ದಿಬ್ಬೂರಹಳ್ಳಿಯಲ್ಲಿ ಹೆಲ್ಮೆಟ್ ಬಳಕೆ ಕುರಿತು ಜನ ಜಾಗೃತಿ

ವಿಜಯ ದರ್ಪಣ ನ್ಯೂಸ್….

ದಿಬ್ಬೂರಹಳ್ಳಿಯಲ್ಲಿ ಹೆಲ್ಮೆಟ್ ಬಳಕೆ ಕುರಿತು ಜನ ಜಾಗೃತಿ

ಶಿಡ್ಲಘಟ್ಟ : ಪೊಲೀಸರು ದಂಡ ಹಾಕಿ ಕೇಸು ಹಾಕುತ್ತಾರೆ ಎಂದು ಭಯಪಟ್ಟು ಹೆಲ್ಮೆಟ್ ಧರಿಸುವ ಬದಲು ನಮ್ಮ ಪ್ರಾಣ ರಕ್ಷಣೆಗೆ ಹೆಲ್ಮೆಟ್ ಧರಿಸಬೇಕು ಹಾಗು ನಿಮ್ಮನ್ನು ನಂಬಿರುವ ನಿಮ್ಮ ಹೆತ್ತವರು ಅವಲಂಬಿತರ ಹಿತ ದೃಷ್ಟಿಯಿಂದ ಹೆಲ್ಮೆಟ್ ಧರಿಸಬೇಕು ಎಂದು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಎಸ್.ಐ ಶ್ಯಾಮಲಾ ತಿಳಿಸಿದರು.

ತಾಲ್ಲೂಕಿನ ದಿಬ್ಬೂರಹಳ್ಳಿಯಲ್ಲಿ ಹೆಲ್ಮೆಟ್ ಬಳಕೆ ಕುರಿತು ಜನ ಜಾಗೃತಿ ಮೂಡಿಸಿ ಅವರು ಮಾತನಾಡಿದರು.
18 ವರ್ಷಕ್ಕೆ ಮೇಲ್ಪಟ್ಟ ಬೈಕ್ ಚಲಾಯಿಸುವ ಎಲ್ಲರೂ ನಿಯಮದಂತೆ ವಾಹನ ಚಾಲನಾ ಪರವಾನಗಿ ಪಡೆದುಕೊಳ್ಳಬೇಕು, ಸಂಚಾರ ನಿಯಮಗಳನ್ನು ಸಂಪೂರ್ಣವಾಗಿ ತಿಳಿದುಕೊಂಡು ಪಾಲಿಸಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಬೈಕ್ ಓಡಿಸುವಾಗ ಮೊಬೈಲ್ ನಲ್ಲಿ ಮಾತನಾಡಿಕೊಂಡು ಹೋಗುವುದು ಸರ್ವೆ ಸಾಮಾನ್ಯವಾಗಿದೆ ,ಇದು ನಮಗೆ ನಾವೇ ಪ್ರಾಣಕ್ಕೆ ಸಂಚಕಾರ ತಂದುಕೊಂಡಂತೆ ಎಂದು ಆತಂಕ ವ್ಯಕ್ತಪಡಿಸಿದರು.

ಮದ್ಯಪಾನ ಮಾಡಿ ಬೈಕ್ ಓಡಿಸುವುದು, ನಿಯಮ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವುದು ಮಾಡದೆ ಎಲ್ಲರೂ ಸಂಚಾರಿ ನಿಯಮಗಳನ್ನು ಪಾಲಿಸಿ ತಾವು ಮತ್ತು ತಮ್ಮನ್ನು ನಂಬಿದವರ ಜೀವ ಕಾಪಾಡಿಕೊಳ್ಳಿ ಎಂದು ಕೋರಿದರು.

ಇದೇ ವೇಳೆ ದಿಬ್ಬೂರಹಳ್ಳಿ ವೃತ್ತದಲ್ಲಿ ಪೊಲೀಸರು ಮತ್ತು ಪತ್ರಕರ್ತರು ಹೆಲ್ಮೆಟ್ ಧರಿಸಿ ಜಾಥಾ ನಡೆಸುವ ಮೂಲಕ ಹೆಲ್ಮೆಟ್ ಬಳಕೆ ಕುರಿತು ಜನ ಜಾಗೃತಿ ಮೂಡಿಸಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಎ.ಶಶಿಕುಮಾರ್ ಹಾಗು ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.

ನಾಲೈದು ಯುವತಿಯರೊಂದಿಗೆ ಪ್ರಣಯದಾಟ ಬಯಲು: ತಾಳಿ ಕಳಚಿ ತನ್ನ ಹೆತ್ತವರೊಂದಿಗೆ ತೆರಳಿದ ಯುವತಿ

ಶಿಡ್ಲಘಟ್ಟ : ಚಿಕ್ಕಬಳ್ಳಾಪುರ ನಗರದ ಗಂಗನಮಿದ್ದೆ ನಿವಾಸಿ ಸಾಯಿ ಸಂದೀಪ್ ಹಾಗೂ ನಗರದ ಯುವತಿ ಪ್ರೀತಿಸುತ್ತಿದ್ದು, ಪೋಷಕರ ವಿರೋಧದ ನಡುವೆಯೂ ಚಿಂತಾಮಣಿ ತಾಲ್ಲೂಕು ಕೋಟಗಲ್‌ನ ಶ್ರೀಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಲ್ಲಿ ಯುವತಿಗೆ ತಾಳಿ ಕಟ್ಟಿ ಮದುವೆಯಾಗಿರುವ ಘಟನೆ ನಡೆದಿದೆ.
ಪ್ರಿಯಕರನಿಂದ ಮೋಸಹೋದ ಯುವತಿಯೊಬ್ಬಳು ದೇವಾಲಯದಲ್ಲಿ ಕಟ್ಟಿದ ತಾಳಿಯನ್ನು ಪೊಲೀಸ್ ಠಾಣೆಯಲ್ಲಿ ಬಿಚ್ಚಿ ಪ್ರಿಯಕರನ ಕೈಗಿಟ್ಟು ಪೋಷಕರೊಂದಿಗೆ ಮನೆಗೆ ತೆರಳಿದ್ದಾಳೆ.

ಅಂತರ್ಜಾತಿ ವಿವಾಹ ಹಾಗೂ ಯುವಕನ ನಡತೆ ಸರಿಯಿಲ್ಲ ಎನ್ನುವ ಕಾರಣಕ್ಕೆ ಯುವತಿಯ ಪೋಷಕರು ಇವರಿಬ್ಬರ ಮದುವೆಗೆ ನಿರಾಕರಿಸಿದ್ದರಲ್ಲದೆ, ತಮ್ಮ ಮಗಳಿಗೆ ಬುದ್ದಿವಾದ ಕೂಡ ಹೇಳಿ ದ್ದರು. ಆದರೆ ಪೋಷಕರ ಮಾತನ್ನು ನಂಬದ ಯುವತಿ, ಯುವಕನ ಮೋಸದ ಮರಳು ಮಾತುಗಳನ್ನು ನಂಬಿ ಯುವಕನೊಂದಿಗೆ ಮದುವೆಯಾದಳು.

ಪರಾರಿಯಾಗಿ ಮದುವೆಯಾದ ಜೋಡಿ, ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಲು ಚಿಕ್ಕಬಳ್ಳಾಪುರದತ್ತ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು,ಅಷ್ಟೊತ್ತಿಗಾಗಲೆ ತಮ್ಮ ಮಗಳು ವಿವಾಹವಾದ ಮತ್ತು ಚಿಕ್ಕಬಳ್ಳಾಪುರದತ್ತಲೆ ಬರುತ್ತಿರುವ ವಿಚಾರ ತಿಳಿದ ಯುವತಿ ಪೋಷಕರು ಶಿಡ್ಲಘಟ್ಟ ನಗರದ ಮಯೂರ ವೃತ್ತದಲ್ಲಿ ಕಾರನ್ನು ಅಡ್ಡಗಟ್ಟಿ ಯುವತಿಯನ್ನು ಹಾಗೂ ಯುವಕನನ್ನು ಠಾಣೆಗೆ ಕರೆದೊಯ್ದಿದ್ದಾರೆ.

ಠಾಣೆಯಲ್ಲಿ ಪೋಷಕರು ಮತ್ತು ಪೊಲೀಸರು ಎಷ್ಟೇ ಬುದ್ದಿವಾದ ಹೇಳಿದರೂ ಯುವಕನನ್ನು ಬಿಡಲು ಒಪ್ಪದ ಯುವತಿ, ಯುವಕನ ಜತೆ ಹೋಗಲು ಹಠಕ್ಕೆ ಬಿದ್ದಳು, ಅಷ್ಟರಲ್ಲಿ ಪೊಲೀಸರು ಯುವಕನ ಮೇಲೆ ಠಾಣೆಯಲ್ಲಿ ದಾಖಲಾಗಿದ್ದ ಕೇಸುಗಳನ್ನು ಜಾಲಾಡಿದ್ದು, ಕೇಸು ಫೈಲ್‌ಗಳನ್ನು ಮುಂದಿಟ್ಟಿದ್ದಾರೆ.

ಯುವತಿ ವಿರುದ್ಧ ಅದಾಗಲೆ ಸಂದೀಪ್ ಚಿಕ್ಕಬಳ್ಳಾಪುರದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ಕಿರುಕುಳ ಮಾಡಿದ ಆರೋಪದ ಮೇರೆಗೆ ಫೋಕ್ಸೋ ಪ್ರಕರಣ ಹಾಗೂ ಯುವತಿಯೊಬ್ಬಳ ಮೇಲೆ ಲೈಂಗಿಕ ದುರ್ವತ್ರನೆ ತೋರಿದ ಕಾರಣಕ್ಕೆ ಪ್ರಕರಣ ಕೂಡ ದಾಖಲಾಗಿದ್ದನ್ನು ದಾಖಲೆ ಸಮೇತ ತೋರಿಸಿದ್ದಾರೆ.

ಇದಿಷ್ಟೆ ಅಲ್ಲ ಅದಾಗಲೆ ಸಂದೀಪ್ ಮೂರಾಲ್ಕು ಯುವತಿಯರ ಸಲುಗೆಯಿಂದ ತೆಗೆಸಿಕೊಂಡ ಫೋಟೊಗಳನ್ನು ಕೂಡ ಯುವತಿ ಮುಂದೆ ಇಟ್ಟು ಯುವಕನ ಜಾತಕವನ್ನು ಬಿಚ್ಚಿಟ್ಟಿದ್ದಾರೆ. ಇದರಿಂದ ಯುವತಿ ಬೆಚ್ಚಿ ಬಿದ್ದಿದ್ದಾಳೆ,ಮದುವೆಯಾದ ಒಂದೇ ದಿನದಲ್ಲಿ ತನ್ನ ಪ್ರಿಯಕರನ ಮೋಸದಾಟ ಬಯಲಾಗಿದೆ. ಬೇರೆ ದಾರಿಯಿಲ್ಲದೆ ತಾನು ಕಟ್ಟಿಸಿಕೊಂಡ ತಾಳಿಯನ್ನು ಠಾಣೆಯಲ್ಲೇ ಬಿಚ್ಚಿ ತನ್ನ ಪೋಷಕರ ಜತೆ ಮನೆಗೆ ವಾಪಸ್ಸಾಗಿದ್ದಾಳೆ.