ಮೈಸೂರು ನಗರ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಗೃಹ ಸಚಿವ ಜಿ ಪರಮೇಶ್ವರ್ ದಿಡೀರ್ ಬೇಟಿ
ವಿಜಯ ದರ್ಪಣ ನ್ಯೂಸ್…
ಮೈಸೂರು ನಗರ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಗೃಹ ಸಚಿವ ಜಿ ಪರಮೇಶ್ವರ್ ದಿಡೀರ್ ಬೇಟಿ

ತಾಂಡವಪುರ ನವಂಬರ್ 25: ಮೈಸೂರು ನಗರ ವ್ಯಾಪ್ತಿಯಲ್ಲಿ ಈ ವರ್ಷ ವಿವಿಧ ಸೈಬರ್ ಅಪರಾಧಗಳ ಕೃತ್ಯಗಳಡಿ ಆಗಿರುವ ಮೋಸ ಬರೋಬ್ಬರಿ 30 ಕೋಟಿ ರೂ..!
ಇದು ಸ್ವತಃ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೀಡಿರುವ ಮಾಹಿತಿ. ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬಿರುಸಿನ ಬೆಳವಣಿಗೆಗಳ ನಡುವೆಯೂ ಮೈಸೂರಿನ ಪೊಲೀಸ್ ಠಾಣೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ
ಅವರು, ಬಳಿಕ ಸುದ್ದಿಗಾರರಿಗೆ ಅಪರಾಧ ಕೃತ್ಯಗಳು ಹಾಗೂ ಇಲಾಖಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಮೈಸೂರಿನಲ್ಲಿ ಈ ವರ್ಷವೇ 30 ಕೋಟಿ ರೂ.ಗಳಷ್ಟು ಆನ್‌ಲೈನ್ ವಂಚನೆ ನಡೆದಿದೆ. ಸೈಬರ್ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತನಿಖೆಯ ಬಗ್ಗೆ ಪೊಲೀಸರಿಗೆ ಹೆಚ್ಚುವರಿ ತರಬೇತಿ ನೀಡುತ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಆನ್‌ಲೈನ್ ವಂಚನೆಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ. ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಕೋಟ್ಯಂತರ ರೂ. ಮೋಸ, ದರೋಡೆ ಮಾಡಲಾಗುತ್ತಿದೆ. ವಿದ್ಯಾವಂತರೇ ಡಿಜಿಟಲ್ ಅರೆಸ್ಟ್ಗೆ ಒಳಗಾಗಿದ್ದಾರೆ. ನಿವೃತ್ತ ಸರ್ಕಾರಿ ಅಧಿಕಾರಿಗಳೇ ವಂಚಕರ ಗುರಿ ಆಗಿದ್ದಾರೆ. ಬೆಂಗಳೂರಿನಲ್ಲಿ ಒಬ್ಬ ನಿವೃತ್ತ ಐಟಿ ಉದ್ಯೋಗಿ 32 ಕೋಟಿ ರೂ. ಹಣವನ್ನು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಕಳೆದುಕೊಂಡಿದ್ದಾರೆ. ಹೀಗಾಗಿ ಸೈಬರ್ ಅಪರಾಧವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.
ಮೈಸೂರಿಗೆ ಹೆಚ್ಚುವರಿ ಠಾಣೆ: ಮೈಸೂರಿನಲ್ಲಿ ಹೆಚ್ಚುವರಿ ಪೊಲೀಸ್ ಠಾಣೆಗಳನ್ನು ಮಾಡುವ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಉದಯಗಿರಿ ಪೊಲೀಸ್ ಠಾಣೆಯನ್ನು ಈಗಾಗಲೇ ಎರಡು ಭಾಗ ಮಾಡಿದ್ದೇವೆ. ಇನ್ನು ಎಷ್ಟು ಹೆಚ್ಚುವರಿ ಠಾಣೆಗಳು ಬೇಕೆಂಬ ಬಗ್ಗೆ ಸಭೆ ನಡೆಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಿಎಸ್‌ಐ ಹಗರಣ ಆದ ಕಾರಣ ಪೊಲೀಸ್ ನೇಮಕಾತಿಯಲ್ಲಿ ವಿಳಂಬವಾಯಿತು. ಈ ವರ್ಷ ಪೊಲೀಸ್ ನೇಮಕಾತಿಯನ್ನು ಹೆಚ್ಚು ಮಾಡುತ್ತಿದ್ದೇವೆ ಎಂದರು. ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಸುಂದರ್ ರಾಜ್, ಬಿಂದುಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮುಂತಾದವರಿದ್ದರು.
ಮೈಸೂರಿನಲ್ಲಿ ಪೊಲೀಸ್ ಮ್ಯೂಸಿಯಂ
ಮೈಸೂರಿನಲ್ಲಿ ಸುಸಜ್ಜಿತವಾದ ಕರ್ನಾಟಕ ಪೊಲೀಸ್ ವಸ್ತು ಸಂಗ್ರಹಾಲಯ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಕೆಎಸ್‌ಆರ್‌ಪಿ ಆಶ್ವಾರೋಹಿ ದಳ ಕಂಪನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದರು. ಆರಕ್ಷಕ ಅಶ್ವದಳದ ವಸ್ತು ಸಂಗ್ರಹಾಲಯವನ್ನು ವೀಕ್ಷಿಸಿದರು. ನಜರ್‌ಬಾದ್ ಪೊಲೀಸ್ ಠಾಣೆಗೆ ದೀಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಆರಂಭದಿಂದ ಇಲ್ಲಿಯವರೆಗೆ ಬೆಳೆದುಬಂದ ರೀತಿ ಹಾಗೂ ಇಲಾಖೆಗೆ ಸಂಬಂಧಿಸಿದ ನೆನಪಿನಲ್ಲಿ ಉಳಿಯುವಂತಹ ವಸ್ತುಗಳನ್ನು ಕಾಪಾಡಬೇಕಿದೆ. ಈ ನಿಟ್ಟಿನಲ್ಲಿ ಸುಸಜ್ಜಿತ ಪೊಲೀಸ್ ಮ್ಯೂಸಿಯಂ ಮಾಡಲಾಗುವುದು ಎಂದು ವಿವರಿಸಿದರು.
ನಜರ್‌ಬಾದ್ ಪೊಲೀಸ್ ಠಾಣೆ ಮೈಸೂರಿನಲ್ಲಿ ಅತ್ಯಂತ ಹಳೆಯ ಪೊಲೀಸ್ ಠಾಣೆ. ಬಹಳ ದಿನದಿಂದ ಭೇಟಿ ನೀಡಬೇಕು ಎಂದುಕೊಂಡಿದ್ದೆ. ಪೊಲೀಸ್ ಠಾಣೆಯ ಕಾರ್ಯವೈಖರಿಯನ್ನು ಪರಿಶೀಲಿಸಲು ದಿಢೀರ್ ಭೇಟಿ ನೀಡಿದ್ದೇನೆ ಎಂದರು.
ರಾಜಕೀಯ ಮಾತನಾಡಲ್ಲ: ಡಾ.ಪರಮೇಶ್ವರ್
ಮೈಸೂರು: ರಾಜ್ಯ ರಾಜಕೀಯದ ಯಾವ ಬೆಳವಣಿಗೆಯ ಬಗ್ಗೆಯೂ ನಾನು ಮಾತನಾಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ನಾನು ಮಾತನಾಡದೆ ಇರುವುದಕ್ಕೆ ನೀವು ಏನಾದರೂ ಅರ್ಥ ಕಲ್ಪಿಸಿಕೊಳ್ಳಿ. ನಾನು ಮಾತ್ರ ಏನನ್ನೂ ಮಾತನಾಡುವುದಿಲ್ಲ. ಬಹಳಷ್ಟು ಜನ ಈ ವಿಚಾರ ಕುರಿತು ಬಹಳಷ್ಟು ರೀತಿಯಲ್ಲಿ ಮಾತನಾಡಿದ್ದಾರೆ. ನಾನು ಮಾತ್ರ ಏನನ್ನೂ ಮಾತನಾಡುವುದಿಲ್ಲ ಎಂದರು.
ನಾನು ಪ್ರಸ್ತುತ ರಾಜಕೀಯದ ಯಾವ ಪ್ರಶ್ನೆಗಳಿಗೂ ಉತ್ತರ ಕೊಡುವುದಿಲ್ಲ. ಗೃಹ ಇಲಾಖೆಯ ಬಗ್ಗೆ ಏನು ಬೇಕಾದರೂ ಕೇಳಿ ಹೇಳುತ್ತೇನೆ ಎಂದು ಜಾರಿಗೊಂಡರು.
&&&&&&&&&&&&&&&&&&&&&&&&&
ಬಿಇಒ ಮೇಲೆ ಹಲ್ಲೆ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹಿಸಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ವಿವಿಧ ಸಂಘಟನೆ ಪ್ರತಿಭಟನೆ..

ನಂಜನಗೂಡು: ನವಂಬರ್ 25 ಇತ್ತೀಚಿಗೆ ನಡೆದ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಊಟದ ಸಮಯದಲ್ಲಿ ವ್ಯಕ್ತಿಯೊಬ್ಬರು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನ ಮಾಡಿದ್ದು, ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹಿಸಿ , ನಗರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ವಿವಿಧ ಸಂಘಟನೆಗಳಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಚಿಂತಾಮಣಿ ಗಣಪತಿ ದೇವಸ್ಥಾನ ಮುಂಭಾಗದಿಂದ ತಾಲ್ಲೂಕು ಕಛೇರಿ ಆವರಣದವರೆಗೆ ಅಖಿಲ ಭಾರತ ವೀರಶೈವೃ ಮಹಾಸಭಾ ಲಿಂಗಾಯಿತ ಹಾಗೂ ವಿವಿಧ ಸಂಘಟನೆಗಳ ನೂರಾರು ಪದಾಧಿಕಾರಿಗಳು ಹಲ್ಲೆಗೆ ಯತ್ನಿಸಿದ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹಿಸಿದರು .
ತಾಲ್ಲೂಕು ಆಡಳಿತ ಭವನದ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆಗಳನ್ನು ಕೂಗಿ, ಚಪ್ಪಲಿ ಹಿಡಿದು ಆಕ್ರೋಶವನ್ನು ವ್ಯಕ್ತಪಡಿಸಿದರು.
ಕಳೆದ ಶುಕ್ರವಾರ ಕೆಡಿಪಿ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಊಟ ಮಾಡುತ್ತಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಹೇಶ್ ವಿರುದ್ಧ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಬಿಳುಗಲಿ ಕುಮಾರ್ ಎಂಬ ವ್ಯಕ್ತಿ ಏಕಾಏಕಿ ಬಿಇಒ ರವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾನೆ. ಜೊತೆಗೆ ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ ಹಿನ್ನೆಲೆ, ಪಟ್ಟಣ ಪೊಲೀಸ್ ಠಾಣೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕರಣವನ್ನು ದಾಖಲಿಸಿದ್ದಾರೆ.
ಆದರೂ ಕೂಡ ಇದುವರೆಗೂ ಅಲ್ಲಿಗೆ ಮುಂದಾದ ವ್ಯಕ್ತಿಯನ್ನು ಬಂಧಿಸುವ ಪ್ರಯತ್ನವನ್ನು ಪೊಲೀಸರು ಮಾಡಿಲ್ಲ. ಜೊತೆಗೆ ಸ್ಥಳೀಯ ಶಾಸಕರು ಇವರಿಗೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇಂತಹ ಘಟನೆಗಳಿಂದ ತಾಲ್ಲೂಕಿನಲ್ಲಿರುವ ಅಧಿಕಾರಿಗಳು ಮುಕ್ತವಾಗಿ ಕಾರ್ಯನಿರ್ವಹಿಸಲು ಹೆದರಿದ್ದಾರೆ.
ಇದರಿಂದ ಆಡಳಿತ ವ್ಯವಸ್ಥೆ ಹದಗೆಡುವ ವಾತಾವರಣ ನಿರ್ಮಾಣವಾಗಿದೆ. ತಾಲ್ಲೂಕಿನಲ್ಲಿ ಯಾವುದೇ ಸಮಾಜ ಅಥವಾ ಜಾತಿಯ ಅಧಿಕಾರಿಗಳಿಗೆ ಮಾನಸಿಕ ಕಿರುಕುಳ ನೀಡುವ ಇಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಬಳಿಕ ಸ್ಥಳಕ್ಕೆ ತಾಲ್ಲೂಕು ದಂಡಾಧಿಕಾರಿ ಶಿವಕುಮಾರ್ ಕಾಸ್ನೂರು, ಇನ್ಸ್ಪೆಕ್ಟರ್ ಸಿ.ಎಂ.ರವೀಂದ್ರ ಆಗಮಿಸಿ ಪ್ರತಿಭಟನಾ ನಿರತರಿಂದ ಮನವಿ ಪತ್ರ ಪಡೆದು, ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯ ಬಳಿಕ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.
ಪ್ರತಿಭಟನೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ ದೇವನೂರು ಶಿವಪ್ಪ ದೇವರು, ಎನ್ ಸಿ ಬಸವಣ್ಣ, ಮಹೇಶ್, ಮಡಹಳ್ಳಿ ನಟರಾಜು, ಎಚ್.ಪಿ ರೇವಣ್ಣ, ನಂಜಮಣಿ, ಮಂಜುನಾಥ್ ಶಿವನಾಗಪ್ಪ ಬದನವಾಳು ಮಂಜುನಾಥ್, ನಂದಿನಿ ಮಹೇಶ್, ಮಂಜುಳ ಮಧು, ಕೋಮಲ, ಎಚ್ ಕೆ ಚೆನ್ನಪ್ಪ, ಮಹದೇವಸ್ವಾಮಿ, ರೈತ ಮುಖಂಡ ಕಲ್ಕುಂದ ರಾಹುಲ್, ಹುಸ್ಕೂರು ರಾಜಶೇಖರ್, ಕೋಣನೂರು ಗಿರೀಶ್, ಮಲ್ಲೇಶ್, ಬಸವರಾಜು, ಮಹೇಶ್, ಮಹದೇವಸ್ವಾಮಿ, ಮಹೇಶ, ಗುರುಸ್ವಾಮಿ, ಮುದ್ದಹಳ್ಳಿ ಅಶೋಕ್, ಬಸವ, ಯೋಗೇಶ್ ಸೇರಿದಂತೆ ಇತರರು ಹಾಜರಿದ್ದರು
