ದಯವಿಟ್ಟು ನಮ್ಮ ಮಾನ ಮರ್ಯಾದೆ ಕಾಪಾಡಿ…..

ವಿಜಯ ದರ್ಪಣ ನ್ಯೂಸ್….

ದಯವಿಟ್ಟು ನಮ್ಮ ಮಾನ ಮರ್ಯಾದೆ ಕಾಪಾಡಿ…..

ರಾಜ್ಯದ, ಸಮಾಜದ, ಪ್ರಜಾಪ್ರಭುತ್ವದ, ಮಾನವೀಯ ಮೌಲ್ಯಗಳ, ನೈತಿಕ ತತ್ತ್ವಗಳ, ನಾಗರಿಕ ಪ್ರಜ್ಞೆಯ ಘನತೆಯನ್ನು ರಕ್ಷಿಸಲು ಕಳಕಳಿಯ ಮನವಿ. ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ತುರ್ತಾಗಿ ಆಗಬೇಕಾದ ಕೆಲಸ ಇದು. ದಯವಿಟ್ಟು ಸಾಧ್ಯವಿರುವ ಎಲ್ಲರೂ ಇದಕ್ಕಾಗಿ ದೊಡ್ಡ ಮಟ್ಟದ ಧ್ವನಿ ಎತ್ತುವ ಮೂಲಕ ನಮ್ಮ ಮಾನ, ಮರ್ಯಾದೆ ಕಾಪಾಡಿ…….

ಬಳ್ಳಾರಿ ನಗರ ಶಾಸಕರಾದ ಶ್ರೀ ನಾರಾ ಭರತ್ ರೆಡ್ಡಿ ಮತ್ತು ಗಂಗಾವತಿ ಕ್ಷೇತ್ರದ ಶಾಸಕರಾದ ಶ್ರೀ ಜನಾರ್ದನ ರೆಡ್ಡಿ ಅವರನ್ನು ಅವರ ಮೇಲೆ ವಿವಿಧ ಆರೋಪಗಳಡಿ ಮೊಕದ್ದಮೆ ದಾಖಲಿಸಿ, ದಯವಿಟ್ಟು ಬಂಧಿಸಿ, ಇಡೀ ರಾಜ್ಯದ ಜನಪ್ರತಿನಿಧಿಗಳಿಗೆ ಒಂದು ಎಚ್ಚರಿಕೆಯ ಸಂದೇಶ ನೀಡಿ…….

ಅವರನ್ನು ಬಂಧಿಸಲು ಸಾಧ್ಯವಾಗಬಹುದಾದ ನಮಗೆ ತಿಳಿದಿರುವ ಕೆಲವು ಮುಖ್ಯ ಆರೋಪಗಳು……

1) ಇಬ್ಬರೂ ಶಾಸಕರು ಜನಪ್ರತಿನಿಧಿಗಳಾಗಿದ್ದು, ಸಂವಿಧಾನಾತ್ಮಕ ಜವಾಬ್ದಾರಿ ಹೊಂದಿದ್ದು, ಸಮಾಜದ ಶಾಂತಿ, ಗೌರವ, ಘನತೆ ಕಾಪಾಡಬೇಕಾಗಿದ್ದವರು. ಆದರೆ ಅನಾವಶ್ಯಕವಾಗಿ ಗಲಭೆಯಲ್ಲಿ ತೊಡಗಿ, ಒಬ್ಬ ವ್ಯಕ್ತಿಯ ಸಾವಿಗೆ ಕಾರಣರಾಗಿ, ಇಡೀ ಕ್ಷೇತ್ರ ಮತ್ತು ರಾಜ್ಯದಲ್ಲಿ ಕೆಟ್ಟ ವಾತಾವರಣ ನಿರ್ಮಾಣವಾಗಲು ಕಾರಣವಾಗಿರುವುದರಿಂದ ಅವರನ್ನು ಶಾಂತಿಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ಬಂಧಿಸಬಹುದು.

2) ಇಬ್ಬರೂ ಶಾಸಕರು ಅತ್ಯಂತ ಪ್ರಚೋದನಕಾರಿಯಾಗಿ, ಬಹುತೇಕ ಬೀದಿ ರೌಡಿಗಳಂತೆ, ತಮ್ಮ ಸ್ಥಾನದ ಅರಿವಿಲ್ಲದೆ, ಬೇಜವಾಬ್ದಾರಿಯಿಂದ, ಅವಹೇಳನಕಾರಿಯಾಗಿ, ಅತ್ಯಂತ ಕೆಟ್ಟ ಮತ್ತು ಅಪಾಯಕಾರಿ ಭಾಷಾ ಪ್ರಯೋಗವನ್ನು ಮಾಡಿರುವುದರಿಂದ, ಸಾರ್ವಜನಿಕವಾಗಿ ಅವ್ಯಾಚ್ಯ ಶಬ್ದಗಳನ್ನು ಬಳಸಿರುವುದು ಅವರನ್ನು ಬಂಧಿಸಲು ಸೂಕ್ತ ಕಾರಣವಾಗಬಹುದು…….

3) ಇತ್ತೀಚೆಗಷ್ಟೇ ವಿಧಾನಸಭೆಯಲ್ಲಿ ತಿದ್ದುಪಡಿಯಾಗಿ ಜಾರಿಯಾಗಿರುವ ಹೊಸ ” ದ್ವೇಷ ಭಾಷಣದ ” ಅಡಿಯಲ್ಲಿಯೂ ಅವರಿಬ್ಬರ ಮೇಲೆ ಮೊಕದ್ದಮೆ ದಾಖಲಿಸಲು, ಬಂಧಿಸಲು ಹಾಗೂ ಶಿಕ್ಷೆಗೆ ಗುರಿಪಡಿಸಲು, ಆ ಮುಖಾಂತರ ಸಮಾಜಕ್ಕೆ ಒಂದು ಸಂದೇಶ ನೀಡಲು ಇದು ಅತ್ಯಂತ ಸೂಕ್ತವಾದ ಪ್ರಕರಣವಾಗಿದೆ……

4) ಜನಪ್ರತಿನಿಧಿಗಳೆಂಬ ಶಾಸಕ ಸ್ಥಾನಮಾನದ ವ್ಯಕ್ತಿಗಳ ಈ ನಡವಳಿಕೆ ಕಾನೂನು ವಿರೋಧಿಯೂ, ಸಮಾಜ ವಿರೋಧಿಯೂ, ಮಾನವೀಯತೆಯ ವಿರೋಧಿಯೂ, ತಾಯಿ ಭಾಷಾ ವಿರೋಧಿಯೂ, ನೈತಿಕ ಮೌಲ್ಯಗಳ ವಿರೋಧಿಯೂ ಆಗಿರುವುದರಿಂದ, ಜೊತೆಗೆ ಸಮಾಜದ ಮೇಲೆ, ಇಲ್ಲಿನ ಯುವಶಕ್ತಿಯ ಮೇಲೆ ಅತ್ಯಂತ ಕೆಟ್ಟ ದುಷ್ಪರಿಣಾಮ ಬೀರುವುದರಿಂದ ಈ ಇಬ್ಬರು ಜನಪ್ರತಿನಿಧಿಗಳನ್ನು ಕೂಡಲೇ ತಮ್ಮ ಸ್ಥಾನದಿಂದ ಅಮಾನತುಗೊಳಿಸಿ ಅವರಿಂದ ವಿವರಣೆಯನ್ನು ಪಡೆಯಬೇಕು.

5) ಆ ಇಡೀ ಘಟನೆಯನ್ನು ಕೇವಲ ಆ ಕ್ಷಣದ ಬ್ಯಾನರ್ ಕಟ್ಟುವಿಕೆ, ಗುಂಡು ಹಾರಿಸುವಿಕೆ, ಜನರ ಗುಂಪುಗೂಡುವಿಕೆ, ಒಟ್ಟಾಗುವಿಕೆ, ಸರಿ ತಪ್ಪುಗಳನ್ನು ಮಾತ್ರ ನೋಡದೆ, ಒಟ್ಟಾರೆ ಆ ಇಬ್ಬರು ಶಾಸಕರ ಹಿನ್ನೆಲೆ, ಮನಸ್ಥಿತಿ, ಮುಂದಿನ ಭವಿಷ್ಯವನ್ನು ಯೋಚಿಸಿ ಹಿಂಸಾ ಪ್ರವೃತ್ತಿಗೆ ಕಡಿವಾಣ ಹಾಕಲು, ದ್ವೇಷ, ಸೇಡಿನ ಮನೋಭಾವಗಳಿಗೆ ಪೂರ್ಣವಿರಾಮ ನೀಡಲು ಅವರಿಬ್ಬರನ್ನು ಬಂಧಿಸಲು ಸೂಕ್ತ ಕಾರಣವಾಗಬಹುದು…..

ಈಗಿನ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಅವರನ್ನು ಬಂಧಿಸಲು ಮತ್ತು ಅಮಾನತುಗೊಳಿಸಲು ಅಧಿಕಾರ ಹೊಂದಿರುವವರು, ಸಾಂವಿಧಾನಿಕ ಜವಾಬ್ದಾರಿ ಹೊಂದಿರುವವರು, ಮಾನವೀಯ ಮೌಲ್ಯಗಳ ಉಳಿಸಬೇಕಾಗಿರುವವರು ಈ ಕೆಳಕಂಡ ಮುಖ್ಯಸ್ಥರು. ಈ ಜವಾಬ್ದಾರಿಯನ್ನು ಅವರೇ ನಿರ್ವಹಿಸಬೇಕು.

ಮಾನ್ಯ ಮುಖ್ಯಮಂತ್ರಿಗಳು,
ಮಾನ್ಯ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು, ( ಸ್ವಯಂ ಪ್ರೇರಿತ ಕೇಸು ( ಸುಮೋಟೊ ) ದಾಖಲಿಸಿಕೊಳ್ಳಬಹುದು )
ಮಾನ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು,
ಮಾನ್ಯ ವಿಧಾನಸಭೆಯ‌ ಸಭಾಪತಿಗಳು,
ಮಾನ್ಯ ಗೃಹ ಸಚಿವರು,
ಮಾನ್ಯ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು,
ಮಾನ್ಯ ಕನ್ನಡ ಭಾಷಾ ಪ್ರಾಧಿಕಾರದ ಅಧ್ಯಕ್ಷರು, ( ಈ ಶಾಸಕರು ತಾಯಿ ಭಾಷೆಯನ್ನು ಅತ್ಯಂತ ಕೆಟ್ಟದ್ದಾಗಿ ಸಾರ್ವಜನಿಕವಾಗಿ ಉಪಯೋಗಿಸಿ ಅವಮಾನ ಮಾಡಿದ್ದಕ್ಕೆ )….

ಇವರಲ್ಲದೆ ಸ್ಥಳೀಯವಾಗಿ ಅಲ್ಲಿನ ಧಾರ್ಮಿಕ ಮುಖಂಡರು, ಪತ್ರಕರ್ತರು, ವೈದ್ಯರು, ಶಿಕ್ಷಕರು, ರೈತರು, ಮಹಿಳೆಯರು ಹೋರಾಟಗಾರರು ಎಲ್ಲರೂ ಸಹ ಈ ಇಬ್ಬರ ಮೇಲೆ ಕ್ರಮ ಕೈಗೊಳ್ಳಲು ತೀವ್ರ ಒತ್ತಡವನ್ನು ಹೇರಬೇಕು. ಹಾಗೆಯೇ ಇಡೀ ರಾಜ್ಯದ ಜನತೆಯೂ ತಮಗಿರುವ ಸಾಮಾಜಿಕ ಜಾಲತಾಣಗಳೆಂಬ ವೇದಿಕೆಯ ಮುಖಾಂತರ ಈ ಇಬ್ಬರ ಮೇಲೆ ತೀವ್ರವಾದ ಕ್ರಮ ಕೈಗೊಳ್ಳಲು ಒತ್ತಾಯಿಸಬೇಕು.

ಹಿಂದೆ ಇದಕ್ಕಿಂತ ಕೆಟ್ಟ ಘಟನೆಗಳು ನಡೆದಿರಬಹುದು. ಆದರೆ ಅದರ ನೆಪದಲ್ಲಿ, ಈ ಕ್ಷಣದಲ್ಲಿ ನಾವು ಇವರ ಮೇಲೆ ಕೈಗೊಳ್ಳುವ ಕ್ರಮಗಳನ್ನು ಮುಂದೂಡಬಾರದು. ಆಗ ಸಾಧ್ಯವಾಗಿರದಿದ್ದರೂ ಈಗಾದರೂ ಕ್ರಮ ಕೈಗೊಂಡರೆ ಭವಿಷ್ಯದಲ್ಲಿ ಶಾಸಕರುಗಳಿಗೆ ಒಂದು ಎಚ್ಚರಿಕೆಯ ಪಾಠವಾಗಬಹುದು. ಸಾಮಾನ್ಯ ಜನ ತಪ್ಪು ಮಾಡಿದರೆ ಅದರ ಪರಿಣಾಮ ವೈಯಕ್ತಿಕ ಮಟ್ಟದಲ್ಲಿಯೇ ಇರುತ್ತದೆ. ಆದರೆ ರಾಜ್ಯದ ಒಟ್ಟು ವ್ಯವಸ್ಥೆಯ ಆಧಾರ ಸ್ಥಂಭಗಳಾದ ಶಾಸಕರು, ಹಿರಿಯ ಅಧಿಕಾರಿಗಳು, ನ್ಯಾಯಮೂರ್ತಿಗಳು ಮುಂತಾದವರು ತಪ್ಪು ಮಾಡಿದರೆ ಅದರ ಪರಿಣಾಮ ರಾಜ್ಯವ್ಯಾಪಿಯಾಗಿ ಇರುತ್ತದೆ. ಆದ್ದರಿಂದ ಅವರಿಗೆ ಎರಡು ಪಟ್ಟು ಹೆಚ್ಚು ಶಿಕ್ಷೆ ನೀಡಬೇಕು ಮತ್ತು ಅವರು ಯಾವುದೇ ಸಹಾನುಭೂತಿಗೆ ಅನರ್ಹರಾಗಿರುತ್ತಾರೆ……

ಕರ್ನಾಟಕದ ಪ್ರಜ್ಞಾವಂತ, ಪ್ರಬುದ್ಧ ಮನಸ್ಸುಗಳು ಆಡಳಿತ ವ್ಯವಸ್ಥೆಗೆ ಮಾಡಿಕೊಳ್ಳುವ ಕಳಕಳಿಯ ಮನವಿ ಏನೆಂದರೆ,
ಕನಿಷ್ಠ ಈ ಇಬ್ಬರು ಶಾಸಕರಿಗೂ ಅವರ ಮುಂದಿನ ಅವಧಿಯವರೆಗಿನ ಶಾಸಕತ್ವವನ್ನು ರದ್ದು ಮಾಡಿ ಅಥವಾ ಅವರ ಕ್ಷೇತ್ರಗಳಿಗೆ ಮರು ಚುನಾವಣೆ ಮಾಡಿ ಅಥವಾ ಅವರಿಬ್ಬರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಿ ಅಥವಾ ಕನಿಷ್ಠ ಅವರಿಬ್ಬರಿಂದಲೂ ನ್ಯಾಯಾಲಯಕ್ಕೆ ಕ್ಷಮಾಪಣಾ ಪತ್ರವನ್ನಾದರೂ ಪಡೆಯಿರಿ ಅಥವಾ ಅವರಿಬ್ಬರನ್ನು ವಿಧಾನಮಂಡಲದ ಉಳಿದ ಅಧಿವೇಶನಕ್ಕೆ ನಿಷೇಧ ಹೇರಿ ಹೀಗೆ ಏನಾದರೂ ಒಂದು ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ಈ ಘಟನೆಗಳು ರಾಜ್ಯದ ಇತರ ಭಾಗಗಳಿಗೂ ಹರಡಿ ಇನ್ನೂ ಹೆಚ್ಚು ಅನಾಹುತಗಳಾಗಬಹುದು. ಆಗಲೇ ಹೇಳಿದಂತೆ ಇದಕ್ಕಿಂತ ಹೆಚ್ಚು ತಪ್ಪು ಮಾಡಿರುವ ಶಾಸಕರು ಹಿಂದೆ ಇದ್ದರೂ ಈ ಕ್ಷಣದಲ್ಲಿ ತಡವಾಗಿಯಾದರೂ ಕ್ರಮ ಕೈಗೊಳ್ಳಲು ಇದು ಸೂಕ್ತ ಸಮಯ, ಸಂದರ್ಭ ಎನಿಸುತ್ತದೆ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451……
9844013068……