಡರೆ ಜೀವನ ನರಕವಾಗುವುದು ಖಚಿತ. ಕಣ್ಣೀರೆನ್ನುವುದು ಯಾವತ್ತೂ ಕಣ್ಣಂಚನ್ನು ದಾಟಿ ಕೆನ್ನೆಗಿಳಿಯದಂತೆ ಮುದ್ದಾಗಿ ನೋಡಿಕೊಂಡ ಅಮ್ಮನ ಋಣವ ತೀರಿಸಲು ಅಸಾಧ್ಯ. ವಯಸ್ಸಾದ ಅಮ್ಮನೊಂದಿಗೆ ಹೃದಯದಿಂದ ಹೊಮ್ಮುವ ಎರಡು ಮಾತು ಆಕೆಯ ಕಣ್ಣಿನಿಂದ ಪನ್ನೀರು ಜಿನುಗಿಸುತ್ತದೆ. ಅಪ್ಪ, ಅಮ್ಮ, ಅಕ್ಕ, ತಂಗಿ, ಅಣ್ಣ ತಮ್ಮ ಸ್ನೇಹಿತರು ನೆಂಟರು ಆಪ್ತರು ಒಟ್ಟಿನಲ್ಲಿ ಸುತ್ತಲೂ ಮುತ್ತಿಕೊಂಡಿರುವ ಬಂಧಗಳ ಬಂಧ ಗಟ್ಟಿಕೊಳಿಸಿದರೆ ಜೀವನವಿಡೀ ಬೆಚ್ಚನೆಯ ಭಾವದಲ್ಲಿ ಹರುಷದ ಜೋಕಾಲಿ ಜೀಕಬಹದು.

ಆದದ್ದೆಲ್ಲ ಒಳ್ಳೆಯದಕ್ಕೆ

ಚೀನಿಯರು ಬಿಕ್ಕಟ್ಟು ಎನ್ನುವ ಪದಕ್ಕೆ ಅಪಾಯ ಮತ್ತು ಅವಕಾಶ ಎಂಬ ಎರಡು ಅರ್ಥಗಳನ್ನು ನೀಡುತ್ತಾರೆ. ಅದನ್ನೇ ನಮ್ಮವರು ಆದದ್ದೆಲ್ಲಾ ಒಳ್ಳೆಯದಕ್ಕೆ ಆಗಿದೆ ಎಂದಿದ್ದಾರೆ.ಎಂಥ ದುರಂತಲ್ಲೂ ಒಂದು ಒಳಿತಿನ ಮುಖ ಅಡಗಿರುತ್ತದೆ. ಅವಕಾಶಗಳು ಅದರಲ್ಲಿ ಹುದುಗಿಕೊಂಡಿರುತ್ತವೆ. ಅವುಗಳನ್ನು ಹೆಕ್ಕಿ ತೆಗೆಯುವ ಸಮಾಧಾನ ಚಿತ್ತ, ಜಾಣೆ ಬೇಕಷ್ಟೆ. ಬದುಕಿನಲ್ಲಿ ನೋವು ಕಲಿಸುವಂಥ ಪಾಠ ಬೇರೆ ಯಾವುದೂ ಕಲಿಸಲು ಸಾಧ್ಯವಿಲ್ಲ. ನಿಜ ಹೇಳಬೇಕೆಂದರೆ ನೋವು ಅತ್ಯದ್ಭುತ ಶಿಕ್ಷಕ. ನೋವಿನ ಶಾಲೆಯಲ್ಲಿ ತಕ್ಕ ಪಾಠ ಕಲಿತವರು ದೊಡ್ಡ ಮನುಷ್ಯರಾಗಿ. ನೆಮ್ಮದಿ ಬದುಕು ಕಟ್ಟಿಕೊಂಡ ಉದಾಹರಣೆಗಳು ಇತಿಹಾಸದಲ್ಲಿ ಲೆಕ್ಕವಿಲ್ಲದಷ್ಟಿವೆ.

ನಲಿವಿನ ಗಳಿಗೆಗಿಂತ ನೋವಿನ ಕ್ಷಣ ಹೆಚ್ಚು ಖುಷಿ ನೀಡುತ್ತದೆ. ಆದರೂ ಬದುಕಿನ ಯಾತ್ರೆಯಲ್ಲಿ ನಾವು ಸದಾ ಹಸನ್ಮುಖಿಗಳಾಗಿರಬೇಕು. ಮಂದಹಾಸದಿಂದ ಕೂಡಿರಬೇಕು. ಅಳು ಮೋರೆಯಿಂದ ನಾವು ಅಧ್ಯಾತ್ಮಿಕ ಜೀವಿಗಳಲಾಗಲಾರೆವು ಎಂದಿದ್ದಾರೆ ಸ್ವಾಮಿ ವಿವೇಕಾನಂದರು. ಗಿಡದಲ್ಲಿ ಎಷ್ಟೇ ಮುಳ್ಳುಗಳಿದ್ದರೂ ಆದ ರಲ್ಲಿ ಹೂವು ಅರಳಬೇಕು. ಹಾಗೇಯೇ ಜೀವನದಲ್ಲಿ ಎಷ್ಟೇ ನೋವು ತುಂಬಿ ದ್ದರೂ ಮುಖದಲ್ಲಿ ನಗು ತುಂಬಿರಬೇಕು. ಆಗ ಜೀವನ ಆಪ್ತವಾಗುತ್ತದೆ. ಕನಸಿನ ಕೋಟೆಯಲ್ಲಿರುವ ಬದುಕು ನನಸಿನ ತೆಕ್ಕೆಗೆ ಬೀಳಲು ಅನುಕೂಲ ವಾಗುವುದು.

ಬೊಗಸೆಯಲ್ಲಿ ಹಿಡಿದಿಟ್ಟ ನೀರಿನಂತೆ

ಬದುಕು ಎಂದರೆ ನದಿಯಂತೆ ಕೊನೆಯಿಲ್ಲದ ಪಯಣ. ಯಾವುದೂ ನಮ್ಮ ಜೊತೆಗೆ ಉಳಿಯುವುದಿಲ್ಲ. ಉಳಿಯುವುದು ಒಂದೇ ನಾವು ಇತರರಿಗೆ ಮಾಡಿದ ಪುಣ್ಯದ ಕಾರ್ಯಗಳು. ಪ್ರಶಾಂತವಾದ ಪ್ರಕೃತಿಯ ಸನ್ನಿಧಾನದಲ್ಲಿ ನೆಮ್ಮದಿಯ ಬದುಕು ಸವಿಯುವ ಅವಕಾಶವಿದೆ ಅದು ಬಿಟ್ಟು ಕ್ಷಣ ಕ್ಷಣ ಅಗತ್ಯಕ್ಕಿಂತ ಹೆಚ್ಚು ಹಣ, ಸಂಪತ್ತು, ಆಸ್ತಿ, ಗಳಿಕೆಯ ಹಿಂದೆ ಬೆನ್ನು ಹತ್ತಿ ಅಮೂಲ್ಯವಾದ ಜೀವನ ವ್ಯರ್ಥ ಮಾಡಿಕೊಳ್ಳುತ್ತೇವೆ. ಇದನ್ನರಿತ ದಾಸರು. ಮಾನವ ಜೀವನ ದೊಡ್ಡದು. ಇದ ಹಾಳು ಮಾಡಿಕೊಳ್ಳಲುಬೇಡಿ ಹುಚ್ಚಪ್ಪಗಳಿರಾ ಎಂದಿದ್ದಾರೆ. ಬೊಗಸೆಯಲ್ಲಿ ಹಿಡಿದ ನೀರು ಬೆರಳಿನ ಸಂದಿಯಿಂದ ಸೋರಿ ಹೋಗುವಂತೆಯೇ ಬದುಕಿನ ಆಯಸ್ಸು ಇಂದ್ರೀಯಗಳ ಅರ್ಥಹೀನ ಸುಖಗಳಲ್ಲಿ ಕಳೆದು ಹೋಗುತ್ತದೆ. ಸಿಕ್ಕವರನ್ನು ಕಳೆದುಕೊಂಡು ಸಿಗಲಾರದವರನ್ನು ಹುಡುಕುತ್ತ, ಜೀವನದಿಯನ್ನು ವ್ಯಾಮೋಹಗಳಲ್ಲಿ ಹರಿಯಲು ಬಿಡುತ್ತೇವೆ. ಸಾಕು ಎಂದವನು ಸಾಹುಕಾರ. ತೃಪ್ತಿಯೇ ನಿಜವಾದ ಶ್ರೀಮಂತಿಕೆ. ಸಿರಿವಂತನೆಂಬ ಗರ್ವ ಬೇಡ. ಶವಮಂಚ ವೆಂಬ ಸಾಮಾನ್ಯ ವಾಹನದಲ್ಲಿ ಅಂತಿಮವಾಗಿ ನಾವೆಲ್ಲರೂ ಸಾಗಬೇಕಿದೆ. ದುಬಾರಿ ವಾಹನದಲ್ಲಿ ಪ್ರಯಾಣಿಸಿದವರು ಮತ್ತು ಕಾಲ್ನಡಿಗೆಯಲ್ಲಿ ಸಾಗಿದವ ರನ್ನು ಅದು ಸ್ವಾಗತಿಸುವುದು ಒಂದೇ ರೀತಿಯಲ್ಲಿ. ಬೊಗಸೆಯಲ್ಲಿ ಹಿಡಿದಿಟ್ಟ ಬದುಕು ಸೋರಿ ಹೋಗುವ ಮೊದಲು ಡೇಲ್ ಕಾರ್ನೆಗಿಯ ನುಡಿಯಂತೆ ಬೇರೆ ಯವರು ಚಪ್ಪಾಳೆ ತಟ್ಟುವ ಹಾಗೆ ಕೆಲಸ ಮಾಡುವುದಕ್ಕಿಂತ ನಮ್ಮ ಒಳ ಮನಸ್ಸು ಕೇಕೆ ಹಾಕುವಂತಹ ಸಾಧನೆ ಮಾಡೋಣ. ಉನ್ನತ ಬದುಕು ಬದುಕೋಣ.

ಜಯಶ್ರೀ. ಜೆ. ಅಬ್ಬಿಗೇರಿ, ಬೆಳಗಾವಿ