ಪೌರ ಕಾರ್ಮಿಕರ ಪರಿಶ್ರಮದ ಸೇವೆ ಬೆಲೆಕಟ್ಟಲಾಗದಂತಹದ್ದು :  ಶಾಸಕ ಬಿ.ಎನ್.ರವಿಕುಮಾರ್ 

ವಿಜಯ ದರ್ಪಣ ನ್ಯೂಸ್…

ಪೌರ ಕಾರ್ಮಿಕರ ಪರಿಶ್ರಮದ ಸೇವೆ ಬೆಲೆಕಟ್ಟಲಾಗದಂತಹದ್ದು :  ಶಾಸಕ ಬಿ.ಎನ್.ರವಿಕುಮಾರ್

 

ಶಿಡ್ಲಘಟ್ಟ : ನಗರವನ್ನು ಸ್ವಚ್ಛತೆಗೊಳಿಸುವಾಗ ದರ್ವಾಸನೆಯ ಬೇಸರ ಸಹಿಸಿಕೊಂಡು,ಸಾರ್ವಜನಿಕರ ಮಧ್ಯೆ ಮುಜುಗರ ಪಡದೇ ಅವಿರತ ದುಡಿಯುವ ಪೌರ ಕಾರ್ಮಿಕರ ಪರಿಶ್ರಮದ ಸೇವೆ ಬೆಲೆಕಟ್ಟಲಾಗದಂತಹದ್ದು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ನಗರದ ಅಂಜನಾದ್ರಿ ಕಾಂಪ್ಲೆಕ್ಸ್‌ನಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ನಗರಸಭೆಯ ಸಹಯೋಗದಲ್ಲಿ ನಡೆದ ಪೌರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಅವರು ಮಾತನಾಡಿದರು.
ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೆ ಸ್ವಚ್ಛತೆಗೆ ಶ್ರಮಿಸುವ ಪೌರ ಕಾರ್ಮಿಕರ ಕಾರಣದಿಂದ ನಾಗರಿಕರ ಆರೋಗ್ಯ ಮತ್ತು ನಗರವು ಸುಂದರವಾಗಿ ಕಾಣುತ್ತಿದೆ ಎಂದು ಹೇಳಿದರು.

ನಗರದಲ್ಲಿ 12,800 ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಅಮೃತ್-2 ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ 92 ಕೋಟಿ ರೂ.ಗಳ ಅನುದಾನ ಲಭಿಸಿದ್ದು, ಮುಂದಿನ 40 ವರ್ಷಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು 38 ಕೋಟಿ ರೂ.ಗಳು ಯುಜಿಡಿ ಯೋಜನೆಗೆ ಟೆಂಡ‌ರ್ ಪ್ರಕ್ರಿಯೆ ಆರಂಭವಾಗಿದೆ ಎಂದರು.

ಅಧಿಕಾರಿಗಳು ಮತ್ತು ಸದಸ್ಯರು ಒಗ್ಗಟ್ಟಾಗಿ ಕೆಲಸ ಮಾಡಿ ಮೂಲಭೂತ ಸೌಕರ್ಯಗಳಾದ ಸ್ವಚ್ಛತೆ, ಕುಡಿಯುವ ನೀರು, ಬೀದಿದೀಪಗಳಿಗೆ ಆದ್ಯತೆ ನೀಡಬೇಕೆಂದರು.

ಪಿ.ಎಲ್‌.ಡಿ. ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿ, ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ವೈದ್ಯರಂತೆ ಪೌರಕಾರ್ಮಿಕರು ಅವರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ,ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಗಮನಹರಿಸಬೇಕು ಹಾಗೂ ಮಕ್ಕಳ ಶಿಕ್ಷಣಕ್ಕೂ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಮಹಿಳಾ ಪೌರ ಕಾರ್ಮಿಕರಿಗೆ ಸೀರೆ, ಕುಕ್ಕರ್ ಮತ್ತು ಪುರುಷರಿಗೆ ಶರ್ಟ್-ಪ್ಯಾಂಟ್ ಹಾಗೂ ಕುಕ್ಕರ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಭಾಸ್ಕ‌ರ್, ಪೌರಾಯುಕ್ತ ಜಿ.ಅಮೃತ, ನಗರಸಭೆ ಅಧ್ಯಕ್ಷ ಎಂ.ವಿ. ವೆಂಕಟಸ್ವಾಮಿ, ಸದಸ್ಯರಾದ ಅನಿಲ್ ಕುಮಾರ್,ಲಕ್ಷ್ಮಣ್, ಕೃಷ್ಣಮೂರ್ತಿ, ರಾಘವೇಂದ್ರ,ಸರ್ಕಲ್ ಇನ್ಸ್‌ಪೆಕ್ಟ‌ರ್ ಎಂ.ಶ್ರೀನಿವಾಸ್, ಎಇಇ ಮಾಲಿನಿ ,ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಪಾಲ್ಗೊಂಡಿದ್ದರು.