ಹಿರಿಯರ ಸಮಾಧಿಗೆ ಪೂಜೆ ಸಲ್ಲಿಸಲು ಹೋದ ಹೆಣ್ಣು ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ .

ವಿಜಯ ದರ್ಪಣ ನ್ಯೂಸ್ 

ದೇವನಹಳ್ಳಿ: ಪಿತೃ ಪಕ್ಷದ ಅಂಗವಾಗಿ ಪ್ರತಿ ವರ್ಷದಂತೆ ತಮ್ಮ ತಾತಾ, ಅಜ್ಜಿ, ತಂದೆ ಮತ್ತು ಕುಟುಂಬದ ಹಿರಿಯರ ಸಮಾಧಿಗೆ ಪೂಜೆ ಸಲ್ಲಿಸಿ ಹೊರ ಬರುತ್ತಿದ್ದ ಕುಟುಂಬವೊಂದರ ನಾಲ್ಕು ಮಂದಿ ಹೆಣ್ಣು ಮಕ್ಕಳು ಸೇರಿದಂತೆ ಆರು ಜನರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದೊಣ್ಣೆ ಮಚ್ಚುಗಳಿಂದ ಅಶೋಕ ಮತ್ತು ಶ್ರೀನಿವಾಸ್ ಎಂಬುವವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಈ ಬಗ್ಗೆ ದೇವನಹಳ್ಳಿ ಪೋಲಿಸ್ ಠಾಣೆಯಲ್ಲಿ ಭಾನುವಾರ ದೂರು ದಾಖಲಾಗಿದೆ.

ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಹಲ್ಲೆ ನಡೆದಿದೆ ಎನ್ನಲಾಗಿದ್ದು ದಿವಂಗತ ಚಿನ್ನಪ್ಪ ಎಂಬುವವರ ಕುಟುಂಬಕ್ಕೆ ಸೇರಿದ ಸದಸ್ಯರು ದೇವನಹಳ್ಳಿಯ ಅಕ್ಕುಪೇಟೆ ಬಳಿಯ ಆಂಜನೇಯ ಸ್ವಾಮಿ ದೇವಸ್ಥಾ ನದ ಪಕ್ಕದ ತೋಟದಲ್ಲಿ ಅ.8 ರ ಭಾನುವಾರ ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ದಿವಂಗತ ಚಿನ್ನಪ್ಪ ಅವರ ಅಣ್ಣ ಶ್ರೀನಿವಾಸ್ ಮತ್ತು ಅವರ ಮಗ ಇಬ್ಬರು ಸೇರಿಕೊಂಡು, ಚಿನ್ನಪ್ಪನವರ ಕುಟುಂಬದ ಸದಸ್ಯರು ಹಿರಿಯರ ಸಮಾಧಿಗೆ ಪೂಜೆ ಸಲ್ಲಿಸಿ ವಾಪಸ್ಸು ಬರುತ್ತಿದ್ದಾಗ ಚಿನ್ನಪ್ಪನವರ ಪತ್ನಿಯಾದ ಭಾಗ್ಯಮ್ಮ ಮತ್ತು ಅವರ ಮಕ್ಕಳಾದ ಶಿಲ್ಪ, ಲಕ್ಷ್ಮಿ, ವಿಜಯಲಕ್ಷ್ಮಿ, ಬಿಂದು, ಆದಿಶೇಷ ಎಂಬ ಆರು ಜನರನ್ನು ಅಡ್ಡಗಟ್ಟಿ ಹೆಣ್ಣು ಮಕ್ಕಳು ಎಂದು ಕನಿಕರ ತೋರದೆ ಬಿದಿರಿನ ದೊಣ್ಣೆ ಮತ್ತು ಮಚ್ಚುಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಭಾಗ್ಯಮ್ಮ ಅವರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶ್ರೀನಿವಾಸನ ಮಗ ಅಶೋಕ ಎಂಬಾತ ಹೆಣ್ಣು ಮಕ್ಕಳಾದ ಶಿಲ್ಪ, ಲಕ್ಷ್ಮಿ, ವಿಜಯಲಕ್ಷ್ಮಿ, ಬಿಂದು, ಮತ್ತು ಆದಿಶೇಷ ರವರುಗಳಿಗೆ ಮಚ್ಚಿನ ಹಿಂಬದಿಯ ಭಾಗದಲ್ಲಿ ಮತ್ತು ಬಿದಿರಿನ ದೊಣ್ಣೆಗಳಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೆಣ್ಣು ಮಕ್ಕಳ ಬಟ್ಟೆಗಳನ್ನು ಹರಿದುಹಾಕಿ ಮಾನ ಹಾನಿ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಭಾಗ್ಯಮ್ಮ ಅವರು ದೂರು ನೀಡಿದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಮತ್ತು ಅಶೋಕ ಎಂಬಿಬ್ಬರ ಮೇಲೆ ಐಪಿಸಿ 324, 354, 504, 506, 34 ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ದೇವನಹಳ್ಳಿ ಪೋಲಿಸರು ತನಿಖೆ ಕೈಗೊಂಡಿದ್ದಾರೆ.