ರೌಡಿಗಳು ಮತ್ತು ಜೇಬುಗಳ್ಳರು…….
ವಿಜಯ ದರ್ಪಣ ನ್ಯೂಸ್…
ರೌಡಿಗಳು ಮತ್ತು ಜೇಬುಗಳ್ಳರು…….


ವ್ಯಕ್ತಿ ಒಬ್ಬನೇ ಅಥವಾ ತನ್ನ ಸಹಚರರೊಂದಿಗೆ ಸೇರಿ ಕಾನೂನು ಬಾಹಿರವಾಗಿ ಖಾಸಗಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜನರನ್ನು ಹೆದರಿಸಿ ಹಣ, ವಸ್ತುಗಳನ್ನು ತೆಗೆದುಕೊಂಡು ಹೋಗುವುದು, ಹೆಣ್ಣುಮಕ್ಕಳನ್ನು ಹೆದರಿಸಿ ಶೋಷಿಸುವುದು, ತನಗೆ ಪ್ರತಿರೋಧ ತೋರುವವರ ಮೇಲೆ ಹಲ್ಲೆ ನಡೆಸುವುದು, ಪೋಲೀಸರಿಗೂ ಹೆದರದೆ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಅದನ್ನು ಒಂದು ಗೌರವ ಎಂಬಂತೆ ಭಾವಿಸಿ ಮತ್ತೆ ಕಸುಬು ಮುಂದುವರಿಸುವುದು, ರಾಜಕಾರಣಿಗಳ ಸಹವಾಸದಲ್ಲಿ ರಕ್ಷಣೆ ಪಡೆಯುವುದು, ಚುನಾವಣಾ ಅಕ್ರಮಗಳಲ್ಲಿ ಭಾಗವಹಿಸುವುದು, ಅಮಾಯಕ ವ್ಯಾಪಾರಿಗಳ ಬಳಿ ರೋಲ್ ಕಾಲ್ ಮಾಡುವುದು ಒಟ್ಟಿನಲ್ಲಿ ಸಾರ್ವಜನಿಕರಲ್ಲಿ ವಿನಾಕಾರಣ ಭೀತಿ ಹುಟ್ಟಿಸಿ ಅದನ್ನೇ ಉದ್ಯೋಗ ಮಾಡಿಕೊಂಡಿರುವ ವರ್ಗಕ್ಕೆ ರೌಡಿಸಂ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ.
70/80/90 ರ ದಶಕದಲ್ಲಿ ಇದು ತುಂಬಾ ಜೋರಾಗಿತ್ತು. ರೌಡಿಗಳನ್ನು ಕಂಡರೆ ಜನ ಹೆದರುತ್ತಿದ್ದರು. ಅವರ ಸಹವಾಸಕ್ಕೆ ಯಾರೂ ಹೋಗುತ್ತಿರಲಿಲ್ಲ. ಪೋಲೀಸರು ಸಹ ರಾಜಕಾರಣಿಗಳ ಪ್ರಭಾವಕ್ಕೆ ಒಳಗಾಗಿ ರೌಡಿಗಳ ಬಗ್ಗೆ ಗಂಭೀರ ಕ್ರಮ ಕೈಗೊಳ್ಳುತ್ತಿರಲಿಲ್ಲ. ಬದಲಾಗಿ ಸಾರ್ವಜನಿಕರಿಗೇ ಅವರ ಸಹವಾಸಕ್ಕೆ ಹೋಗಬೇಡಿ ಎಂದು ಬುದ್ದಿ ಹೇಳುತ್ತಿದ್ದರು.
ಕಳ್ಳ ದಂಧೆಗಳು, ಕಾಳಸಂತೆಕೋರರು, ಪಿಕ್ ಪಾಕೆಟ್ ನವರು, ವೇಶ್ಯಾವಾಟಿಕೆಗಳು, ಬಾರು ಕ್ಯಾಬರೆಗಳು, ಚುನಾವಣಾ ಅಕ್ರಮಗಳು, ಮಾದಕ ವಸ್ತುಗಳ ಸಾಗಣೆ, ಬಂದ್ ಸಮಯದಲ್ಲಿ ಹಿಂಸಾಚಾರ, ಕಾಲೇಜು ಚುನಾವಣೆಯಲ್ಲಿ ಹಸ್ತಕ್ಷೇಪ, ಜಮೀನು ವ್ಯವಹಾರಗಳಲ್ಲಿ ಬೆದರಿಕೆ, ಪೆಟ್ರೋಲ್ ಡೀಸೆಲ್ ಕಲಬೆರಕೆ, ಪ್ರಯಾಣಿಕರ ಖಾಸಗಿ ವಾಹನಗಳ ಮೇಲೆ ನಿಯಂತ್ರಣ, ಬಾಡಿಗೆ ಮನೆ ಖಾಲಿ ಮಾಡಿಸುವುದು, ಪ್ರೇಮಿಗಳನ್ನು ಬೇರ್ಪಡಿಸುವುದು ಮುಂತಾದ ದೋ ನಂಬರ್ ವ್ಯವಹಾರಗಳಲ್ಲಿ ಭಾಗಿ ಮತ್ತು ರಕ್ಷಣೆ ಕೊಡುವುದು ಇವರ ಮುಖ್ಯ ಕೆಲಸವಾಗಿತ್ತು.
ರೌಡಿಗಳು ಕೆಲವು ಪ್ರದೇಶಗಳ ಮೇಲೆ ಹಿಡಿತ ಹೊಂದಿರುತ್ತಿದ್ದರು. ಅದನ್ನೆಲ್ಲಾ ನಿರ್ವಹಿಸಲು ಮತ್ತೊಬ್ಬ ದೊಡ್ಡ ರೌಡಿ ಇರುತ್ತಿದ್ದ. ಈ ಪ್ರದೇಶಗಳ ಮೇಲೆ ಇನ್ನೊಬ್ಬರ ಹಸ್ತಕ್ಷೇಪವಾದಾಗ ಅವರ ಮಧ್ಯೆಯೇ ಹೊಡೆದಾಟಗಳಾಗಿ ಕೊಲೆಗಳಾಗುತ್ತಿದ್ದವು. ಜೈಲಿನಲ್ಲಿಯೂ ಈ ಗ್ಯಾಂಗುಗಳು ಹಿಡಿತ ಸಾಧಿಸಿದ್ದವು.
ಆಗಿನ ಕಾಲಕ್ಕೆ ರೌಡಿಸಂ ಪ್ರತಿಷ್ಠಿತ ಉದ್ಯೋಗವೇ ಆಗಿದ್ದಿತು. ಅದಕ್ಕೆ ತುಂಬಾ ಧೈರ್ಯ ಮತ್ತು ಚಾಣಾಕ್ಷತೆ ಬೇಕಾಗಿತ್ತು. ಮುಂದಿನ ಪರಿಣಾಮಗಳನ್ನು ಯೋಚಿಸದೆ ನುಗ್ಗುವ ತಾಖತ್ತು ಬಹುಮುಖ್ಯವಾಗಿತ್ತು. ತಪ್ಪಿಸಿಕೊಳ್ಳುವ ಮಾರ್ಗಗಳು ತಿಳಿದಿರಬೇಕಿತ್ತು. ಕುಟುಂಬದ ಭಾವನಾತ್ಮಕ ಸಂಬಂಧಗಳನ್ನು ಗೆಲ್ಲಬೇಕಿತ್ತು.
ಈ ರೌಡಿಸಂನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದ್ದುದು ವಕೀಲರು. ಪ್ರಖ್ಯಾತ ಕ್ರಿಮಿನಲ್ ವಕೀಲರಗಳು ಇವರ ಪರವಾಗಿ ಸಮರ್ಥವಾಗಿ ವಾದಿಸಿ ಇವರಿಗೆ ಜಾಮೀನು ಕೊಡಿಸುತ್ತಿದ್ದರು. ಇಲ್ಲಿ ನಾವು ಸಿನಿಮಾಗಳಲ್ಲಿ ನೋಡುವಂತೆ ವಕೀಲರು, ರಾಜಕಾರಣಿಗಳು, ಪೋಲೀಸರು ಮತ್ತು ರೌಡಿಗಳ ಒಂದು ಅನೈತಿಕ ಸಮನ್ವಯವೇ ಈ ರೌಡಿಸಂ. ಇದರಲ್ಲಿ ಹೆಚ್ಚಿನ ಲಾಭ ರಾಜಕಾರಣಿಗಳಿಗೆ ಮತ್ತು ಹೆಚ್ಚಿನ ತೊಂದರೆ ರೌಡಿಗಳಿಗೆ ಆಗುತ್ತಿತ್ತು.
ನಾವು ಗಮನಿಸಿದಂತೆ ಅನೇಕ ಯುವಕರು ಇದಕ್ಕೆ ಆಕರ್ಷಿತರಾಗಿ ಇಡೀ ಬದುಕನ್ನೇ ನಾಶಮಾಡಿಕೊಂಡರು. ಕೆಲವರು ಕೊಲೆಯಾಗಿ ಹೋದರು. ಎಲ್ಲೋ ಬೆರಳೆಣಿಕೆಯಷ್ಟು ಜನ ರಾಜಕೀಯ ವ್ಯವಹಾರಗಳಲ್ಲಿ ಇದನ್ನು ಉಪಯೋಗಿಸಿಕೊಂಡು ಉದ್ದಾರವಾದರು.
ಕೆಲವರು ನೇರ ಬಡಿದಾಡುವ ರೌಡಿಗಳಾದರೆ, ಕೆಲವರು ಹುಡುಗರನ್ನು ಜೊತೆಯಲ್ಲಿ ಇಟ್ಟುಕೊಂಡು ಜನರನ್ನು ಬೆದರಿಸಿ ಹವಾ ಎಬ್ಬಿಸುವ ರೌಡಿಗಳು, ಹಲವರು ದೊಡ್ಡ ರೌಡಿಗಳ ಹೆಸರೇಳಿ ತಾವೂ ಸಹ ರೌಡಿಗಳೆಂದು ಬಿಂಬಿಸುವ ಮರಿ ರೌಡಿಗಳು.
ಹಾಗೆಂದು ಆಗ ಕಾನೂನು ವ್ಯವಸ್ಥೆಯೇ ಇರಲಿಲ್ಲ. ಪೋಲೀಸರು ರೌಡಿಗಳಿಗೆ ಶರಣಾಗಿದ್ದರು ಎಂದಲ್ಲ. ಆಗಲೂ ಕೆಲವು ದಕ್ಷ ಮತ್ತು ಕಠಿಣ ಅಧಿಕಾರಿಗಳು ರೌಡಿಗಳ ಎದೆ ನಡುಗಿಸಿದ್ದರು. ಆದರೂ ರೌಡಿಸಂ ತುಂಬಾ ಆಕ್ಟೀವ್ ಆಗಿತ್ತು.
ಆದರೆ ಈಗ,
ಖಂಡಿತ ರೌಡಿಸಂ ಬಹಳ ಕಡಿಮೆಯಾಗಿದೆ. ಮೊದಲಿನಂತೆ ಸಾಮಾನ್ಯರ ಮೇಲೆ ರೌಡಿಗಳು ದೌರ್ಜನ್ಯ ಮಾಡುವುದು ತುಂಬಾ ಅಪರೂಪ. ಪೋಲೀಸ್ ವ್ಯವಸ್ಥೆಯ ಸುಧಾರಣೆ, ಮಾಧ್ಯಮಗಳ ಬೆಳವಣಿಗೆ, ಸಂಪರ್ಕ ಕ್ರಾಂತಿ, ಆರ್ಥಿಕ ಮೂಲಗಳ ಬದಲಾವಣೆ, ನ್ಯಾಯಾಲಯಗಳ ಹೆಚ್ಚಿನ ಜವಾಬ್ದಾರಿ ಮತ್ತು ಜನರ ಜಾಗೃತಿ ಈಗ ರೌಡಿಸಂ ಕಡಿಮೆಯಾಗಲು ಕಾರಣವಾಗಿದೆ.
ಇದೇ ಸಮಯದಲ್ಲಿ ಪರೋಕ್ಷವಾಗಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಬೇರೆ ರೀತಿಯ ರೌಡಿಸಂ ಅನ್ನು ಸಾರ್ವಜನಿಕರ ಮೇಲೆ ಮಾಡುತ್ತಾರೆ. ಜನರಲ್ಲಿ ಒಂದು ರೀತಿಯ ಭಯ ಹುಟ್ಟಿಸಿ ತಾವು ಹಣ, ಅಧಿಕಾರ ಪಡೆಯುತ್ತಾರೆ.
ಧಾರ್ಮಿಕ ನಾಯಕರು, ಜೋತಿಷಿಗಳು, ಮಾಧ್ಯಮದವರು, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಕೇಂದ್ರಗಳು ಮುಂತಾದವು ಸಹ ಪರೋಕ್ಷವಾಗಿ ಜನರಲ್ಲಿ ಭಯ ಹುಟ್ಟಿಸಿ ಅದರ ಲಾಭ ಪಡೆಯುತ್ತಾರೆ.
ಹೀಗೆ, ರೌಡಿಸಂ ಆಗಲೂ ಈಗಲೂ ಚಾಲ್ತಿಯಲ್ಲಿದೆ. ರೂಪ ಮಾತ್ರ ಬೇರೆ. ಜನ ಜಾಗೃತರಾದಾಗ ಇದು ಕಡಿಮೆಯಾಗುತ್ತದೆ.
ಜೇಬುಗಳ್ಳರು……..
ಪಿಕ್ ಪಾಕೆಟರ್ಸ್, ಸರಗಳ್ಳರು, ಮನೆ ಕಳ್ಳರು, ಅಂಗಡಿಗಳಲ್ಲಿ ಕಳ್ಳತನ ಮಾಡುವವರು, ಮೊಬೈಲ್ ಪರ್ಸ್ ಕಳ್ಳರು, ಕತ್ತಲಿನಲ್ಲಿ ಒಂಟಿ ಜನರನ್ನು ಬೆದರಿಸಿ ದೋಚುವವರು, ಬಸ್ ನಿಲ್ದಾಣದ ಕಳ್ಳರು ಮುಂತಾದ ಸಣ್ಣಪುಟ್ಟ ಹೊಟ್ಟೆಪಾಡಿಗಾಗಿ ಮಾಡುವ ಒಂದು ಸಮೂಹದ ಬಗ್ಗೆ……….
( ಗ್ಯಾಂಗ್ ಕಟ್ಟಿಕೊಂಡು, ವಕೀಲರನ್ನು ಇಟ್ಟುಕೊಂಡು, ಕಳ್ಳತನ, ದರೋಡೆ, ವಂಚನೆ ಮಾಡುವವರಿಗೆ ಮತ್ತು ದೈಹಿಕ ಹಲ್ಲೆ ಮಾಡುವವರಿಗೆ ಇದು ಅನ್ವಯವಾಗುವುದಿಲ್ಲ )
ಈ ಜನ ಬಹುತೇಕ ಕಡು ಬಡವರೇ ಆಗಿರುತ್ತಾರೆ. ಚಿಕ್ಕ ವಯಸ್ಸು ಮತ್ತು ಪ್ರೌಢಾವಸ್ಥೆಯಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಶಾಲೆಗೆ ಹೋಗದೆ ದಾರಿ ತಪ್ಪಿದ ಹುಡುಗರೇ ಇರುತ್ತಾರೆ.
ಬಡತನದ ನೋವು, ತಂದೆ ತಾಯಿಗಳ ಪ್ರೀತಿ ವಂಚಿತ, ಈಗಾಗಲೇ ಕಳ್ಳರಾಗಿರುವವರ ಸಹವಾಸ, ಹಣವಿಲ್ಲದವರನ್ನು ಈ ವ್ಯವಸ್ಥೆ ನೋಡುವ ಕ್ರೂರ ರೀತಿ, ದುಶ್ಚಟಗಳ ದಾಸರಾಗಿರುವುದು, ಭವಿಷ್ಯದ ಬಗ್ಗೆ ಕನಸು ಕಾಣುವ ಸ್ಥಿತಿಯಲ್ಲೇ ಇಲ್ಲದಿರುವುದು, ಇಲ್ಲಿಗಿಂತ ಜೈಲೇ ಉತ್ತಮ ಎಂಬ ಭ್ರಮೆ, ಕೌಟುಂಬಿಕ ಸಂಬಂಧಗಳ ಅನುಬಂಧದ ಕೊರತೆ ಮುಂತಾದ ಕಾರಣಗಳು ಈ ವ್ಯಕ್ತಿಗಳ ಹಿನ್ನೆಲೆಯಲ್ಲಿ ಇರುತ್ತವೆ.
ಗಂಡಸರೇ ಇದರಲ್ಲಿ ಹೆಚ್ಚಾಗಿದ್ದರೂ ಇತ್ತೀಚೆಗೆ ಹೆಣ್ಣು ಮಕ್ಕಳು ಸಹ ತೊಡಗಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಮೂಲತಃ ಇವರು ಹುಟ್ಟಾ ಕ್ರಿಮಿನಲ್ ಗಳಲ್ಲ. ಅನಿವಾರ್ಯತೆ, ಅಸಹಾಯಕತೆ ಮತ್ತು ಸರಿಯಾದ ಮಾರ್ಗದರ್ಶನದ ಕೊರತೆ ಇದಕ್ಕೆ ಮೂಲ ಕಾರಣ.
ಇವರುಗಳಿಗೆ ತುಂಬಾ ಭಯವಿರುತ್ತದೆ. ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಈ ಕೆಲಸ ಮಾಡುತ್ತಾರೆ. ಜನರಿಗೆ ಅಥವಾ ಪೋಲೀಸರಿಗೆ ಸಿಕ್ಕಿ ಹಾಕಿಕೊಂಡಾಗ ನರಕಯಾತನೆ ಅನುಭವಿಸುತ್ತಾರೆ. ತಮ್ಮ ದುರಾದೃಷ್ಟಕ್ಕೆ ಕಣ್ಣೀರಾಗುತ್ತಾರೆ. ಇದನ್ನು ಮರೆಯಲು ಮತ್ತಷ್ಟು ದುಶ್ಚಟಗಳಿಗೆ ಶರಣಾಗುತ್ತಾರೆ.
ಇವರು ತಮ್ಮ ಕೆಲಸದಲ್ಲಿ ಎಷ್ಟೇ ದೊಡ್ಡ ಮಟ್ಟದ ಯಶಸ್ಸು ಪಡೆದರು ಅದು ಬಿಡುಗಾಸು ಮಾತ್ರವಾಗಿರುತ್ತದೆ. ಇದರಲ್ಲಿ ಯಾವುದೇ ದೊಡ್ಡ ಪ್ರಮಾಣದ ಹಣ ದೊರೆಯುವುದಿಲ್ಲ. ಸಾವಿರಗಳಲ್ಲಿ ಅಥವಾ ನೂರರ ಮಟ್ಟಕ್ಕೆ ಮಾತ್ರ ಸೀಮಿತ. ಅದು ಖರ್ಚಾದ ಮೇಲೆ ಮತ್ತೆ ಹಳೆಯ ಕೆಲಸವೇ ಗತಿ.
ಇವರು ಮೋರಿ, ಹಳೆಯ ಕಟ್ಟಡಗಳು ಮುಂತಾದ ಅತ್ಯಂತ ಕೊಳಕು ಸ್ಥಳಗಳಲ್ಲಿಯೂ ಆರಾಮವಾಗಿ ವಾಸ ಮಾಡುತ್ತಾರೆ. ಸಿಕ್ಕಿ ಹಾಕಿಕೊಂಡಾಗ ಪ್ರತಿರೋಧ ತೋರದೆ ಅತ್ಯಂತ ದೈನೇಸಿಯಾಗಿ ಬೇಡಿಕೊಳ್ಳುತ್ತಾರೆ. ಜೈಲಿಗೆ ಏನಾದರೂ ಹೋದರೆ ಅಲ್ಲಿ ಉತ್ತಮ ಸ್ಥಿತಿಯಲ್ಲಿ ಇರುವ ಖೈದಿಗಳಿಗೆ ಆಳುಗಳಾಗಿ ಸೇವೆ ಮಾಡುತ್ತಾರೆ. ಜಾಮೀನು ಸಿಗುವ ಕೇಸ್ ಆಗಿದ್ದರೂ ವಕೀಲರನ್ನು ನೇಮಿಸಿಕೊಳ್ಳುವ ರೀತಿ ಮತ್ತು ತಿಳಿವಳಿಕೆಯಿಲ್ಲದೆ ಬಹಳ ಕಾಲ ಜೈಲಿನಲ್ಲಿಯೇ ಕಳೆಯುತ್ತಾರೆ. ಅದೃಷ್ಟವಿದ್ದರೆ ಯಾರಾದರೂ ರೌಡಿ ಇವರಿಗೆ ಜಾಮೀನು ಕೊಡಿಸಿ ಅವರ ಅನೈತಿಕ ವ್ಯವಹಾರಕ್ಕೆ ಉಪಯೋಗಿಸಿಕೊಳ್ಳುತ್ತಾನೆ.
ಅಪರೂಪದಲ್ಲಿ ಇವರುಗಳು ಮದುವೆ ಸಂಸಾರದ ಬಂಧನಗಳಲ್ಲಿ ಸಿಲುಕಿದರು ಅದು ಯಶಸ್ವಿಯಾಗುವುದು ತುಂಬಾ ಕಡಿಮೆ.
ನಮ್ಮ ಸಮಾಜದಲ್ಲಿ ಕೂಡ ದೊಡ್ಡ ಮಟ್ಟದ ಕಳ್ಳರು, ದರೋಡೆಕೋರರು, ರೌಡಿಗಳು, ಭ್ರಷ್ಟರನ್ನು ನೇರವಾಗಿ ಎದುರಿಸಲು ಭಯ ಪಡುತ್ತಾರೆ. ಆದರೆ ಈ ರೀತಿಯ ಸಣ್ಣ ಪುಟ್ಟ ಹೊಟ್ಟೆಪಾಡಿನ ಕಳ್ಳರು ಸಿಕ್ಕರೆ ತಮ್ಮ ಇಡೀ ಪೌರುಷವನ್ನು ಅವರ ಮೇಲೆ ತೋರಿಸಿ ” ಧರ್ಮದೇಟು ” ಕೊಡುತ್ತಾರೆ.
ಕೆಲವು ಸರ್ಕಾರದ ಸಂಬಳ ಪಡೆಯುವ ದೊಡ್ಡ ಕಳ್ಳರಾದ ಮಂಡಲ ಪಂಚಾಯತಿ ಸದಸ್ಯರಿಂದ ಮಂತ್ರಿಯವರೆಗೆ, ಜವಾನನಿಂದ ಐಎಎಸ್ ಅಧಿಕಾರಿಗಳವರೆಗೆ,
ಅಧಿಕೃತ ಕೆಲಸಕ್ಕೂ ಲಂಚ ಕೇಳಿದಾಗ ಭಯ ಭಕ್ತಿಯಿಂದ ದಕ್ಷಿಣೆಯಂತೆ ಕೊಡುವ ನಾವು ಈ ಚಿಕ್ಕ ಕಳ್ಳರ ಬಗ್ಗೆ ಮಾತ್ರ ರೌದ್ರಾವತಾರ ಪ್ರದರ್ಶಿಸುತ್ತೇವೆ.ಸಾಧ್ಯವಾದರೆ ಅವರನ್ನು ಬೆತ್ತಲೆ ಮಾಡಿ ಬೀದಿಯಲ್ಲಿ ಮೆರವಣಿಗೆ ಮಾಡುತ್ತೇವೆ.
ಇಲ್ಲಿ ನಾನು ಇವರ ಕೆಲಸಗಳನ್ನು ಸಮರ್ಥಿಸುತ್ತಿಲ್ಲ. ಈ ವ್ಯವಸ್ಥೆಯ ದೌರ್ಬಲ್ಯವನ್ನು ಗುರುತಿಸುವ ಜೊತೆಗೆ ,…. ನನ್ನ ಕಳಕಳಿಯ ಮನವಿ ಏನೆಂದರೆ,
” ನಮ್ಮಲ್ಲಿ ನಿಜವಾಗಲೂ ಕೆಚ್ಚು, ಆಕ್ರೋಶ, ಧೈರ್ಯ, ಹೋರಾಡುವ ಮನೋಭಾವ ಇದ್ದರೆ ಅದನ್ನು ಕಣ್ಣ ಮುಂದೆಯೇ ಕಾಣುತ್ತಿರುವ, ಕೋಟಿ ಕೋಟಿ ಸಾರ್ವಜನಿಕ ಹಣ ದೋಚುತ್ತಿರುವ, ಭ್ರಷ್ಟ ಹಣದಲ್ಲಿ ಗಂಡ ಹೆಂಡತಿ ಮಕ್ಕಳೊಂದಿಗೆ ಐಷಾರಾಮಿ ಜೀವನ ಸಾಗಿಸುತ್ತಿರುವ ” ದೊಡ್ಡ ಕುಳಗಳನ್ನು ಎದುರಿಸೋಣ.
ಬಡ ಕಳ್ಳರ ಹುಟ್ಟಿಗೆ ಕಾರಣವೇ ಇವರು.
ಸಾಹಸ ಎಂದರೆ….
” ಹೊಡೆದರೆ ಆನೆಯನ್ನು ಹೊಡೆಯೋಣ ( ಬಲಿಷ್ಠ ದುಷ್ಟರನ್ನು ) ಸೊಳ್ಳೆಯನ್ನಲ್ಲ.”
ಇದರ ಅರ್ಥ ಸಣ್ಣ ಕಳ್ಳರನ್ನು ಪ್ರೋತ್ಸಾಹಿಸಿ ಎಂದಲ್ಲ. ಅವರೂ ಸ್ವಲ್ಪ ಅಪಾಯಕಾರಿಯೇ ಅವರಿಗೂ ಶಿಕ್ಷೆ ಕೊಡಬೇಕು. ಆದರೆ ಜೀವಾವಾಧಿ ಅಥವಾ ಮರಣದಂಡನೆಯಲ್ಲ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451….
9844013068……
