ಮನಸ್ಸು ಮನಸ್ಸುಗಳನ್ನು ಹತ್ತಿರ ತರುವ ಸಾಧನ ಜನಪದ

ವಿಜಯ ದರ್ಪಣ ನ್ಯೂಸ್
ಮೈಸೂರು: ಜಾನಪದ ಎಂಬುದು ತರತಮ ಭಾವಗಳನ್ನು ತೊಡೆದುಹಾಕುವ ಸಮಸಮಾಜ ನಿರ್ಮಾಣದ ರಹದಾರಿ. ಮನಸ್ಸು ಮನಸ್ಸುಗಳನ್ನು ಹತ್ತಿರ ತರುವ ಸಾಧನ ಜಾನಪದ. ಜನಪದರ ಎಲ್ಲ ಅಳಲುಗಳನ್ನು ವಿವಿಧ ಬಗೆಯ ಸಾಹಿತ್ಯಕ ಮತ್ತು ಪ್ರದರ್ಶಕ ನೆಲೆಯಲ್ಲಿ ತೆರೆದಿಡುವ ಕೆಲಸ ಮಾಡುತ್ತದೆ. ಧರ್ಮ, ಜಾತಿ, ಲಿಂಗತಾರತಮ್ಯಗಳನ್ನು ಅಳಿಸಿಹಾಕುವ ದಿವ್ಯೌಷಧಿ ಎಂದು ಸಂಸ್ಕೃತಿ ಚಿಂತಕ, ಜಾನಪದ ವಿದ್ವಾಂಸ ಹಿ.ಶಿ. ರಾಮಚಂದ್ರೇಗೌಡ ನುಡಿದರು.

ಅವರು ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ಜಾನಪದ ವಿಭಾಗ ಮಹಾರಾಜ ಕಾಲೇಜು, ಇಫ್ರೋ ಜಾನಪದ ಮಹಾವಿದ್ಯಾಲಯ ಮುದ್ದುಶ್ರೀ ದಿಬ್ಬ, ಕೆರೆಮೇಗಳದೊಡ್ಡಿ ಸಂಯುಕ್ತವಾಗಿ ಬೆಂಗಳೂರಿನ  ಪ್ರಗತಿ ಗ್ರಾಫಿಕ್ಸ್ ಪ್ರಕಟಿಸಿರುವ ಪ್ರೊ. ವ.ನಂ. ಶಿವರಾಮು ಅವರ `ಜನಪದ-ಜಾನಪದ, ಜಾನಪದ ಅಧ್ಯಯನ ಮತ್ತು ಕ್ಷೇತ್ರಕಾರ್ಯ’ ಕೃತಿಯನ್ನು ಮೈಸೂರಿನ ಮಹಾರಾಜ ಕಾಲೇಜು ಜ್ಯೂನಿಯರ್ ಬಿ.ಎ. ಹಾಲ್‌ನಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.
ನೀನನಗಿದ್ದರೆ ನಾನಿನಗೆ ಎಂಬ ಮೂಲ ಸಿದ್ಧಾಂತಗಳ ಅಡಿಪಾಯದ ಮೇಲೆ ನಿರ್ಮಾಣವಾಗಿರುವ ಜನಪದರ ಜಾನಪದವನ್ನು ಯಾರೂ ಶಿಥಿಲಗೊಳಿಸಲು ಸಾಧ್ಯವಿಲ್ಲ. ರೂಪಗಳು ಬದಲಾಗಬಹುದೇ ಹೊರತಾಗಿ ಮೂಲದ ಸೆಲೆಗಳ ಮೇಲೇ ಅದು ನಿರ್ಮಾಣವಾಗಿರುತ್ತದೆ. ನಮ್ಮ ಸುತ್ತಮುತ್ತಲ ಚಟುವಟಿಕೆಗಳನ್ನು ಸೂಕ್ಷö್ಮವಾಗಿ ಗಮನಿಸುವ ಜಾಣ್ಮೆ ಇದ್ದರೆ ಹೊಸಲೋಕವನ್ನೇ ನಮಗೆ ತೋರಿಸುವ ಶಕ್ತಿ ಜನಪದ-ಜಾನಪದಕ್ಕಿದೆ ಎಂದರು. ಅಂತಹ ಎಲ್ಲ ಸುಳಿವುಗಳನ್ನೂ ವ.ನಂ. ಶಿವರಾಮು ಅವರು ತಮ್ಮ ಕೃತಿಯಲ್ಲಿ ಕಂಡರಿಸಿದ್ದಾರೆAದು ಶ್ಲಾಘಿಸಿದರು.

ಕೃತಿ ಪರಿಚಯ ಮಾಡಿದ ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ ಪಠ್ಯದಾಚೆಗಿನ ಓದು ಎಂದರೆ ಅದು ಜನಪದರನ್ನು ಅರ್ಥ ಮಾಡಿಕೊಳ್ಳುವುದು. ನವನಾಗರಿಕ ಸಂದರ್ಭದಲ್ಲಿ ನಮ್ಮೊಳಗಿನ ಸತ್ವಭರಿತ ಜಾನಪದದ ಚೆಲುವನ್ನು ಮರೆಯುತ್ತಿದ್ದೇವೆ. ಅಧ್ಯಯನಕಾರನೊಬ್ಬ ತಾನು ನಿರೂಪಿಸುವ ವಿಚಾರಗಳು ಸಹೃದಯನ ಅವಶ್ಯಕತೆಗಳನ್ನು ಪೂರೈಸುವಂತಿರಬೇಕು. ಮತ್ತು ಸಾಮಾಜಿಕ ಬದುಕಿಗೆ ಅಗತ್ಯವೆನಿಸುವ ನೆಲೆಯಲ್ಲಿ ಆತನ ಬರವಣಿಗೆ ಇರಬೇಕಾಗುತ್ತದೆ.  ಇದು ಬರೆಹಗಾರನ ಜವಾಬ್ದಾರಿ ಕೂಡ ಆಗಿರುತ್ತದೆ.

ಇಂದಿನ ದಿನಮಾನದಲ್ಲಿ ಜಾನಪದ ಇರಬೇಕಾದ ಸ್ಥಾನದಿಂದ ಪಲ್ಲಟವಾಗುತ್ತಿದೆ. ಒಂದು ಕಾಲಕ್ಕೆ ಸರ್ವವ್ಯಾಪಿಯಾಗಿದ್ದ ಜಾನಪದ ಅಧ್ಯಯನ ವ್ಯಾಖ್ಯಾನಗಳು, ಸಿದ್ಧಾಂತಗಳು  ಕೊರತೆ ಅನುಭವಿಸುತ್ತಿವೆ. ಆದರೆ ಅಪರೂಪಕ್ಕೆ ಒಮ್ಮೊಮ್ಮೆ ವನಂಶಿ ಅಂತಹವರು ಈ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಅದರ ಫಲಿತಾಂಶವೇ ಈ ಕೃತಿ, ಸಿದ್ಧಾಂತಗಳು, ವ್ಯಾಖ್ಯಾನಗಳೇ ಮುಂತಾಗಿ ಅಡಕವಾಗಿರುವ ವನಂಶಿ ಅವರ ಈ ಕೃತಿ ಒಂದೇ ಉಸಿರಿಗೆ ಕಥನ-ಕಾದಂಬರಿಯನ್ನು ಓದುವಷ್ಟು ಸರಾಗ ಓದಿಗೆ ಒಡ್ಡಿಕೊಳ್ಳುತ್ತದೆ ಎಂದು ವಿವರಿಸಿದರು.

ಕೃತಿಕಾರ ಪ್ರೊ. ವ.ನಂ. ಶಿವರಾಮು ಮಾತನಾಡಿ, ನಿವೃತ್ತನಾದಮೇಲೆ ಪ್ರವೃತ್ತಿಯಾಗಿ ಬರವಣಿಗೆ ಹೊಸದಾಗಿಯೇ ಆರಂಭಿಸಿರುವೆ. ಜೀಶಂಪ, ಹಕ. ರಾಜೇಗೌಡ, ಎಚ್.ಎಲ್. ನಾಗೇಗೌಡ ಇವರ ಸಂಸರ್ಗ ನನ್ನ ಜಾನಪದದ ಹಸಿವನ್ನು ಹೆಚ್ಚಿಸಿದೆ. ಅನುಭವಗಳನ್ನು ವಿಸ್ತರಿಸಿದೆ. ಈ ನೆಲೆಯಲ್ಲಿ ಜಾನಪದದ ವಿವಿಧ ಬಗೆಗಳು ನಮ್ಮನ್ನು ಪದೇ ಪದೇ ಕೆಣಕುತ್ತವೆಂದರು.

ಮಹಾರಾಜ ಕಾಲೇಜು ಜಾನಪದ ವಿಭಾಗ ಮುಖ್ಯಸ್ಥೆ ಡಾ. ಎಚ್.ಆರ್. ಚೇತನ ಪ್ರಾಸ್ತಾವಿಕವಾಗಿ ಮಾತನಾಡಿದರು.  ಮಹಾರಾಜ ಕಾಲೇಜು ಪ್ರಾಂಶುಪಾಲ ಪ್ರೊ. ಎಚ್. ಸೋಮಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮೀ  ಮನಾಪುರ ಕಾರ್ಯಕ್ರಮ ಸಂಯೋಜಿಸಿದರು. ಮಹಾರಾಜ ಕಾಲೇಜು ಕನ್ನಡ ವಿಭಾಗದ ವಿದ್ಯಾರ್ಥಿಗಳು, ಸಂಶೋಧಕರು ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.