ಮೂಡಲಗಿರಿಯಪ್ಪ ವಿರುದ್ಧ ಮತ್ತೊಂದು ಎಫ್‍ಐಆರ್ ದಾಖಲು.

ವಿಜಯ ದರ್ಪಣ ನ್ಯೂಸ್

ಚಿತ್ರದುರ್ಗ ಆಗಸ್ಟ್ 08

ಹಣ ಸೆಳೆಯಲು ನಿಯಮಾನುಸಾರ ಪಾಲಿಸಬೇಕಿದ್ದ ಪ್ರಕ್ರಿಯೆಗಳನ್ನು ಮೀರಿ, ಕಾನೂನು ಬಾಹಿರವಾಗಿ, ಅಧಿಕಾರ ದುರ್ಬಳಕೆ ಮಾಡಿ, ನಿರ್ಮಿತಿ ಕೇಂದ್ರದ ಹಿಂದಿನ ಯೋಜನಾ ನಿರ್ದೇಶಕರಾಗಿದ್ದ ಕೆ.ಜಿ. ಮೂಡಲಗಿರಿಯಪ್ಪ ಅವರು, ಒಟ್ಟು 7.04 ಕೋಟಿ ರೂ. ಹಣ ದುರ್ಬಳಕೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಚಿತ್ರದುರ್ಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆ.06 ರಂದು ಎಫ್‍ಐಆರ್ ದಾಖಲಾಗಿದೆ.

ಸರ್ಕಾರದಿಂದ ವಿವಿಧ ಇಲಾಖೆಗಳಡಿ ಸಾರ್ವಜನಿಕ ಉದ್ದೇಶ ಹಾಗೂ ಕಾಮಗಾರಿ ಅನುಷ್ಠಾನಕ್ಕಾಗಿ ಬಿಡುಗಡೆಯಾದ ಅನುದಾನವನ್ನು ಸರ್ಕಾರದ ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಬಾರದಂತೆ, ಅಲ್ಲದೆ ಅನುಷ್ಠಾನ ಏಜೆನ್ಸಿಯಾಗಿರುವ ನಿರ್ಮಿತಿ ಕೇಂದ್ರದ ಅಧ್ಯಕ್ಷರ ಹಾಗೂ ಕಾರ್ಯಾಧ್ಯಕ್ಷರ ಗಮನಕ್ಕೆ ಬಾರದಂತೆ ಕೆ.ಜಿ. ಮೂಡಲಗಿರಿಯಪ್ಪ ಅವರು ಮತ್ತು ಪ್ರಕರಣದಲ್ಲಿ ಇರಬಹುದಾದ ಇತರರು ಸರ್ಕಾರದ ಹಣ ಲಪಟಾಯಿಸಿರುವ ಕುರಿತು ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ಮಿತಿ ಕೇಂದ್ರದ ಈಗಿನ ಯೋಜನಾ ನಿರ್ದೇಶಕ ಯು.ಆರ್. ಸತ್ಯನಾರಾಯಣರಾವ್ ಅವರು ಚಿತ್ರದುರ್ಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.

ದೂರಿನಲ್ಲಿ ವಿವರಿಸಿರುವಂತೆ, ಕೆ.ಜಿ. ಮೂಡಲಗಿರಿಯಪ್ಪ ಅವರು, ನಿರ್ಮಿತಿ ಕೇಂದ್ರದಲ್ಲಿ ಯೋಜನಾ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ, ನಿರ್ಮಿತಿ ಕೇಂದ್ರ ಆಡಳಿತ ಮಂಡಳಿಯ ನಿರ್ದೇಶನಗಳನ್ನು ಉಲ್ಲಂಘಿಸಿ ಅಧಿಕಾರ ದುರ್ಬಳಕೆ ಮಾಡಿ, 25 ಸಾವಿರ ರೂ. ಒಳಗಿನ ಹಲವಾರು ಚೆಕ್‍ಗಳ ಮೂಲಕ ಹಣವನ್ನು ಸೆಳೆದು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದ್ದ ವಿವಿಧ ಇಲಾಖೆಗಳ ಹಲವು ಕಾಮಗಾರಿಗಳ ಅನುಷ್ಠಾನಕ್ಕೆ ಬಿಡುಗಡೆಯಾಗಿದ್ದ ಸರ್ಕಾರದ ಅನುದಾನವನ್ನು ಲಪಟಾಯಿಸಿರುತ್ತಾರೆ. ಬೇನಾಮಿ ಚೆಕ್ ಬರೆದು ಅವರ ಮೂಲಕ ಹಣ ಪಡೆದುಕೊಂಡಿದ್ದಾರೆ. ನಕಲಿ ಬಿಲ್ ಗಳನ್ನು ಸೃಷ್ಟಿಸಿ, ಜಿಎಸ್‍ಟಿ ಇಲ್ಲದ ಸರಬರಾಜುದಾರರಿಂದ ಸಾಮಗ್ರಿಗಳನ್ನು ಪಡೆದಿರುವುದಾಗಿ ದಾಖಲೆಗಳನ್ನು ಸೃಷ್ಟಿಸಿ ಹಣ ಲಪಟಾಯಿಸಿದ್ದಾರೆ.

ಚೆಕ್ ಮುಖಾಂತರ ಹಣ ಪಾವತಿಸಲು ಇದ್ದ 25 ಸಾವಿರ ರೂ. ಗಳ ಆರ್ಥಿಕ ಪ್ರತ್ಯಾಯೋಜನಾ ಅಂದರೆ ಚೆಕ್ ಡ್ರಾಯಿಂಗ್ ಪವರ್ ಅನ್ನು ಸಂಸ್ಥೆಯ ಆರ್ಥಿಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಚಿತ್ರದುರ್ಗ ನಿರ್ಮಿತಿ ಕೇಂದ್ರದ ಆಡಳಿತ ಮಂಡಳಿಯ ನಿರ್ಧಾರದಂತೆ, ಕಳೆದ 2023 ರ ಫೆಬ್ರವರಿ 24 ರಂದು ಹಿಂಪಡೆಯಲು ತೀರ್ಮಾನಿಸಲಾಗಿತ್ತು. ಹೀಗಾಗಿ ಈ ದಿನಾಂಕದ ನಂತರ ನಿರ್ಮಿತಿ ಕೇಂದ್ರದ ಎಲ್ಲ ವಹಿವಾಟುಗಳ ಕಡತಗಳಿಗೆ ಅಧ್ಯಕ್ಷರ ಹಾಗೂ ಕಾರ್ಯಾಧ್ಯಕ್ಷರ ಲಿಖಿತ ಅನುಮೋದನೆ ಪಡೆದು, ಅಲ್ಲದೆ ಚೆಕ್ ನಲ್ಲಿ ಅಧ್ಯಕ್ಷರ ಮತ್ತು ಯೋಜನಾ ನಿರ್ದೇಶಕರ ಜಂಟಿ ಸಹಿಯೊಂದಿಗೆ ವಹಿವಾಟು ನಡೆಸಲು ಕಡ್ಡಾಯಗೊಳಿಸಿ ತೀರ್ಮಾನಿಸಲಾಗಿತ್ತು. ಆದರೆ ಕೆ.ಜಿ. ಮೂಡಲಗಿರಿಯಪ್ಪ ಅವರು, 2023 ರ ಫೆಬ್ರವರಿ 24 ರಿಂದ ಜೂನ್ 21 ರವರೆಗೂ ನಿರ್ಮಿತಿ ಕೇಂದ್ರದ ಅಧ್ಯಕ್ಷರ ಜಂಟಿ ಸಹಿ ಪಡೆಯದೆ, ಯೋಜನಾ ನಿರ್ದೇಶಕರೊಬ್ಬರೇ 3836 ಸಂಖ್ಯೆಯ ವೋಚರ್‍ಗಳ ಮುಖಾಂತರ ವಿವಿಧ ಕಾಮಗಾರಿಗಳ ಸಂಬಂಧ ಒಟ್ಟು ರೂ. 7,04,45,790 ಗಳ ಬಿಲ್ಲುಗಳನ್ನು ಬೇನಾಮಿ ವ್ಯಕ್ತಿಗಳಿಗೆ ನೀಡಿ, ಅವರಿಂದ ಹಣ ಪಡೆದುಕೊಂಡಿರುವುದು ಕಂಡುಬಂದಿರುತ್ತದೆ. ನಿರ್ಮಿತಿ ಕೇಂದ್ರದ ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರ ಗಮನಕ್ಕೆ ಬಾರದೆ ಚೆಕ್ ಗಳನ್ನು ಪಡೆದು, ಹಣ ಲಪಟಾಯಿಸಿರುತ್ತಾರೆ. ಹೀಗಾಗಿ ನಿರ್ಮಿತಿ ಕೇಂದ್ರದ ಹಿಂದಿನ ಯೋಜನಾ ನಿರ್ದೇಕ ಕೆ.ಜಿ. ಮೂಡಲಗಿರಿಯಪ್ಪ ಹಾಗೂ ಪ್ರಕರಣದಲ್ಲಿ ಭಾಗಿಯಾಗಿರಬಹುದಾದ ಇತರರ ಕುರಿತು ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಿರ್ಮಿತಿ ಕೇಂದ್ರದ ಈಗಿನ ಯೋಜನಾ ನಿರ್ದೇಶಕ ಯು.ಆರ್.ಸತ್ಯನಾರಾಯಣರಾವ್ ಅವರು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಚಿತ್ರದುರ್ಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.