ಪ್ರವಾಸಿಗರನ್ನು ಕೈಬೀಸಿ ಕರೆಯುತಿವೆ ಕೊಡಗಿನ ಜಲಪಾತಗಳು

ಕೊಡಗು ಜಿಲ್ಲೆ , ಸೋಮವಾರಪೇಟೆ

ಈಚೆಗೆ 10 ದಿನಗಳ ಕಾಲ ಬಿಡದಂತೆ ಸುರಿದ ಭಾರಿ ಮಳೆಯಿಂದ  ಸೋಮವಾರಪೇಟೆ ತಾಲ್ಲೂಕಿನಾದ್ಯಂತ ಮಳೆಗಾಲದಲ್ಲಿ ಜೀವ ತಳೆಯುವ ಜಲಪಾತಗಳು ಮೈದುಂಬಿದ್ದು, ಪ್ರವಾಸಿಗರನ್ನು ಇನ್ನಿಲ್ಲದಂತೆ ಆಕರ್ಷಿಸುತ್ತಿವೆ.

ಬೆಟ್ಟ ಗುಡ್ಡಗಳು, ಕಾಫಿ ತೋಟಗಳಲ್ಲಿ ಅನೇಕ ಜಲಪಾತಗಳನ್ನು ಕಾಣಬಹುದು. ಮುಂಗಾರು ಪ್ರಾರಂಭವಾದೊಡನೆ ಸಾವಿರಾರು ಪ್ರವಾಸಿಗರು ಜಿಲ್ಲೆಯತ್ತ ಹಜ್ಜೆ ಇರಿಸುವುದು ಸಾಮಾನ್ಯ. ವಾರದ ಕೊನೆಯಲ್ಲಂತೂ ರಾಜ್ಯ ಸೇರಿದಂತೆ ಹೊರ ರಾಜ್ಯದ ಪ್ರವಾಸಿಗರು ಜಿಲ್ಲೆಗೆ ಆಗಮಿಸಿ ಮಳೆಯಲ್ಲಿ ಮಿಂದು ಜಲಪಾತಗಳ ಸೊಬಗನ್ನು ಸವಿದು ಹಿಂದಿರುಗುತ್ತಿದ್ದಾರೆ.

ನಿಸರ್ಗ ರಮಣೀಯತೆಯನ್ನು ತನ್ನೊಡಲಲ್ಲಿ ಇರಿಸಿಕೊಂಡಿರುವ ಪುಷ್ಪಗಿರಿ ಬೆಟ್ಟತಪ್ಪಲಿನಲ್ಲಿ ಹುಟ್ಟುವ ಕುಮಾರಧಾರಾ ನದಿ ಮಲ್ಲಳ್ಳಿ ಗ್ರಾಮದ ಕಲ್ಲು ಬಂಡೆಯಿಂದ ಭೋರ್ಗರೆಯುತ್ತಾ ಧುಮುಕಿ ಜಲಧಾರೆ ಯಾಗಿ ಪ್ರವಹಿಸುವ ದೃಶ್ಯ ಪ್ರವಾಸಿಗರನ್ನು ಸೆಳೆಯುತ್ತಿವೆ.

ಹಚ್ಚ ಹಸಿರಿನ ಗಿರಿಕಂದರ, ಪ್ರಕೃತಿಯ ಸೊಬಗಿನ ಎರಡು ಬೆಟ್ಟಗಳ ನಡುವೆ ಧುಮ್ಮಿಕ್ಕುವ ಜಲಧಾರೆಗೆ ಪ್ರವಾಸಿಗರು ಮೂಕ ವಿಸ್ಮಿತರಾಗುತ್ತಿದ್ದಾರೆ. ನಿತ್ಯ ನೂರಾರು ಪ್ರವಾಸಿಗರು ಆಗಮಿಸಿದರೆ, ಶನಿವಾರ ಮತ್ತು ಭಾನುವಾರಗಳು ಮತ್ತು ರಜಾ ದಿನಗಳಲ್ಲಿ ಮಲ್ಲಳ್ಳಿ ಜಲಪಾತಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸಿ ಮನ ತಣಿಸುವ ನಿಸರ್ಗ ಜಲಧಾರೆ ಸೊಬಗನ್ನು ಸವಿಯುತ್ತಿದ್ದಾರೆ.

ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಳ್ಳಿ ಎಂಬ ಗ್ರಾಮದಲ್ಲಿ ಜಲಪಾತ ಇರುವುದರಿಂದ ಇದಕ್ಕೆ ‘ಮಲ್ಲಳ್ಳಿ ಜಲಪಾತ’ವೆಂದು ಹೆಸರು. ಪಟ್ಟಣದಿಂದ 25 ಕಿ.ಮೀ ಕ್ರಮಿಸಿದರೆ, ಜಲಪಾತದ ದರ್ಶನವಾಗುತ್ತದೆ. ಯಡೂರು, ಶಾಂತಳ್ಳಿ, ಕುಮಾರಳ್ಳಿ ಮೂಲಕ 20 ಕಿ.ಮೀ. ಕ್ರಮಿಸಿ, ಹಂಚಿನಳ್ಳಿ ಗ್ರಾಮವನ್ನು ತಲುಪಿ, ಬಲಕ್ಕೆ ತಿರುಗಿ 4 ಕಿ.ಮೀ. ತೆರಳಿದರೆ, ಮಲ್ಲಳ್ಳಿ ಜಲಪಾತದ ದರ್ಶನವಾಗುತ್ತದೆ. ಜಲಪಾತದವರೆಗೂ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿರುವುದರಿಂದ ಸ್ಥಳಕ್ಕೆ ವಾಹನಗಳಲ್ಲಿ ತೆರಳಬಹುದು.

ಮಲ್ಲಳ್ಳಿ ಜಲಪಾತವನ್ನು ಹತ್ತಿರದಿಂದ ನೋಡುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಜಲಪಾತದ ಕೆಳಕ್ಕಿಳಿಯಲು 400ಕ್ಕೂ ಅಧಿಕ ಮೆಟ್ಟಿಲನ್ನು ನಿರ್ಮಿಸಲಾಗಿದೆ. ಮೆಟ್ಟಿಲು ಇಳಿದು ಹೋಗಬೇಕು. ಎತ್ತರದ ಜಾಗದಲ್ಲೂ ಜಲಪಾತದ ಸೊಬಗನ್ನು ನೋಡಬಹುದು. ಮಳೆಗಾಲದಲ್ಲಿ ಕಲ್ಲುಬಂಡೆಗಳು ಜಾರುವುದರಿಂದ ಎಚ್ಚರ ವಹಿಸುವುದು ಅಗತ್ಯ.

ಗರ್ವಾಲೆ, ಸೂರ್ಲಬ್ಬಿ, ಮುಟ್ಲು, ಹಮ್ಮಿಯಾಲಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಗರ್ವಾಲೆ ಭಾರತೀಯ ವಿದ್ಯಾಭವನದ ಎದುರಿನ ಜ್ಞಾನಗಂಗಾ ಜಲಪಾತ ಬೋರ್ಗರೆಯುತ್ತಾ ಹರಿಯುತ್ತಿದ್ದು, ಇದಕ್ಕೆ ಸರಿಯಾದ ಮಾರ್ಗವಿಲ್ಲದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ತೆರಳುವುದಿಲ್ಲ. ಸೂಕ್ತ ಮಾರ್ಗದ ವ್ಯವಸ್ಥೆ ಕಲ್ಪಿಸಿದಲ್ಲಿ ಮಾತ್ರ ವೀಕ್ಷಣೆಗೆ ಅವಕಾಶವಾಗುವುದು.

ಪ್ರಕೃತಿ ನಿರ್ಮಿತವಾಗಿರುವ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರ್ಲಬ್ಬಿಯಲ್ಲಿನ ಮೇದುರ ಜಲಪಾತ ಕಂಗೊಳಿಸುತ್ತಿದೆ. ಗುಡ್ಡದ ಮೇಲಿನಿಂದ ಹರಿಯುವ ಇದು ರಸ್ತೆಯ ಬದಿಯಲ್ಲಿಯೇ ಇರುವುದರಿಂದ ಹೆಚ್ಚಿನ ಶ್ರಮ ಇಲ್ಲದೆ, ವೀಕ್ಷಣೆ ಮಾಡಬಹುದು.

ಮಳೆಯು ಕಡಿಮೆ ಇರುವುದರಿಂದ ಜನರು ಇಲ್ಲಿಗೆ ಆಗಮಿಸಿ ಸಂತೋಷ ಪಡಲು ಉತ್ತಮ ಅವಕಾಶವಾಗಿದೆ.

.. ಲೋಕೇಶ್ ಡಿ ಪಿ