ವಿಭಿನ್ನತೆಯ ಮಹತ್ವ ಅರಿತರೆ ?
ವಿಭಿನ್ನತೆಯ ಮಹತ್ವ ಅರಿತರೆ ?
ಇಲ್ಲಿ ಒಬ್ಬರಂತೆ ಇನ್ನೊಬ್ಬರಿಲ್ಲ. ಆ ಸೃಷ್ಟಿಕರ್ತನ ಸೃಷ್ಟಿ ಕಾರ್ಯ ಅಚ್ಚರಿ, ಅನಂತ, ಅಗಾಧ. ಪ್ರತಿಯೊಬ್ಬರ ರೂಪ, ಗುಣ ನಡೆ, ನುಡಿ ಯೋಚನಾ ರೀತಿ ಎಲ್ಲವೂ ಭಿನ್ನ ಭಿನ್ನ. ಹೀಗೆ ಯೋಚಿಸುವಾಗ ಒಮ್ಮೊಮ್ಮೆ ನಾನಾ ಬಗೆಯ ಚಿಂತನೆಗಳು ಹೊರಹೊಮ್ಮುತ್ತವೆ. ಭಿನ್ನತೆಯ ಹಿಂದಿನ ಸ್ವಾರಸ್ಯ ಅರಿವಿಗೆ ಬರುತ್ತದೆ. ಆ ಭಿನ್ನತೆಯೇ ಈ ಜಗವನ್ನು ಇಷ್ಟು ಸುಂದರಗೊಳಿಸಿರುವುದು ಅಂತ ತಿಳಿದುಕೊಳ್ಳಲು ಬಹಳ ಹೊತ್ತು ಹಿಡಿಯುವುದಿಲ್ಲ. ಆದರೂ ಚಿಂತನೆಯ ಫಲವನ್ನು ಅಳವಡಿಸಿಕೊಳ್ಳುವುದು ನಮ್ಮಲ್ಲಿ ಕಂಡುಬರುವುದಿಲ್ಲ.
ಒಂದು ಹೂದೋಟದಲ್ಲಿ ಕಾಲಿಡುತ್ತಿದ್ದಂತೆ ಅಲ್ಲಿ ಸುವಾಸನೆ ನಮ್ಮನ್ನು ಒಳಕ್ಕೆ ಹೋಗಲು ಪ್ರೇರೇಪಿಸುತ್ತದೆ. ನಮ್ಮನ್ನು ಕಂಡು ಅಲ್ಲಿಯ ಹೂಗಳು ಸ್ವಾಗತ ಕೋರುವಂತೆ ನಗೆ ಬೀರುವ ರೀತಿ ಚಿತ್ತಾಕರ್ಷಕ, ಚೇತೋಹಾರಿ. ಆ ಸುಂದರ ದೃಶ್ಯ ರಮ್ಯ! ಕೋಮಲ, ಮಕರಂದಭರಿತ, ಪರಿಮಳಯುಕ್ತ ಹೂಗಳನ್ನು ಕಂಡಾಗ ಎಂಥ ಕಲ್ಲು ಹೃದಯಿಗಳಾದರೂ ಮನಸ್ಸು ಹೂವಿನಂತೆ ಅರಳುತ್ತದೆ. ಅವುಗಳೆಂದೂ ಒಂದನ್ನೊಂದು ನೋಡಿ ಹೊಟ್ಟೆಕಿಚ್ಚು ಪಡುವುದಿಲ್ಲ. ನಿನಗಿಂತ ನಾ ಚೆನ್ನ, ನಿನ್ನ ಬಣ್ಣ ನನಗಿಲ್ಲ, ನನ್ನಂತಹ ಸುಮಧುರ ಸುವಾಸನೆ ನಿನಗಿಲ್ಲ ಅಂತೆಲ್ಲ ಅನ್ನೋದೇ ಇಲ್ಲ. ಒಂದಕ್ಕೊಂದು ಹೋಲಿಕೆ ಮಾಡಿಕೊಳ್ಳುವುದೇ ಇಲ್ಲ. ತಮ್ಮಷ್ಟಕ್ಕೆ ತಾವು ಅರಳಿ ನಗುತ್ತವೆ ಇತರರ ಮೊಗದಲ್ಲೂ ನಗು ತರುತ್ತವೆ. ನಾನು ಪ್ರೇಮಿಗೆ ತಲುಪುವೆನೋ, ಮಸಣ ತಲುಪುವೇನೋ, ದೇವರ ಮುಡಿ ಸೇರುವೆನೋ, ಎಂಬ ಯಾವ ಚಿಂತೆಯೂ ಅವುಗಳಿಗಿಲ್ಲ. ಬದುಕಿದಷ್ಟು ಹೊತ್ತು ಇತರರಿಗೆ ಆನಂದ ನೀಡಿ ತಾವೂ ಆನಂದವಾಗಿಯೇ ಇರುತ್ತವೆ.

ಪ್ರಕೃತಿಯಲ್ಲಿ ಯಾವ ಜೀವಿಗಳು ಮತ್ತೊಂದಕ್ಕೆ ಹೋಲಿಸಿಕೊಂಡು ಕರಬುವುದಿಲ್ಲ. ಕೊರಗುವದಂತೂ ಇಲ್ಲವೇ ಇಲ್ಲ. ಆದರೆ ಪ್ರಾಣಿಗಳಲ್ಲೇ ಶ್ರೇಷ್ಠ ಎಂದು ಮೆರೆಯುವ ನಾವು ಮಾತ್ರ ಹೋಲಿಕೆಯಲ್ಲಿಯೇ ಮೈ ಮರೆಯುತ್ತಿದ್ದೇವಲ್ಲ. ಬೇರೆಯವರಿಗೆ ಹೋಲಿಸಿಕೊಂಡು ನಮ್ಮ ಅನನ್ಯತೆಯನ್ನು ಆಸ್ಮಿತೆಯನ್ನು ಮರೆಯುತ್ತಿದ್ದೇವೆ. ನನಗಿಂತ ಮುಂದಿನವರ ಬಣ್ಣ ಚೆನ್ನ. ಎತ್ತರದ ಮೈಮಾಟ ನನಗಿಲ್ಲ. ನಾನು ಕುಳ್ಳಿ ಅಷ್ಟೇ ಅಲ್ಲ ದಪ್ಪ ಕೂಡ. ಅವನು ಶ್ರೇಷ್ಠ ಜಾತಿಯಲ್ಲಿ ಹುಟ್ಟಿದ್ದಾನೆ. ನಾನು ದುರ್ದೈವಿ. ಅವನು ಅದೃಷ್ಟವಂತ. ಹುಟ್ಟು ನಮ್ಮ ಕೈಯಲ್ಲಿ ಇರದೇ ಇರುವುದರಿಂದ ಅದರ ಬಗ್ಗೆ ಕೊರಗಿ ಪ್ರಯೋಜನೆ ಇಲ್ಲ. ಹೀಗೆ ಕೀಳರಿಮೆಯ ಹೋಲಿಕೆಯ ಪಟ್ಟಿ ಹನುಮನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಆತ್ಮವಿಶ್ವಾಸದ ಕೊರತೆಯೇ ಕೀಳರಿಮೆಗೆ ಕಾರಣ ಅಂತ ಬೇರೆ ಹೇಳಬೇಕಿಲ್ಲ. ಈಗಿರುವ ನನ್ನ ಸ್ಥಿತಿ ಅಂತಿಮ ಆಂದುಕೊಳ್ಳಬಾರದು. ನನ್ನ ಉತ್ತಮ ಆವೃತ್ತಿ ಬರುವುದಿದೆ ಎಂದು ಆ ದಿಸೆಯಲ್ಲಿ ಪ್ರಯತ್ನಿಸುವುದೇ ನಿಜವಾದ ಜಾಣತನ.
ಇನ್ನು ಮೇಲರಿಮೆಯ ಮೇಲಾಟದ ಆರ್ಭಟವನ್ನು ಕೇಳಬೇಕೆ? ಹೇಳುವದಕ್ಕಿಂತ ಕೇಳುವುದಕ್ಕಿಂತ ಅದನ್ನು ನೋಡಬೇಕು. ಅಬ್ಬಬ್ಬಾ! ಆ ಮಹಾಶಕ್ತಿಯೂ ಬೆರಗಾಗಬೇಕು. ಹಾಗಿರುತ್ತದೆ ದರ್ಪ, ಗರ್ವ, ಅಹಂಕಾರ. ನನ್ನ ಬಳಿ ಆಸ್ತಿ, ಅಂತಸ್ತು, ಅಧಿಕಾರ, ಎಲ್ಲ ಉಂಟು. ನಾನಿದ್ದರೆ ಎಲ್ಲ. ನಾನಿಲ್ಲದಿದ್ದರೆ ಏನೂ ಇಲ್ಲ. ಎನ್ನುವವನು ದೇವರನ್ನು ಕಂಡಾಗ ಏನಾದರೂ ಬೇಡಿಕೊಳ್ಳುವ ಆಸೆ ಏಕೆ? ಇದೊಂದು ತರಹ ವಿರೋಧಾಭಾಸ ಎನಿಸುವುದಿಲ್ಲವೇ? ನನ್ನ ಬಳಿ ಏನೂ ಇಲ್ಲ ಎನ್ನುವುದು ಎಷ್ಟು ತಪ್ಪೋ ನನ್ನ ಬಳಿ ಎಲ್ಲವೂ ಇದೆ ಅಂದುಕೊಳ್ಳುವುದೂ ಅಷ್ಟೇ ತಪ್ಪು ಎನ್ನುವುದು ಪ್ರತಿಯೊಬ್ಬರ ಅನುಭವಕ್ಕೂ ನಿಲುಕುವ ವಿಚಾರ. ವಿಭಿನ್ನತೆಯ ಮಹತ್ವ ಅರಿಯದಿದ್ದಾಗ ಹಲವಾರು ಗೊಂದಲಗಳು ಸುತ್ತುವರಿದು ಕಾಡುತ್ತವೆ. ವಿಭಿನ್ನತೆಯ ಮಹತ್ವ ಅರಿತರೆ ಮೇಲು ಕೀಳು ಎಂಬ ಭೇದ ಭಾವ ಎಲ್ಲ ಮಾಯ.
ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿರುವಂತೆ,’ಮನಸ್ಸು ಸಿರಿವಂತವಾದರೆ ನಮ್ಮಲ್ಲಿ ಸಂಪತ್ತು ಇಲ್ಲದಿದ್ದರೂ ನಾವು ಸಿರಿವಂತರೆ. ಮನಸ್ಸೇ ಬಡವಾಗಿದ್ದರೆ ನಮ್ಮಲ್ಲಿ ಸಂಪತ್ತು ಇದ್ದರೂ ನಾವು ಬಡವರೆ! ಸಂತೃಪ್ತಿಗಿಂತ ಮಿಗಿಲಾದ ಸಂಪತ್ತಿಲ್ಲ. ಮಾನಸಿಕ ಕ್ಲೇಶಗಳಿಗೆ ವಾಸ್ತವ ಸಂಗತಿಗಳಿಗಿಂತ ಕಾಲ್ಪನಿಕ ಸಂಗತಿಗಳು ಹೆಚ್ಚು ಕಾರಣ. ಯಾವುದೇ ಒಂದು ಘಟನೆಯನ್ನು ಹೇಗೆ ಗ್ರಹಿಸುತ್ತೇವೆ ಎಂಬುದರ ಮೇಲೆ ನಮ್ಮ ಮನಸ್ಥಿತಿ ರೂಪುಗೊಳ್ಳುತ್ತದೆ. ನಾವು ಈ ಭೂಮಿಯೆಂಬ ಮನೆಗೆ ಬಂದು ಹೋಗುವ ಅತಿಥಿಗಳಂತೆ. ನಾವಿಲ್ಲಿ ಯಾರೂ ಇರಲು ಬಂದಿಲ್ಲ. ಎಂಬ ಸತ್ಯವನ್ನು ಒಪ್ಪಿಕೊಂಡರೆ, ಮೇಲು ಕೀಳು ಭಾವ ನಿರ್ನಾಮವಾಗಿ ಪ್ರೀತಿ, ಕರುಣೆ, ದಯೆ, ಶಾಂತಿ ಸೌಖ್ಯ ನೆಲೆಯುತ್ತದೆ.

– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪