ಒಂದು ಸಮುದಾಯಕ್ಕೆ ಸೀಮಿತವಾಗದೆ ಎಲ್ಲರ ಏಳಿಗೆಗೆ ಶ್ರಮಿಸಿದವರು ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರು

ವಿಜಯ ದರ್ಪಣ ನ್ಯೂಸ್,

ಬಿಜಿಎಸ್ ನಗರ, ದೇವನಹಳ್ಳಿ ತಾಲ್ಲೂಕು 
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್ 10 

ಕೆರೆ, ಕುಂಟೆ, ಕೋಟೆ, ಪೇಟೆಗಳನ್ನು ನಿರ್ಮಿಸಿದ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರು ಒಂದು ಸಮುದಾಯಕ್ಕೆ ಸೀಮಿತವಾಗದೆ ಎಲ್ಲರ ಏಳಿಗೆಗೆ ಶ್ರಮಿಸಿದವರು. ಬೆಂಗಳೂರು ನಗರವು ವಿಶ್ವದಲ್ಲಿ ಹೆಸರು ಮಾಡಲು ಕಾರಣ ಎಂದರೆ ಅದು ನಾಡಪ್ರಭು ಕೆಂಪೇಗೌಡರ ಕೊಡುಗೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಹೇಳಿದರು.

ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಮುಂಭಾಗದ  ಆವರಣದಲ್ಲಿ  ಬಿಜಿಎಸ್ ನಗರ ಇಂದು ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅಶ್ವಾರೋಹಿ ಅನಾವರಣಗೊಳಿಸಿ ಹಾಗೂ ಜಯಂತ್ಯೋತ್ಸವ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾಡಪ್ರಭು ಕೆಂಪೇಗೌಡರ ವಂಶಸ್ಥರ ಮೂಲ ಸ್ಥಾನ ದೇವನಹಳ್ಳಿಯ ಆವತಿ ಗ್ರಾಮ ಎಂದು ಇತಿಹಾಸ ಹೇಳುತ್ತದೆ. ದೇವನಹಳ್ಳಿ ವ್ಯಾಪ್ತಿಯಲ್ಲಿ 20 ಎಕರೆ ಜಾಗ ಗುರ್ತಿಸಿ ಕೆಂಪೇಗೌಡರ ಜೀವನ ಚರಿತ್ರೆ, ತ್ಯಾಗ, ಹೋರಾಟ, ಸಮಾಜ ಸೇವೆಗಳ ಸಮಗ್ರ ಇತಿಹಾಸವನ್ನು ತಿಳಿಸುವ ಸಲುವಾಗಿ ಅವರ ನೆನಪಿನಲ್ಲಿ ಸ್ಮಾರಕ, ಸಂಸ್ಥೆ ನಿರ್ಮಾಣ ಮಾಡಲಾಗುವುದು ಎಂದರು.

ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಮಾತನಾಡಿ ಜಿಲ್ಲಾಡಳಿತ ಭವನದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ ಮಾಡಿರುವುದು ಬಹಳ ಹೆಮ್ಮೆಯ ವಿಷಯ. ಕೆಂಪೇಗೌಡರ ತತ್ವ ಸಿದ್ಧಾಂತಗಳನ್ನು, ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಮಾತನಾಡಿ ನಾಡಪ್ರಭು ಕೆಂಪೇಗೌಡರು ದೂರದೃಷ್ಟಿ ಹೊಂದಿದ್ದ ನಾಯಕರಾಗಿದ್ದರು. ಎಲ್ಲಾ ಸಮುದಾಯದವರನ್ನು ಗೌರವದಿಂದ ಕಾಣುತ್ತಿದ್ದರು. ಬೆಂಗಳೂರಿನಲ್ಲಿ ಹಲವು ಕುಲ ಕಸುಬುಗಳನ್ನು ಪರಿಚಯಿಸಿ, ಹಲವರಿಗೆ ಉದ್ಯೋಗ ಸೃಷ್ಟಿಸಿದರು. ಬೆಂಗಳೂರು ಇಂದು ತಂತ್ರಜ್ಞಾನ, ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ಎಂದರೆ  ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಯೋಜನೆಗಳ ಫಲ ಎಂದು ಹಿತವಚನ ನುಡಿದರು.

ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಿರುವ ಈ ಭಾಗದ  ಮಹಿಮೆಯನ್ನು ಕುರಿತು ಮಾತನಾಡಿದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು  ಈ ಹಿಂದೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳು ಈ ಭಾಗಕ್ಕೆ  ಶ್ರೀ ಕ್ಷೇತ್ರದ ದೇವಾಲಯಕ್ಕೆ ಕಲ್ಲು ಖರೀದಿಸಲು ಅಗಮಿಸಿದ್ದಾಗ ಇಲ್ಲಿ ಬರಿ ಗಿಡ ಗಂಟೆಗಳು ಒಂದೆರಡು ಪೆಟ್ಟಿಗೆ ಅಂಗಡಿಗಳು ಇದ್ದಂತಹ ಸಂದರ್ಭದಲ್ಲಿ ದೂರದೃಷ್ಟಿಯನ್ಮು ಅರಿತ ಶ್ರೀಗಳು ಮುಂದೊಂದು ದಿನ ಈ ಜಾಗ ಅಭಿವೃದ್ಧಿಯಾಗಿ ಜನಮನ್ನಣೆ ಗಳಿಸಲಿದೆ ಎಂದು ಹೇಳಿದ್ದನ್ನು ಸ್ಮರಿಸಿದರು. ಹಾಗೆಯೇ ಹಿಂದೆ ಆದಿಚುಂಚನಗಿರಿ ಮಠದ 69ನೇ ಪೀಠಾಧ್ಯಕ್ಷರಾಗಿದ್ದ  ಜಗದ್ಗುರು ಶ್ರೀ ಶ್ರೀ ಶ್ರೀ ಚಂದ್ರಶೇಖರ ನಾಥ ಸ್ವಾಮೀಜಿ ಅವರ ಹುಟ್ಟೂರು ಈ ಭಾಗದ ಕೊಯಿರ ಎಂದು ತಿಳಿಸಿದರು.ಇವರ ಹೆಸರಿನಲ್ಲಿ  ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ  SJCIT ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

 ಈ ಭಾಗದ ಆದಿಚುಂಚನಗಿರಿ ಕ್ಷೇತ್ರದ ಭಕ್ತರು ಕೊಯಿರ ಕ್ರಾಸ್ ನಲ್ಲಿ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ರವರ ಮಹಾದ್ವಾರ ಮತ್ತು ಪ್ರತಿಮೆಯನ್ನು ನಿರ್ಮಾಣ ಮಾಡಿ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳಿಂದ ಉದ್ಘಾಟನೆ ಮಾಡಿಸಿ ಈ ಜಾಗಕ್ಕೆ ಬಾಲಗಂಗಾಧರನಾಥ ಸ್ವಾಮೀಜಿ ನಗರ (ಬಿಜಿಎಸ್ ನಗರ)ಎಂದು ನಾಮಕರಣ ಮಾಡಿದರು.

 ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಪುತ್ತಳಿ ಅನಾವರಣ ಸಂದರ್ಭದಲ್ಲಿ  ಆದಿಚುಂಚನಗಿರಿ ಕ್ಷೇತ್ರದ ಚಿಕ್ಕಬಳ್ಳಾಪುರ ಶಾಖಾ  ಮಠದ ಶ್ರೀ ಶ್ರೀ ಮಂಗಳಾನಂದ ನಾಥ ಸ್ವಾಮೀಜಿ ಉಪಸ್ಥಿತರಿದ್ದರು 

ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಂದ  ಪಲ್ಲಕ್ಕಿಗಳಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳನ್ನು ಇಟ್ಟುಕೊಂಡು ವೀರಗಾಸೆ ಕುಣಿತ, ಕೀಲು ಕುದುರೆ ಕುಣಿತ, ಡೊಳ್ಳು ಕುಣಿತದಿಂದ ವಿಜೃಂಭಣೆಯಿಂದ ಮೆರವಣಿಗೆಯಲ್ಲಿ  ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದಿದ್ದು ವಿಶೇಷವಾಗಿತ್ತು .

ಕಾರ್ಯಕ್ರಮದಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಶರತ್ ಕುಮಾರ್ ಬಚ್ಚೇಗೌಡ, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ.ಎನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನುರಾಧ.ಕೆ.ಎನ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ, ಉಪ ವಿಭಾಗಾಧಿಕಾರಿ ಶ್ರೀನಿವಾಸ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಮೇಶ್ ಸೇರಿದಂತೆ ದೇವನಹಳ್ಳಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಸಿ ವೆಂಕಟೇಗೌಡ, ಬಿ.ಮುನೇಗೌಡ , ಎಂ ಮುನಿರಾಜು,ಎ ವಿ  ನಾರಾಯಣಸ್ವಾಮಿ,ಬಿ.  ಚೇತನ್ ಗೌಡ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಮಂಡಿಬೆಲೆ ರಾಜಣ್ಣ, ಸಂಪಂಗಿ ಗೌಡ  ಸೇರಿದಂತೆ ಸಮುದಾಯದ ಮುಖಂಡರು  ಉಪಸ್ಥಿತರಿದ್ದರು.