ನೆಲಮಾಳಿಗೆಯಲ್ಲಿನ ಒಂದಷ್ಟು ಬದುಕು…..

ವಿಜಯ ದರ್ಪಣ ನ್ಯೂಸ್

ನೆಲಮಾಳಿಗೆಯಲ್ಲಿನ ಒಂದಷ್ಟು ಬದುಕು…….

ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಬದುಕಿನ ಅತ್ಯಂತ ನೋವಿನ ಘಟನೆಗಳಿಗೆ ಸಾಕ್ಷಿಯಾಗಿರುವ ನಮ್ಮ ಸಮಕಾಲೀನ ಸಂದರ್ಭದಲ್ಲಿ ಒಂದು ನೋಟ……

ಕೇಳಲು, ಓದಲು ಹಿಂಸೆಯಾದರೆ ಕ್ಷಮೆಇರಲಿ……

ರಸ್ತೆ ಬದಿಯಲ್ಲಿ ಅನಾಥರಂತೆ ಸಾಯುವ ಮಾಹಿತಿಯೇ ಇಲ್ಲದ ಬಹಳಷ್ಟು ಜನರು ಇನ್ನೂ ಈ ಸಮಾಜದಲ್ಲಿ ಇದ್ದಾರೆ……

ತನ್ನ ಕುಟುಂಬದವರ ಎರಡೊತ್ತಿನ ಊಟಕ್ಕಾಗಿ ದಿನನಿತ್ಯ 5/6 ಜನರಿಗೆ ತನ್ನ ಮುದಿ ದೇಹವನ್ನು ಮಾರಿಕೊಳ್ಳುವ ಮಹಿಳೆಯರು ಈಗಲೂ ಇದ್ದಾರೆ……

ಇನ್ನೂ ಟಿವಿ ಮೊಬೈಲ್‌ ಅಕ್ಷರ ಜ್ಞಾನ ತಿಳಿಯದ ಸಾಕಷ್ಟು ಜನರು ಆದಿವಾಸಿ ಸಮುದಾಯಗಳಲ್ಲಿ ಇದ್ದಾರೆ……
.
ಹಣಕ್ಕಾಗಿ ತಮ್ಮ ಕಿಡ್ನಿಯನ್ನೇ ಬೇಗ ಮಾರಿಸಿಕೊಡಲು ದಲ್ಲಾಳಿಗಳಿಗೆ ದಂಬಾಲು ಬಿದ್ದು ಲಂಚ ಕೊಡುವ ಬಡ ಜನರನ್ನು ಗಮನಿಸಿದ್ದೇನೆ…..

ಹಣಕ್ಕಾಗಿ ಮಕ್ಕಳನ್ನು ಹೆತ್ತು ಮಾರುವ ಕೆಲವು ಕುಟುಂಬಗಳು ಸಹ ಇವೆ……

ತಮ್ಮ ಮನೆಯಲ್ಲಿಯೇ ತಾಯಿ, ಹೆಂಡತಿ, ಅಕ್ಕ ತಂಗಿಯರನ್ನು ಇಟ್ಟುಕೊಂಡು ವೇಶ್ಯಾಗೃಹ ನಡೆಸುವ ಅನೇಕ ಊರುಗಳ ಬಗ್ಗೆ ಜನರು ಮಾತನಾಡಿಕೊಳ್ಳುತ್ತಾರೆ…….

ಮಕ್ಕಳನ್ನು ಕದ್ದು ಅವರ ಕಣ್ಣುಕಿತ್ತು ಅಥವಾ ಅಂಗವಿಕಲರನ್ನಾಗಿ ಮಾಡಿ ಅವರಿಂದ ಭಿಕ್ಷೆ ಬೇಡಿಸಿ ಜೀವಿಸುವ ಕೆಲವು ವಂಚಕರು ಈಗಲೂ ಕಾರ್ಯನಿರತರಾಗಿದ್ದಾರೆ…

ಇಡೀ ಜೀವನವನ್ನೇ ಕುಟುಂಬ ಸಮೇತ ರಸ್ತೆಯ ಬದಿಯಲ್ಲಿಯೇ ಕಳೆಯುತ್ತಿರುವ – ಕೊಳೆಯುತ್ತಿರುವ ಸಂಸಾರಗಳು ಸಹ ಇನ್ನೂ ಅಸ್ತಿತ್ವದಲ್ಲಿವೆ…..

ಹುಟ್ಟಿಸಿದ ತಂದೆ ತಾಯಿಯನ್ನೇ ಅನುಕೂಲಸ್ಥ ಮಗನೊಬ್ಬ ಹೆಂಡತಿಯ ಮಾತು ಕೇಳಿ ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ಭಿಕ್ಷಾಟನೆ ಮಾಡುತ್ತಿದ್ದ ಅಪರಾಧಿಗಳೆಂದು ಸುಳ್ಳು ಹೇಳಿ ಸೇರಿಸಿದ ಪ್ರಕರಣಗಳು ಸಹ ಇವೆ……

ಪ್ರಧಾನಿ, ಮುಖ್ಯಮಂತ್ರಿ ಇರಲಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾವಿದ್ದೇವೆ ಎಂಬ ಅರಿವೇ ಇರದ ಬಹಳಷ್ಟು ಜನರು ಈಗಲೂ ಇದ್ದಾರೆ.

ವಾರಸುದಾರರೇ ಇಲ್ಲದ ಎಷ್ಟೋ ಕೋಟಿ ಹಣ ಬ್ಯಾಂಕುಗಳು ಖಾತೆಗಳಲ್ಲಿ ಈಗಲೂ ಕೊಳೆಯುತ್ತಿದೆ….

ಆಸ್ಪತ್ರೆಗೆ ಹೋಗಲು ಹಣವಿಲ್ಲದೇ ರೋಗಗಳೊಂದಿಗೆ ನರಳುತ್ತಿರುವ ಸಾಕಷ್ಟು ಜನರು ಇದ್ದಾರೆ……

ಜೈಲಿನಲ್ಲಿ ಸಣ್ಣ ಪುಟ್ಟ ತಪ್ಪುಗಳಿಗಾಗಿ ಅಥವಾ ಅಪರಾಧ ಮಾಡದೇ ಯಾರದೋ ತಪ್ಪಿಗಾಗಿ ಜೈಲು ಸೇರಿ ಜಾಮೀನು ಸಿಗುವ ಸಾಧ್ಯತೆ ಇದ್ದರೂ ವಕೀಲರಿಗೆ ನೀಡಲು ಹಣವಿಲ್ಲದೆ ಹತ್ತಾರು ವರ್ಷಗಳಿಂದ ಅಲ್ಲಿಯೇ ಕೊಳೆಯುತ್ತಿರುವ ಜನರೂ ಇದ್ದಾರೆ……

ಇದು ಕೆಲವು ಉದಾಹರಣೆಗಳು ಅಷ್ಟೆ. ಮುಂದೊಮ್ಮೆ ಬಹಳಷ್ಟು ಹೃದಯ ಬಿರಿಯುವ ಇನ್ನೂ ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ಹಾಗೆಯೇ,ಇನ್ನೂ ಮೋಸ,
ಕಳ್ಳತನ, ಸುಳ್ಳು, ವಂಚನೆಗಳನ್ನೇ ವೃತ್ತಿ ಮಾಡಿಕೊಂಡಿರುವ ಕೆಲವರು ದೇಶದ ಎಲ್ಲಾ ವಿಧಾನ ಮಂಡಲ ಮತ್ತು ಸಂಸತ್ತಿನಲ್ಲಿ ಜನಪ್ರತಿನಿಧಿಗಳಾಗಿ ಸುಖವಾಗಿ ಜೀವನ ಮಾಡುತ್ತಿದ್ದಾರೆ ಎಂದು ನಿಮಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲ…….

ವಿಶ್ವಗುರು ಭಾರತ ಎನ್ನುವ ನಾವು ಇದನ್ನೂ ಗಮನಿಸಬೇಕಲ್ಲವೇ.
ಸಂವೇದನೆಗಳೇ ಇಲ್ಲದ ಈ ವ್ಯವಸ್ಥೆಯ ಬಗ್ಗೆ ಆಕ್ರೋಶ ಉಂಟಾಗುತ್ತದೆ.
ಬದಲಾವಣೆ ಕೆಳ ಮಟ್ಟದಿಂದ ಆಗಬೇಕಿದೆ.
ಇದರಲ್ಲಿ ನಮ್ಮೆಲ್ಲರ ಜವಾಬ್ದಾರಿಯೂ ಇದೆ.
ಅದನ್ನು ನಿಭಾಯಿಸಲು ಸಿದ್ದರಾಗೋಣ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ


ವಿವೇಕಾನಂದ. ಎಚ್.ಕೆ.
9844013068………