ದೇವನಹಳ್ಳಿ ಪದವಿ ಕಾಲೇಜಿನ ಶ್ರೇಯೋಭಿವೃದ್ಧಿಗಾಗಿ ಕ್ರಮ:ಸಚಿವ ಕೆ.ಹೆಚ್ ಮುನಿಯಪ್ಪ

ವಿಜಯ ದರ್ಪಣ ನ್ಯೂಸ್…

ದೇವನಹಳ್ಳಿ ಪದವಿ ಕಾಲೇಜಿನ ಶ್ರೇಯೋಭಿವೃದ್ಧಿಗಾಗಿ ಕ್ರಮ:ಸಚಿವ ಕೆ.ಹೆಚ್ ಮುನಿಯಪ್ಪ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ನವೆಂಬರ್ 15:

ಒಂದು ತಿಂಗಳಲ್ಲಿ ದೇವನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗೇಟ್ ಇಂದ ಕಾಲೇಜಿನವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ ಹಾಗೂ ಕಾಲೇಜು ಮುಂಭಾಗ ಬಸ್ ನಿಲ್ದಾಣ ನಿರ್ಮಾಣಕ್ಕೆ ಆದ್ಯತೆ ಮೇರೆಗೆ ಶೀಘ್ರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು .

2025-26 ನೇ ಶೈಕ್ಷಣಿಕ ಸಾಲಿನ ಎನ್.ಎಸ್.ಎಸ್, ಎನ್.ಸಿ.ಸಿ, ಯುವ ರೆಡ್ ಕ್ರಾಸ್ ಹಾಗೂ ಸೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಸಮಾರಂಭ ಮತ್ತು ಕಾಲೇಜಿನ ನೂತನ ಆಡಳಿತ ಕಟ್ಟಡ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಮಕ್ಕಳು ಮೊದಲು ಶಿಕ್ಷಕರ ಮಾತನ್ನು ಆಲಿಸಿ, ಅದನ್ನು ಮನದಟ್ಟು ಮಾಡಿಕೊಳ್ಳುವುದಕ್ಕೆ ಪ್ರಯತ್ನ ಮಾಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ. ತಂದೆ ತಾಯಿ ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಸಾಕಾರಗೊಳಿಸಲು ಪ್ರಯತ್ನ ಮಾಡಬೇಕು.

ಕಾಲೇಜಿನ ಸಭಾಂಗಣ ನವೀಕರಣ ಮತ್ತು ಕಾಲೇಜು ಕ್ರೀಡಾಂಗಣ ಅಭಿವೃದ್ಧಿ, ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಲ್ಯಾಬ್ ಮತ್ತು 08 ಕೊಠಡಿ ವ್ಯವಸ್ಥೆ, ಶೌಚಾಲಯ ನಿರ್ಮಿಸಿ ಕೊಡಲು ಪ್ರಾಂಶುಪಾಲರು ಮನವಿ ಸಲ್ಲಿಸಿದ್ದು ಅದಕ್ಕೂ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕಾಲೇಜಿನಲ್ಲಿ ಒಳ್ಳೆಯ ಉಪನ್ಯಾಸಕರಿದ್ದು ನೀವು ಕಂಡಿರುವ ಕನಸುಗಳನ್ನು ನನಸು ಮಾಡಲು ಉಪನ್ಯಾಸಕರ ಬಳಿ ಕೇಳಿ ತಿಳಿದುಕೊಳ್ಳಿ. ಈ ಕಾಲೇಜಿನ ಒಬ್ಬ ವಿದ್ಯಾರ್ಥಿ ದೆಹಲಿಯಲ್ಲಿ ಐಐಟಿ ಸೀಟನ್ನು ಪಡೆದಿರುವುದು ನಮಗೆ ಖುಷಿಯ ವಿಚಾರ. ಹೀಗೆ ನಮ್ಮ ಜಿಲ್ಲೆಯ ಮಕ್ಕಳು ಉನ್ನತ ಮಟ್ಟದಲ್ಲಿ ಬೆಳೆಯಬೇಕು ಎಂದರು.

ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗದೆ, ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ಜಗತ್ತಿನ ಬಲಿಷ್ಠ ರಾಷ್ಟ್ರಗಳೊಂದಿಗೆ ಸ್ಪರ್ಧೆ ಮಾಡಲು ಅಂದಿನ ಪ್ರಧಾನಿ ನೆಹರು ಅವರು ಹಲವಾರು ವಿಶ್ವವಿದ್ಯಾಲಯಗಳನ್ನು, ಹೊಸ ಕೋರ್ಸ್ ಗಳನ್ನು ಪರಿಚಯಿಸಿದರು ಎಂದು ಸಚಿವರು ಹೇಳಿದರು.

ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಮಾತನಾಡಿ, ವಿದ್ಯಾರ್ಥಿಗಳು ಕಡಿಮೆ ಮಾತನಾಡಬೇಕು ಹೆಚ್ಚು ಓದಬೇಕು. ಶಿಕ್ಷಣದ ಜೊತೆಗೆ ಶಿಸ್ತನ್ನು ನಿಮ್ಮಲ್ಲಿ ಅಳವಡಿಸಿಕೊಂಡರೆ, ಆಲಿಸುವ ಲಕ್ಷಣ ತಾನಾಗಿಯೇ ಉಟ್ಟುತ್ತದೆ. ನಿಮ್ಮ ಕಾಲೇಜಿನ ವಾತಾವರಣ ಹಾಗೂ ಆವರಣ ತುಂಬಾ ಚೆನ್ನಾಗಿದೆ, ವಿದ್ಯಾಭ್ಯಾಸದ ಜೊತೆಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಪ್ರಯತ್ನ ಮಾಡಿ. ಹೆಚ್ಚಾಗಿ ಸುದ್ದಿ ಪತ್ರಿಕೆಗಳು ಹಾಗೂ ಪುಸ್ತಕಗಳನ್ನು ಓದಿ. ನಿಮಲ್ಲಿ ಯಾರಿಗಾದರೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಆಸಕ್ತಿ ಇದ್ದರೆ ನಮ್ಮನ್ನು ಕೇಳಿ ಸದಾ ನಾನು ನಿಮಗೆ ಸಹಾಯ ಮಾಡಲು ಸಿದ್ದನಿದ್ದೇನೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಕ್ರೀಡೆಯಲ್ಲಿ ಜಯಗಳಿಸಿದವರಿಗೆ, ಹಾಸನಾಂಬ ಉತ್ಸವದಲ್ಲಿ ಭಾಗವಹಿಸಿದ ಸೌಟ್ಸ್ ಮತ್ತು ಗೈಡ್ಸ್ ನ ರೇಂಜರ್ ಮತ್ತು ರೋವರ್ಸ್ ಗಳಿಗೆ, ಯೂನಿವರ್ಸಿಟಿ ಹಂತದಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಕುಸ್ತಿಯಲ್ಲಿ ಆಯ್ಕೆಯಾದವರಿಗೆ, ವಚನ ಕಮಟದಲ್ಲಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದವರಿಗೆ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ  ದೇವನಹಳ್ಳಿ ಪುರಸಭೆ ಅಧ್ಯಕ್ಷ ಮುನಿಕೃಷ್ಣ, ಉಪಾಧ್ಯಕ್ಷ ಜಿ ರವೀಂದ್ರ, ,ತಹಶೀಲ್ದಾರ್ ಅನಿಲ್ ಎಂ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಡಿ ಮಂಜಯ್ಯ, ಕಸಾಪ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಮುಖಂಡರಾದ ಪ್ರಸನ್ನ ಕುಮಾರ್, ವೆಂಕಟೇಶ್, ಕಾಲೇಜು ಉಪನ್ಯಾಸಕರುಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.