ಸರ್ಕಾರಿ ಆಸ್ಪತ್ರೆಗೆ ರೋಗಿಗಳು ಬರುತ್ತಿಲ್ಲ ಎಂದರೆ ನೀವು ಸರಿಯಾಗಿ ಔಷಧೋಪಚಾರ ಮಾಡುತ್ತಿಲ್ಲ ಎಂದರ್ಥ: ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ

ವಿಜಯ ದರ್ಪಣ ನ್ಯೂಸ್….

ಸರ್ಕಾರಿ ಆಸ್ಪತ್ರೆಗೆ ರೋಗಿಗಳು ಬರುತ್ತಿಲ್ಲ ಎಂದರೆ ನೀವು ಸರಿಯಾಗಿ ಔಷಧೋಪಚಾರ ಮಾಡುತ್ತಿಲ್ಲ ಎಂದರ್ಥ: ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ

ಶಿಡ್ಲಘಟ್ಟ : ಇಡೀ ರಾಜ್ಯದಲ್ಲಿ ಸುತ್ತಾಡಿದ್ದೇನೆ ಇಷ್ಟು ಕಡಿಮೆ ರೋಗಿಗಳು ದಾಖಲಾಗಿರುವ ಆಸ್ಪತ್ರೆ ಇದು, ಸಾಮಾನ್ಯವಾಗಿ ಬಡವರು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ ,ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ ಎಂದರೆ ನೀವು ಸರಿಯಾಗಿ ಔಷಧೋಪಚಾರ ಮಾಡುತ್ತಿಲ್ಲ ಎಂದರ್ಥ ಎಂದು
ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಅಸಮಾಧಾನ ಹೊರ ಹಾಕಿದರು.

ರಾಜ್ಯ ಆಹಾರ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರುಗಳ ತಂಡ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆ, ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿತು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಸಕಾಲಕ್ಕೆ ಚಿಕಿತ್ಸೆ ನೀಡದಿರುವುದು, ಸಣ್ಣ ಪುಟ್ಟ ಕಾರಣಕ್ಕೂ ಜಿಲ್ಲಾ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸುತ್ತಿರುವುದು ಕಂಡು ಬಂತು 100 ಹಾಸಿಗೆಗಳ ಆಸ್ಪತ್ರೆಯಾಗಿದ್ದರೂ 42 ರೋಗಿಗಳು ಮಾತ್ರ ದಾಖಲಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಅಧ್ಯಕ್ಷರು, ನಿಮ್ಮಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ರೋಗಿಗಳ ಜತೆ ಸಿಬ್ಬಂದಿ ಸ್ಪಂದಿಸುತ್ತಿಲ್ಲ ನಿಮ್ಮ ಮೇಲೆ ನಂಬಿಕೆ ಇಲ್ಲದ ಕಾರಣ ಈ ಆಸ್ಪತ್ರೆಗೆ ರೋಗಿಗಳೇ ಬರುತ್ತಿಲ್ಲ ಎಂದು ಕಿಡಿಕಾರಿದರು.

ತಾಲ್ಲೂಕು ಕೇಂದ್ರದ ಆಸ್ಪತ್ರೆಯಲ್ಲಿ 1 ತಿಂಗಳ ಅವಧಿಯಲ್ಲಿ 17 ಹೆರಿಗೆ ದಾಖಲಾಗಿವೆ ಎಂದರೆ ಏನು ಅರ್ಥ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಹಾಗು ಆಡಳಿತ ವೈದ್ಯಾಧಿಕಾರಿಗಳನ್ನು ಪ್ರಶ್ನಿಸಿದರು.

ಆರೋಗ್ಯ ರಕ್ಷಾ ಅನುದಾನದಲ್ಲಿ ಆಸ್ಪತ್ರೆಯಲ್ಲಿ ಅಗತ್ಯವಿರುವ ಸಣ್ಣ ಪುಟ್ಟ ಪರಿಕರಗಳನ್ನು ಕೂಡ ಖರೀದಿಸದೆ ಸುಮ್ಮನಿದ್ದರೆ ಹೇಗೆ?, ಸಂಬಳಕ್ಕೆ ಕೆಲಸ ಮಾಡಬೇಡಿ, ಸ್ವಲ್ಪ ಮಾನವೀಯತೆಯೂ ಇರಲಿ ಎಂದರು.

ಇದಕ್ಕೂ ಮೊದಲು ಆಶ್ರಯ ಬಡಾವಣೆಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಮಕ್ಕಳಿಗೆ ನೀಡುತ್ತಿರುವ ಪೌಷ್ಟಿಕ ಆಹಾರ ಇನ್ನಿತರ ಸವಲತ್ತುಗಳ ಮಾಹಿತಿ ಪಡೆದ ದಾಖಲೆ ಪರಿಶೀಲಿಸಿದರು , ಮಕ್ಕಳ ಪಾಲಕರು ಕರೆ ಮಾಡಿ ಮೊಟ್ಟೆ ಇನ್ನಿತರ ಆಹಾರ ಪದಾರ್ಥಗಳನ್ನು ಕೊಟ್ಟ ಬಗ್ಗೆ ವಿಚಾರಿಸಿದರು ಈ ವೇಳೆ ಕೆಲವರಿಗೆ ಕಡಿಮೆ ಮೊಟ್ಟೆ ವಿತರಿಸಿರುವುದು ಬೆಳಕಿಗೆ ಬಂತು.

ಅನುದಾನದ ಕೊರತೆಯಿಂದ ಗರ್ಭಿಣಿ ಬಾಣಂತಿಯರಿಗೆ ತಿಂಡಿ, ಊಟ ನೀಡುತ್ತಿಲ್ಲ ಎಂದು ಆಡಳಿತ ವೈದ್ಯಾಧಿಕಾರಿಗಳು ಹೇಳುತ್ತೀರಿ, ಆದರೆ, ಬಾಣಂತಿಯರು ಬೆಳಗ್ಗೆ ತಿಂಡಿ ಕೊಟ್ಟರು, ಮಧ್ಯಾಹ್ನ ಊಟ ಕೊಡುತ್ತಾರೆ ,ಬೆಳಿಗ್ಗೆ ಬ್ರೆಡ್, ಹಾಲು ಕೊಟ್ಟರು ಸಾರ್ ಎಂದು ಹೇಳುತ್ತಾರೆ, ನಾವು ಯಾರನ್ನು ನಂಬೋದು ಎಂದು ಅಧ್ಯಕ್ಷರು ಪ್ರಶ್ನಿಸಿದರು, ಆಸ್ಪತ್ರೆಯಲ್ಲಿ ದಾಖಲಾಗುವ ಬಾಣಂತಿ, ಗರ್ಭಿಣಿಯರಿಗೆ ತಿಂಡಿ ಊಟ ಕೊಡಲು ಅನುದಾನ ಇಲ್ಲ ಎಂದು ಸುಮ್ಮನೆ ಕೈ ಕಟ್ಟಿ ಕೂರಬೇಡಿ ಜನಪ್ರತಿನಿಧಿಗಳು, ಸಮಾಜ ಸೇವಕರು, ದಾನಿಗಳನ್ನು ಭೇಟಿ ಮಾಡಿ ಕೇಳಿ, ನೀವು ಕೇಳಿದರೆ ಇಲ್ಲ ಎಂದು ಯಾರೂ ಹೇಳಲ್ಲ ಬಡ ರೋಗಿಗಳಿಗೆ ತಿಂಡಿ ಊಟ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಹೇಳಿದರು.

ಕಿತ್ತಾಡಿ ಬೈದುಕೊಳ್ಳುವ ವೈದ್ಯರು :

ಕಾಫಿ ಟೀಗೆಂದು ಹೊರಗೆ ಹೋದರೆ ಗಂಟೆಗಟ್ಟಲೆ ಬರುವುದಿಲ್ಲವಂತೆ, ಜಾಸ್ತಿ ರೋಗಿಗಳು ಬಂದರೆ ನಾವೊಬ್ಬರೇನಾ ಇಲ್ಲಿ ಕೆಲಸ ಮಾಡುವ ಡಾಕ್ಟರ್ ಎಂದು ಕಿತ್ತಾಡಿಕೊಂಡು ರೋಗಿಗಳನ್ನು ತಪಾಸಣೆ ಮಾಡದೆ ಅಲ್ಲಿಂದ ಎದ್ದು ಹೋಗುತ್ತೀರಂತೆ ಹೌದಾ ಎಂದು ಅಧ್ಯಕ್ಷರು ಪ್ರಶ್ನಿಸಿದರು. ಈ ವೇಳೆ ಹಾಗೇನಿಲ್ಲ ಸಾರ್ ಎಂದು ವೈದ್ಯರು ಉತ್ತರಿಸಿದರು, ಸುಮ್ಮನೆ ಹೇಳಬೇಡಿ ನಮಗೆ ಸಾರ್ವಜನಿಕರು, ರೋಗಿಗಳು
ಲಿಖಿತವಾಗಿ ದೂರು ಕೊಟ್ಟಿದ್ದಾರೆ, ವೈದ್ಯರು ಮಾತನಾಡಿದ ಆಡಿಯೋ ಕೂಡ ಇದೆ ಎಂದು ಖಾರವಾಗಿ ವಾಗ್ದಾಳಿ ನಡೆಸಿದರು.

ಆಸ್ಪತ್ರೆಗೆ ಭೇಟಿ ಮೊದಲು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಪೌಷ್ಟಿಕ ಆಹಾರ, ಮೊಟ್ಟೆ ವಿತರಣೆ ಹಾಗೂ ದಾಖಲೆಗಳನ್ನು ಪರಿಶೀಲಿಸಿದರು. ಕೆಲವರಿಗೆ ಕಡಿಮೆ ಸಂಖ್ಯೆಯಲ್ಲಿ ಮೊಟ್ಟೆಗಳು ವಿತರಿಸಿರುವುದು ಬೆಳಕಿಗೆ ಬಂತು.
ಈ ಸಂದರ್ಭದಲ್ಲಿ ಆಹಾರ ಆಯೋಗದ ಸದಸ್ಯರಾದ ಲಿಂಗರಾಜು ಕೋಟೆ, ಮಾರುತಿ ದೊಡ್ಡ ಲಿಂಗಣ್ಣನವರ್, ಸುಮಂತ್ ರಾವ್,ವಿಜಯಲಕ್ಷ್ಮಿ,ರೋಹಿಣಿ ಪ್ರಿಯಾ, ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್‌ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾ‌ರ್ ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿ.ಡಿ.ವೆಂಕಟೇಶ್‌ರೆಡ್ಡಿ, ಆಹಾರ ಇಲಾಖೆಯ ಪ್ರಕಾಶ್‌ ಹಾಜರಿದ್ದರು.