ಬಿಜೆಪಿ ಸುಳ್ಳಿನ ಆರೋಪಕ್ಕೆ ಅಭಿವೃದ್ಧಿ ಕಾರ್ಯಗಳ ಮೂಲಕ ತಕ್ಕ ಉತ್ತರ ನೀಡಿದ್ದೇವೆ : ಸಿ ಎಂ ಸಿದ್ದರಾಮಯ್ಯ
ವಿಜಯ ದರ್ಪಣ ನ್ಯೂಸ್…
ಬಿಜೆಪಿ ಸುಳ್ಳಿನ ಆರೋಪಕ್ಕೆ ಅಭಿವೃದ್ಧಿ ಕಾರ್ಯಗಳ ಮೂಲಕ ತಕ್ಕ ಉತ್ತರ ನೀಡಿದ್ದೇವೆ : ಸಿ ಎಂ ಸಿದ್ದರಾಮಯ್ಯ

ಶಿಡ್ಲಘಟ್ಟ : ಬಿಜೆಪಿ ಸುಳ್ಳಿನ ಆರೋಪಕ್ಕೆ ಒಂದು ಲಕ್ಷ ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳ ಮೂಲಕ ತಕ್ಕ ಉತ್ತರ ನೀಡಿದ್ದೇವೆ ನಮ್ಮ ಸರ್ಕಾರದ ಆಡಳಿತದಲ್ಲಿ ಖಜಾನೆ ಖಾಲಿ ಇಲ್ಲ ಎಂಬುದಕ್ಕೆ ಸಾಕ್ಷಿ ಇದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಶಿಡ್ಲಘಟ್ಟದ ಹನುಮಂತಪುರ ಗ್ರಾಮದ ಬಳಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ,ಅಮೃತ್ ಯೋಜನೆಯಡಿ ನಗರಕ್ಕೆ ಹಾಗು 13 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು, ಹೆಚ್.ಎನ್.ವ್ಯಾಲಿ 3ನೇ ಹಂತದ 164 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಡ್ಲಘಟ್ಟ ಕ್ಷೇತ್ರದಲ್ಲಿ ಇಷ್ಟು ದೊಡ್ಡ ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸುತ್ತಿರುವುದು ನಮ್ಮ ಸರ್ಕಾರದ ಅಭಿವೃದ್ಧಿ ಪರ್ವದ ವೇಗವನ್ನು ತೋರಿಸುತ್ತಿದೆ ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯಿಂದಾಗಿ ಕೇವಲ ಶಿಡ್ಲಘಟ್ಟ ಚಿಕ್ಕಬಳ್ಳಾಪುರ ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯದ ರೇಷ್ಮೆ ಬೆಳೆಗಾರರಿಗೆ ಅನುಕೂಲ ಆಗಲಿದೆ ಎಂದರು.
ಗ್ಯಾರಂಟಿ ಕಾರ್ಯಕ್ರಮಗಳಿಗೆ ಒಂದು ಲಕ್ಷ ಕೋಟಿಗೂ ಅಧಿಕ ಮೊತ್ತದ ಹಣ ಇದುವರೆಗೂ ತೆಗೆದಿಟ್ಟಿರುವುದು ಮಾತ್ರವಲ್ಲದೆ ಇಷ್ಟೇ ಮೊತ್ತದ ಅಭಿವೃದ್ಧಿ ಕಾರ್ಯಗಳನ್ನೂ ನಾವು ನಡೆಸುತ್ತಿದ್ದೇವೆ ಇದಕ್ಕೆ ಇಂದು ಇಲ್ಲಿ ಉದ್ಘಾಟನೆಗೊಂಡ ಅಭಿವೃದ್ಧಿಯೂ ಸೇರಿದೆ ಎಂದರು.
ರಾಜ್ಯದ ಪ್ರತೀ ಕುಟುಂಬಗಳಿಗೂ ಪ್ರತೀ ತಿಂಗಳು ಸರ್ಕಾರದ ಹಣ ಮತ್ತು ಕಾರ್ಯಕ್ರಮಗಳು ತಲುಪುತ್ತಿವೆ ನಮ್ಮ ಸರ್ಕಾರ ಅಧಿಕಾರದಲ್ಲಿ ಇರುವವರೆಗೂ ಯಾವ ಗ್ಯಾರಂಟಿ ಯೋಜನೆಗಳೂ ನಿಲ್ಲುವುದಿಲ್ಲ ,ಜೊತೆಗೆ ಸಣ್ಣ ನೀರಾವರಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಅಭಿವೃದ್ಧಿ ನಡೆಸುತ್ತಿದ್ದೇವೆ ಎನ್ನುವುದನ್ನು ಅಂಕಿ ಅಂಶಗಳ ಸಮೇತ ಅವರು ವಿವರಿಸಿದರು.
ಶಿಡ್ಲಘಟ್ಟದಲ್ಲಿ ಮಿನಿ ವಿಧಾನಸೌಧಕ್ಕೆ ಅಸ್ತು :
ಶಿಡ್ಲಘಟ್ಟಕ್ಕೆ ಮಿನಿ ವಿಧಾನಸೌಧ,ಅಂಬೇಡ್ಕರ್ ಭವನಕ್ಕೆ ಅನುದಾನಬೇಕು ಎನ್ನುವುದೂ ಸೇರಿದಂತೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್ ಮತ್ತು ಕ್ಷೇತ್ರದ ಶಾಸಕರು ವಿವಿಧ ಬೇಡಿಕೆ ಇಟ್ಟಿದ್ದಾರೆ, ಸಚಿವರು ಹಾಗು ಶಿಡ್ಲಘಟ್ಟ ಶಾಸಕರ ಮನವಿಯಂತೆ ಎಲ್ಲಾ ಕಾಮಗಾರಿಗಳಿಗೂ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಸಮಾಜದ ಪ್ರತಿಯೊಬ್ಬರಿಗೂ ಆರ್ಥಿಕ ಶಕ್ತಿ ಬರಬೇಕು, ಜಾತಿ ವ್ಯವಸ್ಥೆ ಮತ್ತು ವರ್ಗ ವ್ಯವಸ್ಥೆ ಹೋಗಬೇಕು ಆಗ ಮಾತ್ರ ದೇಶಕ್ಕೆ ಬಂದಿರುವ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದಿದ್ದರು. ಹೀಗಾಗಿ ನಮ್ಮ ಸರ್ಕಾರ ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಿದೆ. ನಮ್ಮದು ಸರ್ವ ಧರ್ಮ ಮತ್ತು ಸರ್ವ ಜಾತಿಯವರನ್ನು ಒಳಗೊಳ್ಳುವ ಬದ್ಧತೆಯ ಸರ್ಕಾರ ಎಂದರು.
ಬಿಜೆಪಿಗೆ ರಾಜ್ಯದ ಜನ ಅಧಿಕಾರ, ಅವಕಾಶ ಕೊಟ್ಟಾಗ ಅಭಿವೃದ್ಧಿ ಕೆಲಸಗಳನ್ನು ಮಾಡಲಿಲ್ಲ, ಒಂದೇ ಒಂದು ಮನೆಯನ್ನೂ ಇಡೀ ಸರ್ಕಾರದ ಅವಧಿಯಲ್ಲಿ ಬಿಜೆಪಿ ವಿತರಣೆ ಮಾಡಲಿಲ್ಲ. ಈಗ ನಾವು ರಾಜ್ಯದ ಜನರ ಮನೆ ಬಾಗಿಲಿಗೆ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ತಲುಪಿಸುತ್ತಿದ್ದೇವೆ. ಇದನ್ನು ಸಹಿಸದ ಬಿಜೆಪಿ ಸುಳ್ಳು ಆರೋಪಗಳ ಮೇಲೆ ಮತ್ತು ರಾಜ್ಯದ ಜನರನ್ನು ವಿಭಜಿಸುವ ಮೂಲಕ ರಾಜಕಾರಣ ಮಾಡುತ್ತಿದೆ ಎಂದರು.
ನಾವು ಜನರನ್ನು ಮತ್ತು ಸಮಾಜವನ್ನು ಬೆಸೆಯುವ ಮೂಲಕ ಅಭಿವೃದ್ಧಿ ರಾಜಕಾರಣ ಮಾಡುತ್ತಿದ್ದೇವೆ, ಶಿಡ್ಲಘಟ್ಟದ ರೀಲರ್ಸ್ ಗಳ ಸಮುದಾಯಕ್ಕೂ ಅನುಕೂಲ ಮಾಡಿಕೊಡಲಾಗುವುದು, ನಾವು ನುಡಿದಂತೆ ನಡೆಯುತ್ತಿದ್ದೇವೆ ,ಚುನಾವಣೆ ವೇಳೆ ನಾವು ಕೊಟ್ಟ ಭರವಸೆಗಳನ್ನು ಈಡೇರಿಸಿ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. 2028 ರಲ್ಲೂ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ,ನಮ್ಮ ಗ್ಯಾರಂಟಿ ಟೀಕಿಸಿದ್ದ ಬಿಜೆಪಿ ಬೇರೆ ರಾಜ್ಯಗಳಲ್ಲಿ ಅದನ್ನೇ ನಕಲು ಮಾಡುತ್ತಿದೆ ವಿರೋಧ ಪಕ್ಷಗಳ ಟೀಕೆಗಳು ಸಾಯುತ್ತವೆ, ನಮ್ಮ ಕೆಲಸ ಉಳಿಯುತ್ತವೆ ಇದರಲ್ಲಿ ಎರಡು ಮಾತಿಲ್ಲ ಎಂದ ಅವರು ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೇ ಮಾದರಿ ಎಂದರು.
ಅಭಿವೃದ್ಧಿ ವಿಚಾರದಲ್ಲಿ ಇಡೀ ರಾಜ್ಯದಲ್ಲಿ ಯಾವುದೇ ತಾರತಮ್ಯ ಎಸಗುವುದೂ ಇಲ್ಲಾ ಇದಕ್ಕೆ ತಾಜಾ ಉದಾಹರಣೆ, ಶಿಡ್ಲಘಟ್ಟದಲ್ಲಿ 2000 ಕೋಟಿಗೂ ಅಧಿಕ ರೂ ವೆಚ್ಚದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆಯೇ ಇಲಿ ನಮ್ಮ ಕಾಂಗ್ರೆಸ್ ಸರ್ಕಾರದ ಶಾಸಕ ಇಲ್ಲ ಇಲ್ಲಿ ಇರುವುದು ಜೆಡಿಎಸ್ ಶಾಸಕ ಆದರೂ ಅಭಿವೃದ್ಧಿ ಪರ್ವ ವಿಚಾರದಲ್ಲಿ ಯಾವುದೇ ತಾರತಮ್ಮ ಮಾಡುವುದಿಲ್ಲ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ
ಶಿಡ್ಲಘಟ್ಟ ,ಚಿಕ್ಕಬಳ್ಳಾಪುರ, ಕೋಲಾರ ಭಾಗದ ರೈತರು ಶ್ರಮಿಕರು ,ಶ್ರಮವಹಿಸಿ ಕೃಷಿ ಮಾಡಿ ಇಡೀ ದೇಶಕ್ಕೆ ಅನ್ನ ನೀಡುತ್ತಿದ್ದಾರೆ ಇವರಿಗೆ ಕೃಷಿಗಾಗಿ ಮತ್ತು ಶುದ್ದ ಕುಡಿಯುವ ನೀರು ಕೊಡುವ ಕೆಲಸ ಸರಕಾರದಿಂದ ಮಾಡಬೇಕಿದೆ ಎಂದು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.
ಈ ಭಾಗದಲ್ಲಿ ಬೆಳೆಯದ ಬೆಳೆಯಿಲ್ಲ ತರಕಾರಿ ಹೂ ಹಣ್ಣು ಇಲ್ಲ, ಎಲ್ಲವನ್ನೂ ಬೆಳೆಯಬಲ್ಲ ಸಾಮರ್ಥ್ಯ ನಮ್ಮ ರೈತರಿಗೆ ಇದೆ, ಆದರೆ ನೀರಿನದ್ದೇ ಸಮಸ್ಯೆ ,ಹಾಗಾಗಿ ಈ ಭಾಗಕ್ಕೆ ಎತ್ತಿನ ಹೊಳೆ ನೀರನ್ನು ತುರ್ತಾಗಿ ಹರಿಸಿ ಎಂದು ಕೋರಿದರು.
ಎತ್ತಿನಹೊಳೆ ನೀರನ್ನು ಹರಿಸುವುದಾಗಿ ನೀವು ಹೇಳಿದ್ದೀರಿ, ನೀವು ಮಾತಿಗೆ ತಪ್ಪಿದ್ದಿಲ್ಲ,ಎತ್ತಿನಹೊಳೆ ನೀರು ಹರಿಸುವ ವಿಚಾರದಲ್ಲೂ ಈ ಭಾಗದ ರೈತರಿಗೆ ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಿ, ‘ರೈತರ ಬದುಕು ಬಂಗಾರ’ವಾಗುತ್ತದೆ ಎಂದು ಹೇಳಿದರು. ಜಿಲ್ಲೆಯಲ್ಲಿ 7 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುತ್ತಿದ್ದೇವೆ ಇದರಿಂದ ಈ ಭಾಗದ ಯುವಕ ಯುವತಿಯರ ನಿರುದ್ಯೋಗ ಸಮಸ್ಯೆ ನಿವಾರಣೆ ಆಗಲಿದೆ ಎಂದು ಆಶಿಸಿದರು.
ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ಈ ಕ್ಷೇತ್ರದಲ್ಲಿ ನಡೆದ 16 ಚುನಾವಣೆಯಲ್ಲಿ 11 ಭಾರಿ ಕಾಂಗ್ರೆಸ್‍ನ ಶಾಸಕರನ್ನು ಗೆಲ್ಲಿಸಿದ ಕ್ಷೇತ್ರವಿದು,ಈ ಕ್ಷೇತ್ರದ ಅಭಿವೃದ್ದಿಗೆ ವಿಶೇಷ ಅನುದಾನ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ಅವರನ್ನು ಕೋರಿದರು.
ನನಗೆ ಜನ್ಮ ನೀಡಿದ ತಂದೆ ತಾಯಿ, ಈ ಕ್ಷೇತ್ರದ ಸ್ವಾಭಿಮಾನಿ ಮತದಾರರು ಹಾಗೂ ಜೆಡಿಎಸ್‍ನ ವರಿಷ್ಠ ಎಚ್.ಡಿ.ದೇವೇಗೌಡ ಅವರ ಆಶೀರ್ವಾದದಿಂದ ನಾನು ಈ ಕ್ಷೇತ್ರದ ಶಾಸಕನಾಗಿದ್ದೇನೆ. ಕೇತ್ರದ ಸ್ವಾಭಿಮಾನಿ ಮತದಾರರ ಋಣ ತೀರಿಸಬೇಕಿದೆ ಎಂದರು.
ಕ್ಷೇತ್ರದಲ್ಲಿ 270 ಕಿಲೋ ಮೀಟರ್ ರಸ್ತೆ ಸಂಚರಿಸಲಾಗದಷ್ಟು ಬಹಳ ಹದಗೆಟ್ಟಿದೆ ,ಕಳೆದ 2 ವರ್ಷಗಳಲ್ಲಿ 17 ಅಪಘಾತಗಳು ನಡೆದಿದ್ದು 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ, ರಾಮಸಮುದ್ರ ಕೆರೆಯಿಂದ ನಗರಕ್ಕೆ ಕುಡಿಯುವ ನೀರು ಸರಬರಾಜು ಯೋಜನೆ, ಉತ್ತರ ವಿವಿ 2ನೇ ಹಂತದ ಕಾಮಗಾರಿ, 2ನೇ ಹಂತದ ಒಳ ಚರಂಡಿ ಯೋಜನೆ ಸೇರಿ 650 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಸಿಎಂ, ಡಿಸಿಎಂ, ವಿವಿಧ ಇಲಾಖೆ ಸಚಿವರು ಆಗಮಿಸಿದ್ದು ಎಲ್ಲರಿಗೂ ಕ್ಷೇತ್ರದ ನಾಗರೀಕರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಕಾರ್ಯಕ್ರಮ ಶಿಡ್ಲಘಟ್ಟ ಕ್ಷೇತ್ರದ ಪಾಲಿಗೆ ಐತಿಹಾಸಿಕ ಕಾರ್ಯಕ್ರಮವಾಗಿ ಇತಿಹಾಸದ ಪುಟ ಸೇರಬೇಕಿದೆ,ಅದಕ್ಕಾಗಿ ಕ್ಷೇತ್ರದ ಅಭಿವೃದ್ದಿಗೆ ವಿಶೇಷ ಅನುದಾನ ನೀಡಿ ಎಂದು ಮನವಿ ಮಾಡಿದರು.
ಈ ವೇಳೆ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್ ಅವರು ಸಿ.ಎಂ.ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಬೃಹತ್ ಗಾತ್ರದ ರೇಷ್ಮೆ ಹಾರ, ರೇಷ್ಮೆಶಾಲು ಹಾಕಿ ರಾಧ ಕೃಷ್ಣ ಅವರ ಕಂಚಿನ ಮೂರ್ತಿಯ ನೆನಪಿನ ಕಾಣಿಕೆ ನೀಡಿ ಸತ್ಕರಿಸಿದರು.
ಸಚಿವ ಡಾ.ಎಂ.ಸಿ.ಸುಧಾಕರ್, ಕೆ.ಎಚ್.ಮುನಿಯಪ್ಪ, ಎಚ್.ಸಿ.ಮಹದೇವಪ್ಪ, ಬೈರತಿ ಸುರೇಶ್, ಕೃಷ್ಣಬೈರೇಗೌಡ ಇನ್ನಿತರೆ ಸಚಿವರು, ಶಾಸಕರು, ಅತಿಥಿಗಳಿಗೆ ರೇಷ್ಮೆಹಾರ, ರೇಷ್ಮೆಶಾಲು ಹಾಗೂ ಗಣಪತಿ, ಬುದ್ದನ ಕಂಚಿನ ಮೂರ್ತಿಯನ್ನು ನೀಡಿ ಸನ್ಮಾನಿಸಿದರು.
ಕುರುಬ ಸಮುದಾಯದ ಮುಖಂಡ ಜಿಲ್ಲಾಧ್ಯಕ್ಷ ಡಾಲ್ಫಿನ್ ಎ.ನಾಗರಾಜ್, ತಾಲೂಕು ಅಧ್ಯಕ್ಷ ಕೆ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಂ.ರಾಮಾಂಜಿನಪ್ಪ ಮತ್ತು ಸಮುದಾಯದವರು ಸಿಎಂ ಸಿದ್ದರಾಮಯ್ಯ ಅವರಿಗೆ ಗಂಡು ಕುರಿ ಮರಿ ನೀಡಿ ಕಂಬಳಿಯ ಶಾಲು ಹೊದಿಸಿ ಸಾಂಪ್ರದಾಯಿಕವಾಗಿ ಸನ್ಮಾನಿಸಿದರು.
ಹಂಡಿಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಥಳೀಯರು ಕೂಡ ಸಿಎಂ, ಡಿಸಿಎಂ ಅವರನ್ನು ಸನ್ಮಾನಿಸಿದರು,ಇದಕ್ಕೂ ಮುನ್ನ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸರು ಸಿಎಂ ಅವರಿಗೆ ಗೌರವ ಸ್ವಾಗತ ನೀಡಿದರು.
ಕೆಪಿಸಿಸಿ ಕೋ-ಆರ್ಡಿನೇಟರ್ ರಾಜೀವ್‍ಗೌಡ ಅವರು ತಮ್ಮ ಅಪಾರ ಕಾಂಗ್ರೆಸ್ ಬೆಂಬಲಿಗರೊಂದಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಶಿಡ್ಲಘಟ್ಟದ ಗಡಿಭಾಗದಲ್ಲಿ ಸ್ವಾಗತಿಸಿ ಬರ ಮಾಡಿಕೊಂಡರಲ್ಲದೆ ಡಿ.ಕೆ.ಶಿವಕುಮಾರ್ ಜತೆಗೂಡಿ ವೇದಿಕೆ ಹತ್ತಿದರು.
ದೀಪ ಬೆಳಗುವಾಗ ಡಿಕೆಶಿ ಅವರು ಮೊದಲಿಗೆ ರಾಜೀವ್‍ಗೌಡ ನಂತರ ಪುಟ್ಟು ಆಂಜಿನಪ್ಪ ಇಬ್ಬರನ್ನೂ ಕರೆದು ದೀಪ ಬೆಳಗಿಸಿದಾಗ ಇಬ್ಬರೂ ನಾಯಕರ ಬೆಂಬಲಿಗರಿಂದ ಚಪ್ಪಾಳೆ ಶಿಳ್ಳೆಗಳ ಸುರಿ ಮಳೆಯಾಯ್ತು.
ರಾಜ್ಯ ಸರಕಾರದ ವಿವಿಧ ಇಲಾಖೆಗಳ ಯೋಜನೆಗಳು, ಸಿಗುವ ಸವಲತ್ತುಗಳು ಮತ್ತು ಸಾಧನೆ ಕುರಿತು ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರವಾಸಿ ತಾಣಗಳು, ಐತಿಹಾಸಿಕ, ಧಾರ್ಮಿಕ ಸ್ಥಳಗಳು, ಅಭಿವೃದ್ದಿಯ ಮುನ್ನೋಟದ ಜಿಲ್ಲಾ ದರ್ಶನದ ಕಿರು ಹೊತ್ತಿಗೆಯನ್ನು ಸಿಎಂ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದರು. ಅಲ್ಲದೆ ಕೈಗೊಂಡ ಅಭಿವೃದ್ದಿ ಕಾರ್ಯಕ್ರಮಗಳ ಮೇಲೆ ಬೆಳಕು ಚೆಲ್ಲುವ ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಿತು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಳೆಯುವ ಪ್ರಧಾನ ಬೆಳೆಗಳ ರಾಶಿ ಎಲ್ಲರ ಗಮನ ಸೆಳೆಯಿತು. ಜಿಲ್ಲೆಯಲ್ಲಿ ಬೆಳೆಯುವ ರಾಗಿ, ನೆಲಗಡಲೆ, ಟೊಮೆಟೊ, ಆಲೂಗಡ್ಡೆ, ದ್ರಾಕ್ಷಿ ಇನ್ನಿತರೆ ಹಣ್ಣುಗಳು, ಶಾಮಂತಿ, ಗುಲಾಬಿ ಇನ್ನಿತರೆ ಹೂವುಗಳನ್ನು ರಾಶಿ ಹಾಕಿದ್ದು ಸಭಿಕರ ಗಮನ ಸೆಳೆಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸ್ಥಳೀಯ ಕಲಾವಿದರಾದ ಗೊಲ್ಲಹಳ್ಳಿ ಶಿವಪ್ರಸಾದ್, ಗಾ.ನ.ಅಶ್ವತ್ಥ್, ದೇವರಮಳ್ಳೂರು ಮಹೇಶ್ ಕುಮಾರ್ ತಂಡದಿಂದಲೆ ಮಣ್ಣಿನ ಸೊಗಡಿನ ಜನಪದ ಗೀತೆ, ಜಿಲ್ಲೆಯ ಅಭಿವೃದ್ದಿ ಸಾರುವ ಗೀತೆಗಳ ಗಾಯನ ಕಿವಿಗೆ ಇಂಪಾಗಿತ್ತು.
ಈ ಸಂದರ್ಭದಲ್ಲಿ ಸಚಿವರುಗಳಾದ ಕೆ.ಹೆಚ್. ಮುನಿಯಪ್ಪ, ದಿನೇಶ್ ಗುಂಡೂರಾವ್, ಡಾ. ಹೆಚ್.ಸಿ.ಮಹದೇವಪ್ಪ, ಕೃಷ್ಣಬೈರೇಗೌಡ , ಕೆ.ವೆಂಕಟೇಶ್, ಬೈರತಿ ಸುರೇಶ್ , ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳ್ಕರ್, ಸಣ್ಣ ನೀರಾವರಿ, ಎನ್.ಎಸ್.ಬೋಸರಾಜು, ಕೋಲಾರ ಸಂಸದ ಮಲ್ಲೇಶ್ ಬಾಬು, ಶಾಸಕರುಗಳಾದ ಬಿ.ಎನ್. ರವಿಕುಮಾರ್, ಎಸ್.ಎನ್.ಸುಬ್ಬಾರೆಡ್ಡಿ. ಪ್ರದೀಪ್ ಈಶ್ವರ್, ಕೆ.ಹೆಚ್. ಪುಟ್ಟಸ್ವಾಮಿಗೌಡ, ಡಾ.ಹೆಚ್.ನರಸಿಂಹಯ್ಯ , ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ವೈಭಟ್, ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ , ಜೆಡಿಎಸ್ ಯುವ ಮುಖಂಡ ತಾದೂರು ರಘು, ತಹಸೀಲ್ದಾರ್ ಗಗನ ಸಿಂಧು, ಇಒ ಹೇಮಾವತಿ ಮತ್ತಿತರರು ಹಾಜರಿದ್ದರು.
