ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಸತಿಪತಿಗಳಾದ 135 ಜೋಡಿ
ವಿಜಯ ದರ್ಪಣ ನ್ಯೂಸ್…
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಸತಿಪತಿಗಳಾದ 135 ಜೋಡಿ

ತಾಂಡವಪುರ ಜನವರಿ 16: ಸುಗ್ಗಿ ಸಂಭ್ರಮದೊಡನೆ ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಇತಿಹಾಸ ಪ್ರಸಿದ್ಧವುಳ್ಳ ಶಿವರಾತ್ರಿ ಶಿವಯೋಗಿಗಳ ಸುತ್ತೂರು ಜಾತ್ರ ಮಹೋತ್ಸವದಲ್ಲಿ ಸುಮಾರು 135 ಜೋಡಿಗಳು ಸತಪತಿಗಳಾಗಿ ಸ್ವಾಮೀಜಿಗಳ ಸಮ್ಮುಖದಲ್ಲಿ ಸಚಿಪತಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಪೈಕಿ 10 ಅಂತರ್ಜಾತಿ ಹಾಗೂ 5 ಹೊರ ರಾಜ್ಯದ ಜೋಡಿಗಳು ಹಸಮಣೆ ಏರಿ ಸಂಭ್ರಮಿಸಿದರು.

ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಶುಕ್ರವಾರ ಕನ್ನಡ, ಮಲಯಾಳಂ, ತಮಿಳು ಸೇರಿದಂತೆ ಬಹುಭಾಷಿಕ ದಂಪತಿಗಳೂ ಇದ್ದದ್ದು ಜಾತ್ರೆಯ ವಿವಾಹ ಮಹೋತ್ಸವದ ವೈವಿಧ್ಯವನ್ನೂ ಸಾರಿತು. ಸಾಮೂಹಿಕ ವಿವಾಹದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನಕಪುರ ದೇಗುಲಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ತಿರುವನಂತಪುರಂನ ಬಿಷಪ್ ಗೇಬ್ರಿಯಲ್ ಮಾರ್ ಗ್ರೆಗೋರಿಯಸ್, ಮೈಸೂರು ಧರ್ಮಪ್ರಾಂತ್ಯದ ಬಿಷಪ್ ಫ್ರಾನ್ಸಿಸ್ ಸೆರಾವ್ ಸೇರಿ ಅನೇಕ ಗಣ್ಯರ ಸಮ್ಮುಖದಲ್ಲಿ ಸಾಮೂಹಿಕ ವಿವಾಹ ನಡೆಯಿತು.

ಈ ಪೈಕಿ 4 ವೀರಶೈವ ಲಿಂಗಾಯತ, 84 ಪರಿಶಿಷ್ಟ ಜಾತಿ, 15 ಪರಿಶಿಷ್ಟ ಪಂಗಡ, 20 ಹಿಂದುಳಿದ ವರ್ಗ, 10 ಅಂತರ್ಜಾತಿ, 3 ವಿಕಲಚೇತನ, 5 ತಮಿಳುನಾಡಿನ ಜೋಡಿಗಳು ಮಧ್ಯಾಹ್ನ 12.00 ಘಂಟೆಗೆ ಶುಭ ಲಗ್ನದಲ್ಲಿ ಹಿಂದೂ ಸಂಪ್ರದಾಯದಂತೆ ಮಾಂಗಲ್ಯಧಾರಣೆ ನಡೆಯಿತು.
ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಆರ್.ವಿ.ದೇಶಪಾಂಡೆ ಸೇರಿ ಅನೇಕರು ಭಾಗವಹಿಸಿದ್ದರು.
ವಿವಾಹ ಸಂದರ್ಭದಲ್ಲಿ ವರನಿಗೆ ಪಂಚೆ, ಶರ್ಟು, ವಲ್ಲಿ ಹಾಗೂ ವಧುವಿಗೆ ಸೀರೆ, ರವಿಕೆ, ಮಾಂಗಲ್ಯ, ಕಾಲುಂಗುರಗಳನ್ನು ನೀಡಲಾಯಿತು. ಎಲ್ಲರೂ ಹೊಸ ಸೀರೆ, ರವಿಕೆ, ಹೊಸ ವಸ್ತ್ರಗಳನ್ನು ತೊಟ್ಟು, ಬಾಸಿಂಗ ಕಟ್ಟಿಕೊಂಡು ಸುಂದರವಾಗಿ ಅಲಂಕರಿಸಿ ಕೊಂಡು ಕುಳಿತಿದ್ದರು. ಶುಭ ಮುಹೂರ್ತ ಆರಂಭವಾಗುತ್ತಿದ್ದಂತೆ ಪೂಜ್ಯರು ಮತ್ತು ಅತಿ ಗಣ್ಯರು ಮಾಂಗಲ್ಯ ವಿತರಿಸಿದರು. ಬಳಿಕ ಮಂಗಳವಾದ್ಯ ಮೊಳಗುತ್ತಿದ್ದಂತೆ ವರನಿಂದ ವಧುವಿಗೆ ತಾಳಿ ಕಟ್ಟಿದರು. ಒಟ್ಟಾರೆ ಜಾತ್ರೆಯಲ್ಲಿ ನವ ಜೋಡಿ ಹೊಸ ಬದುಕು ಆರಂಭಿಸಿದ್ದು, ನೆರೆದ ಜನರು ಶುಭ ಹಾರೈಸಿದರು.

ಲಕ್ಷಕ್ಕೂ ಅಧಿಕ ಮಂದಿ ಭೇಟಿ:
ಹಳೇ ಮೈಸೂರು ಪ್ರಾಂತ್ಯದ ಜನಾಕರ್ಷಕ ಸುತ್ತೂರು ಜಾತ್ರಾ ಮಹೋತ್ಸವ ಗುರುವಾರ ಅನಾವರಣಗೊಂಡಿತು. ಆರು ದಿನಗಳ ವೈಭವಪೂರ್ಣ ಜಾತ್ರಾ ಮಹೋತ್ಸವದ ಮೊದಲ ದಿನವೇ ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡಿದರು. ಜಾತ್ರೆಯಲ್ಲಿ 5 ದಾಸೋಹ ಪ್ರಸಾದ ವಿತರಣಾ ಕೇಂದ್ರಗಳನ್ನು ತೆರೆದಿದ್ದು, ಗದ್ದುಗೆ ಸಮೀಪದಲ್ಲಿರುವ ಮಹಾ ದಾಸೋಹ ಪ್ರಸಾದ ವಿತರಣಾ ಕೇಂದ್ರದಲ್ಲಿ ಮಹಿಳೆಯರು, ಪುರುಷರಿಗೆ ಹಾಗೂ ಸ್ವಯಂ ಸೇವಕರಿಗೆ ಪ್ರತ್ಯೇಕವಾಗಿ ಪ್ರಸಾದ ವಿತರಿಸಲಾಯಿತು.
