ಎಲ್ಲ ಸಮಸ್ಯೆಗಳಿಗೂ ತಾಳ್ಮೆಯೊಂದೇ ಪರಿಹಾರ

ವಿಜಯ ದರ್ಪಣ ನ್ಯೂಸ್….

ಎಲ್ಲ ಸಮಸ್ಯೆಗಳಿಗೂ ತಾಳ್ಮೆಯೊಂದೇ ಪರಿಹಾರ

ಜಯ್ ನುಡಿ (ವ್ಯಕ್ತಿತ್ವ ವಿಕಸನ ಲೇಖನ ಮಾಲೆ)

ಲೇಖನ – ಜಯಶ್ರೀ.ಜೆ.ಅಬ್ಬಿಗೇರಿ

ಶಿಲ್ಪಿಯೊಬ್ಬ ಒಂದು ಕಾಡಿನಿಂದ ದಾಟಿ ಹೋಗುತ್ತಿದ್ದ. ಅಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಎರಡು ಹೆಬ್ಬಂಡೆಗಳನ್ನು ನೋಡಿದ. ಬಹು ದಿನಗಳಿಂದ ಅವನು ಇಂತಹ ಕಲ್ಲುಗಳ ಹುಡುಕಾಟದಲ್ಲಿದ್ದ. ಕಾಡಿನಲ್ಲಿ ಸುಮ್ಮನೇ ಬಿದ್ದಿರುವ ಕಲ್ಲುಗಳಿಗೆ ಪೂಜ್ಯ ಸ್ಥಾನ ನೀಡುವುದು ಉತ್ತಮ ಆಲೋಚನೆ ಎನಿಸಿತು. ಮರುದಿನ ಕೆತ್ತನೆಗೆ ಬೇಕಾದ ಸರಂಜಾಮುಗಳನ್ನು ತಂದು ಅವುಗಳಲ್ಲಿ ಒಂದು ಕಲ್ಲನ್ನು ದೇವರ ಮೂರ್ತಿಗೆಂದು ಕೆತ್ತಲು ಆರಂಭಿಸಿದ. ಆ ಕಲ್ಲು ಏಟುಗಳನ್ನು ತಿನ್ನಲು ತನಗೆ ಆಗುತ್ತಿಲ್ಲವೆಂದು ಕೆತ್ತನೆಗೆ ಸಹಕರಿಸಲಿಲ್ಲ. ಪೆಟ್ಟು ಬಿದ್ದಲ್ಲಿಂದ ನೋವಿಗೆ ಚೂರು ಚೂರಾಗತೊಡಗಿತು. ಈ ಕಲ್ಲು ಮೂರ್ತಿಯಾಗುವವರೆಗೆ ಸಹಿಸಿಕೊಳ್ಳುವುದಿಲ್ಲ ಎಂದು ಅರ್ಥ ಮಾಡಿಕೊಂಡ. ಶಿಲ್ಪಿ ಅದರ ಪಕ್ಕದಲ್ಲೇ ಇದ್ದ ಕಲ್ಲಿಗೆ ಉಳಿಪೆಟ್ಟು ಕೊಡಲು ಶುರು ಮಾಡಿದ. ಆ ಕಲ್ಲು ಪೆಟ್ಟು ತಿಂದರೂ ಬೆಚ್ಚದೇ ಬೆದರದೇ ಶಿಲ್ಪಿ ಕಟೆದಂತೆ ಕಟೆಸಿಕೊಳ್ಳತೊಡಗಿತು. ಆತ ಕಟೆದಂತೆ ತನ್ನ ನೋವು ವ್ಯಕ್ತಪಡಿಸದೇ ಮೈಯನ್ನು ಆತನಿಗೆ ತಾಳ್ಮೆಯಿಂದ ನೀಡಿತು. ಕಲ್ಲಿನ ತಾಳ್ಮೆಯ ಫಲವಾಗಿ ಕೆಲವೇ ತಿಂಗಳುಗಳಲ್ಲಿ ಅದು ಸುಂದರ ವಿಗ್ರಹವಾಗಿ ಹೊರಹೊಮ್ಮಿತು. ತಾಳ್ಮೆಯಿರದ ಕಲ್ಲು ತನ್ನ ಮುಖವನ್ನಷ್ಟೇ ಕೆತ್ತಿಸಿಕೊಂಡು ವಿರೂಪಗೊಂಡಿತ್ತು. ಅದು ಬೇರಾವುದಕ್ಕೂ ಪ್ರಯೋಜನವಿಲ್ಲವೆಂದು ಶಿಲ್ಪಿ ಅದನ್ನು ತೆಂಗಿನಕಾಯಿ ಒಡೆಯಲು ಉಪಯೋಗಿಸಿಕೊಳ್ಳಲು ನೀಡಿದ.
ದೇವರ ಗರ್ಭ ಗುಡಿಯಲ್ಲಿ ವಿಗ್ರಹವಾಗಿದ್ದ ಕಲ್ಲಿಗೆ ಎಲ್ಲರೂ ಭಕ್ತಿಪೂರ್ವಕವಾಗಿ ನಮನಗಳನ್ನು ಸಲ್ಲಿಸುತ್ತಿದ್ದರು. ಪೂಜಾರಿಗಳಿಂದ ನಿತ್ಯವೂ ಸ್ನಾನ, ಅಭಿಷೇಕ, ಪೂಜೆ, ಪಂಚಾಮೃತ ಎಲ್ಲವೂ ನಡೆಯುತ್ತಿತ್ತು. ಇದನ್ನು ಕಂಡು ತೆಂಗಿನಕಾಯಿ ಒಡೆಸಿಕೊಳ್ಳುವ ಕಲ್ಲಿಗೆ ತನ್ನ ಅಸಹನೆಗೆ ಪಶ್ಚಾತ್ತಾಪವಯಿತು. ಶಿಲ್ಪಿಯ ಉಳಿಪೆಟ್ಟು ತಿಂದಿದ್ದರೆ ನಾನೂ ದೇವರ ವಿಗ್ರಹವಾಗುತ್ತಿದ್ದೆ. ಪೂಜೆಗೆ ಒಳಪಡುತ್ತಿದ್ದೆ. ಭಕ್ತಾದಿಗಳು ನನ್ನನ್ನು ಆರಾದಿಸುತ್ತಿದ್ದರು. ಈಗ ನೋಡು ಎಲ್ಲರೂ ಬಂದು ನನ್ನ ತಲೆಗೆ ತಮಗೆ ಬೇಕಾದಂತೆ ನನ್ನನ್ನು ಹೊಡಿಯುತ್ತಾರೆ. ನಿರ್ವಾಹವಿಲ್ಲದೇ ಅವರು ಕೊಡುವ ಏಟುಗಳನ್ನು ನಾನು ಸಹಿಸಿಕೊಳ್ಳಲೇಬೇಕೆಂದು ದಿನವೂ ಮರುಗುತ್ತಿತ್ತು.

ಈ ಮೇಲಿನ ಕಥೆಯ ನೀತಿಯೆಂದರೆ ಕಷ್ಟ ಸಹಿಸಿಕೊಳ್ಳುವ, ತಾಳ್ಮೆಯ ಗುಣ ಬೆಳೆಸಿಕೊಳ್ಳದಿದ್ದರೆ ದಿನವೂ ಕಷ್ಟ ಎದುರಿಸುವ ಅನಿವಾರ್ಯತೆ ಬರುತ್ತದೆ. ತಾಳ್ಮೆಗೆಡುವವರಿಗೆ ಯೋಗ್ಯತೆ ಇದ್ದರೂ ಯೋಗ್ಯವಾದುದು ಸಿಗುವುದಿಲ್ಲ. ತಾಳ್ಮೆಯಿಲ್ಲದವರು ಕಡೆಗಣಿಸಲ್ಪಡುತ್ತಾರೆ. ಸಿಗಬೇಕಾದ ಪ್ರಾಮುಖ್ಯತೆ ದೊರೆಯುವುದಿಲ್ಲ. ದಿನನಿತ್ಯ ಅನೇಕ ಸಂದರ್ಭಗಳಲ್ಲಿ ನಾವು ತಾಳ್ಮೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಸಹನೆಯನ್ನು ಮೆರೆಯದಿದ್ದರೆ ಆಗುವ ಅನಾಹುತಕ್ಕೆ ನಾವೇ ಕಾರಣರಾಗುತ್ತೇವೆ. ಸಹನಶೀಲರಾಗಲು ಇರುವ ಕೆಲ ಸಲಹೆಗಳು ಇಲ್ಲಿವೆ.

ತಾಳ್ಮೆ ಕಷ್ಟವೇಕೆ..?
‘ತಾಳ್ಮೆಯು ಸಂತೋಷವನ್ನು ಆಕರ್ಷಿಸುತ್ತದೆ.’ಎಂಬ ಮಾತು ನಮಗೆ ಗೊತ್ತು ಆದರೂ ಇತ್ತೀಚಿನ ವೇಗದ ಬದುಕಿನಲ್ಲಿ ತಾಳ್ಮೆಯಿಂದ ಇರುವುದು ಮೊದಲಿಗಿಂತ ಹೆಚ್ಚು ಕಷ್ಟದ ವಿಷಯವೆನಿಸುತ್ತಿದೆ. ವಿಶೇಷವಾಗಿ ನಾವು ಹೊಸ ತಂತ್ರಜ್ಞಾನದ ಫಲವಾಗಿ ಬಹುತೇಕ ಎಲ್ಲವನ್ನೂ ಮನೆ ಬಾಗಿಲಿಗೆ ಕ್ಷಣಾರ್ಧದಲ್ಲಿ ಬರುವಂತೆ ಮಾಡಿಕೊಂಡಿದ್ದೇವೆ. ಚುಟಿಕೆ ಹೊಡೆಯುವಷ್ಟರಲ್ಲಿ ತ್ವರಿತವಾಗಿ ಬಯಕೆಗಳು ಈಡೇರುತ್ತಿವೆ. ಡಿಜಿಟಲ್ ಆಗಿರುವ ದುನಿಯಾದಲ್ಲಿ ಕೆಲವು ಕ್ಲಿಕ್‌ಗಳಷ್ಟೇ ಸರಳವಾಗಿದೆ ಜೀವನ. ಆದ್ದರಿಂದ ತಾಳ್ಮೆಯಿಂದ ಇರುವುದು ಎವರೆಸ್ಟ್ ಏರಿದಷ್ಟು ಸಾಹಸದ ಕೆಲಸವೆನಿಸುತ್ತಿದೆ. ತಾಳ್ಮೆ ವಹಿಸುವುದು ಕಿರಿಕಿರಿ ಎನಿಸುತ್ತದೆ. ಏಕೆಂದರೆ ಅನೇಕ ವಿಷಯಗಳು ಬೆರಳ ತುದಿಯಲ್ಲಿ ಲಭ್ಯವಿವೆ. ನಿರೀಕ್ಷೆಗಳು ಹೆಚ್ಚಿವೆ. ಇದು ತಾಳ್ಮೆ ಮಟ್ಟ ಕಡಿಮೆಯಾಗಲು ಕಾರಣವಾಗಿದೆ.

ಸಾವಧಾನತೆ..
ಪ್ರಪಂಚದ ವೇಗ ಏನೇ ಇರಲಿ ತಾಳ್ಮೆಯಿಂದ ಇರುವುದು ನಮ್ಮ ಮೇಲಿದೆ. ತಾಳ್ಮೆಯು ಈಗಾಗಲೇ ನಮ್ಮಲ್ಲೇ ಇದೆ. ಅದನ್ನು ಬಲಪಡಿಸಬಹುದು. ಅದೊಂದು ಕೌಶಲ್ಯ. ಅಭ್ಯಾಸದಂತೆ ಪ್ರತಿಯೊಬ್ಬರೂ ಅದನ್ನು ಸುಧಾರಿಸಬಹುದು. ಹೆಚ್ಚು ತಾಳ್ಮೆಯಿಂದ ಇರುವುದನ್ನು ಕಲಿಯಬಹುದು ಎನ್ನುವುದು ಒಳ್ಳೆಯ ಸುದ್ದಿ. ತಾಳ್ಮೆ ಉಳಿದೆಲ್ಲ ಕೌಶಲ್ಯಗಳಿಗಿಂತ ಹೆಚ್ಚು ಸಮಯ ಬೇಡುತ್ತದೆ. ಸಾವಧಾನತೆ ಎನ್ನುವುದು ಪ್ರಸ್ತುತ ಕ್ಷಣದಲ್ಲಿರುಲು ಪ್ರೋತ್ಸಾಹಿಸುವ ಅಭ್ಯಾಸವಾಗಿದೆ. ಇದು ಸರಳವೆಂದು ತೋರುತ್ತದೆ. ಆದರೆ ‘ನೀವು ಏನು ಮಾಡುತ್ತಿದ್ದೀರಿ, ನೀವು ಹೇಗೆ ಭಾವಿಸುತ್ತೀರಿ? ನಿಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಗಮನ ಹರಿಸುವುದು ಒಂದು ಸವಾಲಾಗಿದೆ.’ ಜರ್ನಲ್ ಬರೆಯುವುದು, ಯೋಗ ಧ್ಯಾನದಲ್ಲಿ ತೊಡಗಿಕೊಳ್ಳುವುದು, ಗಮನವಿಟ್ಟು ತಿನ್ನುವುದು ಸಾವಧಾನತೆಯನ್ನು ಅಭ್ಯಾಸ ಮಾಡಿಕೊಳ್ಳಲು ಅತ್ಯುತ್ತಮ ಮಾರ್ಗಗಳು. ‘ತಾಳ್ಮೆಯಿಂದಿರಿ. ಎಲ್ಲವೂ ಸುಲಭವಾಗುವ ಮೊದಲು ಕಷ್ಟವಾಗಿತ್ತು.’

ಸಹಿಷ್ಣುತೆ..
‘ತಾಳ್ಮೆಯಿಂದ ತನ್ನನ್ನು ಸಿದ್ಧಿಸಿಕೊಳ್ಳುವ ಮನುಷ್ಯನಿಗೆ ಯಾವುದೇ ಗೌರವಗಳು ತುಂಬಾ ದೂರವಿರುವುದಿಲ್ಲ.’ ಜೀವನದ ಸಣ್ಣ ಹಿನ್ನೆಡೆಗಳ ಸಮಯದಲ್ಲಿ ತಾಳ್ಮೆಯನ್ನು ಅಭ್ಯಾಸ ಮಾಡುವುರಿಂದ ದೊಡ್ಡ ಸಮಸ್ಯೆಗಳು ಉದ್ಣವಿಸಿದಾಗ ಸಹನೆಯನ್ನು ಬೆಳೆಸಿಕೊಳ್ಳಬಹುದು. ಬೇರೆಯವರು ನಿಮ್ಮ ಮುಂದೆ ಸಾಲಿನಲ್ಲಿ ಹೋಗಲು ಬಿಡಿ. ಕರಕುಶಲದಂತಹ ತಾಳ್ಮೆ ಅಗತ್ಯವಿರುವ ಹವ್ಯಾಸವನ್ನು ಬೆಳೆಸಿಕೊಳ್ಳಿ. ಉದ್ದೇಶಪೂರ್ವಕಾವಾಗಿ ಫೋನಿನಲ್ಲಿರುವ ಅಧಿಸೂಚನೆಗಳನ್ನು ಕೆಲವು ನಿಮಿಷಗಳವರೆಗೆ ನಿರ್ಲಕ್ಷಿಸಿ. ಇದರಿಂದ ಸಹಿಷ್ಣುತೆ ಹೆಚ್ಚುತ್ತದೆ.

ನಿಯಂತ್ರಣದಲ್ಲಿದೆ
‘ತಾಳ್ಮೆಯಿಂದ ಅನೇಕ ಯುದ್ಧಗಳನ್ನು ತಪ್ಪಿಸಲಾಗಿದೆ. ಮತ್ತು ಅನೇಕ ಯುದ್ಧಗಳು ಅಜಾಗರೂಕ ಆತುರಿದಂದ ಉಂಟಾಗಿವೆ.’ ಇದರರ್ಥ ತಾಳ್ಮೆಯಿಂದಿರಲು ನಮ್ಮ ನಿಯಂತ್ರಣದಲ್ಲಿ ಏನಿದೆಯೆಂದು ತಿಳಿಯುವುದು ಬಹು ಮುಖ್ಯ. ಉದಾ: ಟ್ರಾಫಿಕ್‌ನಲ್ಲಿ ಸಿಲುಕಿರುವಾಗ ತಾಳ್ಮೆ ಕ್ಷೀಣಿಸಬಹುದು. ಆದರೆ ಪರಿಸ್ಥಿತಿಗಳನ್ನು ಯಾವಾಗ ಬದಲಿಸಬಹುದು ಮತ್ತು ಬದಲಾಯಿಸಲಾಗುವುದಿಲ್ಲ ಎಂಬುದನ್ನು ಗುರುತಿಸಲು ಇದು ಸಹಾಯಕ. ನಮ್ಮ ನಿಯಂತ್ರಣದಲ್ಲಿ ಏನಿದೆ ಎಂಬುದು ಸಹ ಬಹು ಚೆನ್ನಾಗಿ ತಿಳಿಯುತ್ತದೆ. ಕೆಲವು ಸಂದರ್ಭದಲ್ಲಿ ನಿಮ್ಮ ನಿಯಂತ್ರಣದಾಚೆಗೆ ಇರುವುದನ್ನು ಒಪ್ಪಿಕೊಂಡು ನಡೆಯುವುದು ಜಾಣ ನಡೆಯಾಗಿದೆ.

ಆಲಿಸುವಿಕೆ..
ಸಂಭಾಷಣೆಯ ಸಮಯದಲ್ಲಿ ಮುಂದಿನವರು ನಿಮಗೆ ಏನು ಹೇಳುತ್ತಿದ್ದಾರೆ ಎಂಬುದನ್ನು ಕೇಳಲು ಇಷ್ಟಪಡುವುದಿಲ್ಲ. ಕೆಲ ಸಲ ಕಷ್ಟವೂ ಎನಿಸುತ್ತದೆ. ಮಾತನಾಡುತ್ತಿರುವ ವ್ಯಕ್ತಿಯೊಂದಿಗೆ ಪ್ರಸ್ತುತವಾಗಿರಲು ನಿಮ್ಮನ್ನು ನೆನಪಿಸಿಕೊಳ್ಳಿ. ನಿಮ್ಮ ಫೋನನ್ನು ಕೆಳಗಿರಿಸಿ. ಅವರ ಬಳಿ ಕುಳಿತುಕೊಳ್ಳಿ. ಅವರನ್ನುö ನೋಡಿ ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳುವತ್ತ ಗಮನಹರಿಸಿ. ಸ್ಪಷ್ಟೀಕರಣದ ಪ್ರಶ್ನೆಗಳನ್ನು ಕೇಳಿ.’ತಾಳ್ಮೆಯಿಂದ ಹಿಪ್ಪುನೇರಳೆ ಎಲೆಯು ರೇಷ್ಮೆ ಗೌನ್ ಆಗುತ್ತದೆ.’ ನೆನಪಿರಲಿ.

ನಗುವಿಕೆ..
‘ತಾಳ್ಮೆಯು ಉತ್ಸಾಹವನ್ನು ಪಳಗಿಸುತ್ತದೆ.’ ನಗುವು ಸಹ ಉತ್ಸಾಹವನ್ನು ಹೆಚ್ಚಿಸುತ್ತದೆ. ನಗುವುದರಿಂದ ಯಾವುದೇ ಮನಸ್ಥಿತಿಯನ್ನು ಹಗುರಗೊಳಿಸಬಹುದು. ಮತ್ತು ಒತ್ತಡ ಎದುರಿಸುವಾಗ ತಾಳ್ಮೆಯನ್ನು ಹೊಂದಲು ಸಹಾಯ ಮಾಡುತ್ತದೆ. ಇತರರು ನಿಮಗೆ ಅನನುಕೂಲತೆಯನ್ನು ಉಂಟುಮಾಡುತ್ತಿದ್ದರೆ ನಿಮ್ಮ ಮೇಲೆ ಪರಿಣಾಮಗಳನ್ನು ಪರಿಗಣಿಸುವ ಬದಲು ಹಾಸ್ಯವಾಗಿ ಅದನ್ನು ಹೇಗೆ ತೆಗೆದುಕೊಳ್ಳಬಹುದೆಂದು ಯೋಚಿಸಿ. ನಗುವುದರಿಂದ ದೈಹಿಕ ಆರೋಗ್ಯ ಸುಧಾರಿಸುತ್ತದೆ. ನಕಾರಾತ್ಮಕ ಭಾವನೆಗಳನ್ನು ಕಡಿಮೆಗೊಳಿಸಬಹುದು.

ನಿದ್ರಿಸುವಿಕೆ..
ನೀವು ಸಾಕಷ್ಟು ನಿದ್ರೆ ಮಾಡುತ್ತಿದ್ದೀರೆಂದು ಖಚಿತಪಡಿಸಿಕೊಳ್ಳಿ. ಇದು ಸರಳವಾದ ಸಲಹೆಯಂತೆ ತೋರುತ್ತದೆ. ಆದರೆ ಹೆಚ್ಚು ತಾಳ್ಮೆಯಿಂದಿರುವಾಗ ನಿದ್ರೆ ತುಂಬಾ ಮುಖ್ಯವಾಗಿದೆ. ಚೆನ್ನಾದ ನಿದ್ರೆ ಇರದಿದ್ದರೆ ಜೀವನವು ಕಷ್ಟಕರವಾಗುತ್ತದೆಂಬುದು ರಹಸ್ಯವಲ್ಲ.

ಕೊನೆ ಹನಿ..                                                      ‘ತಾಳ್ಮೆ ಕಹಿಯಾದರೂ ಅದರ ಫಲ ಸಿಹಿ.’ ಎಂಬ ಮಾತಿನಂತೆ ತಾಳ್ಮೆಯನ್ನು ಹೆಚ್ಚಿಸುವುದು ಸುಲಭ ಎಂದು ಯಾರೂ ಹೇಳುವುದಿಲ್ಲ. ಆದರೆ ದಿನನಿತ್ಯದ ಅಭ್ಯಾಸದಿಂದ ಹೆಚ್ಚು ಶಾಂತರಾಗುತ್ತೇವೆ. ಕಡಿಮೆ ಭ್ರಮನಿರಸನಗೊಳ್ಳುತ್ತೇವೆ. ತಾಳ್ಮೆಯಿಂದ ನಮಗೆ ನಾವೇ ಮಾನಸಿಕ ವಿರಾಮವನ್ನು ಕೊಟ್ಟುಕೊಳ್ಳಬಹುದು. ಹಟಾತ್ ಪ್ರತಿಕ್ರಿಯೆ ಮತ್ತು ನಿರ್ಧಾರಗಳನ್ನು ತಡೆಯುತ್ತದೆ. ದೀರ್ಘಾವಧಿಯ ಗುರಿಯನ್ನು ಸಾಧಿಸಲು ತಾಳ್ಮೆಯೊಂದು ಬೆನ್ನೆಲುಬು. ತಾಳ್ಮೆಯಿಂದ ಸಮಸ್ಯೆಗಳನ್ನು ಹೆಚ್ಚು ಚಿಂತನಶೀಲವಾಗಿ ಸಮೀಪಿಸಲು ಸಾಧ್ಯ. ಸಮತೋಲಿತ ಮತ್ತು ಸಂತೋಷದಾಯಕ ಜೀವನಕ್ಕೆ ಮೆಟ್ಟಿಲು ತಾಳ್ಮೆ. ದೃಷ್ಟಿಯಂತೆ ಸೃಷ್ಟಿ ಎಂಬ ಮಾತಿನಂತೆ ಪರಿಸ್ಥಿತಿಯನ್ನು ನಿರಾಶಾದಾಯಕ ಅಡಚಣೆಯಾಗಿ ನೋಡುವ ಬದಲು ಸಾವಧಾನವಾಗಿ ಪ್ರತಿಕ್ರಿಯಿಸಲು ಮತ್ತು ಹೊಸದನ್ನು ಕಲಿಯಲು ಅವಕಾಶವಾಗಿ ನೋಡೋಣ. ತಾಳ್ಮೆಯಿಂದಿರುವುದು ರಾತ್ರೋರಾತ್ರಿ ಸಿದ್ಧಿಸುವುದಿಲ್ಲ. ಎಲ್ಲ ಸಮಸ್ಯೆಗಳ ಪರಿಹಾರ ಒಂದೇ ಅದೇ ತಾಳ್ಮೆ. ತಾಳ್ಮೆಗೆ ಬೇಕಾಗಿರುವ ಎಲ್ಲ ತುಣುಕುಗಳನ್ನು ಪ್ರಕೃತಿ ನಮಗೆ ನೀಡಿದೆ. ಒಟ್ಟಿಗೆ ಸೇರಿಸಲು ನಮಗೆ ಬಿಟ್ಟಿದೆ. ‘ತಾಳ್ಮೆಯು ಬುದ್ಧಿವಂತಿಕೆಯ ಒಡನಾಡಿಯಾಗಿದೆ.’ ಹಾಗಾದರೆ ತಡವೇಕೆ ನಾವು ತಾಳ್ಮೆಯ ಒಡನಾಡಿಯಾಗಿ ಬುದ್ಧಿವಂತರಾಗೋಣ ಅಲ್ಲವೇ?

ಜಯಶ್ರೀ.ಜೆ.ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ ಮೊ: ೯೪೪೯೨೩೪೧೪೨