ಜನ ಸಾಮಾನ್ಯರು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ

ವಿಜಯ ದರ್ಪಣ ನ್ಯೂಸ್

ದೇವನಹಳ್ಳಿ,ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 20 : ಸರ್ಕಾರಿ ಅಧಿಕಾರಿಗಳು ಮತ್ತು ಜನಸಾಮಾನ್ಯರ ನಡುವೆ ಸಾರ್ವಜನಿಕ ಸಂಪರ್ಕ ಸಭೆಗಳನ್ನು ಏರ್ಪಡಿಸುವುದರಿಂದ ಸಮಸ್ಯೆಗಳನ್ನು ಹೊತ್ತು ಬರುವ ಜನ ಸಾಮಾನ್ಯರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಬಹುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿ ಟೌನ್ ನಲ್ಲಿರುವ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ತಾಲ್ಲೂಕು ಮಟ್ಟದ ಸಾರ್ವಜನಿಕ ಸಂಪರ್ಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಮುಂಬರುವ ದಿನಗಳಲ್ಲಿ ಜನ ಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿ ಸಾರ್ವಜನಿಕ ಸಂಪರ್ಕ ಸಭೆಗಳನ್ನು ನಡೆಸಲಾಗುವುದು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವಾರಕ್ಕೊಮ್ಮೆ ತಾಲ್ಲೂಕುಗಳಿಗೆ ಭೇಟಿ ನೀಡಿ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಬೇಕು, ಸರ್ಕಾರಿ ಯೋಜನೆಗಳಿಂದ ಜನರಿಗೆ ಆಗುತ್ತಿರುವ ಲಾಭ, ನಷ್ಟಗಳ ಬಗ್ಗೆ ವಿಚಾರಿಸಿ, ಸರ್ಕಾರಿ ಕಾಮಗಾರಿಗಳನ್ನು ಪರಿಶೀಲಿಸಬೇಕು. ಸಂಪೂರ್ಣ ಕಾಮಗಾರಿ ಮುಗಿಯುವವರೆಗೂ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಬಾರದು. ಸಾರ್ವಜನಿಕರು ಕಚೇರಿಗಳಿಗೆ ಭೇಟಿ ನೀಡಿದಾಗ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಸಂವೇದನಾಶೀಲ ಗುಣ ಅಧಿಕಾರಿಗಳಲ್ಲಿರಬೇಕು ಎಂದರು.

ಬಡವರಿಗೆ ನಿವೇಶನ ಹಂಚಿಕೆ, ಹಳ್ಳಿಗಳಲ್ಲಿ ರಸ್ತೆ ದುರಸ್ತಿ, ಸ್ಮಶಾನ ಭೂಮಿ ಕೋರಿಕೆ, ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ಶೀಘ್ರ ಇತ್ಯರ್ಥ ಪಡಿಸಿ ಎಂದು ಹೇಳಿದರು.
ಅಹವಾಲು ಸಲ್ಲಿಸಲು ಸಭೆಗೆ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು.

270 ಅರ್ಜಿ ಸ್ವೀಕಾರ

ಗ್ರಾಮಗಳಿಗೆ ವಿದ್ಯುತ್ ಸಂಪರ್ಕ, ಜಮೀನು ಸರ್ವೆ, ಸ್ಮಶಾನ ಜಾಗ ಹಾಗೂ ರಸ್ತೆ ಅವ್ಯವಸ್ಥೆ, ರೈಲ್ವೇ ಕಾಮಗಾರಿಗಳ ವಿಳಂಬ, ಗೋಮಾಳ ಒತ್ತುವರಿ, ಹಕ್ಕು ಪತ್ರ ಹಂಚಿಕೆ, ಕೆರೆ ಕಟ್ಟೆ ಸಂರಕ್ಷಣೆ, ಪಡಿತರ ಚೀಟಿ ಹಂಚಿಕೆ, ನಿವೇಶನ ಹಂಚಿಕೆ, ಚರಂಡಿ ನಿರ್ಮಾಣ, ಪೊಲೀಸ್ ಇಲಾಖೆ ಪ್ರಕರಣಗಳ ಮರು ಪರಿಶೀಲನೆ, ಕುಡಿಯುವ ನೀರು ಶೌಚಾಲಯ ಸೇರಿದಂತೆ ಮೂಲಭೂತ ಸಮಸ್ಯೆಗಳು, ಕೃಷಿ‌(ಸಬ್ಸಿಡಿ)ಯಂತ್ರೋಪಕರಣಗಳ ವಿತರಣೆ, ಸರ್ಕಾರಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ವಿಳಂಬ ಮಾಡುತ್ತಿರುವುದು ಸೇರಿದಂತೆ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ವ್ಯಾಪ್ತಿಗೆ ಬರುವ 270 ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಶಿವಶಂಕರ. ಎನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅನುರಾಧ.ಕೆ.ಎನ್, ಅಪರ ಪೋಲಿಸ್ ವರಿಷ್ಠಾಧಿಕಾರಿ ಪುರುಷೋತ್ತಮ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಹಾಲಿ ಮತ್ತು ಮಾಜಿ ಚುನಾಯಿತ ಪ್ರತಿನಿಧಿಗಳು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

&&&&&&&&&&&&&&&&&&&&&&&&&&&&&&&&&&&&&&&&&&&&&&&&&&&

ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳಾಗಿ ರೂಪಿಸಲು ಕ್ರಮ: ಜಿಲ್ಲಾ ಉಸ್ತುವಾರಿ ಸಚಿವ ಕೆ ಹೆಚ್ ಮುನಿಯಪ್ಪ.

ದೇವನಹಳ್ಳಿ,ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 20: ದೇವನಹಳ್ಳಿ ಕ್ಷೇತ್ರದ ವ್ಯಾಪ್ತಿಯಲ್ಲಿನ ಕೈಗಾರಿಕೆಗಳಿಂದ ಉದ್ದಿಮೆಗಳ ಸಾಮಾಜಿಕ ಹೊಣೆಗಾರಿಕೆಯಡಿ ಬರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಗುಣಾತ್ಮಕ ಶಿಕ್ಷಣ ನೀಡುವ ಸಂಬಂಧ ದೇವನಹಳ್ಳಿ ಕ್ಷೇತ್ರದ ಐದು ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ರೂಪಿಸುವ ಯೋಜನೆಗೆ ಅಕ್ಟೋಬರ್ 02 ರ ಗಾಂಧಿ ಜಯಂತಿಯಂದು ಚಾಲನೆ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.

ಇಂದು ದೇವನಹಳ್ಳಿಯಲ್ಲಿ ನಡೆದ ಸಾರ್ವಜನಿಕ ಸಂಪರ್ಕ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಮುಂಬರುವ ದಿನಗಳಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜಿಸುವುದು. ದೇವನಹಳ್ಳಿ ಕ್ಷೇತ್ರದ ಸಮಗ್ರ ಅಭಿವೃದ್ಧಿ (ಮುನ್ನೋಟ) ಕುರಿತು ಕ್ರಿಯಾಯೋಜನೆ ರೂಪಿಸಿ ಹಂತ ಹಂತವಾಗಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವುದು.

ಆಶ್ರಯ ಯೋಜನೆಯಡಿ 4549 ನಿವೇಶನ ರಹಿತರನ್ನು ಮತ್ತು 2555 ವಸತಿ ರಹಿತರನ್ನು ಗುರ್ತಿಸಿದ್ದು ಲಭ್ಯವಿರುವ ಜಮೀನುಗನುಗುಣವಾಗಿ ಅರ್ಹ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಲು ಕ್ರಮವಹಿಸಲಾಗುವುದು ಎಂದು ಅವರು ಹೇಳಿದರು.

ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಸಭೆಗಳನ್ನು ಆಯೋಜಿಸಿ ಪಂಚಾಯಿತಿ ವ್ಯಾಪ್ತಿಯ ಸಮಸ್ಯೆ, ಕುಂದು ಕೊರತೆಗಳನ್ನು ಗ್ರಾಮ ಪಂಚಾಯಿತಿ ಹಂತದಲ್ಲಿ ಬಗೆಹರಿಸುವುದು ಹಾಗೂ ಕ್ರಿಯಾಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು.

ಎಸ್.ಸಿ/ಎಸ್.ಟಿ ಹಾಗೂ ಇತರೆ ಎಲ್ಲಾ ಸಮುದಾಯದವರಿಗೆ ಜಮೀನು ಲಭ್ಯತೆಗೆ ಅನುಗುಣವಾಗಿ ಸ್ಮಶಾನ ಭೂಮಿ ಮಂಜೂರು ಮಾಡಿ ಅಭಿವೃದ್ಧಿಗೊಳಿಸಲಾಗುವುದು ಎಂದು ತಿಳಿಸಿದರು.

ದೇವನಹಳ್ಳಿ / ವಿಜಯಪುರ ಪುರಸಭೆಗಳನ್ನು ಮೇಲ್ದರ್ಜೆಗೇರಿಸುವುದು ಸೇರಿದಂತೆ
ಪ್ರತಿ ಬುಧವಾರ ಹಾಗೂ ತಿಂಗಳ ಮೊದಲ ಮತ್ತು ಮೂರನೆ ಶನಿವಾರ ತಾಲ್ಲೂಕು ಪಂಚಾಯಿತಿ ಶಾಸಕರ ಕಛೇರಿಯಲ್ಲಿ ಸಾರ್ವಜನಿಕ ಕುಂದುಕೊರತೆ/ಅಹವಾಲುಗಳನ್ನು ಸ್ವೀಕರಿಸಿ ಪರಿಹರಿಸಲಾಗುವುದು. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸ್ಥಳೀಯ ಶಾಸಕರ ಕಛೇರಿ ದೂರವಾಣಿ ಸಂಖ್ಯೆಗೆ 080-22202099 ಕರೆಮಾಡಿ ದೂರು ನೀಡಬಹುದು ಎಂದು ಸಚಿವರು ತಿಳಿಸಿದ್ದಾರೆ.

ಕ್ಷೇತ್ರ ವ್ಯಾಪ್ತಿಯ ಕೆರೆಗಳು ಹಾಗೂ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿ ಪಡಿಸಿ, ಪ್ರವಾಸಿ ತಾಣಗಳನ್ನಾಗಿ ಮಾಡಲು ಯೋಜನೆಗಳನ್ನು ರೂಪಿಸಲಾಗುವುದು. ಕೃಷಿ – ರೇಷ್ಮೆ ಹೈನುಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ರೈತಾಪಿ ಕುಟುಂಬಗಳನ್ನು ಆರ್ಥಿಕವಾಗಿ ಸಬಲೀಕರಣ ಗೊಳಿಸುವುದು ತಮ್ಮ ಆದ್ಯತೆ ಎಂದು ಅವರು ತಿಳಿಸಿದರಲ್ಲದೆ ಈ ತಿಂಗಳ ಸೆಪ್ಟೆಂಬರ್ 25ನೇ ತಾರೀಖು ಜಿಲ್ಲಾ ಹಂತದ ಜನತಾದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಅವರು ಹೇಳಿದರು.