ಬಿಜೆಪಿಯ ಕೆಲವು ಗದ್ಧಾರರಿಂದಲೇ ನನಗೆ ಸೋಲುಂಟಾಗಿದೆ: ಈಶ್ವರ್ ಸಿಂಗ್ ಠಾಕೂರ್

ಬೀದರ್, ಮೆ 14: ಬಿಜೆಪಿಯ ಕೆಲವು ಗದ್ದಾರರಿಂದಲೇ ತಮಗೆ ಸೋಲುಂಟಾಗಿದೆ ಎಂದು ಬಿಜೆಪಿ ಪಕ್ಷದ ಬೀದರ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಈಶ್ವರಸಿಂಗ್ ಠಾಕೂರ್ ಅವರು ಆರೋಪಿಸಿದರು.

ಅವರು ಇಂದು  ಬೆಳಿಗ್ಗೆ ಬೀದರ ನಗರದಲ್ಲಿ ಕರೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದರು.

ತಮ್ಮ ವಿಶ್ವಾಸಕ್ಕೆ ಮತ್ತು ಪಕ್ಷಕ್ಕೆ ದ್ರೋಹ ಬಗೆದು ಮೋಸ ಮಾಡಿರುವ ಬಿಜೆಪಿಯ ಡಿಕೆ ಸಿದ್ರಾಮ್ ಹಾಗೂ ಇತರರು ತಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ. ಮತ್ತು ಅನೇಕ ವಾಮ ಮಾರ್ಗಗಳನ್ನು ಅನುಸರಿಸಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ. ಅಂತಹ ಮೋಸಗಾರರ ಪಟ್ಟಿ ತಯ್ಯಾರಿಸಿದ್ದು ಪಕ್ಷದ ವರಿಷ್ಠರಿಗೆ ಕಳಿಸಲಿದ್ದು, ಅವರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಮನವಿ ಮಾಡಿದ್ದೇನೆ ಅಲ್ಲದೇ ಆ ಪಟ್ಟಿ ಶೀಘ್ರವೇ ಬಿಡುಗಡೆ ಮಾಡುವೆ ಎಂದು ತಿಳಿಸಿದರು.

ಚುನಾವಣೆಯಲ್ಲಿ ಈಶ್ವರ್ ಸಿಂಗ್ ಠಾಕೂರ್ ಅವರು ಸೈಲೆಂಟ್ ಆಗಿದ್ದಾರೆ. ಮನೆ ಹೊರಗೆ ಬರುತ್ತಿಲ್ಲ ಎಂಬ ಇತ್ಯಾದಿ ಅಪ ಪ್ರಚಾರ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಮಿಥ್ಯ ಹೇಳಿಕೆ ನೀಡಿ ನೀಚತನದ ರಾಜಕಾರಣ ಮಾಡಿರುತ್ತಾರೆ ಎಂದು ಅವರು ಆರೋಪಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಈ ಹಿಂದೆ ಎರಡು ಸಲ ಪಕ್ಷದ ಟಿಕೇಟ್ ಪಡೆದು ಸ್ಪರ್ದಿಸಿ ಸೋಲು ಅನುಭವಿಸಿದ್ದುಂಟು, ಅವರು ಪಕ್ಷಾಂತರಗೊಂಡು ಮೋಸಗೈದಿರುವರು. ಎಂದ ಅವರು ಬೀದರ ವಿಧಾನಸಭಾ ಕ್ಷೇತ್ರದ ಜನತೆ ತಮಗೆ ಮತ ನೀಡಿ ತಮ್ಮ ಜೊತೆ ಇದ್ದೇವೆ ಎಂದು ಸಾಬಿತು ಪಡಿಸಿದ್ದಾರೆ. ನನಗೆ ಮತದಾನ ಮಾಡಿರುವ ಸುಮಾರು 18 ಸಾವಿರ ಮಹಾ ಜನತೆಗೆ ಚಿರರುಣಿಯಾಗಿರುವೆ.

ಈ ಕ್ಷಣದಿಂದ ಮುಂಬರುವ ಚುನಾವಣೆವರೆಗೆ ಸರ್ವ ಜನಾಂಗದ ಸುಖ ದುಖ:ಗಳಲ್ಲಿ ಭಾಗಿಯಾಗಿ ಜನರ ಆಶೋತ್ತರಗಳಿಗೆ ಸ್ಪಂದಿಸುವೆ ಅವರ ಪರವಾಗಿ ದಿನದ 24 ತಾಸುಗಳ ಕಾಲ ತಮ್ಮ ಮೊಬೈಲ್ ಚಾಲು ಇಡುವೆ ಆದರೇ ಈಗಾಗಲೆ ಗೆದ್ದ ಅಭ್ಯರ್ಥಿ ಮತ್ತು ಸೋತ ಅಭ್ಯರ್ಥಿ ತಮ್ಮ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡಿರುತ್ತಾರೆ. ಹಾಲಿ ಮಂತ್ರಿ ಭಗವಂತ ಖೂಬಾ ಅವರು ತಮ್ಮ ಪರವಾಗಿ ಕೆಲಸ ಮಾಡಲಿಲ್ಲ ಎಂದ ಅವರು ಮುಂಬರುವ ದಿನಗಳಲ್ಲಿ ತಾವು ಬೀದರ ಲೋಕ ಸಭಾ ಕ್ಷೇತ್ರಕ್ಕೆ ಟಿಕೇಟ್ ಕೆಳಲಿದ್ದೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಶೋಕ ಪಾಟೀಲ್ ಅಲಿಯಾಬಾದ್, ವಿಶ್ವನಾಥ ಉಪ್ಪೆ, ಶಿವರಾಜಸಿಂಗ್ ಠಾಕೂರ್, ಉಮೇಶ ಕಟ್ಮೆ, ಮಹೇಶ್ವರ್ ಸ್ವಾಮಿ ಅವರುಗಳು ಉಪಸ್ಥಿತರಿದ್ದರು.