ತಾಯಿ ಚಾಮುಂಡೇಶ್ವರಿ ದೇವಿಯ ಪಾದ ಕಮಲಗಳಿಗೆ ಕೈ ಮುಗಿಯುತ್ತಾ…….
ವಿಜಯ ದರ್ಪಣ ನ್ಯೂಸ್…
ತಾಯಿ ಚಾಮುಂಡೇಶ್ವರಿ ದೇವಿಯ ಪಾದ ಕಮಲಗಳಿಗೆ ಕೈ ಮುಗಿಯುತ್ತಾ…….
ಸುಮಾರು 415 ವರ್ಷಗಳ ನಂತರ ಮಹಾ ಶಕ್ತಿ ದೇವತೆ
ಶ್ರೀ ಚಾಮುಂಡೇಶ್ವರಿ ತಾಯಿಯು 2025ರ ಸೆಪ್ಟೆಂಬರ್ 22ಕ್ಕೆ ಅಪಾರ ತಾಳ್ಮೆಯಿಂದ ಕಾಯುತ್ತಿದ್ದು, ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಕೊಡಿಸಿದ ಮೇಲೆ, ಮಾನ್ಯ ಶ್ರೀ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಿದ ನಂತರ ಈ ಬಾರಿ ದಸರಾ ಉದ್ಘಾಟಿಸಲು ಶ್ರೀಮತಿ ಭಾನು ಮುಷ್ತಾಕ್ ಅವರನ್ನು ಕರೆಸಿಕೊಂಡಿರುವುದಾಗಿ, ತಮ್ಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದಾಗಿ ಸ್ವತಃ ಶ್ರೀಮತಿ ಭಾನು ಮುಷ್ತಾಕ್ ಅವರೇ ನನ್ನನ್ನು ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಂಡರು ಎಂದು ತಮ್ಮ ಉದ್ಘಾಟನಾ ಸಮಾರಂಭದ ಭಾಷಣದಲ್ಲಿ ಹೇಳಿದ್ದಾರೆ.
ಸರ್ವಶಕ್ತೇ ಶ್ರೀ ಚಾಮುಂಡಿ ತಾಯಿಯೇ ನಿನಗೆ ನಮೋ ನಮಃ. ಈ ಮಾತನ್ನು ಆಡುವಾಗ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಮತ್ತು ಹಲವಾರು ಗಣ್ಯರು ಸಹ ವೇದಿಕೆಯ ಮೇಲೆಯೇ ಇದ್ದರು. ತಾಯಿ ಚಾಮುಂಡೇಶ್ವರಿಯೇ ತುಂಬಾ ಸಂತೋಷ. ದಸರಾ ಉದ್ಘಾಟನಾ ಕಾರ್ಯಕ್ರಮ ತುಂಬಾ ಅದ್ದೂರಿಯಾಗಿ ನಡೆಯಿತು. 11 ದಿನಗಳ ಎಲ್ಲಾ ಕಾರ್ಯಕ್ರಮಗಳು ಚೆನ್ನಾಗಿ ನಡೆಯಲಿ.
ಆದರೆ ತಾಯಿ ಚಾಮುಂಡೇಶ್ವರಿಯೇ ಹುಲು ಮಾನವನಾದ, ಭಾರತೀಯ ಕನ್ನಡಿಗನಾದ ನನ್ನದು ಕರ್ನಾಟಕದ ಜನತೆಯ ಪರವಾಗಿ ಕೆಲವು ಕೋರಿಕೆಗಳಿವೆ. ತಾವು ದಯವಿಟ್ಟು ಇದನ್ನು ಪರಿಶೀಲಿಸಿ ಸರಿಯೆನಿಸಿದರೆ ಈ ಕೋರಿಕೆಗಳನ್ನು ಈಡೇರಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.
ಚಾಮುಂಡೇಶ್ವರಿ ತಾಯಿಯೇ,
ಈ ಸರ್ಕಾರದವರು ನಿಮ್ಮನ್ನು ರಕ್ಷಿಸಿ, ಪ್ರೋತ್ಸಾಹಿಸಿ, ಬೆಂಬಲಿಸುತ್ತಾ ಬಂದಿರುವ ರಾಜ ಮನೆತನದ ಆಸ್ತಿ ವಿಷಯದಲ್ಲಿ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ನಿಮ್ಮ ರಾಜ ಮನೆತನದ ಆಸ್ತಿಯೆಲ್ಲಾ ಅವರಿಗೆ ಸೇರಿದ್ದಂತೆ. ಈ ವಿವಾದ ಬಹಳ ವರ್ಷಗಳಿಂದ ನಡೆಯುತ್ತಿದೆ. ತಾವು ದಯವಿಟ್ಟು ತಮ್ಮ ಶಕ್ತಿಯನ್ನು ಉಪಯೋಗಿಸಿ ನ್ಯಾಯಾಲಯದ ನ್ಯಾಯಾಧೀಶರ ಮನ:ಪರಿವರ್ತಿಸಿ ನ್ಯಾಯಾಲಯದಲ್ಲಿರುವ ಎಲ್ಲಾ ಅರಮನೆಗೆ ಸಂಬಂಧಪಟ್ಟ ವಿಷಯದ ತೀರ್ಪುಗಳನ್ನು ಅರಮನೆಯ ಪರವಾಗಿಯೇ ಬರುವಂತೆ ಈ ಕ್ಷಣವೇ ನ್ಯಾಯಾಲಯ ಆದೇಶ ನೀಡುವಂತೆ ಮಾಡಬೇಕೆಂದು ಕೋರಿಕೊಳ್ಳುತ್ತೇನೆ.
ತಾಯಿ ಚಾಮುಂಡೇಶ್ವರಿಯೇ,
ನಾಡ ದೇವತೆಯೇ,
ಕರ್ನಾಟಕದಲ್ಲಿ ಕನ್ನಡ ಶಾಲೆಗಳ ದುಸ್ಥಿತಿ ಹೇಳತೀರದು. ಅದರ ಪರಿಣಾಮವಾಗಿ ಕನ್ನಡ ಭಾಷೆಯೂ ಅವನತಿಯತ್ತ ಸಾಗಿದೆ. ಮಹಾ ಶಕ್ತಿ ದೇವತೆಯೇ ದಯವಿಟ್ಟು ಈ ಕ್ಷಣವೇ ಎಲ್ಲ ಸರ್ಕಾರಿ ಶಾಲೆಗಳ ಕಟ್ಟಡಗಳನ್ನು ಪಂಚತಾರಾ ಹೊಟೆಲಿನಂತೆ ಪರಿವರ್ತಿಸಿ, ಒಳ್ಳೆಯ ಗ್ರಂಥಾಲಯ, ಕ್ರೀಡಾಂಗಣ, ಉತ್ತಮ ಶಿಕ್ಷಕ ಸಿಬ್ಬಂದಿಯನ್ನು ನೇಮಿಸಿ, ಎಲ್ಲಾ ಶ್ರೀಮಂತರ ಮಕ್ಕಳು ಸಹ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮ ಶಾಲೆಗೆ ಸೇರುವಂತೆ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ.
ತಾಯಿ ಚಾಮುಂಡೇಶ್ವರಿಯೇ, ಕರ್ನಾಟಕದಲ್ಲಿ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಅಲ್ಲಿ ಒಳ್ಳೆಯ ಸೌಕರ್ಯ ಸಿಗದೇ ಸಾವಿರಾರು ಜನ ಬಡತನದ ಕಾರಣದಿಂದ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಶಾಲೆಗಳನ್ನು ಅಭಿವೃದ್ಧಿಪಡಿಸಿದಂತೆ ಸರ್ಕಾರಿ ಆಸ್ಪತ್ರೆಗಳನ್ನೂ ಈ ಕ್ಷಣದಲ್ಲೇ ಅತ್ಯುತ್ತಮ ಗುಣಮಟ್ಟಕ್ಕೆ ಏರಿಸಬೇಕೆಂದು, ಜನರ ಆರೋಗ್ಯ ಕಾಪಾಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ.
ತಾಯಿ ಚಾಮುಂಡೇಶ್ವರಿಯೇ, ಕರ್ನಾಟಕದಲ್ಲಿ ಪರಿಸರದ ಮೇಲೆ ಅತ್ಯಂತ ತೀವ್ರವಾದ ಅತ್ಯಾಚಾರವಾಗುತ್ತಿದೆ. ಗಾಳಿ, ನೀರು, ಆಹಾರ ಮಲಿನವಾಗಿ ಜನರು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನೇ ಕಳೆದುಕೊಂಡಿದ್ದಾರೆ. ತಾವು ದಯವಿಟ್ಟು ಈ ಕ್ಷಣವೇ ಎಲ್ಲವನ್ನು ಮತ್ತೆ ನಮ್ಮ ಪೂರ್ವಿಕರ ಕಾಲದ ಶುದ್ಧ ಪರಿಸರದ ರೀತಿಯಲ್ಲಿಯೇ ಮಾರ್ಪಡಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.
ತಾಯಿ ಚಾಮುಂಡೇಶ್ವರಿಯೇ, ಕರ್ನಾಟಕ ರಾಜ್ಯದಲ್ಲಿ ದೊಡ್ಡ ದೊಡ್ಡ ಮನುಷ್ಯರೆಲ್ಲ ಜಾತಿ ಜಾತಿ ಜಾತಿ ಎಂದು ಹುಚ್ಚು ಹಿಡಿದವರಂತೆ ಕೂಗಿಕೊಳ್ಳುತ್ತಾ ನೀವೇ ಸೃಷ್ಟಿಸಿದ ಮನುಷ್ಯರಲ್ಲಿಯೇ ಮೇಲು ಕೀಳು ಮಾಡಿ ನಿಮಗೆ ಮೋಸ ಮಾಡುತ್ತಿದ್ದಾರೆ. ನಿಮ್ಮ ಬೆನ್ನಿಗೇ ಚೂರಿ ಇರಿಯುತ್ತಿದ್ದಾರೆ. ದಯವಿಟ್ಟು ಇನ್ನು ಮುಂದೆ ಕರ್ನಾಟಕ ರಾಜ್ಯವನ್ನು ಯಾವುದೇ ರೀತಿಯ ಜಾತಿ ತಾರತಮ್ಯವಿಲ್ಲದೆ ಎಲ್ಲ ಮನುಷ್ಯರು ಒಂದೇ ಎನ್ನುವಂತ ಸಮ ಸಮಾಜವನ್ನಾಗಿ ಪರಿವರ್ತಿಸಬೇಕೆಂದು, ಈ ಕ್ಷಣದಿಂದಲೇ ಅದು ಜಾರಿಯಾಗಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ.
ತಾಯಿ ಚಾಮುಂಡೇಶ್ವರಿಯೇ,
ಡೆತ್ ಸರ್ಟಿಫಿಕೇಟ್ ಗೂ, ಬರ್ಥ್ ಸರ್ಟಿಫಿಕೇಟ್ ಗೂ ಲಂಚ ಕೊಡಬೇಕಾದ ಅತ್ಯಂತ ಭ್ರಷ್ಟ ವ್ಯವಸ್ಥೆಯಲ್ಲಿ ನಾವಿದ್ದೇವೆ. ಸರ್ವ ಶಕ್ತ ಶಕ್ತಿ ದೇವತೆಯೇ ದಯವಿಟ್ಟು ಈ ಭ್ರಷ್ಟಾಚಾರಿಗಳನ್ನು ಶಿಕ್ಷಿಸಿ ಅಮಾಯಕ ಜನರನ್ನು ರಕ್ಷಿಸುವಂತೆ ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ.
ತಾಯಿ ಚಾಮುಂಡೇಶ್ವರಿಯೇ,
ಈ ಸಮಾಜದಲ್ಲಿ ಅತ್ಯಾಚಾರ, ಅನಾಚಾರ, ಆತ್ಮಹತ್ಯೆ, ಅಪಘಾತ, ಅಪರಾಧ, ಅನ್ಯಾಯ, ಅಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ನಾಡ ದೇವತೆಯೇ ನಿಮ್ಮಯ ರಾಜ್ಯದಲ್ಲಿ ಈ ರೀತಿ ನಡೆಯುವುದು ಅಕ್ಷಮ್ಯ. ತಾವು ದಯವಿಟ್ಟು ಈ ರೀತಿಯ ಯಾವುದೇ ಘಟನೆಗಳು ನಡೆಯದಂತೆ ತಕ್ಷಣದಿಂದಲೇ ಕ್ರಮ ಕೈಗೊಳ್ಳಬೇಕು.
ತಾಯಿ ಚಾಮುಂಡೇಶ್ವರಿಯೇ,
ಇದು ತೀರಾ ಕೆಳಹಂತದ ಸಾಮಾನ್ಯ ವ್ಯಕ್ತಿಯೊಬ್ಬನ ಕಣ್ಣಿಗೆ ಕಂಡ ತಕ್ಷಣದ ಸಮಸ್ಯೆಗಳು. ತಮಗೆ ಈ ರಾಜ್ಯದ ಇನ್ನೂ ಬಹುದೊಡ್ಡ ಸಮಸ್ಯೆಗಳು ತಿಳಿದಿರುತ್ತದೆ. ಮೇಕೆದಾಟು ಯೋಜನೆಯ ಅನುಮತಿ, ರಾಜ್ಯದ ಪಾಲಿನ ತೆರಿಗೆ ಅಸಮಾನತೆ, ಇಲ್ಲಿನ ಕೋಮು ದ್ವೇಷಗಳು, ಗಣೇಶ ಉತ್ಸವದ ಗಲಾಟೆಗಳು ಎಲ್ಲವೂ ನಿಮಗೆ ತಿಳಿದದ್ದೇ. ಈ ಎಲ್ಲ ಸಮಸ್ಯೆಗಳನ್ನು ತಾವು ಬೇಗನೆ ಬಗೆಹರಿಸಬೇಕು.
ತಾಯೇ, ಶ್ರೀಮತಿ ಭಾನು ಮುಷ್ತಾಕ್ ಅವರನ್ನು ನಿಮ್ಮಲ್ಲಿಗೆ ಕರೆಸಿಕೊಂಡ ನಿಮಗೆ ಇದನ್ನೆಲ್ಲಾ ಪರಿಹರಿಸುವುದು ದೊಡ್ಡ ಕಷ್ಟವೇನಲ್ಲ. ತಾಯಿ ಚಾಮುಂಡೇಶ್ವರಿ ಇದನ್ನು ಈ ಕ್ಷಣವೇ ಈಡೇರಿಸಿ. ನಿಮ್ಮನ್ನು ಕರ್ನಾಟಕದ ಏಳು ಕೋಟಿ ಜನ ಅತ್ಯಂತ ಭಯ, ಭಕ್ತಿ, ನಂಬಿಕೆಯಿಂದ ಪೂಜಿಸುತ್ತಿದ್ದಾರೆ. ಅವರ ನಂಬಿಕೆಗೆ ದ್ರೋಹ ಮಾಡಬೇಡ ತಾಯಿ.
ಜೊತೆಗೆ ಈ ಪ್ರಗತಿಪರರು, ಬುದ್ಧಿಜೀವಿಗಳು, ನಾಸ್ತಿಕರು ಚಾಮುಂಡೇಶ್ವರಿಯೇ ಇಲ್ಲ. ಇದೆಲ್ಲಾ ಮೂಢನಂಬಿಕೆ ಎಂಬುದಾಗಿ ಟೀಕಿಸುತ್ತಾರೆ. ಅವರಿಗೆ ಬುದ್ಧಿ ಕಲಿಸಲಾದರೂ ಈ ಕ್ಷಣವೇ ತಾಯೇ ಈ ಎಲ್ಲಾ ಕೋರಿಕೆಗಳನ್ನು ಈಡೇರಿಸಿ ನಿನ್ನ ಸರ್ವ ಶಕ್ತ, ಸರ್ವ ವ್ಯಾಪಿಯನ್ನು ಸಾಕ್ಷಿ ಸಮೇತ ದೃಢಪಡಿಸಬೇಕೆಂದು ಈ ಸಣ್ಣ ಮನುಷ್ಯನ ಹೃದಯಪೂರ್ವಕ ಕೋರಿಕೆ.
ತಾಯಿ ಚಾಮುಂಡೇಶ್ವರಿಯೇ ನಿಮಗೆ ಶುಭವಾಗಲಿ.
ಜಗವೆಲ್ಲ ನಗುತಿರಲಿ,
ಜಗದಳುವು ನನಗಿರಲಿ.
ನಮಸ್ಕಾರಗಳು ತಾಯಿ,
ನಿನಗೆ ಅಡ್ಡ ಬಿದ್ದೆ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…….
9844013068……