ಕಹಿ ನೆನಪು ತೊರೆದರೆ ಸಿಹಿ ಬದುಕು

ಲೇಖನ – ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨

ಕೈಯಲ್ಲಿರುವ ಈ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದೇವೆಂಬ ಅರಿವಿಲ್ಲದೆ ಹಳೆಯ ಸಂಗತಿಗಳ ನೆನಪಿನ ರಾಶಿ ಕೆದುಕುತ್ತ ಕಾಲ ಕಳೆಯುತ್ತೇವೆ. ಅದರಿಂದ ಏನೂ ಪ್ರಯೋಜನವಿಲ್ಲ ಎಂಬುದು ಗೊತ್ತಿದ್ದೂ ಅದರಲ್ಲಿ ಮುಳುಗುತ್ತೇವೆ. ಇಷ್ಟು ಸಾಲದೆಂಬಂತೆ ಹಳೆಯ ನೋವುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅದರ ಬಗ್ಗೆ ಯೋಚಿಸುತ್ತ ಕೊರಗುತ್ತೇವೆ. ಒಟ್ಟಿನಲ್ಲಿ ಈ ದಿನ ಈ ಕ್ಷಣ ಏನು ಮಾಡಬಲ್ಲೆವು. ಏನು ಮಾಡಿದರೆ ನೆಮ್ಮದಿಯ ಬದುಕು ಸೃಷ್ಟಿಸಬಲ್ಲೆವು ಎಂದು ಯೋಚಿಸುವುದರ ಗೊಡವೆಗೆ ಹೋಗುವುದೇ ಇಲ್ಲ. ಅವೇ ನೆನಪುಗಳನ್ನು ಮತ್ತು ಅವೇ ನೋವುಗಳನ್ನು ಮೆಲಕು ಹಾಕುತ್ತ ಜೀವನವನ್ನು ಸರ್ವನಾಶ ಮಾಡಲು ಅಡಿಪಾಯ ಹಾಕುತ್ತೇವೆ. ನೋವುಗಳ ನೆನಪುಗಳು ನಮ್ಮ ಬೆಳವಣಿಗೆಗೆ ಪೂರಕವಾಗುವುದಿಲ್ಲ ಎಂಬುದು ಗೊತ್ತಿದ್ದರೂ ಅದೇಕೆ ಜೀವನವನ್ನು ನಾವೇ ನಮ್ಮ ಕೈಯಾರೆ ಹಾಳು ಮಾಡಿಕೊಳ್ಳುತ್ತೇವೆ. ನಾವು ಸಾಮಾನ್ಯ ಮಾಹಿತಿಯನ್ನು ಮರೆತುಬಿಡುತ್ತೇವೆ, ಆದರೆ ನಮ್ಮ ಮೆದುಳು ಬಲವಾದ ಭಾವನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವ ಸಾಧ್ಯತೆ ಹೆಚ್ಚು. ಎಕ್‌ಹಾರ್ಟ್ ಟೋಲೆಯವರು ಹೇಳುವಂತೆ ’ಭೂತಕಾಲಕ್ಕೆ ವರ್ತಮಾನದ ಮೇಲೆ ಯಾವುದೇ ಶಕ್ತಿಯಿಲ್ಲ.’

ಕಹಿ ನೆನಪುಗಳು

ಕಹಿ ನೆನಪುಗಳು ನಮ್ಮ ಜಾಗೃತ ಮನಸ್ಸಿಗೆ ಮರಳುವ ಮಾರ್ಗವನ್ನು ಕಂಡುಕೊಳ್ಳುವ ಮತ್ತು ಅವು ಎಷ್ಟೇ ವಯಸ್ಸಾಗಿದ್ದರೂ ನಮ್ಮ ವರ್ತಮಾನದ ಕ್ಷಣವನ್ನು ಸ್ವಾಧೀನಪಡಿಸಿಕೊಳ್ಳುವ ಮಾರ್ಗವನ್ನು ಹೊಂದಿವೆ. ಹೆಚ್ಚಾಗಿ ಅವು ಎದ್ದು ಕಾಣುತ್ತವೆ. ಹಿಂದೆಂದೋ ಕಾಲೇಜು ದಿನಗಳಲ್ಲಿ ಪ್ರೀತಿಯ ಬಲೆಯಲ್ಲಿ ಬಿದ್ದುದನ್ನು ನೆನೆದು ನೋವು ಮಾಡಿಕೊಳ್ಳುವುದು ಸಾಮಾನ್ಯ. ಬಹುತೇಕ ಜನರು ಇಂದಿನ ದಿನವೂ ಅದನ್ನು ನೆನೆಯುತ್ತಲೇ ಇರುತ್ತಾರೆ. ಹಿಂದಿನ ದಿನಗಳಲ್ಲಿ ಹೀಗೆ ಸಿಲುಕಿ ಹಾಕಿಕೊಳ್ಳುವುದರಿಂದ ಇಂದಿನ ಈ ಕ್ಷಣ. ಹಾಳಾಗಿ ಹೋಗುವುದರಲ್ಲಿ ಸಂದೇಹವೇ ಇಲ್ಲ.

ಅಧ್ಯಯನಗಳು

1001089262

ಅದೃಷ್ಟವಶಾತ್, ಕೆಲವು ನೆನಪುಗಳು ಕಾಲಾನಂತರದಲ್ಲಿ ಮಾಯವಾಗುತ್ತವೆ. ಆದರೆ ಕೆಲ ಸಂದರ್ಭದಲ್ಲಿ ಮರೆಯಲು ಬಯಸುವ ಹಿಂದಿನ ಕ್ಷಣಗಳನ್ನು ನಿರಂತರವಾಗಿ ಅನುಭವಿಸುತ್ತಿರುವಂತೆ ಭಾಸವಾಗಬಹುದು. ಕೆಲವರಿಗೆ ಕೆಲವು ನೆನಪುಗಳ ಹಠಾತ್ ಮರುಕಳಿಸುವಿಕೆಯು ತೀವ್ರವಾಗಿ ತೊಂದರೆಗೆ ಈಡುಮಾಡಬಹುದು. ಅಥವಾ ದುರ್ಬಲಗೊಳಿಸಬಹುದು. ಬೇಡದ ನೆನಪುಗಳನ್ನು ನಿರ್ಬಂಧಿಸಲು ಅಥವಾ ಮರೆತುಬಿಡಲು ಸಾಧ್ಯವಿದೆ ಎಂದು ಕೆಲವು ಪುರಾವೆಗಳು ಸೂಚಿಸುತ್ತವೆ. ಆದಾಗ್ಯೂ, ಇದು ಹೇಗೆ ಮತ್ತೆ ಏಕೆ ಸಂಭವಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಹೆಚ್ಚಿನ ಸಂಶೋಧನೆ ಅಗತ್ಯ. ವಿಜ್ಞಾನಿಗಳು ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಉದ್ದೇಶಪೂರ್ವಕ ಮರೆತು ಹೋಗುವಲ್ಲಿ ಯಾವ ಮೆದುಳಿನ ವ್ಯವಸ್ಥೆಗಳು ಪಾತ್ರವಹಿಸುತ್ತವೆ ಎಂಬುದನ್ನು ನ್ಯೂರೋ ಇಮೇಜಿಂಗ್ ಅಧ್ಯಯನಗಳು ಪ್ರದರ್ಶಿಸಿವೆ. ಮತ್ತು ಜನರು ತಮ್ಮ ಪ್ರಜ್ಞೆಯಿಂದ ನೆನಪುಗಳನ್ನು ಉದ್ದೇಶಪೂರ್ವಕವಾಗಿ ನಿರ್ಬಂಧಿಸಲು ಸಾಧ್ಯವಿದೆ ಎಂದು ಅಧ್ಯಯನಗಳು ತೋರಿಸಿವೆ.

ಕಷ್ಟ ಸಾಧ್ಯ

ಮನಸ್ಸಿಗೆ ಬೇಡವಾದ ನೆನಪುಗಳು ನುಸುಳಿದಾಗ ಅದನ್ನು ತಡೆಯಲು ಬಯಸುವುದು ಮಾನವನ ಸಹಜ ಪ್ರತಿಕ್ರಿಯೆ. ನಾವು ಒಂದು ನೆನಪನ್ನು ಮರೆಯಲು ಹಲವು ಕಾರಣಗಳಿರಬಹುದು. ಕೆಲವು ನೆನಪುಗಳು ನಮ್ಮನ್ನು ಮುಜುಗರದಿಂದ ಕುಗ್ಗಿಸಬಹುದು, ಇನ್ನು ಕೆಲವು ಹೆಚ್ಚು ದುಃಖಕರ ಅಥವಾ ಆಘಾತಕಾರಿ ಆಗಿರಬಹುದು. ಬಹುಶಃ ನಾವು ನಮ್ಮ ದಿನವನ್ನು ಕಳೆಯುವಾಗ ಹಿಂದಿನ ಕೆಲವು ಜನರನ್ನು ಅಥವಾ ವಿಷಯಗಳನ್ನು ನೆನಪಿಸಿಕೊಳ್ಳಲು ಬಯಸುವುದಿಲ್ಲ. ಬೇಡದ ನೆನಪುಗಳನ್ನು ನಿಭಾಯಿಸುವುದು ಭಾವನಾತ್ಮಕ ನೆನಪುಗಳನ್ನು ಮರೆಯುವುದು ಕಷ್ಟ ಸಾಧ್ಯ. ಬಗೆಹರಿಯದ ಭಾವನೆಗಳು ಅಥವಾ ಕೆಟ್ಟ ನೆನಪುಗಳು ನಮ್ಮನ್ನು ಮತ್ತೆ ಮತ್ತೆ ಕಾಡುತ್ತವೆ. ಕೆಲವು ಸಲಹೆಗಳನ್ನು ಅನುಸರಿಸುವ ಮೂಲಕ ಬೇಡದ ನೆನಪುಗಳನ್ನು ತೊಡೆದು ಹಾಕಬಹುದು.

ತಪ್ಪಿಸಿ

ಎಲ್ಲ ಪ್ರಚೋದಕಗಳನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಕೆಲವನ್ನು ತಪ್ಪಿಸಬಹುದು. ನೆನಪನ್ನು ಪ್ರಚೋದಿಸುವ ವಸ್ತುಗಳು ಮತ್ತು ಸ್ಥಳಗಳನ್ನು ತಪ್ಪಿಸಬೇಕು. ಹೀಗೆ ಮಾಡುವುದರಿಂದ ಅದು ನಿಧಾನವಾಗಿ ಮತ್ತು ಸ್ಥಿರವಾಗಿ ಮಾಯವಾಗುತ್ತದೆ. ಅವುಗಳನ್ನು ಹೆಚ್ಚು ಮುಖ್ಯವಾದ ಆಲೋಚನೆಳಿಂದ ಬದಲಾಯಿಸಿ.

ಗಮನವಹಿಸಿ

ಕಹಿ ನೆನಪುಗಳನ್ನು ಒಳ್ಳೆಯದರೊಂದಿಗೆ ಜೋಡಿಸಲು ಪ್ರಯತ್ನಿಸಿ. ಉದಾಹರಣೆಗೆ ನಿಮ್ಮ ಪ್ರೀತಿಪಾತ್ರರ ಜೊತೆ ಜಗಳವಾಡಿದ ಸಮಯದ ಬಗ್ಗೆ ಯೋಚಿಸುವುದನ್ನು ನಿಲ್ಲಿಸಲು ನಿಮಗೆ ಸಾಧ್ಯವಾಗದಿದ್ದರೆ ಆ ನೆನಪನ್ನು ನೀವು ಚೆನ್ನಾಗಿ ಆನಂದಿಸಿದ ಸಮಯದ ನೆನಪಿನೊಂದಿಗೆ ಜೋಡಿಸಿ. ಸಂತೋಷದ ನೆನಪುಗಳಿಗೆ ಹೆಚ್ಚಿನ ಗಮನ ನೀಡಬೇಕು. ಆ ನೆನಪುಗಳನ್ನು ಸಕ್ರಿಯವಾಗಿ ಕೆಳಕ್ಕೆ ತಳ್ಳಲು ಪ್ರಯತ್ನಿಸುವುದಕ್ಕಿಂತ ಆರೋಗ್ಯಕರ ಪರ್ಯಾಯಗಳೊಂದಿಗೆ ಗಮನವನ್ನು ಬದಲಾಯಿಸುವುದು ಉತ್ತಮ. ಕಹಿ ನೆನಪಿನ ಮೇಲೆ ಕೇಂದ್ರೀಕರಿಸುವ ಬದಲು ಹಿಂದಿನ ಸವಿ ಗಳಿಗೆಗಳ ಕುರಿತು ಯೋಚಿಸಲು ಪ್ರಯತ್ನಿಸಿ. ಅನಪೇಕ್ಷಿತ ನೆನಪನ್ನು ಒಳ್ಳೆಯದರೊಂದಿಗೆ ಬದಲಾಯಿಸಲು ಮೆದುಳಿಗೆ ತರಬೇತಿ ನೀಡಬೇಕು.
ವರ್ತಮಾನದಲ್ಲಿ ಬದುಕಿ ದೈನಂದಿನ ಚಟುವಟಿಕೆಗಳ ಸಮಯದಲ್ಲಿ ನಮ್ಮ ಮನಸ್ಸನ್ನು ಅಲೆದಾಡಲು ಬಿಡುತ್ತೇವೆ. ಮತ್ತು ಕಹಿ ನೆನಪುಗಳ ಸುತ್ತ ತಿರುಗುವ ಮನಸ್ಸನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಹಿಂದಿನ ಕಹಿ ಘಟನೆಯ ಮೇಲೆ ಮತ್ತು ಎಲ್ಲೆಲ್ಲೋ ತಿರುಗುವ ಮನಸ್ಸನ್ನು ಪ್ರಸ್ತುತ ಕ್ಷಣದ ಮೇಲೆ ಕೇಂದ್ರೀಕರಿಸುವುದರಿಂದ ಅದು ಯೋಚಿಸುವುದನ್ನು ಕಡಿಮೆ ಮಾಡಲು ಮತ್ತು ಹೆಚ್ಚು ಸಕಾರಾತ್ಮಕ ಭಾವನೆಯನ್ನು ಅನುಭವಿಸಲು ಸಹಾಯ ಮಾಡುತ್ತದೆ. ಆಲೋಚನೆಗಳನ್ನು ಬದಲಾಯಿಸುವುದು ಮತ್ತು ವರ್ತಮಾನದಲ್ಲಿ ಉಳಿಯುವುದು ನಿರಂತರ ಕಹಿ ನೆನಪುಗಳಿಂದ ಮುಕ್ತಗೊಳಿಸಬಹುದು. ನಕಾರಾತ್ಮಕ ಆಲೋಚನೆಗಳ ವಿರುದ್ಧ ಹೋರಾಡುವ ಮೂಲಕ ಮತ್ತು ಜಾಗರೂಕರಾಗಿರುವುದರಿಂದ, ನೀವು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಬಹುದು. ನಂತರ ನೀವು ಸಕಾರಾತ್ಮಕ ಪ್ರತಿಫಲದಾಯಕ ವಿಷಯಗಳ ಮೇಲೆ ಕೇಂದ್ರೀಕರಿಸಬಹುದು.

ಕಾರ್ಯನಿರತರಾಗಿ

ನಿಮ್ಮ ವೇಳಾಪಟ್ಟಿಯನ್ನು ಪೂರ್ಣ ಕೆಲಸಗಳಿಂದ ತುಂಬಿರಿ. ಇದರಿಂದ ನಕಾರಾತ್ಮಕ ಆಲೋಚನೆಗಳಲ್ಲಿ ಮುಳುಗಲು ನಿಮಗೆ ಕಡಿಮೆ ಸಮಯ ಸಿಗುತ್ತದೆ. ನೀವು ಒಬ್ಬಂಟಿಯಾಗಿ ಹೆಚ್ಚು ಸಮಯ ಕಳೆಯುವ ಪ್ರವೃತ್ತಿಯನ್ನು ಹೊಂದಿದ್ದರೆ, ಸ್ನೇಹಿತರೊಂದಿಗೆ ಹೆಚ್ಚು ಹೊರಗೆ ಹೋಗಲು ಅಥವಾ ನಿಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ನೀಡಿ. ಆತ್ಮೀಯರನ್ನು ಹೆಚ್ಚಾಗಿ ಭೇಟಿ ಮಾಡಲು ಪ್ರಯತ್ನಿಸಿ.

ಧ್ಯಾನ ಅಭ್ಯಾಸ

ಕಹಿ ನೆನಪುಗಳು ಕೆಟ್ಟ ಘಟನೆಗಳು ಮನಸ್ಸನ್ನು ಬದಲಾಯಿಸಲು ದೂಮ್ರಪಾನ, ಮದ್ಯಪಾನ ಬೇರೆ ಇನ್ನಾವುದೋ ಚಟಗಳಿಗೆ ಬಲಿಯಾಗಬಾರದು. ಮಾದಕ ವಸ್ತುಗಳಿಗೆ ಒಗ್ಗಿಕೊಳ್ಳುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಖಿನ್ನತೆ ಮತ್ತು ಆತಂಕಕ್ಕೆ ಒಳಪಡಿಸುತ್ತದೆ. ಆದ್ದರಿಂದ ಯೋಚಿಸುವ ರೀತಿಯನ್ನು ಬದಲಾಯಿಸುವುದರಿಂದ ಕಹಿ ನೆನಪುಗಳ ಅಟ್ಟಹಾಸವನ್ನು ನಿಲ್ಲಿಸಬಹುದು. ಮೈಂಡ್‌ಫುಲ್‌ನೆಸ್ ಮತ್ತು ಧ್ಯಾನ ಅಭ್ಯಾಸಗಳು ನಿಮ್ಮ ಸುತ್ತಲೂ ಏನಿದೆ ಎಂಬುದರ ಬಗ್ಗೆ ಹೆಚ್ಚಿನ ಅರಿವು ಮೂಡಿಸುತ್ತವೆ. ಕಹಿ ನೆನಪಿನ ಚಕ್ರವನ್ನು ಮುರಿಯಲು ಶಾಂತಿಯನ್ನು ಕಂಡುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

ಆರೋಗ್ಯಕರ ಜೀವನ ಶೈಲಿ

ಒತ್ತಡ ಮತ್ತು ನಿದ್ರೆಯ ಕೊರತೆಯು ಅನಗತ್ಯ ನೆನಪುಗಳನ್ನು ಪ್ರಚೋದಿಸಬಹುದು. ವ್ಯಾಯಾಮ, ಪೌಷ್ಟಿಕ ಆಹಾರ, ಸೇವನೆ ಸರಿಯಾದ ನಿದ್ರೆಗೆ ಜಾರಲು ಸಹಕರಿಸುತ್ತದೆ. ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಹೆಚ್ಚಿಸುವ ಆರೋಗ್ಯಕರ ಜೀವನ ಶೈಲಿಯನ್ನು ಅಭ್ಯಾಸ ಮಾಡಬೇಕು. ಇದರೊಂದಿಗೆ ಮೈಂಡ್‌ಫುಲ್‌ನೆಸ್ ಅನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ಆಲೋಚನೆಗಳನ್ನು ವರ್ತಮಾನದ ಕ್ಷಣದಲ್ಲಿ ಇರಿಸಿಕೊಳ್ಳಲು ಸಹಾಯವಾಗುತ್ತದೆ. ವಿಶ್ವಾಸಾರ್ಹ ಸ್ನೇಹಿತ, ಕುಟುಂಬ ಅಥವಾ ಮಾನಸಿಕ ಆರೋಗ್ಯತಜ್ಞರೊಂದಿಗೆ ಮಾತನಾಡುವುದರಿಂದ ಹೊಸ ಒಳನೋಟಗಳು ಮತ್ತು ಭಾವನಾತ್ಮಕ ಪರಿಹಾರ ಸಿಗುತ್ತದೆ. ಒಳನುಗ್ಗುವ ಆಲೋಚನೆಗಳನ್ನು ನಿಭಾಯಿಸಲು ದಿನಚರಿ ಬರೆಯುವುದರಿಂದ ನಿಮ್ಮ ಮನಸ್ಸನ್ನು ತೆರೆವುಗೊಳಿಸಬಹುದು. ಕಹಿ ನೆನಪುಗಳಿಂದ ಮುಕ್ತರಾಗಲು ಇರುವ ಉತ್ತಮ ಮಾರ್ಗವಾಗಿದೆ.

ಕೊನೆ ಹನಿ

ಸವಿನೆನಪುಗಳು ಬೇಕು ಸವಿಯಲೀ ಬದುಕು ಕಹಿನೆನಪು ಸಾಕೊಂದು ಮಾಸಲೀ ಬದುಕು ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲ ಕಾಡುತ್ತಿದೆ ಮನವ. ಎನ್ನುವ ಗೀತೆಯಂತೆ ಅರ್ಥಪೂರ್ಣ ಬದುಕನ್ನು ಹಾಳಾಗಿಸಲು ಕಹಿನೆನಪುಗಳು ಸಾಕು. ಬದುಕಿನಲ್ಲಿ ಆಗಾಗ ಮಿಂಚಿ ಮಾಯವಾಗುವ ಸವಿ ನೆನಪುಗಳು ಬೇಕು ಸುಂದರ ಬದುಕಿಗೆ. ಹಾಗಾದರೆ ತಡವೇಕೆ ಕಹಿನೆನಪುಗಳಲ್ಲಿ ಕರಗುವುದನ್ನು ತೊರೆದು ಸವಿನೆನಪುಗಳ ಬಾಚಿ ತಬ್ಬಿಕೊಳ್ಳೋಣ.

1001088396