ಅಯ್ಯೋ, ಯಾವುದೀ ಪ್ರವಾಹವು, ಯಾವುದೀ ಮೇಘ ಸ್ಫೋಟಗಳು…..
ವಿಜಯ ದರ್ಪಣ ನ್ಯೂಸ್…
ಅಯ್ಯೋ, ಯಾವುದೀ ಪ್ರವಾಹವು,
ಯಾವುದೀ ಮೇಘ ಸ್ಫೋಟಗಳು…..
ಇತ್ತೀಚೆಗೆ ಪ್ರತಿನಿತ್ಯ ದೇಶದ ಒಂದಲ್ಲಾ ಒಂದು ಭಾಗದಲ್ಲಿ ಈ ರೀತಿಯ ಸುದ್ದಿಗಳನ್ನು ಕೇಳುತ್ತಲೇ ಇದ್ದೇವೆ.
ಪ್ರವಾಹ, ಪ್ರಳಯ ಅಥವಾ ಆ ರೀತಿಯ ಪ್ರಾಕೃತಿಕ ವಿಕೋಪಗಳನ್ನು ತಡೆಯುವುದು ಸಾಧ್ಯವೇ ?
ಇಲ್ಲ, ಬಹುಶಃ ವಿಶ್ವದ ಯಾವುದೇ ದೇಶ ಮತ್ತು ಮಾನವ ಕುಲ ಇನ್ನೂವರೆಗೆ ಅದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಜಪಾನ್, ಅಮೆರಿಕ, ಆಸ್ಟ್ರೇಲಿಯಾ ಮುಂತಾದ ಮುಂದುವರಿದ ದೇಶಗಳೇ ಅದನ್ನು ಮಾಡಲು ಸಾಧ್ಯವಾಗಿಲ್ಲ. ಭೂಕಂಪ, ಸುನಾಮಿ, ಚಂಡಮಾರುತ, ಮೇಘ ಸ್ಪೋಟ, ಕಾಳ್ಗಿಚ್ಚು ಎಲ್ಲವೂ ಯಾವುದೇ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಅದು ತನ್ನ ಕೆಲಸ ಪೂರೈಸಿದ ನಂತರ ತಾನೇ ಕಡಿಮೆಯಾಗುತ್ತದೆ.
ಭಾರತದ ದೇಶದಲ್ಲಿ ಪ್ರಕೃತಿಯ ಜೊತೆ ಮನುಷ್ಯ ಮತ್ತು ಸರ್ಕಾರಗಳ ಆಸೆಬುರುಕತನ ಸೇರಿ ಇನ್ನೂ ಹೆಚ್ಚುವರಿಯಾಗಿ ಕೆಲವು ಪ್ರಾಕೃತಿಕ ವಿಕೋಪಗಳು ಸೇರುತ್ತವೆ. ಅದು ರಣಭೀಕರ. ರಾತ್ರಿ ಕಳೆದು ಬೆಳಗಾಗುವುದರೊಳಗೆ ಕೆಲವು ಸ್ಥಳಗಳು ಭೂಪಟದಿಂದಲೇ ನಾಶವಾಗಿಬಿಡುತ್ತದೆ. ಜನರ ಬದುಕು ಗಂಜಿ ಕೇಂದ್ರಕ್ಕೆ ಅಥವಾ ಅನಾಥ ಪರಿಸ್ಥಿತಿಗೆ ತಂದು ನಿಲ್ಲಿಸಿ ಬಿಡುತ್ತದೆ.
ಹಾಗಾದರೆ ಇದಕ್ಕೆ ಪರಿಹಾರವೇನು ?
ದೈವೇಚ್ಚೆ, ವಿಧಿಯಾಟ, ಪ್ರಕೃತಿಯ ಮುನಿಸು, ಏನೂ ಮಾಡಲಾಗುವುದಿಲ್ಲ, ದುರಾದೃಷ್ಟ, ಬಂದದ್ದು ಅನುಭವಿಸಬೇಕು ಎಂದು ಸಮಾಧಾನ ಮಾಡಿಕೊಂಡು ಸುಮ್ಮನಿದ್ದು ಬಿಡುವುದೇ…..
ಇಲ್ಲ, ಪ್ರಾಕೃತಿಕ ವಿಕೋಪ ತಡೆಯುವುದು, ನಿಯಂತ್ರಿಸುವುದು ನಮ್ಮ ದೇಶದಲ್ಲಿ ತುಂಬಾ ಕಷ್ಟ ನಿಜ.
ಆದರೆ ಕೆಲವು ಕಡೆ ಸ್ವಲ್ಪ ಮಟ್ಟಿನ ಮುನ್ಸೂಚನೆ ಮತ್ತು ಪರಿಹಾರ ಕ್ರಮಗಳನ್ನು ದಕ್ಷವಾಗಿ ನಿರ್ವಹಿಸಿದರೆ ಹಾನಿಯ ಪ್ರಮಾಣವನ್ನು ಸಾಕಷ್ಟು ಕಡಿಮೆ ಮಾಡಬಹುದು.
ಜಗತ್ತಿನಲ್ಲಿ ಜಪಾನ್ ದೇಶವನ್ನು ಇದಕ್ಕೆ ಒಂದು ಆದರ್ಶವಾಗಿ ಪರಿಗಣಿಸಬಹುದು. ಒಂದು ಮಾಹಿತಿಯ ಪ್ರಕಾರ ಜಗತ್ತಿನಲ್ಲಿ ಅಣುಬಾಂಬಿನಿಂದ ( ಇದು ಪ್ರಾಕೃತಿಕ ವಿಕೋಪವಲ್ಲ ) ಅತಿಹೆಚ್ಚು ಹಾನಿಗೆ ಒಳಗಾದ ದೇಶ ಜಪಾನ್. ಹಾಗೆಯೇ ಸುನಾಮಿ, ಭೂಕಂಪಗಳು ಸಹ ಜಗತ್ತಿನಲ್ಲಿ ಅತಿಹೆಚ್ಚು ಸಂಭವಿಸಿ ಹಾನಿ ಮಾಡುವುದು ಜಪಾನ್ ದೇಶದಲ್ಲಿ. ಹೀಗಿದ್ದರೂ ಜಪಾನ್ ಅದನ್ನು ಮೆಟ್ಟಿ ನಿಲ್ಲುತ್ತಿದೆ. ಹಾನಿಯನ್ನು ತುಂಬಾ ಪರಿಣಾಮಕಾರಿಯಾಗಿ ತಡೆಗಟ್ಟುತ್ತಿದೆ.
ಹೌದು, ಭಾರತವನ್ನು ಜಪಾನ್ ಗೆ ಹೋಲಿಸಲಾಗದು. ಅದರ ಸಾಮರ್ಥ್ಯ ಬೇರೆ. ಇಲ್ಲಿ ಕೆಲವು ಮಿತಿಗಳಿವೆ. ಆದರೆ ದೃಶ್ಯ ಮಾಧ್ಯಮಗಳಲ್ಲಿ ನೋಡುವ ಜನರ ಆ ಗೋಳಾಟವನ್ನು ಕಡಿಮೆ ಮಾಡುವ ಶಕ್ತಿ ಖಂಡಿತ ನಮ್ಮ ಆಡಳಿತ ಯಂತ್ರಕ್ಕೆ ಇದೆ.
ಮೊದಲೇ ಬಡತನದ ಕುಟುಂಬಗಳು, ಈಗ ನೆಲೆಯೇ ಇಲ್ಲ ಎಂಬಂತಾದರೆ ಗತಿ ಏನು ? ನೆರೆಹೊರೆಯವರು, ಹಿತೈಷಿಗಳ, ದಾನಿಗಳ ಸಹಾಯ ಕೇವಲ ಕೆಲವು ದಿನಗಳ ಸಣ್ಣ ಪ್ರಮಾಣಕ್ಕೆ ಮಾತ್ರ ಸೀಮಿತ. ಸರ್ಕಾರದ ಜವಾಬ್ದಾರಿಯೇ ಅಂತಿಮ.
ಆದರೆ……….
” ಹೊಲಿ ಹೋಯ್ತು… ಮನಿ ಹೋಯ್ತು… ಆಕಳು ವಾದ್ವು, ಪಾತ್ರೆ ಪಗಡೆ ವಾದ್ವು…. ಆಧಾರ್ ಕಾರ್ಡ್, ರೇಷನ್ ಕಾರ್ಡ್, ಓಟಿನ ಕಾರ್ಡ್ ವಾದ್ವು……ನಮ್ ಬದುಕೇ ಹೋಂಟೋತ್ರಿ…..
ನಮ್ನ ಯಾರು ಕೇಳ್ವಂಗಿಲ್ರಿ,
ಸಾಯೋದೆ ಗತಿರ್ರೀ ನಮ್ಗೆ………”
ಪ್ರವಾಹ ಪೀಡಿತ ಜನಗಳ ದಿನನಿತ್ಯದ ಗೋಳಾಟ, ನರಳಾಟ, ಪರದಾಟ…….
ಹೇಗೆ ಸಮಾಧಾನ ಮಾಡುವುದು ಇವರನ್ನು….!!!!!
ಅವರ ಜೊತೆ ಸೇರಿ ನಾವು ಅಳುವುದೇ……
ಮಾಧ್ಯಮಗಳು ಮಾಡುವಂತೆ ಅವರ ನೆನಪುಗಳನ್ನು ಮತ್ತೆ ಮತ್ತೆ ಕೆದಕಿ, ಅಳಿಸಿ ದುಃಖದ ಹಿನ್ನೆಲೆ ಸಂಗೀತ ನೀಡಿ ಮತ್ತಷ್ಟು ನೋವು ನೀಡುವುದೇ…..
ರಾಜಕಾರಣಿಗಳು, ಅಧಿಕಾರಿಗಳು ಮಾಡುವಂತೆ ನೆಪಮಾತ್ರಕ್ಕೆ ಅವರ ಕಷ್ಟ ಕೇಳಿ ಹುಸಿ ಭರವಸೆ ಕೊಟ್ಟು ಕೈ ತೊಳೆದುಕೊಳ್ಳುವುದೇ….
ಸ್ವಯಂ ಸೇವಕರಂತೆ ಒಂದಷ್ಟು ಕೈಲಾಗುವ ಸಹಾಯ ಮಾಡಿ ವಾಪಸ್ಸಾಗುವುದೇ……
ಒಂದಷ್ಟು ಪರಿಹಾರ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿ ಕೆಲವರಿಗೆ ತಲುಪಿಸಿ ಬರುವುದೆ……
ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಾ ಗೊಣಗಾಡುವುದೇ…….
ದೇಶದ ಕೆಲವು ರಾಜ್ಯಗಳಲ್ಲಿ ಈಗ ಆಗಿರುವ ಅನಾಹುತವನ್ನು ಒಂದು ಹಂತದವರೆಗೆ ಅಂದರೆ ತೊಂದರೆ ಸಿಲುಕಿರುವ ಜನರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುವಷ್ಟು ಸಂಪನ್ಮೂಲಗಳು ಖಂಡಿತ ಸರ್ಕಾರಗಳ ಬಳಿ ಇವೆ ಮತ್ತು ಜನರು ದಾನ ರೂಪದಲ್ಲಿ ಕೊಡುವಷ್ಟು ಒಳ್ಳೆಯ ಮನಸ್ಥಿತಿ ಹೊಂದಿದ್ದಾರೆ.
ಇಷ್ಟು ಅನುಕೂಲ ಇದ್ದರೂ ನಿಜವಾದ ಸಂತ್ರಸ್ತರಿಗೆ ಇನ್ನೂ ಅದರ ಪ್ರಯೋಜನ ದೊರೆಯುತ್ತಿಲ್ಲ. ಇದೇ ನಿಜವಾದ ಸಮಸ್ಯೆ. ಅದನ್ನು ಅರ್ಥಮಾಡಿಕೊಂಡು ಅದಕ್ಕೆ ಪರಿಹಾರ ಒದಗಿಸಬೇಕಾದ ಅಗತ್ಯವಿದೆ.
ಸರ್ಕಾರ ನಡೆಸಲು ನೀತಿ ನಿಯಮಗಳು ಅತ್ಯಂತ ಅವಶ್ಯ. ಆದರೆ ಕೆಲವೊಮ್ಮೆ ಅದೇ ನೀತಿ ನಿಯಮಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುವುದು ಇದೆ.
ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದ ಜನರ ಬಳಿ ದಾಖಲೆಗಳು ಇರುವುದಿಲ್ಲ. ದಾಖಲೆಗಳಿಲ್ಲದೆ ಪರಿಹಾರ ಸಿಗುವುದಿಲ್ಲ. ಇದರ ಬಗ್ಗೆ ಸರಿಯಾದ ತೀರ್ಮಾನ ಕೈಗೊಳ್ಳಲು ಅಧಿಕಾರಿಗಳಿಗೆ ಸ್ವಾತಂತ್ರ್ಯ ನೀಡಿದರೆ ದುರುಪಯೋಗವಾಗುತ್ತದೆ. ಕೊಡದಿದ್ದರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಇದು ಮಧ್ಯವರ್ತಿಗಳ ಲಾಭಕ್ಕೆ ಕಾರಣವಾಗುತ್ತದೆ.
ಇಡೀ ವ್ಯವಸ್ಥೆ ಕೆಟ್ಟು, ಪ್ರತಿಯೊಬ್ಬರಲ್ಲೂ ತಮ್ಮ ಹಿತಾಸಕ್ತಿಯ ಸ್ವಾರ್ಥ ಹೆಚ್ಚಾಗಿ, ಹಣದ ಮೋಹ ಎಲ್ಲರನ್ನೂ ಆಕ್ರಮಿಸಿ, ಮನಸ್ಸುಗಳಲ್ಲಿ ಅನುಮಾನದ ಬೀಜ ಮೊಳೆತಿರುವಾಗ ಯಾವ ಪರಿಹಾರಗಳು, ಕಾನೂನುಗಳು, ಸಲಹೆಗಳು ಉತ್ತಮ ಪರಿಣಾಮ ಬೀರಲು ಸಾಧ್ಯವಿಲ್ಲ.
ಪ್ರತಿಯೊಂದರಲ್ಲೂ ಭ್ರಷ್ಟಾಚಾರ, ಅಕ್ರಮಗಳು ನಡೆಯುತ್ತಲೇ ಇರುತ್ತದೆ. ಅದನ್ನು ಪತ್ತೆ ಹಚ್ಚುವ, ವರದಿ ಮಾಡುವ, ತನಿಖೆ ಮಾಡುವ, ಕ್ರಮ ಕೈಗೊಳ್ಳುವ ವಿಷಯಗಳು ಹವ್ಯಾಸವಾಗಿ ಗೀಳಿನಂತೆ ಇವು ಮಾತ್ರ ಪ್ರಾಮುಖ್ಯತೆ ಪಡೆಯುತ್ತವೆ. ಜನರಿಗೆ ಪರಿಹಾರ ಮಾತ್ರ ಸರಿಯಾಗಿ ಸಿಗುವುದೇ ಇಲ್ಲ.
ಕೊನೆಗೆ ನಮ್ಮ ವ್ಯವಸ್ಥೆಯೇ ಹೀಗೆ ಏನು ಮಾಡುವುದು ಎಂಬ ಸಿನಿಕತನದೊಂದಿಗೆ ಎಲ್ಲವೂ ಹಾಗೆಯೇ ಮುಕ್ತಾಯವಾಗುತ್ತದೆ.
ಸರ್ಕಾರಗಳಾಗಲಿ, ಹೋರಾಟಗಾರರಾಗಲಿ, ಸ್ವಯಂ ಸೇವಕರಾಗಲಿ, ದಾನಿಗಳಾಗಲಿ, ಮಠಗಳಾಗಲಿ ಅಥವಾ ಬೇರೆ ಯಾವುದೇ ಸಾಮಾಜಿಕ ಕಳಕಳಿಯ ಜಾಗೃತ ಸಂಸ್ಥೆಗಳಾಗಲಿ ನಿಜವಾದ ಕೆಲಸ ಮಾಡಬೇಕಾಗಿರುವುದು ವ್ಯವಸ್ಥೆಯ ಶುದ್ದೀಕರಣ, ಜನರ ಮನಸ್ಸುಗಳ ವಿಶಾಲೀಕರಣ, ಮಾನವೀಯ ನಡವಳಿಕೆಯ ಸರಿಯಾದ ವರ್ತನೀಕರಣ.
ಇದು ಆಗದೆ ನಾವು ಯಾವುದೇ ಸಂಕಷ್ಟಗಳನ್ನು ಎದುರಿಸಿ ನಿಲ್ಲುವುದು ಅಸಾಧ್ಯ. ಕೇವಲ ಆ ಕ್ಷಣದ ಒಂದು ಸಣ್ಣ ಪ್ರತಿಕ್ರಿಯಾತ್ಮಕ ಕ್ರಿಯೆಗಳನ್ನು ಮಾತ್ರ ಮಾಡಬಹುದು. ಶಾಶ್ವತ ಪರಿಹಾರ ಗಗನ ಕುಸುಮವೇ ಆಗಿದೆ.
ಆದ್ದರಿಂದ ಎಲ್ಲರೂ ಕೇವಲ ಜನರ ಸಂಕಷ್ಟದ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುವ ಜೊತೆಗೆ ನಮ್ಮ ನಮ್ಮ ಮನಸ್ಸುಗಳ ಆತ್ಮಾವಲೋಕನ ಮಾಡಿಕೊಂಡು ಸಂತ್ರಸ್ತರಿಗೆ ನಿಜವಾದ ಶಾಶ್ವತ ಪರಿಹಾರ ದೊರೆಯುವಂತಾಗಿ ಅವರಿಗೆ ಈ ನೆಲದ, ಈ ಬದುಕಿನ ಬಗ್ಗೆ ಗೌರವ, ಅಭಿಮಾನ, ಭರವಸೆ ಮೂಡುವಂತಾಗಲಿ.
ಒಂದಷ್ಟು ಹಣ, ವಸ್ತುಗಳು, ದವಸ ಧಾನ್ಯಗಳು ಕೇವಲ ತಾತ್ಕಾಲಿಕ ಪರಿಹಾರ ಎಂಬುದನ್ನು ಮರೆಯದಿರೋಣ……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451……
9844013068……